ಹೊರ್ಮುಜ್ ಜಲಸಂಧಿ ದಾಟಿ ಭಾರತದತ್ತ ಹೊರಟ 40,000 ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತ ಹಡಗು
Strait of Hormuz: ಬೃಹತ್ ಪ್ರಮಾಣದ ಎಲ್‌ಪಿಜಿಯನ್ನು ಹೊತ್ತು ಇರಾನ್‌ನ ಹೊರ್ಮುಜ್ ಜಲಸಂಧಿ ದಾಟಿ ಭಾರತದ ಹಡಗು ನಮ್ಮ ಕರಾವಳಿ ತೀರದತ್ತ ಬರುತ್ತಿದೆ. ಇದು ಶೀಘ್ರದಲ್ಲೇ ಭಾರತದ ಕರಾವಳಿ ಸೇರುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.
ಸಾಂದರ್ಭಿಕ ಚಿತ್ರ -
ದೆಹಲಿ, ಮಾ. 13: ಮಧ್ಯಪ್ರಾಚ್ಯದಲ್ಲಿ ತಲೆದೋರಿರುವ ಸಂಘರ್ಷದಿಂದಾಗಿ ಇರಾನ್ ಹೊರ್ಮುಜ್ ಜಲಸಂಧಿಯನ್ನು (Strait of Hormuz) ಸ್ಥಗಿತಗೊಳಿಸಿದ್ದರಿಂದ ಭಾರತ ಸೇರಿ ಜಗತ್ತಿನ ಹಲವೆಡೆ ಇಂಧನ, ಎಲ್‌ಪಿಜಿ ಬಿಕ್ಕಟ್ಟು ಕಾಣಿಸಿಕೊಂಡಿದೆ (US-Israel-Iran War). ದೇಶದಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಕೊರತೆ ತೀವ್ರವಾಗಿದ್ದು, ಹೋಟೆಲ್ ಉದ್ಯಮ ತತ್ತರಿಸಿ ಹೋಗಿದೆ. ಈ ಮಧ್ಯೆ ಭಾರತಕ್ಕೆ ಗುಡ್‌ನ್ಯೂಸ್ ಸಿಕ್ಕಿದೆ. ಇರಾನ್ ಭಾರತದ 2 ಹಡಗುಗಳಿಗೆ ಹೊರ್ಮುಜ್ ಜಲಸಂಧಿಯ ಮೂಲಕ ಸಾಗಲು ಅನುಮತಿ ನೀಡಿದೆ. ಈಗಾಗಲೇ 40,000 ಮೆಟ್ರಿಕ್ ಟನ್‌ನಷ್ಟು ಬೃಹತ್ ಪ್ರಮಾಣದ ಎಲ್‌ಪಿಜಿಯನ್ನು ಹೊತ್ತು ಇರಾನ್‌ನ ಹೊರ್ಮುಜ್ ಜಲಸಂಧಿ ದಾಟಿ ಭಾರತದ ಹಡಗು ನಮ್ಮ ಕರಾವಳಿ ತೀರದತ್ತ ಬರುತ್ತಿದೆ. ಇದು 7 ದಿನಗಳಲ್ಲಿ ಭಾರತಕ್ಕೆ ತಲುಪುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ ಮತ್ತೊಂದು ಹಡಗಿಗೂ ಅನುಮತಿ ಸಿಕ್ಕಿದೆ ಎನ್ನಲಾಗಿದ್ದು, ಅದು ಕೂಡ ಶೀಘ್ರದಲ್ಲೇ ಭಾರತದ ಕರಾವಳಿಗೆ ಬಂದು ಸೇರಲಿದೆ.
ಇರಾನ್ ಮತ್ತು ಭಾರತದ ನಡುವೆ ನಡೆದ ಹಲವು ಸುತ್ತಿನ ಮಾತುಕತೆಗಳ ನಂತರ ಇರಾನ್ ಭಾರತೀಯ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯನ್ನು ದಾಟಲು ಅವಕಾಶ ನೀಡಿದೆ ಎನ್ನಲಾಗಿದೆ. 40,000 ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಹೊತ್ತ ಶಿವಾಲಿಕ್ ಹಡಗು ಇರಾನ್‌ನ ಬಂದರ್ ಅಬ್ಬಾಸ್ ಬಂದರಿನಿಂದ ಹೊರಟು ಕೆಲವು ಗಂಟೆಗಳ ಹಿಂದೆ ಹಾರ್ಮುಜ್ ಜಲಸಂಧಿಯನ್ನು ದಾಟಿ ಈಚೆ ಬಂದಿದೆ ಎಂದು ವರದಿಯೊಂದು ತಿಳಿಸಿದೆ. ಆ ಮೂಲಕ ಭಾರತದ ಎಲ್‌ಪಿಜಿ ಕೊರತೆಯ ಸಮಸ್ಯೆ ಬಗೆಹರಿಯುವ ಸೂಚನೆ ಸಿಕ್ಕಿದೆ.
ಮೊಹಮ್ಮದ್ ಫಥಾಲಿ ಅವರ ಹೇಳಿಕೆ:
#WATCH | Delhi: On giving safe passage to India, Iran's Ambassador to India, Mohammad Fathali, says, "... Yes, because India is our friend. You will see it within two or three hours. We believe that Iran and India share common interests in the region..." pic.twitter.com/twTsE1Bjhv
— ANI (@ANI) March 13, 2026
ಧನಾತ್ಮಕ ಸಂದೇಶ ನೀಡಿದ್ದ ಇರಾನ್
ಇರಾನ್ ಮತ್ತು ದೆಹಲಿ ನಡುವೆ ಹಲವು ಸುತ್ತಿನ ಮಾತುಕತೆಗಳ ಪರಿಣಾಮವಾಗಿ ಸಂಘರ್ಷದ ಮಧ್ಯೆಯೂ ಇರಾನ್ ಭಾರತೀಯ ಹಡಗುಗಳಿಗೆ ಹೊರ್ಮುಜ್ ಜಲಸಂಧಿ ದಾಟಲು ಅನುಮತಿ ನೀಡಿದೆ. ಇದೀಗ ನೌಕಾಪಡೆ ಬೆಂಗಾವಲಿನೊಂದಿಗೆ ಈ ಹಡಗುಗಳು ಭಾರತದತ್ತ ಹೊರಟಿವೆ.
ಭಾರತದ ಹಡಗಿಗೆ ಅನುಮತಿ ನೀಡಿದ ಇರಾನ್:
Iran has allowed two Indian-flagged liquefied petroleum gas (LPG) carriers to sail through the Strait of Hormuz, four sources with direct knowledge of the matter said: Reuters pic.twitter.com/8wAvHOK05b
— ANI (@ANI) March 13, 2026
ಈ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಭಾರತದಲ್ಲಿನ ಇರಾನ್ ರಾಯಭಾರಿ ಮೊಹಮ್ಮದ್ ಫಥಾಲಿ, ʼʼಜಾಗತಿಕ ಹಡಗು ಮಾರ್ಗವಾದ ಹಾರ್ಮುಜ್ ಜಲಸಂಧಿಯ ಮೂಲಕ ಭಾರತ ಸುರಕ್ಷಿತ ಮಾರ್ಗವನ್ನು ಕಂಡುಕೊಳ್ಳಬಹುದುʼʼ ಎಂದು ಹೇಳಿದ್ದರು. ʼʼಭಾರತ ನಮ್ಮ ಸ್ನೇಹಿತ. ಜಲಮಾರ್ಗದ ಮೂಲಕ ಭಾರತದ ಪ್ರವೇಶವನ್ನು ಖಚಿತಪಡಿಸುವ ಬೆಳವಣಿಗೆಗಳು ಶೀಘ್ರದಲ್ಲೇ ಹೊರಹೊಮ್ಮಬಹುದುʼʼ ಎಂದು ಭರವಸೆ ನೀಡಿದ್ದರು. ಅದಾಗಿ ಕೆಲವೇ ಹೊತ್ತಲ್ಲಿ ಭಾರತದ ಹಡಗುಗಳು ಹಾರ್ಮುಜ್ ಜಲಸಂಧಿ ದಾಟಿವೆ ಎನ್ನುವುದು ಗಮನಾರ್ಹ.
ʼʼಇರಾನ್ ಮತ್ತು ಭಾರತ ಈ ಪ್ರದೇಶದಲ್ಲಿ ಸಾಮಾನ್ಯ ಹಿತಾಸಕ್ತಿಯನ್ನು ಹಂಚಿಕೊಳ್ಳುತ್ತವೆ. ಕಷ್ಟದ ಅವಧಿಯಲ್ಲಿ ಎರಡೂ ದೇಶಗಳು ಪರಸ್ಪರ ಸ್ಪಂದಿಸುತ್ತವೆʼʼ ಎಂದು ಫಥಾಲಿ ಹೇಳಿದ್ದರು.
ಇಂಧನ ಕೊರತೆ ನೀಗಲು ಭಾರತ ಕೈಗೊಂಡ ಕ್ರಮಗಳು ಏನೇನು?
ಯಾಕೆ ಹೊರ್ಮುಜ್ ಜಲಸಂಧಿ ಭಾರತಕ್ಕೆ ಮುಖ್ಯ?
ಜಾಗತಿಕ ವ್ಯಾಪಾರ ಸಂಪರ್ಕಕ್ಕೆ ಹೊರ್ಮುಜ್ ಜಲಸಂಧಿ ಬಹುಮುಖ್ಯವಾಗಿದ್ದು, ಈ ಮಾರ್ಗದ ಮೂಲಕವೇ ವಿಶ್ವದ ವಿವಿಧ ರಾಷ್ಟ್ರಗಳಿಗೆ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಸಾಗಿಸಲಾಗುತ್ತಿದೆ. ಜಗತ್ತಿಗೆ ಹಡಗುಗಳ ಮೂಲಕ ಸಾಗಾಟವಾಗುವ ಕಚ್ಚಾತೈಲಗಳ ಪ್ರಮಾಣದಲ್ಲಿ ಶೇ. 20ಷ್ಟು ಈ ಜಲಸಂಧಿಯ ಮೂಲಕವೇ ಸಾಗಾಟವಾಗುತ್ತದೆ. ಭಾರತಕ್ಕೂ ಈ ಜಲಮಾರ್ಗದ ಮೂಲಕವೇ ಇಂಧನ, ನೈಸರ್ಗಿಕ ಅನಿಲದ ವಿವಿಧ ದೇಶಗಳಿಂದ ಹಾದು ಬರುತ್ತದೆ.