ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚುನಾವಣಾ ಆಯೋಗದ ಭಿನ್ನಾಭಿಪ್ರಾಯ ವಿವಾದ: ಜ್ಞಾನೇಶ್ ಕುಮಾರ್ ವಿರುದ್ಧ ಮಹಾಭಿಯೋಗ ನಿರ್ಣಯ ಮಂಡಿಸಲು ವಿಪಕ್ಷಗಳ ಸಿದ್ಧತೆ

EC Dissent Row: ವಿಪಕ್ಷಗಳ ಇಂಡಿಯಾ ಒಕ್ಕೂಟವು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕುವ ಕುರಿತು ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಚುನಾವಣಾ ಆಯೋಗದಲ್ಲಿ ನಿರ್ಧಾರಗಳನ್ನು ಯಾವ ರೀತಿಯಲ್ಲಿ ತೆಗೆದುಕೊಳ್ಳಲಾಗುತ್ತಿತ್ತು ಎಂಬ ಬಗ್ಗೆ ವಿಪಕ್ಷಗಳು ಪ್ರಶ್ನಿಸಿವೆ.

ಜ್ಞಾನೇಶ್ ಕುಮಾರ್ ವಿರುದ್ಧ ಮಹಾಭಿಯೋಗ ನಿರ್ಣಯ ಮಂಡಿಸಲು ಸಿದ್ಧತೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (ಸಂಗ್ರಹ ಚಿತ್ರ) -

Priyanka P
Priyanka P Sep 24, 2026 6:35 PM

ನವದೆಹಲಿ, ಸೆ. 24: ವಿಪಕ್ಷಗಳ ಇಂಡಿಯಾ ಒಕ್ಕೂಟವು (INDIA bloc) ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ಅವರನ್ನು ಹುದ್ದೆಯಿಂದ ತೆಗೆದುಹಾಕುವ ಕುರಿತು ಹೊಸ ಪ್ರಯತ್ನಕ್ಕೆ ಮುಂದಾಗಿದೆ. ಅವರನ್ನು ಪದಚ್ಯುತಗೊಳಿಸುವ ಉದ್ದೇಶದಿಂದ ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಮಹಾಭಿಯೋಗ ನಿರ್ಣಯ ಮಂಡಿಸಲು ಸಿದ್ಧತೆ ನಡೆಯುತ್ತಿದೆ. ಈ ಸಂಬಂಧ ಹೊಸ ಕರಡು ನಿರ್ಣಯವನ್ನು ಅಂತಿಮಗೊಳಿಸಲಾಗುತ್ತಿದ್ದು, ಮುಂದಿನ ವಾರದಲ್ಲೇ ನೋಟಿಸ್ ಸಲ್ಲಿಸುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಈ ವಾರದ ಆರಂಭದಲ್ಲಿ ಪ್ರಕಟವಾದ ʼಇಂಡಿಯನ್ ಎಕ್ಸ್‌ಪ್ರೆಸ್ʼ ತನಿಖಾ ವರದಿಯ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಆ ವರದಿಯ ಪ್ರಕಾರ, ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ 10 ತಿಂಗಳ ಅವಧಿಯಲ್ಲಿ ಚುನಾವಣಾ ಆಯೋಗದ ವಿವಿಧ ನಿರ್ಧಾರಗಳು ಮತ್ತು ಆದೇಶಗಳ ಬಗ್ಗೆ ಕನಿಷ್ಠ 14 ಬಾರಿ ಆಕ್ಷೇಪಗಳನ್ನು ದಾಖಲಿಸಿದ್ದರು. ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ಪರಿಷ್ಕರಣೆಗೆ ಸಂಬಂಧಿಸಿದ ನಿರ್ಧಾರಗಳ ಬಗ್ಗೆಯೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ವರದಿ ತಿಳಿಸಿದೆ.

ವರದಿ ಹೊರಬಂದ ಬಳಿಕ ವಿಪಕ್ಷಗಳು ಜ್ಞಾನೇಶ್ ಕುಮಾರ್ ವಿರುದ್ಧದ ಟೀಕೆಯನ್ನು ಮತ್ತಷ್ಟು ತೀವ್ರಗೊಳಿಸಿವೆ. ಚುನಾವಣಾ ಆಯೋಗದ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ ಹಲವು ರಾಜ್ಯಗಳಲ್ಲಿ ನಡೆದ ಚುನಾವಣೆಗಳಿಗೆ ಸಂಬಂಧಿಸಿದಂತೆ, ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು, ಅವರನ್ನು ಬಂಧಿಸಬೇಕು ಮತ್ತು ಕೆಲವು ರಾಜ್ಯಗಳಲ್ಲಿ ಮರುಚುನಾವಣೆ ನಡೆಸಬೇಕು ಎಂದು ವಿಪಕ್ಷಗಳು ಒತ್ತಾಯಿಸಿವೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ; ದೇಶಾದ್ಯಂತ ಪ್ರತಿಭಟನೆಯ ಎಚ್ಚರಿಕೆ ನೀಡಿದ ಸಿಜೆಪಿ

ವಿಪಕ್ಷಗಳ ಪ್ರಕಾರ, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್‌ ಕುಮಾರ್‌ ಮತ್ತು ಉಳಿದಿಬ್ಬರು ಚುನಾವಣಾ ಆಯುಕ್ತರಾದ (ಇಸಿ) ಸುಖಬೀರ್‌ ಸಿಂಗ್‌ ಸಂಧು ಮತ್ತು ವಿವೇಕ್‌ ಜೋಶಿ ನಡುವೆ ತೀವ್ರ ಸ್ವರೂಪದಲ್ಲಿ ಅಭಿಪ್ರಾಯ ಬೇಧ ವ್ಯಕ್ತವಾಗುತ್ತಿದೆ.

ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕುವಂತೆ ಸಂಸತ್ತಿನಲ್ಲಿ ಮತ್ತೊಮ್ಮೆ ಪ್ರಸ್ತಾವನೆ ತರಬೇಕಾಗಿದೆ ಎಂದು ಇಂಡಿಯಾ ಒಕ್ಕೂಟದ ನಾಯಕರು ಹೇಳಿದ್ದಾರೆ. ಈ ಬಾರಿ ಮಂಡಿಸಲಿರುವ ಹೊಸ ಪ್ರಸ್ತಾವನೆಯಲ್ಲಿ, ಹಿಂದಿನ ಬಾರಿ ಉಲ್ಲೇಖಿಸಲಾಗಿದ್ದ ಆರೋಪಗಳಿಗಿಂತ ಹೆಚ್ಚಿನ ಆರೋಪಗಳನ್ನು ಸೇರಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ಹೊಸ ಪ್ರಯತ್ನವನ್ನು ಈ ಹಿಂದೆ ರಾಜ್ಯಸಭೆಯಲ್ಲಿ ಸಲ್ಲಿಸಲಾಗಿದ್ದ ನೋಟಿಸ್‌ನ ಹಿನ್ನೆಲೆಯಲ್ಲಿಯೂ ನೋಡಲಾಗುತ್ತಿದೆ. ಏಪ್ರಿಲ್ 24ರಂದು ವಿಪಕ್ಷಗಳ 73 ಸಂಸದರು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕುವಂತೆ ರಾಜ್ಯಸಭೆಯಲ್ಲಿ ನೋಟಿಸ್ ಸಲ್ಲಿಸಿದ್ದರು. ಸಾಬೀತಾದ ದುರ್ನಡತೆ ಎಂಬ ಆರೋಪದ ಆಧಾರದ ಮೇಲೆ ಅವರನ್ನು ಹುದ್ದೆಯಿಂದ ತೆಗೆದುಹಾಕಬೇಕು ಎಂದು ಈ ನೋಟಿಸ್‌ನಲ್ಲಿ ಕೋರಲಾಗಿತ್ತು.

ಇದಕ್ಕೂ ಮೊದಲು, ಮಾರ್ಚ್ 12ರಂದು ವಿಪಕ್ಷಗಳು ಜ್ಞಾನೇಶ್ ಕುಮಾರ್ ಅವರನ್ನು ಹುದ್ದೆಯಿಂದ ತೆಗೆದುಹಾಕುವಂತೆ ನೋಟಿಸ್ ಸಲ್ಲಿಸಿದ್ದವು. ಆದರೆ, ಆ ಪ್ರಯತ್ನವನ್ನು ಬಳಿಕ ಲೋಕಸಭೆ ಮತ್ತು ರಾಜ್ಯಸಭೆಯ ಅಧ್ಯಕ್ಷ ಸ್ಥಾನದಲ್ಲಿರುವ ಅಧಿಕಾರಿಗಳು ತಿರಸ್ಕರಿಸಿದ್ದರು. ಏಪ್ರಿಲ್ 24ರಂದು ಸಲ್ಲಿಸಲಾದ ನೋಟಿಸ್‌ಗೆ ಸಹಿ ಹಾಕಿದ್ದ ಏಳು ಸಂಸದರು ಬಳಿಕ ಪಕ್ಷ ಬದಲಾಯಿಸಿದ್ದಾರೆ ಎಂದು ವರದಿಯಾಗಿರುವುದರಿಂದ, ಆ ನೋಟಿಸ್‌ನ ಪ್ರಸ್ತುತ ಸ್ಥಿತಿ ಏನು ಎಂಬುದು ಗೊತ್ತಾಗಿಲ್ಲ.