ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ದೆಹಲಿಯಲ್ಲಿ ಪ್ರತಿಭಟನಾಕಾರರ ಬಂಧನಗಳ ಕುರಿತು ವಿಶ್ವಸಂಸ್ಥೆ ಹೇಳಿಕೆಗೆ ಭಾರತ ಖಂಡನೆ

India Condemns UN: ಕಾಕ್‌ರೋಚ್ ಜನತಾ ಪಾರ್ಟಿ (ಸಿಜೆಪಿ) ಬೆಂಬಲಿಗರನ್ನು ನೂರಾರು ಸಂಖ್ಯೆಯಲ್ಲಿ ವಶಕ್ಕೆ ಪಡೆದಿರುವ ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಕಚೇರಿ ವ್ಯಕ್ತಪಡಿಸಿರುವ ಕಳವಳವನ್ನು ಭಾರತವು, ದೇಶದ ಆಂತರಿಕ ವ್ಯವಹಾರಗಳಲ್ಲಿ ಅನಗತ್ಯ ಹಸ್ತಕ್ಷೇಪ ಎಂದು ಹೇಳಿದೆ. ವಿಶ್ವಸಂಸ್ಥೆ ವ್ಯಕ್ತಪಡಿಸಿರುವ ಕಳವಳಗಳು ಆಧಾರರಹಿತವಾಗಿವೆ ಎಂದು ಭಾರತ ಹೇಳಿದೆ.

ದೆಹಲಿ ಬಂಧನಗಳ ಕುರಿತು ವಿಶ್ವಸಂಸ್ಥೆಯ ಹೇಳಿಕೆಗೆ ಭಾರತ ಖಂಡನೆ

ಸಾಂದರ್ಭಿಕ ಚಿತ್ರ -

Priyanka P
Priyanka P Oct 11, 2026 3:33 PM

ನವದೆಹಲಿ, ಅ.11: ಕಾಕ್‌ರೋಚ್ ಜನತಾ ಪಾರ್ಟಿ (Cockroach Janta Party) ಬೆಂಬಲಿಗರನ್ನು ನೂರಾರು ಸಂಖ್ಯೆಯಲ್ಲಿ ವಶಕ್ಕೆ ಪಡೆದಿರುವ ಕುರಿತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಕಚೇರಿ (OHCHR) ವ್ಯಕ್ತಪಡಿಸಿರುವ ಕಳವಳವನ್ನು ಭಾರತವು, ದೇಶದ ಆಂತರಿಕ ವ್ಯವಹಾರಗಳಲ್ಲಿ ಅನಗತ್ಯ ಹಸ್ತಕ್ಷೇಪ ಎಂದು ಹೇಳಿದೆ. ಈ ಕುರಿತು ತೀವ್ರ ಪ್ರತಿಕ್ರಿಯೆ ನೀಡಿರುವ ಭಾರತ, ಇಂಡಿಯಾ ಅಟ್ ಯುಎನ್ ಎಂಬ ತನ್ನ ಎಕ್ಸ್‌ ಖಾತೆಯಲ್ಲಿ ಹೇಳಿಕೆ ಪ್ರಕಟಿಸಿದೆ. ವಿಶ್ವಸಂಸ್ಥೆ ವ್ಯಕ್ತಪಡಿಸಿರುವ ಕಳವಳಗಳು ಆಧಾರರಹಿತವಾಗಿವೆ ಎಂದು ಹೇಳಿರುವ ಭಾರತ, ಬೇರೆಡೆ ನಡೆಯುತ್ತಿರುವ ಬೃಹತ್ ಪ್ರತಿಭಟನೆಗಳತ್ತ ಗಮನಹರಿಸಬೇಕು ಎಂದು ತಿಳಿಸಿದೆ.

“ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಇಲ್ಲಿ ಶಾಂತಿಯುತವಾಗಿ ಸಭೆ ಸೇರುವ ಹಕ್ಕನ್ನು ಸಂವಿಧಾನ ಖಾತರಿಪಡಿಸಿದೆ. ಬಲಿಷ್ಠ ಸಾಂಸ್ಥಿಕ ವ್ಯವಸ್ಥೆಗಳು, ಸ್ವತಂತ್ರ ನ್ಯಾಯಾಂಗ ಮತ್ತು ಮುಕ್ತ ಮಾಧ್ಯಮಗಳು ಈ ಹಕ್ಕಿನ ರಕ್ಷಣೆಗೆ ಪೂರಕವಾಗಿವೆ. ಪ್ರತಿಯೊಂದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿರುವಂತೆಯೇ, ಭಾರತದಲ್ಲಿಯೂ ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ವಿಧಿಸಲಾಗುವ ಸಮಂಜಸ ನಿರ್ಬಂಧಗಳಿಗೆ ಒಳಪಟ್ಟು ನಾಗರಿಕರು ಈ ಹಕ್ಕನ್ನು ಚಲಾಯಿಸುತ್ತಾರೆ. ಅಧಿಕಾರಿಗಳು ಕಾನೂನಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಾರೆ. ಯಾರಿಗಾದರೂ ಯಾವುದೇ ದೂರುಗಳಿದ್ದರೆ, ನ್ಯಾಯಾಲಯದ ಮೂಲಕ ನ್ಯಾಯ ಪಡೆಯಬಹುದು” ಎಂದು ಭಾರತ ಹೇಳಿದೆ.

ಇಲ್ಲಿದೆ ಪೋಸ್ಟ್:



ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಜಂತರ್ ಮಂತರ್ ತಲುಪಲು ಧರಣಿ ನಡೆಸಲು ಯತ್ನಿಸಿದ ಸಿಜೆಪಿ ನಾಯಕರು, ಬೆಂಬಲಿಗರು ಮತ್ತು ವಿರೋಧ ಪಕ್ಷದ ನಾಯಕರು ಸೇರಿದಂತೆ ಸುಮಾರು 3,000 ಜನರನ್ನು ದೆಹಲಿ ಪೊಲೀಸರು ಬಂಧಿಸಿದರು. ದೆಹಲಿಗೆ ಪ್ರತಿಭಟನಾಕಾರರು ನುಗ್ಗುವುದನ್ನು ತಡೆಯಲು ಪೊಲೀಸರು, ದೆಹಲಿ ಮೆಟ್ರೋ, ಬಸ್ಸುಗಳು ಮತ್ತು ರೈಲ್ವೆಗಳು ಸೇರಿದಂತೆ ಇಂಟರ್ನೆಟ್ ಮತ್ತು ಸಾರಿಗೆ ಸಂಪರ್ಕಗಳ ಮೇಲೆ ನಿರ್ಬಂಧಗಳನ್ನು ವಿಧಿಸಿದ್ದರು.

“ಭಾರತದ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆಗೆ ಮುನ್ನವೇ ನಾಯಕರು, ಪ್ರತಿಭಟನಾಕರರು, ನಾಗರಿಕ ಸಮಾಜ ಸಂಘಟನೆಗಳ ಸದಸ್ಯರು, ವಕೀಲರು ಮತ್ತು ಪತ್ರಕರ್ತರನ್ನು ಸಾಮೂಹಿಕವಾಗಿ ಬಂಧಿಸಲಾಗಿದೆ ಎಂಬ ವರದಿಗಳಿಂದ ಕಚೇರಿ ಕಳವಳಗೊಂಡಿದೆ” ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಕ್ತಾರ ತಮೀನ್ ಅಲ್-ಖೇತನ್ ತಿಳಿಸಿದ್ದರು.

ವಿಶ್ವಸಂಸ್ಥೆಯ ಹೇಳಿಕೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. “ವಿಶ್ವಸಂಸ್ಥೆ ವ್ಯಕ್ತಪಡಿಸಿರುವ ಕಳವಳಗಳು ಆಧಾರರಹಿತವಾಗಿವೆ. ಇದು ಭಾರತದ ಆಂತರಿಕ ವ್ಯವಹಾರಗಳಲ್ಲಿ ಅನಗತ್ಯ ಹಸ್ತಕ್ಷೇಪವಾಗಿದೆ. ಈ ಹಿನ್ನೆಲೆಯಲ್ಲಿ, ಅದು ತನ್ನ ನಿಷ್ಪಕ್ಷಪಾತ ಮತ್ತು ತಾರತಮ್ಯರಹಿತ ಕಾರ್ಯವೈಖರಿಗೆ ಅನುಗುಣವಾಗಿ, ಜಗತ್ತಿನ ಇತರ ಭಾಗಗಳಲ್ಲಿ ನಡೆಯುತ್ತಿರುವ ಬೃಹತ್ ಪ್ರತಿಭಟನೆಗಳ ಬಗ್ಗೆಯೂ ಇದೇ ರೀತಿಯ ಗಮನ ಹರಿಸಿದರೆ ಸೂಕ್ತ” ಎಂದು ಭಾರತ ಹೇಳಿದೆ.