ನಗದು, ಚಿನ್ನ, ಬೆಲೆಬಾಳುವ ವಸ್ತುಗಳು ಇಡಿ ವಶಕ್ಕೆ; ಆಪ್ತ ಸಹಾಯಕನ ನಿವಾಸದ ಮೇಲಿನ ದಾಳಿ ಬಳಿಕ ಕಾಂಗ್ರೆಸ್‌ಗೆ ಹರೀಶ್ ರಾವತ್ ರಾಜೀನಾಮೆ
Harish Rawat resigns: ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಕಾಂಗ್ರೆಸ್‌ನ ಎರಡು ಹುದ್ದೆಗಳಿಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಜಾರಿ ನಿರ್ದೇಶನಾಲಯವು (ED) ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಗುರುವಾರ (ಸೆ.10) ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ.
ಹರೀಶ್ ರಾವತ್ (ಸಂಗ್ರಹ ಚಿತ್ರ) -
ಡೆಹ್ರಾಡೂನ್, ಸೆ.12: ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ (Harish Rawat) ಕಾಂಗ್ರೆಸ್‌ನ (Congress) ಎರಡು ಹುದ್ದೆಗಳಿಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಉತ್ತರಾಖಂಡ ಅಧೀನ ಸೇವಾ ಆಯ್ಕೆ ಆಯೋಗ (UKSSSC) ನಡೆಸಿದ 2016ರ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಅವರ ಆಪ್ತ ಸಹಾಯಕ ಚಂದನ್ ಸಿಂಗ್ ಜೀನಾ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿದ ನಂತರ, ಹರೀಶ್ ರಾವತ್ ಈ ನಿರ್ಧಾರ ಕೈಗೊಂಡಿದ್ದಾರೆ.
ತಮ್ಮ ಆಪ್ತ ಸಹಚರನಿಗೆ ಸಂಬಂಧಿಸಿದ ಯಾವುದೇ ವಿವಾದವು ಭ್ರಷ್ಟಾಚಾರದ ವಿರುದ್ಧದ ಕಾಂಗ್ರೆಸ್ ಪಕ್ಷದ ಹೋರಾಟವನ್ನು ದುರ್ಬಲಗೊಳಿಸಬಾರದು ಎಂದು ತಾವು ಬಯಸುವುದಾಗಿ ರಾವತ್ ಹೇಳಿದ್ದಾರೆ. ಆದ್ದರಿಂದ ಅವರು ಉತ್ತರಾಖಂಡ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಕಾರಿ ಸಮಿತಿಯ ಸದಸ್ಯ ಸ್ಥಾನಕ್ಕೆ ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಖಾಯಂ ಆಹ್ವಾನಿತ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
ಜಾರಿ ನಿರ್ದೇಶನಾಲಯವು (ED) ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಗುರುವಾರ (ಸೆ.10) ಹಲವು ಸ್ಥಳಗಳಲ್ಲಿ ದಾಳಿ ನಡೆಸಿದೆ. ಯುಕೆಎಸ್‌ಎಸ್‌ಎಸ್‌ಸಿ ಮಾಜಿ ಅಧಿಕಾರಿಗಳು, ಖಾಸಗಿ ಕಂಪ್ಯೂಟರ್ ಏಜೆನ್ಸಿ ಮಾಲೀಕರು ಹಾಗೂ ದಲ್ಲಾಳಿಗಳಿಗೆ ಸೇರಿದ ಹಲವು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದೆ. ಈ ಕಾರ್ಯಾಚರಣೆಯ ವೇಳೆ ಜೀನಾ ಅವರ ನಿವಾಸದಿಂದ 32 ಲಕ್ಷ ರೂಪಾಯಿ ನಗದು, ಚಿನ್ನ ಮತ್ತು ಐಷಾರಾಮಿ ಕೈಗಡಿಯಾರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೆಪಿಎಸ್‌ಸಿ: ಇಬ್ಬರ ಸಿಐಡಿ ತನಿಖೆ ಅಂತ್ಯ, ವಶಕ್ಕೆ ನೀಡಲು ಕೋರ್ಟ್‌ಗೆ ಇಡಿ ಅರ್ಜಿ
ಜೀನಾ ಅವರ ನಿವಾಸದಲ್ಲಿ ನಡೆದ ದಾಳಿಯಲ್ಲಿ 32 ಲಕ್ಷ ರೂಪಾಯಿ ನಗದು, ಚಿನ್ನದ ನಾಣ್ಯಗಳು ಮತ್ತು ಸುಮಾರು 200.5 ಗ್ರಾಂ ತೂಕದ ಸರಗಳು (13 ಚಿನ್ನದ ನಾಣ್ಯಗಳು ಮತ್ತು 7 ಚಿನ್ನದ ಸರಗಳು) ಮತ್ತು ರೋಲೆಕ್ಸ್, ರಾಡೊ, ಪಿಯಾಗೆಟ್, ಮೊವಾಡೊ, ಟಿಸ್ಸಾಟ್ ಮತ್ತು ಕ್ಯಾಸಿಯೊ ಎಡಿಫೈಸ್‌ನಂತಹ ಬ್ರ್ಯಾಂಡ್‌ಗಳು ಸೇರಿದಂತೆ 12 ಐಷಾರಾಮಿ ಕೈಗಡಿಯಾರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ತಿಳಿಸಿದೆ.
ಜಾರಿ ನಿರ್ದೇಶನಾಲಯವು (ED) ಜೀನಾ ಮತ್ತು ಅವರ ಕುಟುಂಬದ ಸದಸ್ಯರಿಗೆ ಸೇರಿದ ಒಟ್ಟು 52.16 ಲಕ್ಷ ರೂಪಾಯಿ ಹೊಂದಿದ್ದ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಅಲ್ಲದೆ, ಫೋರೆನ್ಸಿಕ್ ತಪಾಸಣೆಗಾಗಿ ಅವರ ಮೊಬೈಲ್ ಫೋನ್ ಅನ್ನು ಸಹ ವಶಪಡಿಸಿಕೊಂಡಿದೆ.
ಜೀನಾ ಅವರು ಯಾವುದೇ ಕಾನೂನುಬದ್ಧ ಆದಾಯದ ಮೂಲವಿಲ್ಲದೆ ಭಾರಿ ಪ್ರಮಾಣದಲ್ಲಿ ನಗದು ಖರ್ಚುಗಳನ್ನು ಮಾಡಿದ್ದಾರೆ ಎಂದು ಇಡಿ ಆರೋಪಿಸಿದ್ದು, ಮಾಜಿ ಯುಕೆಎಸ್‌ಎಸ್‌ಎಸ್‌ಸಿ ಅಧಿಕಾರಿಗಳಿಂದ ಲೆಕ್ಕಕ್ಕೆ ಸಿಗದ ನಗದು ಮತ್ತು ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ. ಪ್ರಸ್ತುತ ರಾವತ್ ಅವರ ವೈಯಕ್ತಿಕ ಸಹಾಯಕರಾಗಿರುವ ಜೀನಾ, ರಾವತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.