ಹಿಮಾಚಲ ಪ್ರದೇಶದ ವಾಯುಪಡೆ ನಿಲ್ದಾಣದ ಬಳಿ ಹೊತ್ತಿ ಉರಿದ ಅರಣ್ಯ; ಬೆಂಕಿ ನಿಯಂತ್ರಣಕ್ಕೆ ವೈಮಾನಿಕ ಕಾರ್ಯಾಚರಣೆ
Forest fire: ಹಿಮಾಚಲ ಪ್ರದೇಶದ ಕಸೌಲಿಯ ವಾಯುಪಡೆ ನಿಲ್ದಾಣದ ಬಳಿಯ ಕಾಡಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯನ್ನು ನಂದಿಸಲು ಭಾರತೀಯ ವಾಯುಪಡೆಯು Mi-17 ಮತ್ತು ಚಿನೂಕ್ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದೆ. ಸೇನಾ ಹೆಲಿಕಾಪ್ಟರ್‌ಗಳು ಚಂಡೀಗಢದ ಸುಖ್ನಾ ಸರೋವರದಿಂದ ನೀರನ್ನು ಹೊತ್ತುಕೊಂಡು ಹೊತ್ತಿ ಉರಿಯುತ್ತಿರುವ ಪ್ರದೇಶದಲ್ಲಿ ಚಿಮುಕಿಸುವ ವಿಡಿಯೊ ವೈರಲ್ ಆಗಿದೆ.
ಹಿಮಾಚಲ ಪ್ರದೇಶದಲ್ಲಿ ಕಾಡ್ಗಿಚ್ಚು ನಂದಿಸಲು ವೈಮಾನಿಕ ಕಾರ್ಯಾಚರಣೆ -
ಶಿಮ್ಲಾ, ಮೇ 27: ಹಿಮಾಚಲ ಪ್ರದೇಶದ (Himachal Pradesh) ಕಸೌಲಿಯ ವಾಯುಪಡೆ ನಿಲ್ದಾಣದ ಬಳಿಯ ಕಾಡಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯನ್ನು ನಂದಿಸಲು ಭಾರತೀಯ ವಾಯುಪಡೆಯು Mi-17 ಮತ್ತು ಚಿನೂಕ್ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿತು. ಮಂಗಳವಾರ (ಮೇ 26) ಮಧ್ಯಾಹ್ನ ಪ್ರಾರಂಭವಾದ ಬೆಂಕಿ ಸಂಜೆಯ ಹೊತ್ತಿಗೆ ತೀವ್ರಗೊಂಡಿತು. ಅಗ್ನಿಯ ಜ್ವಾಲೆ ಕಸೌಲಿ ವಾಯುಪಡೆ ನಿಲ್ದಾಣದ ಹತ್ತಿರ ಅಪಾಯಕಾರಿಯಾಗಿ ಪರಿಣಮಿಸಿದ್ದರಿಂದ, ಆಡಳಿತವು ಸೇನೆಯ ಸಹಾಯವನ್ನು ಕೋರಿತು. ಅಗ್ನಿಶಾಮಕ ಕಾರ್ಯಾಚರಣೆಯಲ್ಲಿ ಭಾರತೀಯ ವಾಯುಪಡೆಯ (Indian Airforce) ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿತು.
ಸೇನಾ ಹೆಲಿಕಾಪ್ಟರ್‌ಗಳು ಚಂಡೀಗಢದ ಸುಖ್ನಾ ಸರೋವರದಿಂದ ನೀರನ್ನು ಹೊತ್ತುಕೊಂಡು ಹೊತ್ತಿ ಉರಿಯುತ್ತಿರುವ ಪ್ರದೇಶದದ ಮೇಲೆ ಸುರಿದವು. ಸುಮಾರು 7-8 ಗಂಟೆಗಳ ಕಾಲ ನಡೆದ ವೈಮಾನಿಕ ಕಾರ್ಯಾಚರಣೆಯ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಮಾಹಿತಿಯ ಪ್ರಕಾರ, ಮಂಗಳವಾರ (ಮೇ 26) ಮಧ್ಯಾಹ್ನ ಜಂಗೇಶು ಪ್ರದೇಶದ ಬಳಿ ಅತಿಯಾದ ಶಾಖದಿಂದಾಗಿ ಒಣ ಪೈನ್ ಎಲೆಗಳಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಿಡಿ ಹೊತ್ತಿಕೊಂಡಿದೆ. ಇದು ಶೀಘ್ರದಲ್ಲೇ ಇಡೀ ಪ್ರದೇಶವನ್ನು ವ್ಯಾಪಿಸಿತು.
ಕಾಡು ಹೊತ್ತಿ ಉರಿಯುತ್ತಿರುವ ದೃಶ್ಯ ಇಲ್ಲಿದೆ:
"𝗦𝘆𝗻𝗲𝗿𝗴𝘆 𝗶𝗻 𝗔𝗰𝘁𝗶𝗼𝗻, 𝗛𝗲𝗿𝗶𝘁𝗮𝗴𝗲 𝗦𝗲𝗰𝘂𝗿𝗲𝗱."
— SuryaCommand_IA (@suryacommand) May 27, 2026
A wild forest fire in the hills of #Kasauli on 26 May threatened the heritage precincts of Kasauli Cantonment.
Under the close supervision and proactive guidance of Commander, #VictoryForCertain Bde, a swift… pic.twitter.com/w0Wz0Oxx1I
ಗಾಳಿಯು ತೀವ್ರವಾಗಿ ಬೀಸಿದ್ದರಿಂದ ಬೆಂಕಿ ಶೀಘ್ರದಲ್ಲೇ ಹಲವು ಕಿಲೋ ಮೀಟರ್‌ಗಳಷ್ಟು ವ್ಯಾಪಿಸಿತು. ಕಸೌಲಿ ಕಂಟೋನ್ಮೆಂಟ್ ಬೋರ್ಡ್ ಅಗ್ನಿಶಾಮಕ ದಳ ಮತ್ತು ವಾಯುಪಡೆ ನಿಲ್ದಾಣದ ಅಗ್ನಿಶಾಮಕ ಘಟಕವು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತರಲು ಪ್ರಯತ್ನಿಸಿತು. ಪರಿಸ್ಥಿತಿ ಹದಗೆಡುತ್ತಿದ್ದಂತೆ, ಕುಥಾರ್ ಮತ್ತು ಪರ್ವಾನೂದಿಂದ ಅಗ್ನಿಶಾಮಕ ದಳದ ವಾಹನ ಕರೆಸಲಾಯಿತು.
ಹೊತ್ತಿ ಉರಿದ ಪ್ಯಾಸೆಂಜರ್ ರೈಲು ಬೋಗಿ: ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಸಾಧ್ಯತೆ
ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸೇನಾ ಸೈನಿಕರು ರಾತ್ರಿಯಿಡೀ ಶ್ರಮಿಸಿದರು. ವಾಯುಪಡೆ ನಿಲ್ದಾಣದ ಬಳಿ ಹೊತ್ತಿಕೊಂಡಿದ್ದ ಬೆಂಕಿಯನ್ನು ಈಗ ಸಂಪೂರ್ಣವಾಗಿ ನಂದಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಆಡಳಿತವು ದೃಢಪಡಿಸಿದೆ.
ಆದರೆ ಕಸೌಲಿಯ ಮಾಲ್ ರಸ್ತೆ, ವಿಐಪಿ ಪ್ರದೇಶ, ಜಂಗೇಶು-ಮನೋನ್ ರಸ್ತೆ ಮತ್ತು ಕಸೌಲಿ ಅಪ್ಪರ್ ಮಾಲ್ ಬಳಿಯ ಕಾಡುಗಳಲ್ಲಿ ಬೆಂಕಿ ಇನ್ನೂ ಉರಿಯುತ್ತಿದೆ ಎನ್ನಲಾಗಿದೆ. ಜತೆಗೆ ಸೋಲನ್‌ನ ಶಾಮ್ಲೆಚ್, ಅಂಜಿ, ಕಂಡಘಾಟ್ ಮತ್ತು ಬಸಾಲ್ ದಟ್ಟ ಕಾಡುಗಳಲ್ಲಿ ಬೆಂಕಿ ಉರಿಯುತ್ತಿದೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಅರಣ್ಯ ಇಲಾಖೆ ತಂಡಗಳು ಅಲ್ಲಿಯೂ ನಿರಂತರವಾಗಿ ಕೆಲಸ ಮಾಡುತ್ತಿವೆ.
ಕುದುರೆಮುಖ ರಕ್ಷಿತಾರಣ್ಯದಲ್ಲಿ ಭಾರಿ ಕಾಳ್ಗಿಚ್ಚು
ಪಶ್ಚಿಮ ಘಟ್ಟಗಳ ಅನನ್ಯ ಸಂಪತ್ತಾಗಿರುವ ಅಪರೂಪದ ಶೋಲಾ ಹುಲ್ಲುಗಾವಲು ಹೊತ್ತಿ ಉರಿದ ಘಟನೆ ಇತ್ತೀಚೆಗೆ ಸಂಭವಿಸಿತ್ತು. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಬರುವ ಶೃಂಗೇರಿಯ ಕೆರೆಕಟ್ಟೆ ವಲಯದ ಮಾಣಿಕ್ಯಬೆಟ್ಡ, ವಾಲೀಕುಂಜಗಿರಿ ಸಾಲಿನ 25ಕ್ಕೂ ಹೆಚ್ಚು ಕಡೆಗಳಲ್ಲಿ ಬೆಂಕಿ ಹೊತ್ತಿ ಉರಿದಿತ್ತು. ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ನೆಲದಲ್ಲಿ ಗೂಡುಕಟ್ಟುವ ಪಕ್ಷಿಗಳು, ಪ್ರಾಣಿಗಳು, ಅಪರೂಪದ ಸಸ್ಯಸಂಪತ್ತು ಅಗ್ನಿಗಾಹುತಿಯಾಗಿದೆ. ಈ ಅವಘಡಕ್ಕೆ ಅರಣ್ಯ ಇಲಾಖೆಯ ನಿರ್ಲಕ್ಷ್ಯ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.