ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೆಹಲಿಯಲ್ಲಿ ಕೋಲಾಹಲ ಸೃಷ್ಟಿಸಿದ ಕಾಕ್ರೋಚ್ ಜನತಾ ಪಾರ್ಟಿಯ ಸಂಸತ್ ಚಲೋ: ಪೊಲೀಸರಿಂದ ಲಾಠಿಚಾರ್ಜ್

CJP Protest in Delhi: ದೆಹಲಿಯಲ್ಲಿ ನಡೆದ ಚಲೋ ಸಂಸತ್ ಮೆರವಣಿಗಾಗಿ ಕಾಕ್ರೋಚ್ ಜನತಾ ಪಾರ್ಟಿ (CJP)ಯ ಸಾವಿರಾರು ಬೆಂಬಲಿಗರು ಜಮಾಯಿಸಿದ್ದಾರೆ. ಜಂತರ್ ಮಂತರ್ ಪ್ರತಿಭಟನಾ ಸ್ಥಳದಲ್ಲಿ ಸೇರಿದ್ದ ಸಿಜೆಪಿ ಬೆಂಬಲಿಗರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಕೇಂದ್ರ ದೆಹಲಿಯ ಕೆಲವು ಭಾಗಗಳಲ್ಲಿ ಮೊಬೈಲ್ ಇಂಟರ್‌ನೆಟ್‌ ಅನ್ನು ಸಹ ಸ್ಥಗಿತಗೊಳಿಸಲಾಗಿದೆ.

ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿಯಿಂದ ಸಂಸತ್ ಚಲೋ

ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ -

Priyanka P
Priyanka P Jul 20, 2026 1:29 PM

ನವದೆಹಲಿ, ಜು. 20: ಸಂಸತ್ತಿನ ಮಳೆಗಾಲದ ಅಧಿವೇಶನದ (Monsoon session in Parliament) ಮೊದಲ ದಿನದಂದು ಸೋಮವಾರ (ಜು. 20) ದೆಹಲಿಯಲ್ಲಿ ನಡೆದ ಚಲೋ ಸಂಸತ್ ಪ್ರತಿಭಟನೆಗಾಗಿ ಕಾಕ್ರೋಚ್ ಜನತಾ ಪಾರ್ಟಿ (CJP)ಯ ಸಾವಿರಾರು ಬೆಂಬಲಿಗರು ಜಮಾಯಿಸಿದ್ದಾರೆ. ಪೊಲೀಸರು ಪ್ರತಿಭಟನೆಗೆ ಅನುಮತಿ ನಿರಾಕರಿಸಿದ್ದರೂ ಸಹ ಬೆಂಬಲಿಗರು ಗುಂಪುಗೂಡಿದ್ದು, ಅವರನ್ನು ಚದುರಿಸಲು ಲಾಠಿ ಚಾರ್ಜ್‌ ಮಾಡಲಾಗಿದೆ.

ಜಂತರ್ ಮಂತರ್ ಪ್ರತಿಭಟನಾ ಸ್ಥಳದಲ್ಲಿ ಸೇರಿದ್ದ ಸಿಜೆಪಿ ಬೆಂಬಲಿಗರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು ಎಂದು ಮೂಲಗಳು ತಿಳಿಸಿವೆ. ನೀಟ್‌ನಲ್ಲಿ ನಡೆದ ಅಕ್ರಮಗಳ ವಿರುದ್ಧ ಮತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಸಿಜೆಪಿ ಬೆಂಬಲಿಗರು, ಹೆಚ್ಚಾಗಿ ಯುವ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.

ಇಲ್ಲಿದೆ ಲಾಠಿಚಾರ್ಜ್ ವಿಡಿಯೊ:



ಕೇಂದ್ರ ದೆಹಲಿಯ ಕೆಲವು ಭಾಗಗಳಲ್ಲಿ ಮೊಬೈಲ್ ಇಂಟರ್‌ನೆಟ್‌ ಅನ್ನು ಸಹ ಸ್ಥಗಿತಗೊಳಿಸಲಾಗಿದೆ. ಸಿಜೆಪಿಯು ತನ್ನ ಬೆಂಬಲಿಗರನ್ನು ಶಾಂತವಾಗಿರುವಂತೆ ಕೇಳಿಕೊಂಡಿದೆ. “ಶಾಂತಿಯನ್ನು ಕಾಪಾಡಿಕೊಳ್ಳಿ. ನಾವು ಇದನ್ನು ಶಾಂತಿ ಮತ್ತು ಪ್ರೀತಿಯಿಂದ ಮಾತ್ರ ಗೆಲ್ಲುತ್ತೇವೆ” ಎಂದು ಸಿಜೆಪಿ ಹೇಳಿದೆ. ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು ಹಾಗೂ ಸಭೆಗಳು ಸೇರುವುದನ್ನು ನಿಷೇಧಿಸಿದ್ದರು. ನಿಷೇಧಿತ ಆದೇಶಗಳನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿ ಕ್ರಮ ಎದುರಿಸಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.

"ಕಾಕ್ರೋಚ್ ಜನತಾ ಪಾರ್ಟಿ ದೇಶ ವಿಭಜನೆ ಶಕ್ತಿಗಳ 'ಬಿ ಟೀಮ್'ʼ: ಧರ್ಮೇಂದ್ರ ಪ್ರಧಾನ್‌ ವಾಗ್ದಾಳಿ

ಪೂರ್ವಾನುಮತಿಯೊಂದಿಗೆ ಜಂತರ್ ಮಂತರ್‌ನಲ್ಲಿ ಗೊತ್ತುಪಡಿಸಿದ ಪ್ರತಿಭಟನಾ ಸ್ಥಳವನ್ನು ಹೊರತುಪಡಿಸಿ, ಐದು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳ ಪ್ರತಿಭಟನಾ ಮೆರವಣಿಗೆಗಳು, ಪ್ರದರ್ಶನಗಳು ಮತ್ತು ಸಭೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಪೊಲೀಸರು ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. “ಎಲ್ಲ ನಾಗರಿಕರು ಕಾನೂನನ್ನು ಗೌರವಿಸಬೇಕು, ಯಾವುದೇ ಅನಧಿಕೃತ ಸಭೆ ಅಥವಾ ಮೆರವಣಿಗೆಯಲ್ಲಿ ಭಾಗವಹಿಸುವುದನ್ನು ತಡೆಯಬೇಕು. ಸಾರ್ವಜನಿಕ ಶಾಂತಿ, ಸುರಕ್ಷತೆ ಮತ್ತು ಭದ್ರತೆಯನ್ನು ಕಾಪಾಡುವಲ್ಲಿ ಸಹಕರಿಸಬೇಕು” ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ.

ದೆಹಲಿಯಲ್ಲಿ ನಡೆದ ಪ್ರತಿಭಟನೆ:



ದೆಹಲಿ ಮೆಟ್ರೋ ನಿಲ್ದಾಣಗಳಲ್ಲಿ ಅವ್ಯವಸ್ಥೆ

ಮುಂದಿನ ಸೂಚನೆಗಳವರೆಗೆ ಭದ್ರತಾ ಕಾರಣಗಳಿಗಾಗಿ ರಾಜೀವ್ ಚೌಕ್, ಜನಪಥ್, ಪಟೇಲ್ ಚೌಕ್, ಸೆಂಟ್ರಲ್ ಸೆಕ್ರೆಟರಿಯೇಟ್ ಮತ್ತು ಸೇವಾ ತೀರ್ಥ ಎಂಬ ಐದು ಮೆಟ್ರೋ ನಿಲ್ದಾಣಗಳನ್ನು ಮುಚ್ಚಿದ್ದು, ಅವ್ಯವಸ್ಥೆ ಉಂಟಾಗಿದೆ. ಪರಿಣಾಮ ನೂರಾರು ಪ್ರಯಾಣಿಕರು ತೊಂದರೆ ಎದುರಿಸುವಂತಾಗಿದೆ.

ದೆಹಲಿಯ ಅತ್ಯಂತ ಜನನಿಬಿಡ ಇಂಟರ್ಚೇಂಜ್ ಮೆಟ್ರೋ ನಿಲ್ದಾಣಗಳಲ್ಲಿ ಒಂದಾದ ರಾಜೀವ್ ಚೌಕ್‌ನಲ್ಲಿ, ಮುಚ್ಚಿದ ಪ್ರವೇಶ ಮತ್ತು ನಿರ್ಗಮನ ದ್ವಾರಗಳ ಬಳಿ ಪ್ರಯಾಣಿಕರು ಕಿಕ್ಕಿರಿದು ತುಂಬಿರುವುದು ಕಂಡುಬಂತು.

ಕಾಕ್ರೋಚ್ ಜನತಾ ಪಾರ್ಟಿ ಸ್ಥಾಪಕನ ಮೇಲೆ ಜೈಪುರದಲ್ಲಿ ಹಲ್ಲೆ: ನಿರುದ್ಯೋಗವೇ ಕಾರಣ ಎಂದ ಅಭಿಜಿತ್‌ ದೀಪ್ಕೆ

ಸಿಜೆಪಿ ಪ್ರತಿಭಟನೆಗಳು

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೀಡಿದ್ದ ಪರಾವಲಂಬಿಗಳು ಮತ್ತು ಜಿರಳೆಗಳು ಎಂಬ ಹೇಳಿಕೆಯ ನಂತರ, ಮೇಯಲ್ಲಿ ಅಭಿಜಿತ್ ದೀಪ್ಕೆ ವಿಡಂಬನಾತ್ಮಕ ಡಿಜಿಟಲ್ ಸಂಘಟನೆಯಾಗಿ ಕಾಕ್ರೋಚ್ ಜನತಾ ಪಾರ್ಟಿಯನ್ನು ಪ್ರಾರಂಭಿಸಿದರು. ಕೆಲವೇ ದಿನಗಳಲ್ಲಿ, ಇದು ಸಾಮಾಜಿಕ ಮಾಧ್ಯಮಗಳಲ್ಲಿ ಬಿರುಗಾಳಿ ಎಬ್ಬಿಸಿ ಲಕ್ಷಾಂತರ ಅನುಯಾಯಿಗಳ ಗಮನ ಸೆಳೆಯಿತು. ವಿವಿಧ ವಿರೋಧ ಪಕ್ಷದ ರಾಜಕಾರಣಿಗಳು, ಕಾರ್ಯಕರ್ತರು, ಕಲಾವಿದರು ಮತ್ತು ಕ್ರೀಡಾಪಟುಗಳಿಂದ ಬೆಂಬಲ ಗಳಿಸಿತು.

ಕಳೆದ ಎರಡು ವರ್ಷಗಳಿಂದ ಅಮೆರಿಕದಲ್ಲಿ ವಾಸಿಸುತ್ತಿರುವ 30 ವರ್ಷದ ಅಬಿಜಿತ್‌ ದೀಪ್ಕೆ, ಜೂನ್‌ನಲ್ಲಿ ಭಾರತಕ್ಕೆ ಮರಳಿದರು. ದೆಹಲಿಯಲ್ಲಿ ಪ್ರತಿಭಟನೆಗಳನ್ನು ಮುನ್ನಡೆಸಿದರು. ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಗಳನ್ನು ತರಬೇಕೆಂದು ಒತ್ತಾಯಿಸುತ್ತಿದ್ದಾರೆ.