ದೇವಾಲಯಗಳೇ ಉಗ್ರರ ಟಾರ್ಗೆಟ್; ಲಷ್ಕರ್ ಭಯೋತ್ಪಾದಕರ ಸಂಚು ಬಯಲಾಗಿದ್ದೇಗೆ?
ದೆಹಲಿ ಪೊಲೀಸರು ಉಗ್ರ ಸಂಚುವನ್ನು ಭೇದಿಸಿ, ಲಷ್ಕರ್-ಎ-ತೈಬಾ ಸಂಪರ್ಕ ಹೊಂದಿದ್ದ ಶಂಕಿತ ಶಬ್ಬೀರ್ ಅಹ್ಮದ್ ಲೋನ್ ಅನ್ನು ಬಂಧಿಸಿದ್ದಾರೆ. ಈತ ದೆಹಲಿಯ ಪ್ರಮುಖ ಧಾರ್ಮಿಕ ಸ್ಥಳಗಳು ಹಾಗೂ ಜನನಿಬಿಡ ಪ್ರದೇಶಗಳ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಿ ಪಾಕಿಸ್ತಾನದಲ್ಲಿರುವ ಹ್ಯಾಂಡ್ಲರ್‌ಗಳಿಗೆ ಕಳುಹಿಸಿದ್ದಾನೆ ಎಂದು ತಿಳಿದುಬಂದಿದೆ. ಈ ಘಟನೆ ಹಿನ್ನೆಲೆ ದೆಹಲಿಯಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿಯುತ್ತಿದೆ.
ಸಾಂದರ್ಭಿಕ ಚಿತ್ರ -
ನವದೆಹಲಿ: ದೆಹಲಿ ಪೊಲೀಸರ ವಿಶೇಷ ಘಟಕವು ಭಾರಿ ಭಯೋತ್ಪಾದನಾ ಸಂಚೊಂದನ್ನು (terror operation) ಭೇದಿಸುವಲ್ಲಿ ಯಶಸ್ವಿಯಾಗಿದ್ದು, ಪಾಕಿಸ್ತಾನ (Pakistan) ಮೂಲದ ಲಷ್ಕರ್-ಎ-ತೈಬಾ (Lashkar-e-Taiba) ಉಗ್ರಗಾಮಿ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಶಂಕಿತ ಉಗ್ರನನ್ನು ಬಂಧಿಸಿದೆ. ಬಂಧಿತ ಆರೋಪಿಯನ್ನು ಶಬ್ಬೀರ್ ಅಹ್ಮದ್ ಲೋನ್ (Shabbir Ahmed Lone) ಎಂದು ಗುರುತಿಸಲಾಗಿದ್ದು, ವಿಚಾರಣೆಯ ಸಂದರ್ಭದಲ್ಲಿ ಈತ ದೆಹಲಿ (Delhi)ಯ ಪ್ರಮುಖ ಧಾರ್ಮಿಕ ಸ್ಥಳಗಳು ಮತ್ತು ಜನನಿಬಿಡ ಪ್ರದೇಶಗಳಲ್ಲಿ ನಡೆಸಿದ್ದ ಗುಪ್ತಚರ ಕಾರ್ಯಾಚರಣೆಯ ಬಗ್ಗೆ ಆತಂಕಕಾರಿ ಮಾಹಿತಿಗಳನ್ನು ಹೊರಹಾಕಿದ್ದಾನೆ.
ತನಿಖಾ ಮೂಲಗಳ ಪ್ರಕಾರ, ಶಬ್ಬೀರ್ ಲೋನ್ ದೆಹಲಿಯ ಪ್ರಸಿದ್ಧ ಕಾಲ್ಕಾಜಿ ದೇವಸ್ಥಾನ, ಲೋಟಸ್ ಟೆಂಪಲ್ ಮತ್ತು ಛತ್ತರ್‌ಪುರ್ ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡಿದ್ದನು. ಈ ಸ್ಥಳಗಳ ದೃಶ್ಯಗಳನ್ನು ವಿಡಿಯೋ ಮಾಡಿ ಪಾಕಿಸ್ತಾನದಲ್ಲಿರುವ ತನ್ನ ಹ್ಯಾಂಡ್ಲರ್‌ಗಳಿಗೆ ಕಳುಹಿಸಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಅಷ್ಟೇ ಅಲ್ಲದೆ, ದೆಹಲಿಯ ಹೃದಯಭಾಗವಾದ ಕನಾಟ್ ಪ್ಲೇಸ್‌ನಂತಹ ವಾಣಿಜ್ಯ ಪ್ರದೇಶಗಳ ಮೇಲೆಯೂ ಈತ ಕಣ್ಣಿಟ್ಟಿದ್ದನು. ಇದು ಕೇವಲ ಧಾರ್ಮಿಕ ಸ್ಥಳಗಳಲ್ಲದೆ, ನಾಗರಿಕರು ಹೆಚ್ಚಾಗಿ ಸೇರುವ ಸ್ಥಳಗಳಲ್ಲಿ ಭಾರಿ ವಿಧ್ವಂಸಕ ಕೃತ್ಯ ನಡೆಸುವ ಹುನ್ನಾರವಾಗಿತ್ತು ಎಂದು ತನಿಖಾ ಸಂಸ್ಥೆಗಳು ಶಂಕಿಸಿವೆ.
ಬಿಹಾರದ ದೇವಸ್ಥಾನದಲ್ಲಿ ಭಾರೀ ಕಾಲ್ತುಳಿತ; ಎಂಟು ಮಹಿಳೆಯರು ಸಾವು, ಹಲವರಿಗೆ ಗಾಯ
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ISI) ಮತ್ತು ಲಷ್ಕರ್ ಉಗ್ರರು ಜಂಟಿಯಾಗಿ ಈ ಸಂಚು ರೂಪಿಸಿದ್ದು, ಬಾಂಗ್ಲಾದೇಶದಲ್ಲಿ 'ದಿ ರೆಸಿಸ್ಟೆನ್ಸ್ ಫ್ರಂಟ್' ಮಾದರಿಯ ಹೊಸ ಭಯೋತ್ಪಾದಕ ಗುಂಪನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಆಘಾತಕಾರಿ ವಿಷಯವೂ ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಈ ಬೆಳವಣಿಗೆಯು ಪ್ರಾದೇಶಿಕ ಭದ್ರತೆಯ ದೃಷ್ಟಿಯಿಂದ ಗಂಭೀರ ಕಳವಳಕ್ಕೆ ಕಾರಣವಾಗಿದೆ. ಸದ್ಯ ದೆಹಲಿಯಾದ್ಯಂತ ಭದ್ರತೆಯನ್ನು ತೀವ್ರಗೊಳಿಸಲಾಗಿದ್ದು, ಸೂಕ್ಷ್ಮ ಪ್ರದೇಶಗಳಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ. ಈ ಉಗ್ರ ಜಾಲವನ್ನು ಪೂರ್ಣವಾಗಿ ಹತ್ತಿಕ್ಕಲು ಮತ್ತು ಮುಂದಿನ ಸಂಭವನೀಯ ದಾಳಿಗಳನ್ನು ತಡೆಯಲು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.