ವಾಯುಪಡೆ ಅಧಿಕಾರಿ ಪತ್ನಿ ಮೇಲೆ ಅತ್ಯಾಚಾರ ಎಸಗಿ, ಮತಾಂತರಕ್ಕೆ ಯತ್ನ- ಬೆಚ್ಚಿ ಬೀಳಿಸುವ ವಿಡಿಯೊ ವೈರಲ್
Viral Video: ನಾಗಪುರದ ಭಾರತೀಯ ವಾಯುಪಡೆ ಅಧಿಕಾರಿಯ ಪತ್ನಿಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಮಾದಕ ವಸ್ತು ನೀಡಿ ತಮ್ಮ ಮೇಲೆ ಅತ್ಯಾಚಾರ ಎಸಗಿ, ಅಶ್ಲೀಲ ವಿಡಿಯೊ ಮೂಲಕ ಬ್ಲ್ಯಾಕ್‌ಮೇಲ್ ಮಾಡಿ, ಬಲವಂತವಾಗಿ ಮತಾಂತರಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತೋರ್ವನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ವೈರಲ್ ಆಗಿರುವ ವಿಡಿಯೋವನ್ನು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಿ ತನಿಖೆ ಮುಂದುವರಿದಿದೆ.
ಚಾಟ್‌ಜಿಪಿಟಿ ರಚಿತ ಚಿತ್ರ -
ಮುಂಬೈ, ಜೂ. 16: "ನನ್ನನ್ನು ಬಿಟ್ಟುಬಿಡಿ" ಎಂದು 24 ವರ್ಷದ ಮಹಿಳೆಯೊಬ್ಬರು ಮತಾಂತರದ ವಿಡಿಯೊದಲ್ಲಿ ಕಣ್ಣೀರು ಹಾಕುತ್ತಾ ಗೋಗರೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಕೆಯ ಮಾಜಿ ಸಹಪಾಠಿ ಅಯಾಜ್ ತಾಜ್ ಮದಾರೆ (Ayyaz Taj Madare) (26) ಆಕೆಯ ಕೈಗಳನ್ನು ಬಲವಂತವಾಗಿ ಹಿಡಿದು ಧಾರ್ಮಿಕ ಶ್ಲೋಕಗಳನ್ನು ಪಠಿಸುತ್ತಾ, ಆಕೆಯ ಮುಖದ ಮೇಲೆ ನಿರಂತರವಾಗಿ ಊದುತ್ತಿರುವ ದೃಶ್ಯ ವಿಡಿಯೊದಲ್ಲಿದೆ. ಈ ಘಟನೆಯ ನಂತರ ಆಕೆಯನ್ನು ಬಲವಂತವಾಗಿ ಮತಾಂತರಗೊಳಿಸಿ, ಅತ್ಯಾಚಾರಕ್ಕೆ ಯತ್ನಿಸಲಾಗಿದೆ ಎಂದು ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ.
ಮಹಾರಾಷ್ಟ್ರದ ನಾಗಪುರದಲ್ಲಿ ನೆಲೆಸಿರುವ ಭಾರತೀಯ ವಾಯುಪಡೆ (IAF) ಅಧಿಕಾರಿಯೊಬ್ಬರ ಪತ್ನಿಯಾಗಿರುವ ಈ ಸಂತ್ರಸ್ತೆ, ತಮಗೆ ದ್ರವರೂಪದ ಮಾದಕ ವಸ್ತು ನೀಡಿ ಅತ್ಯಾಚಾರ ಎಸಗಲಾಗಿದೆ. ಅಶ್ಲೀಲ ವಿಡಿಯೊಗಳನ್ನು ಬಳಸಿ ಬ್ಲ್ಯಾಕ್‌ಮೇಲ್ ಮಾಡಲಾಗಿದೆ. ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಲಾಗಿದೆ ಮತ್ತು ಧರ್ಮ ಬದಲಾಯಿಸುವಂತೆ ತೀವ್ರ ಒತ್ತಡ ಹೇರಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ವಿಡಿಯೊ ಪ್ರಕರಣದ ಪ್ರಮುಖ ಸಾಕ್ಷ್ಯವಾಗಿದ್ದು, ಪೊಲೀಸರು ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ.
ವೈರಲ್ ವಿಡಿಯೊ ಇಲ್ಲಿದೆ:
Armed Forces Personnel's Wife Alleges Gang Rape, Blackmail, and Forced Conversion; Two Arrested.#Maharashtra #Nagpur pic.twitter.com/MPjVgzluJn
— Avanti Anita (@AvantiAmls) June 16, 2026
2025ರ ಫೆಬ್ರವರಿಯಲ್ಲಿ ನಡೆದ ಈ ಘಟನೆಯು, ಮಹಿಳೆಯು ಜೂನ್ 13ರಂದು ಪತಿಯ ಬಳಿ ಬಾಯ್ಬಿಟ್ಟು ಸೋನೆಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಬೆಳಕಿಗೆ ಬಂದಿದೆ. ವಿವಾಹಿತೆಯಾಗಿದ್ದರಿಂದ ಭಯಗೊಂಡು ಇದುವರೆಗೆ ಮೌನವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ಪೊಲೀಸರು ಪ್ರಮುಖ ಆರೋಪಿ ಅಯಾಜ್ ಮದಾರೆ ಮತ್ತು ಆತನ ಸಹಚರ ಅಮೀನ್ ಶೇಖ್ (30) ಎಂಬಿಬ್ಬರನ್ನು ಬಂಧಿಸಿದ್ದು, ಮಧ್ಯ ಪ್ರದೇಶದ ತಮಿಯಾ ನಿವಾಸಿಯಾದ ಮೂರನೇ ಆರೋಪಿ ಹಜರತ್ ಮೌಲಾನಾ ಎಂಬಾತನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.
ಯೋಗಿ ನಾಡಲ್ಲಿ ಮುಂದುವರಿದ ದುಷ್ಕರ್ಮಿಗಳ ಬೇಟೆ; ಅರ್ಚಕನ ಹತ್ಯೆಗೈದವನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ ಪೊಲೀಸರು
ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಸಂತ್ರಸ್ತೆಯನ್ನು ಸೈಟ್ ಖರೀದಿಸುವ ನೆಪದಲ್ಲಿ ಹೋಟೆಲ್‌ಗೆ ಕರೆಸಿದ್ದ ಅಯಾಜ್, ಜ್ಯೂಸ್‌ನಲ್ಲಿ ಮಾದಕ ದ್ರವ್ಯ ಬೆರೆಸಿ ಅತ್ಯಾಚಾರ ನಡೆಸಿ ವಿಡಿಯೊ ಚಿತ್ರೀಕರಿಸಿದ್ದ. ನಂತರ ಆ ವಿಡಿಯೊ ಬಳಸಿ ಬ್ಲ್ಯಾಕ್‌ಮೇಲ್ ಮಾಡಿ 3.09 ಲಕ್ಷ ರುಪಾಯಿ ವಸೂಲಿ ಮಾಡಿದ್ದಲ್ಲದೆ, ಮೇಯಲ್ಲಿ ಕಲ್ಮೇಶ್ವರ್ ಎಂಬ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮೌಲಾನಾ ಸಮ್ಮುಖದಲ್ಲಿ ಬಲವಂತವಾಗಿ ಮತಾಂತರ ಮಾಡಿ ಅಯಾಜ್ ಜತೆ ಮದುವೆಯಾಗಿದೆ ಎಂದು ಘೋಷಿಸಿದ್ದ.
ಪೊಲೀಸರು ಆರೋಪಿಗಳ ವಿರುದ್ಧ ಅತ್ಯಾಚಾರ, ಸುಲಿಗೆ, ಬಲವಂತದ ಮತಾಂತರ ಮತ್ತು ಮಹಾರಾಷ್ಟ್ರದ ಮಾಟಮಂತ್ರ ಹಾಗೂ ಅಘೋರಿ ಆಚರಣೆಗಳ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಕೋರ್ಟ್ ಆರೋಪಿಗಳನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.