Election Result 2026: ಕೇರಳಂನಲ್ಲಿ ಗೆಲುವಿನತ್ತ ಕಾಂಗ್ರೆಸ್ ನೇತೃತ್ವದ ಯುಡಿಎಫ್ ದಾಪುಗಾಲು; ಎಲ್‌ಡಿಎಫ್‌ಗೆ ಹೀನಾಯ ಹಿನ್ನಡೆ
Election Result 2026: ಕೇರಳಂ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದು, ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಗೆಲುವಿನತ್ತ ದಾಪುಗಾಲು ಹಾಕುತ್ತಿದೆ. 140 ಸದಸ್ಯ ಬಲದ ಕೇರಳಂ ವಿಧಾನಸಭೆಯ ಚುನಾವಣೆಯ ಆರಂಭಿಕ ಎಣಿಕೆಯ ಪ್ರಕಾರ, ಯುಡಿಎಫ್ ಈಗಾಗಲೇ 95ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ವಿ.ಡಿ. ಸತೀಶನ್ (ಸಂಗ್ರಹ ಚಿತ್ರ) -
ತಿರುವನಂತಪುರಂ, ಮೇ 4: ಕೇರಳ ವಿಧಾನಸಭೆ ಚುನಾವಣೆ ಫಲಿತಾಂಶದಲ್ಲಿ (Kerala Election Result) ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಆರಂಭಿಕ ಎಣಿಕೆಯ ಪ್ರಕಾರ, ಯುಡಿಎಫ್ ಈಗಾಗಲೇ 95ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವುದಾಗಿ ಪ್ರಾಥಮಿಕ ಮಾಹಿತಿ ಸೂಚಿಸುತ್ತದೆ. ಇದು ಮುಂದುವರಿದರೆ, 2001ರ ಕೇರಳಂ ವಿಧಾನಸಭಾ ಚುನಾವಣೆಯ ನಂತರದ ಅತ್ಯುತ್ತಮ ಪ್ರದರ್ಶನ ಆಗಲಿದೆ. 2001ರ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್ 99 ಸ್ಥಾನಗಳನ್ನು ಗಳಿಸಿದ್ದು, ಇದುವರೆಗಿನ ಅತ್ಯಧಿಕ ಸ್ಥಾನವಾಗಿದೆ.
ಇತ್ತೀಚಿನ ಮತ ಎಣಿಕೆ ಪ್ರಕಾರ, ಸಿಪಿಐ(ಎಂ) ನೇತೃತ್ವದ ಅಧಿಕಾರದಲ್ಲಿರುವ ಎಡ ಪ್ರಜಾಸತ್ತಾತ್ಮಕ ರಂಗ (ಎಲ್‌ಡಿಎಫ್) ಸರ್ಕಾರದ ವಿರುದ್ಧ ಜನರು ಸ್ಪಷ್ಟವಾದ ತೀರ್ಮಾನ ನೀಡಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಎಲ್‌ಡಿಎಫ್ ಈಗಾಗಲೇ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಹಿನ್ನಡೆಯಲ್ಲಿದೆ. ಹೀಗಾಗಿ ಅದು ಸೋಲಿನತ್ತ ಮುಖ ಮಾಡುತ್ತಿದೆ.
ಅಂದಹಾಗೆ, ಕೇರಳದ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್, ಪಕ್ಷದ ಪ್ರಚಾರದ ನೇತೃತ್ವ ವಹಿಸಿದ್ದರು. 10 ವರ್ಷಗಳ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಮರಳುವ ಗುರಿಯನ್ನು ಅವರು ಹೊಂದಿದ್ದರು. ಹಲವು ಕಡೆಗಳಲ್ಲಿ, ಯುಡಿಎಫ್ ಗಮನಾರ್ಹ ಸಾಧನೆ ಮಾಡಿದೆ. ಎಲ್‌ಡಿಎಫ್ ಭದ್ರಕೋಟೆಗಳನ್ನು ಭೇದಿಸಿದೆ. ಯುಡಿಎಫ್ ಗೆಲುವಿನತ್ತ ದಾಪುಗಾಲು ಹಾಕಲು ಮುಸ್ಲಿಂ ಲೀಗ್ ಕೂಡ ಪ್ರಮುಖ ಪಾತ್ರವಹಿಸಿದೆ. ಅಲ್ಲದೆ, ಜನರು ಎಲ್‌ಡಿಎಫ್ ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿದ್ದರು.
ಮ್ಯಾಜಿಕ್ ಸಂಖ್ಯೆ ದಾಟಲು ವಿಫಲವಾದರೆ ಏನು ಮಾಡುತ್ತಾರೆ ನಟ ವಿಜಯ್?
ಇನ್ನು 2001ರಲ್ಲಿ ಯುಡಿಎಫ್ ಐತಿಹಾಸಿಕ ಸಾಧನೆ ಮಾಡಿತ್ತು. 140 ಸದಸ್ಯ ಬಲದ ವಿಧಾನಸಭೆಯಲ್ಲಿ 99 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. 2006ರಲ್ಲಿ ಎಲ್‌ಡಿಎಫ್ 98 ಸ್ಥಾನಗಳೊಂದಿಗೆ ಮತ್ತೆ ಅಧಿಕಾರಕ್ಕೆ ಬಂದಿತು. ಯುಡಿಎಫ್ 42 ಸ್ಥಾನಗಳಿಗೆ ಇಳಿಯಿತು.
2011ರಲ್ಲಿ ಯುಡಿಎಫ್ 72 ಸ್ಥಾನಗಳೊಂದಿಗೆ ಎಲ್‌ಡಿಎಫ್ ಅನ್ನು ಸ್ವಲ್ಪ ಹಿಂದಕ್ಕೆ ತಳ್ಳಿತು. ಇದು ಬಹುಮತದ 71ಕ್ಕಿಂತ ಸ್ವಲ್ಪ ಹೆಚ್ಚಾಗಿತ್ತು. ಆದರೆ ರಾಜ್ಯದ ಇತಿಹಾಸದಲ್ಲಿ ಅತ್ಯಂತ ನಿಕಟ ಸ್ಪರ್ಧೆಗಳಲ್ಲಿ ಒಂದಾದ ಎಲ್‌ಡಿಎಫ್ 68 ಸ್ಥಾನಗಳನ್ನು ಪಡೆದುಕೊಂಡಿತ್ತು.
2016ರಲ್ಲಿ ಎಲ್‌ಡಿಎಫ್ 91 ಸ್ಥಾನಗಳೊಂದಿಗೆ ಮತ್ತೆ ಅಧಿಕಾರಕ್ಕೆ ಬಂದಿತ್ತು. ಯುಡಿಎಫ್‌ನ ಸಂಖ್ಯೆ 47ಕ್ಕೆ ಇಳಿದಿತ್ತು. ಇದು ಹಿಂದಿನ ಅಧಿಕಾರಾವಧಿಯ ಆಂತರಿಕ ಭಿನ್ನಾಭಿಪ್ರಾಯ ಮತ್ತು ಆಡಳಿತ ವಿರೋಧಿ ಅಲೆಯ ನಡುವೆ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಕ್ಕೆ ಸವಾಲು ಎದುರಾಗಿತ್ತು.
2021ರಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ 99 ಸ್ಥಾನಗಳೊಂದಿಗೆ ಅಧಿಕಾರವನ್ನು ಉಳಿಸಿಕೊಂಡಿತು. ಈ ಮೂಲಕ ಪ್ರತಿ ಐದು ವರ್ಷಗಳಿಗೊಮ್ಮೆ ಪರ್ಯಾಯ ಸರ್ಕಾರಗಳನ್ನು ಆಯ್ಕೆ ಮಾಡುವ ಕೇರಳದ ದೀರ್ಘಕಾಲದ ಮಾದರಿಯನ್ನು ಮುರಿಯಿತು. ಯುಡಿಎಫ್ 41 ಸ್ಥಾನಗಳಿಗೆ ಇಳಿದು, ಅದು ಸತತವಾಗಿ ಎರಡು ಬಾರಿ ಸೋಲು ಕಂಡಿತು. ಈ ಬಾರಿ ಯುಡಿಎಫ್ ಫೀನಿಕ್ಸ್‌ನಂತೆ ಎದ್ದು ಬಂದಿದೆ.