ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

2018ರ ಬಿಜೆಪಿ ಐಟಿ ಸೆಲ್ ವಿಡಿಯೊ ಕುರಿತ ಮಾನನಷ್ಟ ಮೊಕದ್ದಮೆ ಪ್ರಕರಣ: ಧ್ರುವ ರಾಠಿಗೆ ಹೊಸ ಸಮನ್ಸ್ ಜಾರಿ

Dhruv Rathee: ಎಂಟು ವರ್ಷಗಳ ಹಿಂದಿನ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಧ್ರುವ ರಾಠಿಗೆ ದೆಹಲಿ ನ್ಯಾಯಾಲಯವು ಹೊಸ ಸಮನ್ಸ್ ಜಾರಿ ಮಾಡಿದೆ. ಹೊಸ ಸಮನ್ಸ್‌ ಜಾರಿಗೊಳಿಸುವಂತೆ ಕೋರಿ ವಿಕಾಸ್ ಪಾಂಡೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸಾಕೇತ್ ನ್ಯಾಯಾಲಯದ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ರಾಹುಲ್ ಜೈನ್ ಅವರು ಅಕ್ಟೋಬರ್ 12ರಂದು ಈ ಆದೇಶ ಹೊರಡಿಸಿದ್ದಾರೆ.

ಮಾನನಷ್ಟ ಮೊಕದ್ದಮೆ ಪ್ರಕರಣ: ಧ್ರುವ ರಾಠಿಗೆ ಮತ್ತೆ ಸಮನ್ಸ್

ಧ್ರುವ ರಾಠಿ (ಸಂಗ್ರಹ ಚಿತ್ರ) -

Priyanka P
Priyanka P Oct 15, 2026 12:27 PM

ನವದೆಹಲಿ, ಅ.15: ಎಂಟು ವರ್ಷಗಳ ಹಿಂದಿನ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಧ್ರುವ್ ರಾಠಿ (Dhruv Rathee) ಗೆ ದೆಹಲಿ ನ್ಯಾಯಾಲಯವು ಹೊಸ ಸಮನ್ಸ್ ಜಾರಿ ಮಾಡಿದೆ. ಬಿಜೆಪಿ ಐಟಿ ಸೆಲ್ ಸದಸ್ಯ ವಿಕಾಸ್ ಪಾಂಡೆ ಸಲ್ಲಿಸಿದ್ದ ಎಂಟು ವರ್ಷಗಳ ಹಿಂದಿನ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ, ಧ್ರುವ್ ರಾಠಿಗೆ ಸಮನ್ಸ್ ತಲುಪಿಸಲು ಹಲವು ವರ್ಷಗಳಿಂದ ಪ್ರಯತ್ನಗಳು ಮುಂದುವರಿದಿವೆ ಎಂಬ ವಿಚಾರವನ್ನು ನ್ಯಾಯಾಲಯ ಪರಿಗಣಿಸಿದೆ. ಆಸ್ಟ್ರಿಯಾದಲ್ಲಿ ವಾಸಿಸುವ ಧ್ರುವ್ ರಾಠಿ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾಕ್‌ರೋಚ್ ಜನತಾ ಪಾರ್ಟಿ (CJP) ನಡೆಸುತ್ತಿರುವ ಪ್ರತಿಭಟನೆಗಳಲ್ಲಿ ಭಾಗವಹಿಸಲು ಪ್ರಸ್ತುತ ಭಾರತದಲ್ಲಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ.

ಹೊಸ ಸಮನ್ಸ್‌ ಜಾರಿಗೊಳಿಸುವಂತೆ ಕೋರಿ ವಿಕಾಸ್ ಪಾಂಡೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸಾಕೇತ್ ನ್ಯಾಯಾಲಯದ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ರಾಹುಲ್ ಜೈನ್ ಅವರು ಅಕ್ಟೋಬರ್ 12ರಂದು ಈ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ನವೆಂಬರ್ 20ರಂದು ವಿಚಾರಣೆಗೆ ನಿಗದಿಯಾಗಿದ್ದ ಪ್ರಕರಣವನ್ನು, ವಿಚಾರಣೆಯನ್ನು ಮುಂದೂಡುವ ಬದಲು ಮುಂಚಿತವಾಗಿ ನಡೆಸುವಂತೆ ದೂರುದಾರರು ಮನವಿ ಮಾಡಿದ ಹಿನ್ನೆಲೆಯಲ್ಲಿ ಕೈಗೆತ್ತಿಕೊಳ್ಳಲಾಯಿತು.

“ಲಭ್ಯವಿರುವ ದಾಖಲೆಗಳನ್ನು ಗಮನಿಸಿದರೆ, ಮೊದಲನೇ ಆರೋಪಿ ಧ್ರುವ್ ರಾಠಿಗೆ ಸಮನ್ಸ್ ತಲುಪಿಸಲು ದೂರುದಾರರು ಕಳೆದ ಹಲವು ವರ್ಷಗಳಿಂದ ಪ್ರಯತ್ನಿಸುತ್ತಿರುವುದು ಸ್ಪಷ್ಟವಾಗಿದೆ” ಎಂದು ನ್ಯಾಯಾಲಯ ಹೇಳಿದೆ. ಧ್ರುವ್ ರಾಠಿಗೆ ಮೊದಲ ಬಾರಿಗೆ 2019ರ ಜುಲೈನಲ್ಲಿ ಸಮನ್ಸ್ ಜಾರಿಗೊಳಿಸಲಾಗಿತ್ತು ಎಂಬುದನ್ನೂ ನ್ಯಾಯಾಲಯ ಉಲ್ಲೇಖಿಸಿದೆ.

ರಾಮ, ಸೀತೆ, ಕೃಷ್ಣನಿಗೆ ಅವಮಾನ: ವಿಡಿಯೋ ತೆಗೆದುಹಾಕಲು ಧ್ರುವ ರಥೀಗೆ 15 ದಿನಗಳ ಗಡುವು

ಪಾಂಡೆ ಪರ ವಾದ ಮಂಡಿಸಿದ ವಕೀಲ ಸಮಕ್ಷ್ ಶರ್ಮಾ, ಸಿಜೆಪಿ ಪ್ರತಿಭಟನೆಗಳಲ್ಲಿ ಭಾಗವಹಿಸಲು ಧ್ರುವ್ ರಾಠಿ ಭಾರತಕ್ಕೆ ಬಂದಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಹೀಗಾಗಿ, ಅವರಿಗೆ ಶೀಘ್ರವಾಗಿ ಸಮನ್ಸ್ ತಲುಪಿಸಲು ಮತ್ತೊಮ್ಮೆ ಸಮನ್ಸ್ ಜಾರಿಗೊಳಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಹರಿಯಾಣದ ಗುರುಗ್ರಾಮದಲ್ಲಿರುವ ಧ್ರುವ್ ರಾಠಿ ಅವರ ವಿಳಾಸಕ್ಕೆ ಹೊಸ ಸಮನ್ಸ್ ಜಾರಿಗೊಳಿಸುವಂತೆ ಆದೇಶಿಸಿತು. ಇದರಲ್ಲಿ ದಸ್ತಿ ಸಮನ್ಸ್‌ (ನ್ಯಾಯಾಲಯದ ಸಿಬ್ಬಂದಿಯ ಬದಲಿಗೆ ದೂರುದಾರರೇ ಖುದ್ದಾಗಿ ಸಮನ್ಸ್ ತಲುಪಿಸುವ ವ್ಯವಸ್ಥೆ) ಕೂಡ ಸೇರಿದೆ. ಸಮನ್ಸ್ ತಲುಪಿಸುವ ಜವಾಬ್ದಾರಿ ಹೊಂದಿರುವ ನ್ಯಾಯಾಲಯದ ಸಿಬ್ಬಂದಿಯೊಂದಿಗೆ ದೂರುದಾರರೂ ತೆರಳಲು ನ್ಯಾಯಾಲಯ ಅನುಮತಿ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 17ಕ್ಕೆ ನಿಗದಿಪಡಿಸಲಾಗಿದೆ.

2018ರಲ್ಲಿ ಧ್ರುವ್ ರಾಠಿ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಕಾಸ್ ಪಾಂಡೆ ಕುರಿತು ವಿಡಿಯೊವೊಂದನ್ನು ಅಪ್‌ಲೋಡ್ ಮಾಡಿದ್ದರು. ಹೀಗಾಗಿ ಪಾಂಡೆ ಅವರು ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು.

ಇದಲ್ಲದೆ, ಧ್ರುವ್ ರಾಠಿ ವಿರುದ್ಧ ಇತರ ಕಾನೂನು ಪ್ರಕರಣಗಳೂ ಇವೆ. ಬಿಜೆಪಿ ನಾಯಕ ಸುರೇಶ್ ಕರಮ್ಶಿ ನಖುವಾ ಅವರು ರಾಠಿ ವಿರುದ್ಧ 20 ಲಕ್ಷ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. 2024ರ ಜುಲೈನಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೊವೊಂದರಲ್ಲಿ ಧ್ರುವ್ ರಾಠಿ ತಮ್ಮನ್ನು ಹಿಂಸಾತ್ಮಕ ಮತ್ತು ನಿಂದನೀಯ ಟ್ರೋಲ್ ಎಂದು ಬಣ್ಣಿಸಿದ್ದಾರೆ ಎಂದು ನಖುವಾ ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2024ರ ಜುಲೈ ತಿಂಗಳಲ್ಲೇ ನ್ಯಾಯಾಲಯವು ಧ್ರುವ್ ರಾಠಿಗೆ ಸಮನ್ಸ್ ಮತ್ತು ನೋಟಿಸ್ ಜಾರಿಗೊಳಿಸಿತ್ತು.