ಒಬ್ಬಳೇ ವಧು, ಇಬ್ಬರು ವರರು: ಉತ್ತರ ಪ್ರದೇಶದ ಮದುವೆಯಲ್ಲಿ 'ಡಬಲ್ ಬರಾತ್' ಸೃಷ್ಟಿಸಿದ ಹೈಡ್ರಾಮಾ
ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಒಂದೇ ವಧುವಿಗಾಗಿ ಇಬ್ಬರು ವರರು ತಮ್ಮ ತಮ್ಮ ಬರಾತ್‌ಗಳೊಂದಿಗೆ (ಮೆರವಣಿಗೆ) ಆಗಮಿಸಿದರು. ಪರಿಸ್ಥಿತಿ ಉದ್ವಿಗ್ನವಾಗುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿದರು. ಕೊನೆಗೆ ವಧುವಿನ ಕುಟುಂಬವು ಸಂಭಾಲ್ ವರನನ್ನು ಆಯ್ಕೆ ಮಾಡಿಕೊಂಡಿದ್ದು, ಮೊರಾದಾಬಾದ್ ಕಡೆಯವರು ಶಾಂತಿಯುತವಾಗಿ ಹಿಂತಿರುಗಿದರು. ಯಾವುದೇ ದೂರು ದಾಖಲಾಗಿಲ್ಲ.
ಸಾಂದರ್ಭಿಕ ಚಿತ್ರ -
ಲಖನೌ, ಏ. 13: ಉತ್ತರ ಪ್ರದೇಶದ (Uttar Pradesh) ಅಮ್ರೋಹಾ (Amroha) ಜಿಲ್ಲೆಯ ಮದುವೆ ಸಮಾರಂಭವೊಂದು ಅಕ್ಷರಶಃ ಸಿನಿಮೀಯ ಶೈಲಿಯ ಹೈಡ್ರಾಮಾಗೆ ಸಾಕ್ಷಿಯಾಯಿತು. ಒಬ್ಬಳೇ ವಧುವನ್ನು ವರಿಸಲು ಇಬ್ಬರು ವರರು ತಮ್ಮ ತಮ್ಮ ಮೆರವಣಿಗೆಯೊಂದಿಗೆ (ಬರಾತ್) ಆಗಮಿಸಿದ್ದು ಸಾರ್ವಜನಿಕರಲ್ಲಿ ಭಾರಿ ಗೊಂದಲ ಮತ್ತು ಆತಂಕ ಸೃಷ್ಟಿಸಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ತಡೆಯಲು ಪೊಲೀಸರು ಮಧ್ಯಪ್ರವೇಶಿಸಬೇಕಾದ ಅನಿವಾರ್ಯತೆ ಎದುರಾಯಿತು.
ಅಮ್ರೋಹಾದ ಬ್ಯಾಂಕ್ವೆಟ್ ಹಾಲ್‌ನಲ್ಲಿ ವಧುವಿನ ಕುಟುಂಬವು ಸಂಭಾಲ್ ಜಿಲ್ಲೆಯಿಂದ ಬರಬೇಕಿದ್ದ ವರ ಮತ್ತು ಆತನ ಕಡೆಯವರನ್ನು ಸ್ವಾಗತಿಸಲು ಸಿದ್ಧತೆ ನಡೆಸುತ್ತಿತ್ತು. ಆದರೆ ಅದೇ ಸಮಯಕ್ಕೆ ಪಕ್ಕದ ಮೊರಾದಾಬಾದ್ ಜಿಲ್ಲೆಯಿಂದ ಮತ್ತೊಂದು ಅಲಂಕೃತ ವಿವಾಹದ ಮೆರವಣಿಗೆ ಅಲ್ಲಿಗೆ ಬಂದಿಳಿಯಿತು. ಎರಡೂ ಕಡೆಯವರು ತಾವೇ ಅಸಲಿ ವರನ ಕಡೆಯವರೆಂದು ವಾದಿಸಲು ಶುರು ಮಾಡಿದ್ದರಿಂದ ವಿವಾಹ ಮಂಟಪದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಇಬ್ಬರು ವರರನ್ನು ಕಂಡು ಗಾಬರಿಯಾದ ವಧುವಿನ ಕಡೆಯವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು.
ಉತ್ತಮ ವೇತನಕ್ಕೆ ಆಗ್ರಹಿಸಿ ನೋಯ್ಡಾದಲ್ಲಿ ಭಾರಿ ಪ್ರತಿಭಟನೆ: ಭುಗಿಲೆದ್ದ ಕಾರ್ಮಿಕರ ಆಕ್ರೋಶ
ಪೊಲೀಸರ ತನಿಖೆಯಿಂದ ಈ ವಿಲಕ್ಷಣ ಘಟನೆಯ ಹಿಂದಿನ ರಹಸ್ಯ ಬಯಲಾಗಿದೆ. ವಧುವಿಗೆ ಮೊದಲು ಮೊರಾದಾಬಾದ್‌ನ ಸಂಬಂಧಿಕರೊಬ್ಬರ ಜತೆ ನಿಶ್ಚಿತಾರ್ಥವಾಗಿತ್ತು. ಆದರೆ ಇತ್ತೀಚೆಗೆ ಎರಡೂ ಕುಟುಂಬಗಳ ನಡುವೆ ನಡೆದ ಜಗಳದಿಂದಾಗಿ ಆ ಸಂಬಂಧ ಮುರಿದುಬಿದ್ದಿತ್ತು. ನಿಶ್ಚಿತಾರ್ಥ ರದ್ದಾಗಿದ್ದರೂ, ಈಗಾಗಲೇ ಆಮಂತ್ರಣ ಪತ್ರಿಕೆ ಹಂಚಿದ್ದ ಮೊರಾದಾಬಾದ್ ಕುಟುಂಬವು ಪಟ್ಟು ಹಿಡಿದು ಮದುವೆಗೆ ಆಗಮಿಸಿತ್ತು. ಇತ್ತ ವಧುವಿನ ಕುಟುಂಬವು ಆರ್ಥಿಕ ನಷ್ಟ ತಪ್ಪಿಸಲು ಸಂಭಾಲ್‌ನ ವ್ಯಕ್ತಿಯೊಂದಿಗೆ ಹೊಸ ಸಂಬಂಧ ಬೆಳೆಸಿ ಅದೇ ದಿನಾಂಕಕ್ಕೆ 'ನಿಕಾಹ್' ನಿಗದಿಪಡಿಸಿತ್ತು.
ಪರಿಸ್ಥಿತಿಯನ್ನು ಅರ್ಥೈಸಿಕೊಂಡ ಪೊಲೀಸರು ಅಂತಿಮ ನಿರ್ಧಾರವನ್ನು ವಧುವಿನ ಕುಟುಂಬಕ್ಕೆ ಬಿಟ್ಟರು. ವಧುವಿನ ಕಡೆಯವರು ಸಂಭಾಲ್‌ನ ವರನನ್ನೇ ಆರಿಸಿಕೊಂಡಿದ್ದರಿಂದ, ಅವರೊಂದಿಗೆ ವಿವಾಹ ಕಾರ್ಯಕ್ರಮ ಸುಗಮವಾಗಿ ನೆರವೇರಿತು. ಕೊನೆಗೆ ಮೊರಾದಾಬಾದ್‌ನ ಕಡೆಯವರು ತಮ್ಮ ಹಕ್ಕು ಮಾನ್ಯವಾಗದಿದ್ದಾಗ ಮೌನವಾಗಿ ಹಿಂದಿರುಗಿದರು. ಪರಸ್ಪರ ಮಾತುಕತೆಯ ಮೂಲಕ ವಿವಾದ ಬಗೆಹರಿದ ಕಾರಣ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಿನಲ್ಲಿ ಈ "ಡಬಲ್ ಬರಾತ್" ಘಟನೆಯು ಸ್ಥಳೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ.