ಜೆನ್ ಝಿ ಪ್ರತಿಭಟನೆಯ ನಂತರ ನೇಪಾಳದಲ್ಲಿ ನಡೆಯಲಿದೆ ಮೊದಲ ಚುನಾವಣೆ; ಮಾರ್ಚ್ 2ರಿಂದ ಭಾರತ-ನೇಪಾಳ ಗಡಿ ಬಂದ್
First election in Nepal: ಮಾರ್ಚ್ 5ರಂದು ನಡೆಯಲಿರುವ ನೇಪಾಳದ ಸಾರ್ವತ್ರಿಕ ಚುನಾವಣೆ ಗಮನದಲ್ಲಿಟ್ಟುಕೊಂಡು ಭಾರತ-ನೇಪಾಳ ಗಡಿಯು ಮಾರ್ಚ್ 2ರ ಮಧ್ಯರಾತ್ರಿಯಿಂದ ಮಾರ್ಚ್ 5ರವರೆಗೆ ಮುಚ್ಚಲಿದೆ. ನೇಪಾಳದ ಗೃಹ ಸಚಿವಾಲಯ ಫೆಬ್ರವರಿ 26ರಂದು ಗಡಿ ಮುಚ್ಚುವ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದೆ.
ಭಾರತ-ನೇಪಾಳ ಗಡಿ (ಸಂಗ್ರಹ ಚಿತ್ರ) -
ಕಠ್ಮಂಡು, ಫೆ. 27: ಜೆನ್ ಝಿ ಪ್ರತಿಭಟನೆಯ (Gen z protest) ನಂತರ ನೇಪಾಳದಲ್ಲಿ ಮೊದಲ ಚುನಾವಣೆ ನಡೆಯಲಿದೆ. ಮಾರ್ಚ್ 5ರಂದು ನಡೆಯಲಿರುವ ನೇಪಾಳದ ಸಾರ್ವತ್ರಿಕ ಚುನಾವಣೆಗಳನ್ನು (Nepal’s general elections) ಗಮನದಲ್ಲಿಟ್ಟುಕೊಂಡು ಭಾರತ-ನೇಪಾಳ ಗಡಿಯು (India–Nepal border) ಮಾರ್ಚ್ 2ರ ಮಧ್ಯರಾತ್ರಿಯಿಂದ ಮಾರ್ಚ್ 5ರವರೆಗೆ ಮುಚ್ಚಲ್ಪಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ರೂಪೈಡಿಹಾದ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ (ICP) ಉಸ್ತುವಾರಿ ಸುಧೀರ್ ಶರ್ಮ ತಿಳಿಸಿರುವಂತೆ, ನೇಪಾಳದ ಗೃಹ ಸಚಿವಾಲಯ ಫೆಬ್ರವರಿ 26ರಂದು ಗಡಿ ಮುಚ್ಚುವ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದೆ.
ಚುನಾವಣಾ ಪ್ರಕ್ರಿಯೆಯನ್ನು ಮುಕ್ತ, ನ್ಯಾಯಯುತ, ನಿರ್ಭೀತ ಮತ್ತು ವಿಶ್ವಾಸಾರ್ಹ ವಾತಾವರಣದಲ್ಲಿ ನಡೆಸುವುದನ್ನು ಖಚಿತಪಡಿಸಿಕೊಳ್ಳಲು ಭಾರತಕ್ಕೆ ಹೊಂದಿಕೊಂಡಿರುವ ಬಂಕೆ ಜಿಲ್ಲೆಯಾದ್ಯಂತದ ಎಲ್ಲ ಗಡಿ ಹೊರಠಾಣೆಗಳು ಮಾರ್ಚ್ 2 ಮತ್ತು 3ರ ಮಧ್ಯರಾತ್ರಿ 12 ಗಂಟೆಯಿಂದ ಮಾರ್ಚ್ 5ರಂದು 12 ಗಂಟೆಯವರೆಗೆ ಮುಚ್ಚಲ್ಪಡುತ್ತವೆ ಎಂದು ಮೂಲಗಳು ತಿಳಿಸಿವೆ.
ನೇಪಾಳ ದಂಗೆಯಲ್ಲಿ ಮೃತಪಟ್ಟವರನ್ನು ಹುತಾತ್ಮರೆಂದು ಘೋಷಿಸಿದ ಪ್ರಧಾನಿ ಸುಶೀಲಾ ಕರ್ಕಿ
ಈ ಅವಧಿಯಲ್ಲಿ ಐಸಿಪಿ ಮೂಲಕ ಆಮದು ಮತ್ತು ರಫ್ತು ಚಟುವಟಿಕೆಗಳನ್ನು ಸ್ಥಗಿತಗೊಳಿಸಲಾಗುವುದು. ಆದರೆ ಅಗತ್ಯ ಔಷಧಗಳು ಮತ್ತು ಇತರ ಸರಕುಗಳ ಸಾಗಣೆ ಮುಂದುವರಿಯುತ್ತದೆ ಎಂದು ಶರ್ಮ ಹೇಳಿದರು.
ನೇಪಾಳ ಆಡಳಿತದಿಂದ ಬಂದ ಸೂಚನೆಯಂತೆ ಮಾರ್ಚ್ 2ರ ರಾತ್ರಿ ರಿಂದ ಮಾರ್ಚ್ 5ರ ಮತದಾನ ಮುಗಿಯುವವರೆಗೆ ಗಡಿಯಲ್ಲಿ ಸೀಮಿತ ಸಂಚಾರ ಜಾರಿಗೊಳಿಸಲು ನಿರ್ದೇಶನಗಳನ್ನು ನೀಡಲಾಗಿದೆ ಎಂದು ಸಶಸ್ತ್ರ ಸೀಮಾ ಬಲ್‌ನ 42ನೇ ಬೆಟಾಲಿಯನ್‌ನ ಕಮಾಂಡೆಂಟ್ ಗಂಗಾ ಸಿಂಗ್ ಉದಾವತ್ ತಿಳಿಸಿದ್ದಾರೆ.
ಈಗಾಗಲೇ ಕಠಿಣ ಎಚ್ಚರಿಕೆ ಜಾರಿಯಲ್ಲಿದ್ದು, ಸಂಪೂರ್ಣ ತಪಾಸಣೆ ಮತ್ತು ಗುರುತಿನ ದಾಖಲೆಗಳ ಪರಿಶೀಲನೆಯ ನಂತರ ಮಾತ್ರ ಜನರಿಗೆ ಗಡಿ ದಾಟಲು ಅನುಮತಿ ನೀಡಲಾಗುತ್ತಿದೆ ಎಂದು ಅವರು ಹೇಳಿದರು. ತೀರಾ ಅಗತ್ಯವಿಲ್ಲದಿದ್ದರೆ, ನಿರ್ಬಂಧಿತ ಅವಧಿಯಲ್ಲಿ ಗಡಿ ದಾಟುವುದನ್ನು ತಪ್ಪಿಸಲು ಎರಡೂ ದೇಶಗಳ ನಾಗರಿಕರಿಗೆ ಸೂಚಿಸಲಾಗಿದೆ.
ಉದ್ಯೋಗ ಮತ್ತು ವ್ಯಾಪಾರಕ್ಕಾಗಿ ಹಲವು ನೇಪಾಳಿ ಮತದಾರರು ಭಾರತದಲ್ಲಿ ವಾಸಿಸುತ್ತಿದ್ದಾರೆ. ಇಂತಹ ಮತದಾರರು, ತೀವ್ರ ಅಸ್ವಸ್ಥ ರೋಗಿಗಳು ಹಾಗೂ ಅಗತ್ಯ ಸಾಮಗ್ರಿಗಳೊಂದಿಗೆ ಭದ್ರತಾ ಪಡೆಗಳ ಮೇಲ್ವಿಚಾರಣೆಯಲ್ಲಿ ಗಡಿ ದಾಟಲು ಅನುಮತಿಸಬಹುದು.
ನೆಪೋ ವಿರುದ್ಧ ಜೆನ್ ಝೀ ನೇಪಾಳ ಧಗ-ಧಗ
ಚುನಾವಣೆಯ ಸಮಯದಲ್ಲಿ ಭದ್ರತೆಯನ್ನು ಏಕೆ ಹೆಚ್ಚಿಸಲಾಗಿದೆ?
ಕಳೆದ ವರ್ಷ ನೇಪಾಳದಲ್ಲಿ ಜೆನ್ ಝಿ ಪೀಳಿಗೆ ಭಾರಿ ಪ್ರತಿಭಟನೆ ನಡೆಸಿತ್ತು. ಐದು ಯುವಕರಲ್ಲಿ ಒಬ್ಬರು ನಿರುದ್ಯೋಗಿಗಳಾಗಿರುವ ದೇಶದಲ್ಲಿ ಭ್ರಷ್ಟಾಚಾರ ಮತ್ತು ಸೀಮಿತ ಅವಕಾಶಗಳ ಬಗ್ಗೆ ಯುವಜನರಲ್ಲಿನ ಹತಾಶೆಯು ಪ್ರತಿಭಟನೆಗೆ ಕಾರಣವಾಗಿತ್ತು. ರಾಜಕೀಯ ಗಣ್ಯರ ಮಕ್ಕಳು ಶ್ರೀಮಂತ ಜೀವನವನ್ನು ನಡೆಸುತ್ತಿದ್ದರು. ಇದು ಯುವಜನರ ಆಕ್ರೋಶಕ್ಕೆ ಕಾರಣವಾಗಿತ್ತು.
ಸಾರ್ವಜನಿಕರ ವ್ಯಾಪಕ ಆಕ್ರೋಶದಿಂದ ಸರ್ಕಾರ ರಾಜೀನಾಮೆ ನೀಡಿದ ಬಳಿಕ, ಲಕ್ಷಾಂತರ ನೇಪಾಳಿ ಮತದಾರರು ಈಗ ಸಂಸತ್ತಿನ ಶಕ್ತಿಶಾಲಿ ಕೆಳಸದನವಾದ ಪ್ರತಿನಿಧಿ ಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ಸಿದ್ಧರಾಗಿದ್ದಾರೆ. ಬಹುಮತವನ್ನು ಪ್ರತಿನಿಧಿ ಸಭೆಯಲ್ಲಿ ಪಡೆದ ನಂತರ ಮುಂದಿನ ಪ್ರಧಾನಮಂತ್ರಿಯನ್ನು ನೇಮಕ ಮಾಡಲಾಗುತ್ತದೆ.