ಪಶ್ಚಿಮ ಏಷ್ಯಾ ಉದ್ವಿಗ್ನತೆ; ಭಾರತದಲ್ಲಿರುವ ವಿದೇಶಿಗರಿಗೆ 30 ದಿನಗಳ ವೀಸಾ ವಿಸ್ತರಣೆ ಮತ್ತು ದಂಡ ವಿನಾಯಿತಿ
ಪಶ್ಚಿಮ ಏಷ್ಯಾದ ಯುದ್ಧದ ಹಿನ್ನೆಲೆಯಲ್ಲಿ ವಿಮಾನ ಸಂಚಾರ ವ್ಯತ್ಯಯಗೊಂಡ ಕಾರಣ ಭಾರತದಲ್ಲಿ ಸಿಲುಕಿದ ವಿದೇಶಿ ಪ್ರಜೆಗಳಿಗೆ ಭಾರತ ಸರ್ಕಾರ 30 ದಿನಗಳ ಉಚಿತ ವೀಸಾ ವಿಸ್ತರಣೆ, ಓವರ್‌ಸ್ಟೇ ದಂಡ ಮನ್ನಾ ಮತ್ತು ಉಚಿತ ಎಕ್ಸಿಟ್ ಪರ್ಮಿಟ್ ನೀಡುವುದಾಗಿ ಘೋಷಿಸಿದೆ.
ಸಂಗ್ರಹ ಚಿತ್ರ -
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿ (West Asia) ನಡೆಯುತ್ತಿರುವ ಭೀಕರ ಯುದ್ಧದ ಹಿನ್ನೆಲೆಯಲ್ಲಿ ವಿಮಾನಯಾನ ಮಾರ್ಗಗಳು ಬಂದ್ ಆಗಿವೆ. ಇದರಿಂದಾಗಿ ಭಾರತ (India)ಕ್ಕೆ ಬಂದು ಮರಳಿ ಹೋಗಲಾಗದೆ ಇಲ್ಲಿಯೇ ಸಿಲುಕಿಕೊಂಡಿರುವ ವಿದೇಶಿ ಪ್ರಜೆಗಳಿಗೆ (Foreigners) ಭಾರತ ಸರ್ಕಾರ (Indian Government)ವು ಭಾರಿ ಸಮಾಧಾನಕರ ಸುದ್ದಿ ನೀಡಿದೆ. ಅಂತಹ ಪ್ರಜೆಗಳಿಗೆ 30 ದಿನಗಳ ವೀಸಾ ವಿಸ್ತರಣೆಯನ್ನು ನೀಡುವುದಾಗಿ ಮತ್ತು ವೀಸಾ (Visa) ಅವಧಿ ಮೀರಿದ್ದಕ್ಕಾಗಿ ವಿಧಿಸುವ ದಂಡವನ್ನು ಮನ್ನಾ ಮಾಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.
ಪ್ರಮುಖ ರಿಯಾಯಿತಿಗಳು
ದುಬೈನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಈ ಕುರಿತು ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ಗಲ್ಫ್ ಪ್ರದೇಶದಲ್ಲಿನ ಸಂಘರ್ಷದಿಂದಾಗಿ ವಿಮಾನ ಸಂಚಾರ ಸ್ಥಗಿತಗೊಂಡಿರುವುದನ್ನು ಗಮನಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಈ ತಾತ್ಕಾಲಿಕ ವಲಸೆ ಪರಿಹಾರದ ಅಡಿಯಲ್ಲಿ ಈ ಕೆಳಗಿನ ಸೌಲಭ್ಯಗಳನ್ನು ನೀಡಲಾಗುತ್ತಿದೆ.
- ಉಚಿತ ವೀಸಾ ವಿಸ್ತರಣೆ: ಮುಕ್ತಾಯದ ಹಂತದಲ್ಲಿರುವ ಎಲ್ಲಾ ರೀತಿಯ ಸಾಮಾನ್ಯ ವೀಸಾ ಮತ್ತು ಇ-ವೀಸಾಗಳನ್ನು (e-visa) ಒಂದು ತಿಂಗಳ ಅವಧಿಗೆ ಉಚಿತವಾಗಿ (Gratis basis) ವಿಸ್ತರಿಸಲಾಗುವುದು. ಆಯಾ ಭಾಗದ ಪ್ರಾದೇಶಿಕ ವಿದೇಶಿಗರ ನೋಂದಣಿ ಕಚೇರಿಗಳು (FRRO) ಈ ಪ್ರಕ್ರಿಯೆಯನ್ನು ನಿರ್ವಹಿಸಲಿವೆ.
- ದಂಡ ಮನ್ನಾ: ಫೆಬ್ರವರಿ 28, 2026ರ ನಂತರ ಯುದ್ಧದ ಕಾರಣದಿಂದಾಗಿ ಭಾರತದಲ್ಲಿ ವೀಸಾ ಅವಧಿಗಿಂತ ಹೆಚ್ಚು ದಿನ ಉಳಿದುಕೊಂಡಿರುವ ವಿದೇಶಿಗರಿಗೆ ಯಾವುದೇ 'ಓವರ್‌ಸ್ಟೇ' (Overstay) ದಂಡವನ್ನು ವಿಧಿಸಲಾಗುವುದಿಲ್ಲ.
- ಉಚಿತ ಎಕ್ಸಿಟ್ ಪರ್ಮಿಟ್: ವಿಮಾನಯಾನ ಮಾರ್ಗಗಳು ಪುನಃ ಆರಂಭವಾದಾಗ ವಿದೇಶಿ ಪ್ರಜೆಗಳು ತಮ್ಮ ದೇಶಕ್ಕೆ ಮರಳಲು ಅಗತ್ಯವಿರುವ 'ಎಕ್ಸಿಟ್ ಪರ್ಮಿಟ್'ಗಳನ್ನು ಯಾವುದೇ ಶುಲ್ಕವಿಲ್ಲದೆ ನೀಡಲಾಗುವುದು.
ಇರಾನ್-ಇಸ್ರೇಲ್ ಯುದ್ಧ: ಖಾರ್ಗ್ ದ್ವೀಪದ ಮೇಲೆ ಅಮೆರಿಕದಿಂದ ಬಾಂಬ್ ದಾಳಿ
ಮಾನವೀಯ ದೃಷ್ಟಿಕೋನ:
ಪಶ್ಚಿಮ ಏಷ್ಯಾದ ವಾಯುಪ್ರದೇಶದಲ್ಲಿನ ಅಡೆತಡೆಗಳಿಂದಾಗಿ ಇತರ ದೇಶಗಳಿಗೆ ಹೋಗಬೇಕಿದ್ದ ವಿಮಾನಗಳು ಭಾರತಕ್ಕೆ ಡೈವರ್ಟ್ ಆಗಿದ್ದರೆ, ಅಂತಹ ಪ್ರಯಾಣಿಕರಿಗೂ ಉಚಿತವಾಗಿ 'ತಾತ್ಕಾಲಿಕ ಲ್ಯಾಂಡಿಂಗ್ ಪರ್ಮಿಟ್' (TLP) ನೀಡಲು ನಿರ್ಧರಿಸಲಾಗಿದೆ. ಅಸಾಮಾನ್ಯ ಸಂದರ್ಭಗಳಲ್ಲಿ ವೀಸಾ ವಿಸ್ತರಣೆಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದರೂ ಅದನ್ನು ವಲಸೆ ಕಾನೂನುಗಳ ಉಲ್ಲಂಘನೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಭಾರತದ ಈ ನಡೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿದ್ದು, ಸಂಕಷ್ಟದಲ್ಲಿರುವ ಪ್ರಯಾಣಿಕರಿಗೆ ದೊಡ್ಡ ನೆರವು ನೀಡಿದಂತಾಗಿದೆ.