ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಾನು ಸಿಎಂ ಸ್ಥಾನದಿಂದ ಕೆಳಗಿಳಿಯಲು ಬಿಜೆಪಿ ನಾಯಕರೇ ಕಾರಣ; ಸ್ವಪಕ್ಷದ ವಿರುದ್ಧವೇ ಗರಂ ಆದ ಮಣಿಪುರದ ಮಾಜಿ ಸಿಎಂ!

ಮಣಿಪುರದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ನಾಯಕ ಎನ್. ಬಿರೇನ್ ಸಿಂಗ್ ಅವರು ತಮ್ಮದೇ ಪಕ್ಷದ ಕೆಲವು ನಾಯಕರ ವಿರುದ್ಧ ಗಂಭೀರ ರಾಜಕೀಯ ಪಿತೂರಿಯ ಆರೋಪ ಮಾಡಿದ್ದಾರೆ. ಫೆಬ್ರವರಿ 2025 ರಲ್ಲಿ ತಾವು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲು ರಾಜ್ಯ ಬಿಜೆಪಿಯ ನಾಯಕರು ಕಾರಣ ಎಂದು ದೂರಿದ್ದಾರೆ.

ಸ್ವಪಕ್ಷದ ವಿರುದ್ಧವೇ ಗರಂ ಆದ ಮಣಿಪುರದ ಮಾಜಿ ಸಿಎಂ!

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Oct 30, 2026 8:55 PM

ಇಂಫಾಲ: ಮಣಿಪುರದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಬಿಜೆಪಿ ನಾಯಕ ಎನ್. ಬಿರೇನ್ ಸಿಂಗ್ ಅವರು ತಮ್ಮದೇ ಪಕ್ಷದ ಕೆಲವು ( Ex-Manipur CM Biren Singh) ನಾಯಕರ ವಿರುದ್ಧ ಗಂಭೀರ ರಾಜಕೀಯ ಪಿತೂರಿಯ ಆರೋಪ ಮಾಡಿದ್ದಾರೆ. ಫೆಬ್ರವರಿ 2025 ರಲ್ಲಿ ತಾವು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಲು ರಾಜ್ಯ ಬಿಜೆಪಿಯ ಕೆಲವು ನಾಯಕರು ವಿರೋಧ ಪಕ್ಷವಾದ ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿ ನಡೆಸಿದ ಸಂಚೇ ಕಾರಣ ಎಂದು ಅವರು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಮಣಿಪುರ ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಹಾಗೂ ಪ್ರಸ್ತುತ ವೈ. ಖೇಮಚಂದ್ ಸಿಂಗ್ ನೇತೃತ್ವದ ಸರ್ಕಾರದ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ತಾವು ಈ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದ ನಂತರ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದನ್ನು ಪಕ್ಷದ ಕೆಲವು ಶಾಸಕರಿಗೆ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರು ಬಿಜೆಪಿಯನ್ನು ತಮ್ಮ ಸ್ವಂತ ಆಸ್ತಿ ಎಂದು ಭಾವಿಸಿದ್ದರು, ಹಾಗಾಗಿ ಪಿತೂರಿ ನಡೆಸಿ ನನ್ನಿಂದ ರಾಜೀನಾಮೆ ಕೊಡಿಸಿದರು ಎಂದು ಸಿಂಗ್ ಆರೋಪಿಸಿದ್ದಾರೆ.

ಫೆಬ್ರವರಿ 2025 ರಲ್ಲಿ ತಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರೆ ರಾಜ್ಯದಲ್ಲಿ ಶಾಂತಿ ಮರಳುತ್ತದೆ ಎಂದು ಬಿಂಬಿಸಲಾಗಿತ್ತು. ಆದರೆ, ಈಗ ನಾನು ಅಧಿಕಾರದಲ್ಲಿ ಇಲ್ಲದಿದ್ದರೂ ರಾಜ್ಯದಲ್ಲಿ ಹಿಂಸಾಚಾರ ಏಕೆ ಮುಂದುವರಿಯುತ್ತಿದೆ ಮತ್ತು ನಾಗಾ ಹಾಗೂ ಕುಕಿ ಸಮುದಾಯಗಳ ನಡುವೆ ಯಾಕೆ ಸಾವು-ನೋವುಗಳು ಸಂಭವಿಸುತ್ತಿವೆ ಎಂದು ಅವರು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ, ವೈ. ಖೇಮಚಂದ್ ಸಿಂಗ್ ನೇತೃತ್ವದ ಪ್ರಸ್ತುತ ಬಿಜೆಪಿ ಸರ್ಕಾರವು ಜನರ ಕಳೆದುಹೋದ ವಿಶ್ವಾಸವನ್ನು ಮರಳಿ ಗಳಿಸಲು ತಕ್ಷಣ ಶ್ರಮಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ. ಜೊತೆಗೆ, ತಾವು ಮತ್ತೆ ಮುಖ್ಯಮಂತ್ರಿಯಾಗಬೇಕು ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಒತ್ತಾಯವಿದೆ ಎಂದೂ ಅವರು ಹೇಳಿದರು.

ಮಣಿಪುರ ಮತ್ತೆ ಧಗಧಗ: ಭುಗಿಲೆದ್ದ ಹಿಂಸಾಚಾರಕ್ಕೆ ನಾಲ್ವರು ಬಲಿ; ಸಿಎಂ ನಿವಾಸದ ಬಳಿ ಮೃತದೇಹ ಇರಿಸಿ ಪ್ರತಿಭಟನೆ

ಮಣಿಪುರದ ಮಾಜಿ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ಫೆಬ್ರವರಿ 9, 2025 ರಂದು ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದರು. ರಾಜ್ಯದಲ್ಲಿ ಹಿಂಸಾಚಾರ ನಿಯಂತ್ರಣಕ್ಕೆ ಬಾರದೇ ಇದ್ದುದರಿಂದ ಬಿಜೆಪಿಯ ಸ್ವಂತ ಶಾಸಕರು ಮತ್ತು ಮಂತ್ರಿಗಳಲ್ಲೇ ತೀವ್ರ ಅಸಮಾಧಾನ ಮೂಡಿತ್ತು. ಬಿರೇನ್ ಸಿಂಗ್ ಅವರ ಸಂಪುಟದಲ್ಲಿದ್ದ ಸಚಿವ ವೈ. ಖೇಮಚಂದ್ ಸಿಂಗ್ (ಪ್ರಸ್ತುತ ಸಿಎಂ) ಸೇರಿದಂತೆ ಸುಮಾರು 12 ಕ್ಕೂ ಹೆಚ್ಚು ಬಂಡಾಯ ಶಾಸಕರು ನಾಯಕತ್ವ ಬದಲಾವಣೆಗೆ ಪಟ್ಟು ಹಿಡಿದಿದ್ದರು. ವಿಧಾನಸಭೆಯ ಸ್ಪೀಕರ್ ಥೋಕ್ಚೊಮ್ ಸತ್ಯಬ್ರತ ಸಿಂಗ್ ಅವರು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ, ಬಿರೇನ್ ಸಿಂಗ್ ಅವರನ್ನು ಬದಲಾಯಿಸದಿದ್ದರೆ ಬಿಜೆಪಿಯ ಎಲ್ಲಾ ಶಾಸಕರು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದರು.