ಆರ್‌ಎಸ್‌ಎಸ್ ಜತೆ ನಂಟು ಹೊಂದಿರುವ ರಾಜಕಾರಣಿಗಳ ವಿರುದ್ಧ ಸಂಚು: ಇಬ್ಬರು ಭಯೋತ್ಪಾದಕರ ಬಂಧನ
RSS linked politicians: ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸಿದ್ದ ಮತ್ತು ಆರ್‌ಎಸ್‌ಎಸ್ ಜತೆ ನಂಟು ಹೊಂದಿರುವ ರಾಜಕಾರಣಿಗಳ ವಿರುದ್ಧ ದಾಳಿ ಮಾಡಲು ಯೋಜಿಸಿದ್ದ ಆರೋಪದ ಮೇಲೆ ಇಬ್ಬರು ಭಯೋತ್ಪಾದಕರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ.
ಇಬ್ಬರು ಭಯೋತ್ಪಾದಕರ ಬಂಧನ -
ಗಾಂಧಿನಗರ, ಏ. 22: ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸಿದ್ದ ಮತ್ತು ಸಾಮಾಜಿಕ ಮಾಧ್ಯಮಗಳ (social media) ಮೂಲಕ ಜನರನ್ನು ಮೂಲಭೂತವಾದಿಗಳನ್ನಾಗಿ ಮಾಡುವ ಮೂಲಕ ದೇಶದ ಮೇಲೆ ದಾಳಿ ಮಾಡಲು ಯೋಜಿಸಿದ್ದ ಆರೋಪದ ಮೇಲೆ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಇಬ್ಬರು ಆರೋಪಿಗಳನ್ನು ಬಂಧಿಸಿದೆ. ʼʼಆರೋಪಿಗಳು ಘಜ್ವಾ-ಎ-ಹಿಂದ್ (ಭಾರತದ ವಿಜಯ) ಸ್ಥಾಪಿಸುವ ಗುರಿಯನ್ನು ಹೊಂದಿರುವ ಭಯೋತ್ಪಾದಕ ಜಾಲವನ್ನು ರಚಿಸಲು, ಆರ್‌ಡಿಎಕ್ಸ್ ಸ್ಫೋಟಕಗಳನ್ನು ಬಳಸಿ ದೇಶದ ವಿರುದ್ಧ ಯುದ್ಧ ಮಾಡಲು ಯೋಜಿಸಿದ್ದರು. ಅಲ್ಲದೆ, ಆರ್‌ಎಸ್‌ಎಸ್‌ಗೆ ಸಂಬಂಧಿಸಿದ ರಾಜಕೀಯ ನಾಯಕರನ್ನು ಗುರಿಯಾಗಿಸಲು ಮತ್ತು ತಮ್ಮ ಉದ್ದೇಶಗಳನ್ನು ಪೂರೈಸಲು ಸಾಮಾಜಿಕ ಮಾಧ್ಯಮಗಳ ಮೂಲಕ ಯುವಕರನ್ನು ನೇಮಿಸಿಕೊಳ್ಳಲು ಮುಂದಾಗಿದ್ದರುʼʼ ಎಂದು ಅದಿಕಾರಿಗಳು ತಿಳಿಸಿದ್ದಾರೆ.
ಎಟಿಎಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದಂತೆ, ತಾಂತ್ರಿಕ ಹಾಗೂ ಮಾನವ ಗುಪ್ತಚರ ಮಾಹಿತಿಯ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ನಡೆಯುತ್ತಿರುವ ರಾಷ್ಟ್ರವಿರೋಧಿ ಚಟುವಟಿಕೆಗಳ ಮೇಲೆ ನಿಕಟ ನಿಗಾವಹಿಸಲಾಗುತ್ತಿದೆ. ಈ ಪ್ರಕ್ರಿಯೆಯ ವೇಳೆ ಪಠಾಣ್ ಜಿಲ್ಲೆಯ ಸಿದ್ಧಾಪುರದ ನಿವಾಸಿ ಇರ್ಫಾನ್ ಕಲೇಖಾನ್ ಪಠಾಣ್ (22) ಬಗ್ಗೆ ನಿರ್ದಿಷ್ಟ ಮಾಹಿತಿ ಗೊತ್ತಾಯಿತು. ಈತ ತೀವ್ರವಾದಿ ಇಸ್ಲಾಮಿಕ್ ಸಿದ್ಧಾಂತದಿಂದ ಪ್ರಭಾವಿತನಾಗಿದ್ದನೆಂದು ಹೇಳಲಾಗಿದೆ.
ಇಬ್ಬರು ಭಯೋತ್ಪಾದಕರ ಬಂಧನ:
#Gujarat ATS has arrested two terror operatives in an online radicalisation and conspiracy case involving “Ghazwa-e-Hind” and potential targeting of multiple groups. Based on intelligence inputs, ATS tracked Irfan khan Pathan, 22 & Murshid Zahid Akhtar Sheikh 21 years. They… pic.twitter.com/oSpR0VhMNs
— IDU (@defencealerts) April 22, 2026
ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಎಟಿಎಸ್ ಅಧಿಕಾರಿಗಳು ಪಠಾಣ್‌ನನ್ನು ವಿಚಾರಣೆಗೆ ಒಳಪಡಿಸಿದರು. ಆತನ ಮೊಬೈಲ್ ಫೋನ್ ಪರಿಶೀಲಿಸಿದಾಗ ವಾಟ್ಸ್‌ಆ್ಯಪ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ವೇದಿಕೆಗಳ ಮೂಲಕ ಐಸಿಸ್ ಮತ್ತು ಇತರ ಮೂಲಭೂತವಾದಿ ವ್ಯಕ್ತಿಗಳು ಮತ್ತು ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದಾನೆಂದು ತಿಳಿದುಬಂದಿದೆ.
ಪ್ರಾಥಮಿಕ ತನಿಖೆ ಪಠಾಣ್ ಜಿಹಾದಿ ಪ್ರಚಾರವನ್ನು ಹರಡುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾನೆ ಮತ್ತು ದೇಶಾದ್ಯಂತ ಸಮಾನ ಮನಸ್ಕ ಮೂಲಭೂತವಾದಿಗಳ ಜಾಲವನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದಾನೆ ಎಂದು ಹೇಳಿದೆ.
2006ರ ಮಾಲೆಗಾಂವ್ ಸ್ಫೋಟ ಪ್ರಕರಣ: 2 ದಶಕಗಳ ಬಳಿಕ ನಾಲ್ವರು ಆರೋಪಿಗಳ ಖುಲಾಸೆ
ಪಠಾಣ್, ತನ್ನ ಸಹಚರರೊಂದಿಗೆ ಭಾರತದ ವಿರುದ್ಧ ಯುದ್ಧ ಹೂಡಲು ಮತ್ತು ಘಜ್ವಾ-ಎ-ಹಿಂದ್ ಸ್ಥಾಪಿಸುವ ಗುರಿಯನ್ನು ಹೊಂದಿರುವ ಭಯೋತ್ಪಾದಕ ಜಾಲವನ್ನು ರಚಿಸಲು ಸಂಚು ರೂಪಿಸಿದ್ದ ಎಂದು ಎಟಿಎಸ್ ಆರೋಪಿಸಿದೆ. ವಿವಿಧ ರಾಜ್ಯಗಳಿಂದ ಮುಜಾಹಿದ್ದೀನ್‌ಗಳನ್ನು ನೇಮಿಸಿಕೊಳ್ಳಲು, ಅವರಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸುವಲ್ಲಿ ಮತ್ತು ಆರ್‌ಡಿಎಕ್ಸ್ ಬಾಂಬ್ ಸೇರಿದಂತೆ ಸ್ಫೋಟಕಗಳನ್ನು ತಯಾರಿಸುವ ತರಬೇತಿ ನೀಡಲು ಮತ್ತು ಅಂತಹ ಚಟುವಟಿಕೆಗಳಿಗಾಗಿ ಶಿಬಿರಗಳನ್ನು ಆಯೋಜಿಸಲು ಅವನು ಯೋಜಿಸುತ್ತಿದ್ದನೆಂದು ಆರೋಪಿಸಲಾಗಿದೆ.
ಇದಲ್ಲದೆ ಪಠಾಣ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಶಸ್ತ್ರಾಸ್ತ್ರ ಕಳ್ಳಸಾಗಣೆ ಮಾಡಲು ಮತ್ತು ಭಾರತದಾದ್ಯಂತ ಯೋಜಿತ ಭಯೋತ್ಪಾದಕ ಚಟುವಟಿಕೆಗಳನ್ನು ಕಾರ್ಯಗತಗೊಳಿಸಲು ಹಣವನ್ನು ಸಂಗ್ರಹಿಸಲು ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿದ್ದ ಎಂದು ತಿಳಿಸಲಾಗಿದೆ.
ಹೆಚ್ಚಿನ ತನಿಖೆಯ ಸಮಯದಲ್ಲಿ ಮಹಾರಾಷ್ಟ್ರದ ಮುಂಬೈಯ ಸಕಿನಾಕಾ ನಿವಾಸಿ ಮುರ್ಷಿದ್ ಜಾಹಿದ್ ಅಖ್ತರ್ ಶೇಖ್ (21) ಈ ಕೃತ್ಯದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂತು. ಗುಜರಾತ್ ಎಟಿಎಸ್ ತಂಡವು ಮಹಾರಾಷ್ಟ್ರ ಪೊಲೀಸರ ಸಹಾಯದಿಂದ ಶೇಖ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಕರೆತಂದಿದೆ.
ಸ್ಥಳೀಯ ನ್ಯಾಯಾಲಯವು ಇಬ್ಬರೂ ಆರೋಪಿಗಳನ್ನು 11 ದಿನಗಳ ಕಾಲ ಎಟಿಎಸ್ ಕಸ್ಟಡಿಗೆ ನೀಡಿದೆ. ಭಯೋತ್ಪಾದಕ ಸಂಚಿನಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳನ್ನು ಗುರುತಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎಟಿಎಸ್ ತಿಳಿಸಿದೆ.