ಡೊನಾಲ್ಡ್ ಟ್ರಂಪ್ ಭೇಟಿ ವೇಳೆ ಪ್ರಧಾನಿ ಮೋದಿ ನಿಲುವಿಗೆ ಶಶಿ ತರೂರ್ ಬೆಂಬಲ; 'ʼರಾಹುಲ್ ಗಾಂಧಿ ಮುಖವಾಡ ಕಳಚಿದೆ'ʼ ಎಂದ ಬಿಜೆಪಿ
US President Donald Trump: ಜಿ7 ಶೃಂಗಸಭೆಯಲ್ಲಿ ಡೊನಾಲ್ಡ್ ಟ್ರಂಪ್ ಭೇಟಿಯ ವೇಳೆ ಪ್ರಧಾನಿ ನರೇಂದ್ರ ಮೋದಿ ಭಾರತೀಯ ನಾವಿಕರ ಸುರಕ್ಷತೆ ಕುರಿತು ತಮ್ಮ ಕಳವಳವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ. ಈ ಹೇಳಿಕೆಯನ್ನು ಆಧರಿಸಿ ಬಿಜೆಪಿ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಜಕೀಯ ಚರ್ಚೆಗೆ ಹೊಸ ತಿರುವು ಸಿಕ್ಕಿದೆ.
ಶಶಿ ತರೂರು (ಸಂಗ್ರಹ ಚಿತ್ರ) -
ನವದೆಹಲಿ, ಜೂ. 20: ಕಾಂಗ್ರೆಸ್ (Congress) ಸಂಸದ ಶಶಿ ತರೂರ್ (Shashi Tharoor) ಮತ್ತೊಮ್ಮೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ದಾಳಿ ನಡೆಸಲು ಬಿಜೆಪಿಗೆ ರಾಜಕೀಯ ಅಸ್ತ್ರ ಒದಗಿಸಿದ್ದಾರೆ. ಪಶ್ಚಿಮ ಏಷ್ಯಾ ಯುದ್ಧದ ಹಿನ್ನೆಲೆಯಲ್ಲಿ ಭಾರತೀಯ ನಾವಿಕರ ಸುರಕ್ಷತೆಯ ಕುರಿತು ಪ್ರಧಾನಿ ನರೇಂದ್ರ ಮೋದಿ ಜಿ7 (G7) ಶೃಂಗಸಭೆಯಲ್ಲಿ ನೀಡಿದ ಸಂದೇಶವನ್ನು ತರೂರ್ ಶುಕ್ರವಾರ ಮುಕ್ತವಾಗಿ ಬೆಂಬಲಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರೊಂದಿಗಿನ ಭೇಟಿಯ ವೇಳೆ ಪ್ರಧಾನಿ ಈ ವಿಷಯದ ಬಗ್ಗೆ ಮೌನವಾಗಿದ್ದರು ಎಂದು ಕಾಂಗ್ರೆಸ್ ಆರೋಪಿಸುತ್ತಿರುವ ಬೆನ್ನಲ್ಲೇ ತರೂರ್ ಅವರ ಈ ಹೇಳಿಕೆ ಹೊರಬಿದ್ದಿದೆ.
ಫ್ರಾನ್ಸ್‌ನ ಎವಿಯನ್‌ನಲ್ಲಿ ನಡೆದ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ನಡುವೆ ನಡೆದ ದ್ವಿಪಕ್ಷೀಯ ಮಾತುಕತೆಯ ಕುರಿತು ಮಾತನಾಡಿದ ಶಶಿ ತರೂರ್, ನಾಗರಿಕ ನಾವಿಕರ ಸುರಕ್ಷತೆಯ ಬಗ್ಗೆ ಭಾರತದ ಕಳವಳವನ್ನು ಪ್ರಧಾನಿ ಅವರು ಸಾರ್ವಜನಿಕವಾಗಿ ಮತ್ತು ಖಾಸಗಿ ಸಭೆಗಳೆರಡರಲ್ಲೂ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು. "ಯುದ್ಧದ ಸಮಯದಲ್ಲಿ ವಾಣಿಜ್ಯ ನೌಕೆಗಳಲ್ಲಿರುವ ನಾಗರಿಕ ನಾವಿಕರು ದಾಳಿಯ ಗುರಿಯಾಗಬಾರದು ಎಂಬ ಸಂದೇಶವನ್ನು ರವಾನಿಸುವುದು ಮುಖ್ಯವಾಗಿದೆ. ಅವರು ಸೈನಿಕರಲ್ಲ, ಇದನ್ನೇ ಪ್ರಧಾನಿ ಮೋದಿ ಟ್ರಂಪ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ" ಎಂದು ತರೂರ್ ತಿಳಿಸಿದರು.
ಶಶಿ ತರೂರ್ ಹೇಳಿಕೆ:
#WATCH | Delhi | On the bilateral meeting between PM Modi and US President Donald Trump, Congress MP Shashi Tharoor says, "PM Modi made his point clear both in the public and private meeting with the President. It is important to convey the message that in wartime, civilian… pic.twitter.com/0PMRjNNObK
— ANI (@ANI) June 19, 2026
ಇತ್ತೀಚೆಗೆ ಒಮಾನ್ ಗಲ್ಫ್‌ನಲ್ಲಿ ವಾಣಿಜ್ಯ ನೌಕೆಯೊಂದರ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟಿದ್ದರೂ ಪ್ರಧಾನಿ ಮೋದಿ ಅವರು ಟ್ರಂಪ್ ಎದುರು ಈ ವಿಷಯ ಪ್ರಸ್ತಾಪಿಸಲು ವಿಫಲರಾಗಿದ್ದಾರೆ ಮತ್ತು ವಾಷಿಂಗ್ಟನ್‌ನಿಂದ ಯಾವುದೇ ಕ್ಷಮೆಯಾಚನೆಯನ್ನು ಕೇಳಿಲ್ಲ ಎಂದು ಕಾಂಗ್ರೆಸ್ ಬುಧವಾರ ತೀವ್ರವಾಗಿ ಟೀಕಿಸಿತ್ತು. ಆದರೆ, ತರೂರ್ ಹೇಳಿಕೆಯನ್ನು ತಕ್ಷಣವೇ ಬಳಸಿಕೊಂಡಿರುವ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ, "ಶಶಿ ತರೂರ್ ಅವರು ರಾಹುಲ್ ಗಾಂಧಿಯವರ ಮುಖವಾಡವನ್ನು ಕಳಚಿದ್ದಾರೆ. ದೇಶದ ಹಿತಾಸಕ್ತಿಯನ್ನು ರಕ್ಷಿಸುವ ವಿಷಯ ಬಂದಾಗ ಪ್ರಧಾನಿ ಮೋದಿ ಮೊದಲಿಗರಾಗಿ ನಿಲ್ಲುತ್ತಾರೆ, ಆದರೆ ದೇಶದ ವಿರುದ್ಧ ಮಾತನಾಡುವಲ್ಲಿ ರಾಹುಲ್ ಗಾಂಧಿ ಎಲ್ಲರಿಗಿಂತ ಮುಂದೆ ಇರುತ್ತಾರೆ" ಎಂದು ಎಕ್ಸ್ (X) ಖಾತೆಯಲ್ಲಿ ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್‌ಗೆ ಹೋಗೋದಾದ್ರೆ ಈಗಲೇ ಹೋಗಿ; ಅಡ್ಡ ಮತದಾನ ಮಾಡಿದ ಶಾಸಕರ ವಿರುದ್ಧ ಎಚ್‌ಡಿಕೆ ಕಿಡಿ
ಸುಮಾರು 16 ತಿಂಗಳ ನಂತರ ನಡೆದ ಈ ದ್ವಿಪಕ್ಷೀಯ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಹಾರ್ಮುಜ್ ಜಲಸಂಧಿ ಸೇರಿದಂತೆ ಇಡೀ ಗಲ್ಫ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಲಕ್ಷಾಂತರ ಭಾರತೀಯ ನಾವಿಕರ ಸುರಕ್ಷತೆಯೇ ತಮಗೆ ಮುಖ್ಯ ಆದ್ಯತೆ ಎಂದು ಪ್ರತಿಪಾದಿಸಿದರು. ಇದೇ ವೇಳೆ ಟ್ರಂಪ್ ಅವರು ಪ್ರಧಾನಿ ಮೋದಿಯವರನ್ನು 'ಉತ್ತಮ ವ್ಯಕ್ತಿತ್ವದ ನಾಯಕ' ಮತ್ತು 'ಕಠಿಣ ಸಂಧಾನಕಾರ' ಎಂದು ಬಣ್ಣಿಸಿದ್ದಾರೆ. ಈ ಸಂಪೂರ್ಣ ರಾಜತಾಂತ್ರಿಕ ಬೆಳವಣಿಗೆಯು ಪ್ರಸ್ತುತ ದೇಶೀಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.