ʻಜೆರಾಕ್ಸ್ʼ ವೆಬ್ ಸಿರೀಸ್ ಕಥೆಯನ್ನ ಸಿನಿಮಾ ಮಾಡಲು ಹೊರಟಿದ್ದ ʻಡಾಲಿʼ ಧನಂಜಯ್
ನಟ ಡಾಲಿ ಧನಂಜಯ್ ಅವರ ನಿರ್ಮಾಣದಲ್ಲಿ ಮೂಡಿಬಂದಿರುವ 'ಜೆರಾಕ್ಸ್' ವೆಬ್ ಸರಣಿಯು ಏಪ್ರಿಲ್ 24 ರಿಂದ ಜೀ5 ನಲ್ಲಿ ಬಿಡುಗಡೆಯಾಗಲಿದೆ. 'ಜೆರಾಕ್ಸ್ ಮಿಷನ್ ಮೂಲಕ ಮನುಷ್ಯನನ್ನೇ ಡುಪ್ಲಿಕೇಟ್ ಮಾಡಿದರೆ ಏನಾಗುತ್ತದೆ?' ಎಂಬ ವಿಶಿಷ್ಟ ಕಾಮಿಡಿ ಫ್ಯಾಂಟಸಿ ಕಥಾಹಂದರವನ್ನು ಈ ಸರಣಿ ಹೊಂದಿದೆ.
-
ನಾಗಭೂಷಣ್, ಪಾಯಲ್ ಚೆಂಗಪ್ಪ, ಓಂ ಪ್ರಕಾಶ್ ರಾವ್ ಮುಂತಾದವರು ನಟಿಸಿರುವ ʻಜೆರಾಕ್ಸ್ʼ ವೆಬ್ ಸಿರೀಸ್ ಏಪ್ರಿಲ್ 24ರಿಂದ ಜೀ5 ರಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ಇದನ್ನು ನಿರ್ಮಾಣ ಮಾಡಿರುವುದು ನಟ ಡಾಲಿ ಧನಂಜಯ್. ಅಸಲಿಗೆ ಇದರ ಕಥೆಯನ್ನು ಕೇಳಿದಾಗ ಅವರಿಗೆ ಇದನ್ನು ಸಿನಿಮಾ ಮಾಡೋಣ ಎಂಬ ಆಲೋಚನೆ ಬಂದಿತ್ತಂತೆ. ಕಾರಣ, ಕಥೆ ಅಷ್ಟೊಂದು ಚೆನ್ನಾಗಿತ್ತು ಎಂಬುದು. ಕೊನೆಗೆ ಅದನ್ನು ವೆಬ್ ಸಿರೀಸ್ ಮಾಡಲೆಂದೇ, ಆರು ತಿಂಗಳು ಕಾಲ ವರ್ಕ್ ಮಾಡಲಾಗಿತ್ತು. ಆ ಕಾರಣಕ್ಕಾಗಿ ಅದನ್ನು ವೆಬ್ ಸರಣಿಯನ್ನಾಗಿ ಮಾಡಲಾಗಿದೆಯಂತೆ.
"ಜೆರಾಕ್ಸ್ ವೆಬ್ ಸಿರೀಸ್ ಭಾಗವಾಗಿರುವುದು ನನಗೆ ಖುಷಿ ಕೊಟ್ಟಿದೆ. ಇದನ್ನು ಸಿನಿಮಾ ಮಾಡೋಣ ಎಂದುಕೊಂಡಿದ್ದೆ. ಕಥೆ ನನಗೆಅಷ್ಟೊಂದು ಖುಷಿ ನೀಡಿತ್ತು. ಈ ಸಿರೀಸ್‌ನಲ್ಲಿ ಒಳ್ಳೊಳ್ಳೆಯ ಕಲಾವಿದರ ದಂಡು ಕೆಲಸ ಮಾಡಿದೆ. ಹೊಸ ಪ್ರತಿಭೆಗಳಿಂದ ಹಿಡಿದು ಅನುಭವಿ ಪ್ರತಿಭೆಗಳು ಇದರಲ್ಲಿದ್ದಾರೆ. ಮೊದಲು ಇದನ್ನು ನೋಡಿದಾಗ ನನಗೂ ಬಹಳ ಖುಷಿಯಾಯ್ತು. ಬರವಣಿಗೆ ಹಾಗೂ ಎಕ್ಸಿಕ್ಯೂಷನ್ ಚೆನ್ನಾಗಿದೆ. Zee5ನಿಂದ ಒಳ್ಳೊಳ್ಳೆಯ ಪ್ರತಿಭೆಗಳಿಗೆ ಫ್ಲಾಟ್ ಫಾರ್ಮ್ ಸಿಗುತ್ತಿದೆ. ಇದು ಮತ್ತಷ್ಟು ದೊಡ್ಡದಾಗಲಿ" ಎನ್ನುತ್ತಾರೆ ಡಾಲಿ ಧನಂಜಯ್.
Daali Dhananjaya: ಡಾಲಿ ಧನಂಜಯ ನಿರ್ಮಾಣದ 'ಜೆರಾಕ್ಸ್' ವೆಬ್ ಸರಣಿಯಲ್ಲಿ ನಾಗಭೂಷಣ್ ನಾಯಕ!
ಪ್ರಕಾಶ ಪಾತ್ರದಲ್ಲಿ ನಾಗಭೂಷಣ್
"ವೆಬ್ ಸಿರೀಸ್ ಫ್ಲಾಟ್‌ಫಾರ್ಮ್ ನನಗೆ ಹೊಸದೇನೂ ಅಲ್ಲ. ಹನಿಮೂನ್ ಎಂಬ ವೆಬ್ ಸರಣಿಯಲ್ಲಿ ನಟಿಸಿದ್ದೆ. ಈಗ ತುಂಬಾ ವರ್ಷ ಆದ್ಮೇಲೆ ಮತ್ತೆ ವೆಬ್ ಸಿರೀಸ್‌ನಲ್ಲಿ ನಟಿಸುತ್ತಿದ್ದೇನೆ. ಕನ್ನಡದಲ್ಲಿ ವೀಕ್ಷಕರ ಸಂಖ್ಯೆ ಕಡಿಮೆ ಎಂದು ಕನ್ನಡದಲ್ಲಿ ಸಿನಿಮಾಗಳನ್ನು ತೆಗೆದುಕೊಳ್ಳಲು ಬಹಳಷ್ಟು ಒಟಿಟಿಗಳು ಹಿಂದೇಟು ಹಾಕುತ್ತಿವೆ. ಇಂತಹ ಸಮಯದಲ್ಲಿ ಕನ್ನಡದಲ್ಲಿ ವೀವರ್ಸ್ ಇದ್ದಾರೆ ಅನ್ನೋದನ್ನು zee5 ತೋರಿಸಿಕೊಟ್ಟಿದೆ. ಜೆರಾಕ್ಸ್ ವೆಬ್ ಸರಣಿಯಲ್ಲಿ ನನ್ನದು ಪ್ರಕಾಶ ಎಂಬ ಪಾತ್ರ. ನಿರ್ದೇಶಕ ಶ್ರೀನಿಧಿ ಬೆಂಗಳೂರು ಅದ್ಭುತ ತಂತ್ರಜ್ಞ, ಒಳ್ಳೆಯ ಕಥೆಗಾರ. ಸೋಲು ಗೆಲುವು ತಲೆಕೆಡಿಸಿಕೊಳ್ಳದೆ ಕಂಟಿನ್ಯೂ ಆಗಿ ಧನಂಜಯ್ ಪ್ರೊಡಕ್ಷನ್ ಮಾಡುತ್ತಿದ್ದಾರೆ" ಎಂದು ನಾಗಭೂಷಣ್ ಹೇಳಿದರು.
ಮನುಷ್ಯನನ್ನು ಡುಪ್ಲಿಕೇಟ್ ಮಾಡಿದ್ರೆ ಏನಾಗುತ್ತದೆ?
"ಅಯ್ಯನ ಮನೆ ಮೂಲಕ ನಮ್ಮ ವೆಬ್ ಸಿರೀಸ್ ಜರ್ನಿ ಶುರುವಾಯ್ತು. ಬಳಿಕ ಮಾರಿಗಲ್ಲು, ಶೋಧ ನಂತರ ರಾಕ್ಷಸ ವೆಬ್ ಸಿರೀಸ್ ಮಾಡಿದೆವು. ಎಲ್ಲವೂ ಥ್ರಿಲ್ಲರ್ ವೆಬ್ ಸೀರೀಸ್ ಆಯ್ತು. ಅದನ್ನು ಬ್ರೇಕ್ ಮಾಡಬೇಕು ಎಂದುಕೊಂಡಾಗ ಸಿಕ್ಕಿದ್ದು ಶ್ರೀನಿಧಿ ಬೆಂಗಳೂರು. ಅವರು ನಮಗೆ ಈ ಕಥೆ ಹೇಳಿದರು. ಅದರಲ್ಲಿ ಜೆರಾಕ್ಸ್ ಮಿಷನ್ ಮನುಷ್ಯನನ್ನು ಡುಪ್ಲಿಕೇಟ್ ಮಾಡಿದಾಗ ಏನಾಗುತ್ತದೆ ಎಂಬ ಲೈನ್ ಬಹಳ ಇಷ್ಟವಾಯ್ತು. ಬಳಿಕ ಧನಂಜಯ್ ಅವರನ್ನು ಅಪ್ರೋಚ್ ಮಾಡಿದೆವು. ಅವರು ಕಥೆ ಕೇಳಿ, ʻಸಖತ್ ಆಗಿದೆ, ಸಿನಿಮಾ ಮಾಡೋಣಾʼ ಎಂದರು. ಜೆರಾಕ್ಸ್ ಒಂದು ವಿಭಿನ್ನ ಪ್ರಯತ್ನ. ಈ ವೆಬ್ ಸರಣಿಯನ್ನು ಲಾಜಿಕ್ ಬದಿಗಿಟ್ಟು ನೋಡಿ ಖುಷಿ ನೀಡಲಿದೆ" ಎನ್ನುತ್ತಾರೆ ವೆಬ್ ಸರಣಿಯ ಮುಖ್ಯಸ್ಥ ಆರ್. ಜೆ. ಪ್ರದೀಪ.
'ಬ್ಲಿಂಕ್' ಖ್ಯಾತಿಯ ನಿರ್ದೇಶಕ ಶ್ರೀನಿಧಿ ಬೆಂಗಳೂರು ಆಕ್ಷನ್ ಕಟ್ ಹೇಳಿರುವ 'ಜೆರಾಕ್ಸ್ʼ ಸರಣಿಯಲ್ಲಿ ಪಾಯಲ್ ಚೆಂಗಪ್ಪ ನಾಯಕಿಯಾದರೆ, ಮಂಜು ಪಾವಗಡ, ಓಂ ಪ್ರಕಾಶ್ ರಾವ್, ಶ್ರೀವತ್ಸ, ಯಶ್ವಂತ್ ಶೆಟ್ಟಿ, ʻಸಿದ್ಲಿಂಗುʼ ವಿಜಯ್ ಪ್ರಸಾದ್, ತುಕಾಲಿ ಸಂತು, ಜಗ್ಗಪ್ಪ, ಸಿದ್ದು ಮಂಡ್ಯ, ಸುಧಾಕರ್ ಗೌಡ, ರಿಚರ್ಡ್ ಲೂಯಿಸ್ ಮುಂತಾದವರು ನಟಿಸಿದ್ದಾರೆ. ಜೆರಾಕ್ಸ್ ಮಾಡುವ ಕಾಪಿಗಳಿಗೆಲ್ಲಾ ಜೀವ ಬಂದುಬಿಟ್ಟರೆ ಏನಾಗುತ್ತೆ ಎಂಬ ಎಳೆಯನ್ನೇ ಇಟ್ಟುಕೊಂಡು ತಯಾರಾಗಿರುವ ಈ ಕಾಮಿಡಿ ಫ್ಯಾಂಟಿಸಿ ವೆಬ್ ಸೀರೀಸ್ ಅನ್ನು zee5ನಲ್ಲಿ ಏಪ್ರಿಲ್ 24ರಿಂದ ವೀಕ್ಷಿಸಬಹುದಾಗಿದೆ.