ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಭಾರತದಲ್ಲಿ ಮತ್ತೆ ಲಾಕ್‌ಡೌನ್‌ ಆಗುತ್ತಾ? ವದಂತಿಗೆ ಕೇಂದ್ರ ಸರ್ಕಾರ ನೀಡಿದ ಉತ್ತರವೇನು?

ಭಾರತದಲ್ಲಿ ಮತ್ತೆ ಲಾಕ್‌ಡೌನ್ ಜಾರಿಯಾಗಲಿದೆ ಎಂಬ ವದಂತಿಗಳನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದ್ದು, ಅವು ಸಂಪೂರ್ಣ ಸುಳ್ಳು ಎಂದು ಸ್ಪಷ್ಟಪಡಿಸಿದೆ. ಜೊತೆಗೆ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಲಾಗಿದೆ. ಯುದ್ಧದಿಂದಾಗಿ ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ಬೆನ್ನಲ್ಲೇ ಈ ಸ್ಪಷ್ಟನೆ ಹೊರಬಿದ್ದಿದೆ.

ಲಾಕ್‌ಡೌನ್ ವದಂತಿ ಸುಳ್ಳು: ಕೇಂದ್ರದ ಸ್ಪಷ್ಟನೆ

ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ -

Profile
Sushmitha Jain Mar 27, 2026 3:30 PM

ನವದೆಹಲಿ: ಭಾರತ (India)ದಲ್ಲಿ ಮತ್ತೆ ಲಾಕ್‌ಡೌನ್ (Lockdown) ಜಾರಿಯಾಗಲಿದೆ ಎಂಬ ವದಂತಿಗಳು ಸಂಪೂರ್ಣ ಆಧಾರರಹಿತ ಮತ್ತು ಸುಳ್ಳು ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಗುರುವಾರ ಸ್ಪಷ್ಟಪಡಿಸಿದ್ದಾರೆ. ಇಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಹೇಳಿರುವ ಅವರು, ಜಾಗತಿಕ ಬಿಕ್ಕಟ್ಟಿನ ಈ ಸಮಯದಲ್ಲಿ ವದಂತಿಗಳನ್ನು ಹರಡುವುದು "ಬೇಜವಾಬ್ದಾರಿ ಮತ್ತು ಹಾನಿಕಾರಕ (irresponsible and harmful)" ಎಂದು ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಇರಾನ್-ಅಮೆರಿಕ (Iran-US) ಯುದ್ಧದಿಂದಾಗಿ ಜಾಗತಿಕ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ (petrol and diesel) ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ಬೆನ್ನಲ್ಲೇ ಈ ಸ್ಪಷ್ಟನೆ ಹೊರಬಿದ್ದಿದೆ.

ವದಂತಿಗಳಿಗೆ ಕಾರಣವೇನು?

ಇತ್ತೀಚೆಗೆ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಕುರಿತು ಮಾತನಾಡುತ್ತಾ, ಕೋವಿಡ್-19 ಸಾಂಕ್ರಾಮಿಕದ ಸಮಯದಲ್ಲಿ ಭಾರತೀಯರು ಹೇಗೆ ಒಗ್ಗಟ್ಟಿನಿಂದ ಹೋರಾಡಿದ್ದರೋ ಅದೇ ರೀತಿ ಈಗಲೂ "ಸಿದ್ಧರಾಗಿ ಮತ್ತು ಒಗ್ಗಟ್ಟಾಗಿ" ಇರಬೇಕು ಎಂದು ಕರೆ ನೀಡಿದ್ದರು. ಪ್ರಧಾನಿಯವರು ಕೋವಿಡ್ ಸಮಯದ ಒಗ್ಗಟ್ಟನ್ನು ಉಲ್ಲೇಖಿಸಿದ್ದನ್ನೇ ತಪ್ಪಾಗಿ ಅರ್ಥೈಸಿಕೊಂಡ ಕೆಲವು ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳು, ದೇಶದಲ್ಲಿ ಮತ್ತೆ ಲಾಕ್‌ಡೌನ್ ಬರಲಿದೆ ಎಂಬ ಭೀತಿಯನ್ನು ಹುಟ್ಟುಹಾಕಿದ್ದವು. ವಿಶೇಷವಾಗಿ ಮಾರ್ಚ್ 24 ರಂದು (2020 ರ ಲಾಕ್‌ಡೌನ್ ಘೋಷಣೆಯಾದ ದಿನ) ಈ ವದಂತಿಗಳು ಮತ್ತಷ್ಟು ವೇಗ ಪಡೆದುಕೊಂಡಿದ್ದವು. ಆದರೆ, ಪ್ರಧಾನಿಯವರು ತಮ್ಮ ಭಾಷಣದಲ್ಲಿ ಎಲ್ಲಿಯೂ 'ಲಾಕ್‌ಡೌನ್' ಎಂಬ ಪದವನ್ನು ಬಳಸಿಲ್ಲ ಎಂದು ಸರ್ಕಾರ ತಿಳಿಸಿದೆ.

Keshava Prasad B Column: ಇರಾನ್‌ ಯುದ್ಧದಿಂದ ಭಾರತಕ್ಕೆ ನಷ್ಟವೇ, ಲಾಭವೇ ?!

ಪೆಟ್ರೋಲ್, ಡೀಸೆಲ್ ದರ ಇಳಿಕೆ

ಇಂಧನ ಬೆಲೆ ಏರಿಕೆಯ ಭೀತಿಯಲ್ಲಿದ್ದ ಭಾರತೀಯರಿಗೆ ಸಮಾಧಾನಕರ ಸುದ್ದಿಯೊಂದನ್ನು ಸರ್ಕಾರ ನೀಡಿದೆ. ದೇಶೀಯ ಬಳಕೆಯ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ ತಲಾ 10 ರೂಪಾಯಿ ಕಡಿತಗೊಳಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಇದರೊಂದಿಗೆ, ದೇಶದಲ್ಲಿ ಇಂಧನದ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ರಫ್ತು ಸುಂಕವನ್ನು ಹೆಚ್ಚಿಸಲಾಗಿದೆ. ಜಾಗತಿಕ ಏರಿಳಿತಗಳಿಂದ ನಾಗರಿಕರನ್ನು ರಕ್ಷಿಸಲು ಪ್ರಧಾನಿ ಮೋದಿ ಈ ಕ್ರಮ ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.