Waqf Amendment Act: ವಕ್ಫ್ ಕಾನೂನನ್ನು ರಾಜ್ಯ ಸರ್ಕಾರಗಳು ನಿರಾಕರಿಸುವಂತಿಲ್ಲ: ಬಿಜೆಪಿ
ಲೋಕಸಭೆಯಲ್ಲಿ ಮತ್ತು ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದ್ದು, ದೇಶಾದ್ಯಂತ ಕಾನೂನು ಜಾರಿಗೆ ಬಂದಿದೆ. ಜತೆಗೆ ಕೆಲವು ರಾಜ್ಯಗಳು ತಾವು ಕಾನೂನನ್ನು ಜಾರಿಗೊಳಿಸುವುದಿಲ್ಲ ಎಂದಿವೆ. ಇದಕ್ಕೆ ಬಿಜೆಪಿ ತಿರುಗೇಟು ನೀಡಿದ್ದು, ರಾಜ್ಯಗಳು ವಕ್ಫ್ ಕಾನೂನನ್ನು ಜಾರಿಗೆ ತರಲು ನಿರಾಕರಿಸುವಂತಿಲ್ಲಎಂದು ಹೇಳಿದೆ.

ಸಾಂಧರ್ಬಿಕ ಚಿತ್ರ.

ನವದೆಹಲಿ: ಭಾರತಾದ್ಯಂತ ವಕ್ಫ್ ಕಾಯಿದೆಯದ್ದೇ (Waqf Amendment Act) ಚರ್ಚೆ ನಡೆಯುತ್ತಿದೆ. ಸಮಾಜದ ವಿವಿಧ ಸಮುದಾಯಗಳ ಒಳಗೆ ವಾದ-ವಿವಾದಗಳು ಜೋರಾಗಿವೆ. ಅದಕ್ಕೆ ಕಾರಣ, ಕೇಂದ್ರ ಸರ್ಕಾರ 1995ರ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡಿದ್ದು. ಈಗಾಗಲೇ ತಿದ್ದುಪಡಿಯೂ ಆಗಿ, ಲೋಕಸಭೆ, ರಾಜ್ಯಸಭೆಯಲ್ಲಿ ಒಪ್ಪಿಗೆಯೂ ಸಿಕ್ಕಿ, ರಾಷ್ಟ್ರಪತಿಗಳ ಅಂಕಿತವೂ ಆಗಿ ಕಾಯ್ದೆಯಾಗಿ ಜಾರಿಯಾಗಿದೆ. ಹೌದು, ಕಳೆದ ಏ. 3ರಂದು ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದ್ದು, ಏ. 4ರಂದು ರಾಜ್ಯಸಭೆಯಲ್ಲಿ ಪಾಸ್ ಆಗಿದೆ. ಬಳಿಕ ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರು ಮಸೂದೆಗೆ ಅಂಕಿತ ಹಾಕಿದ್ದಾರೆ.
ಈ ನಡುವೆ ಈಗಾಗಲೇ ವಿಧೇಯಕದ ಸಿಂಧುತ್ವ ಪ್ರಶ್ನಿಸಿ ಕಾಂಗ್ರೆಸ್, ಎಐಎಂಐಎಂ, ಆಪ್ ಪ್ರತ್ಯೇಕವಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ. ವಕ್ಫ್ ಆಸ್ತಿಗಳ ನಿರ್ವಹಣೆ, ಮೇಲ್ವಿಚಾರಣೆ, ಸುಧಾರಣೆ ಮತ್ತು ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ಜತೆಗೆ ಹಳೆಯ ಕಾಯಿದೆಯಲ್ಲಿದ್ದ ಕೆಲವು ವಿವಾದಾತ್ಮಕ ಅಂಶಗಳನ್ನು ತಿದ್ದುಪಡಿ ವಿಧೇಯಕದಲ್ಲಿ ತೆಗೆದುಹಾಕಲಾಗಿದೆ.
ಇದೀಗ ಕಾಯಿದೆ ಯಾರಿಗೆ ನಿರಾಕರಿಸುತ್ತಿರುವ ರಾಜ್ಯಗಳ ವಿರುದ್ದ ಕಿಡಿಕಾರಿರುವ ಬಿಜೆಪಿ, ರಾಜ್ಯಗಳು ವಕ್ಫ್ ಕಾನೂನನ್ನು ಜಾರಿಗೆ ತರಲು ನಿರಾಕರಿಸುವಂತಿಲ್ಲ (States Cannot Refuse To Implement Waqf Law) ಎಂದು ಹೇಳಿದೆ. ಹೌದು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ)ದ ಶಾಸಕ ಮತ್ತು ರಾಜ್ಯ ಸಚಿವ ಹಫೀಜುಲ್ ಹಸನ್ ಅವರು ಮೊದಲು ಷರಿಯಾ ನಂತರ ಸಂವಿಧಾನ ಎಂಬ ಹೇಳಿಕೆ ನೀಡಿದ್ದೂ, ಕರ್ನಾಟಕದ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅವರು ರಾಜ್ಯದಲ್ಲಿ ವಕ್ಫ್ ಕಾನೂನನ್ನುಜಾರಿಗೆ ತರಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ತಮ್ಮ ರಾಜ್ಯದಲ್ಲಿ ಈ ಕಾಯಿದೆಯನ್ನು ಅನುಷ್ಠಾಣಗೊಳಿಸಲು ಬಿಡುವುದಿಲ್ಲ ಎಂದು ತಾಕೀತು ಮಾಡಿದ್ದಾರೆ.
ಈ ಹೇಳಿಕೆ ಹಾಗೂ ವಕ್ಫ್ ಮಸೂದೆಗೆ ವ್ಯಕ್ತವಾಗುತ್ತಿರುವ ವಿರೋಧವನ್ನು ಗಮನಿಸಿದ ಬಿಜೆಪಿ ಕೇಂದ್ರದ ಕಾನೂನನ್ನು ಜಾರಿಗೆ ತರಲು ಯಾವುದೇ ರಾಜ್ಯ ನಿರಾಕರಿಸುವಂತಿಲ್ಲ ಎಂದು ಹೇಳಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ, ಕೇಂದ್ರ ಜಾರಿ ಮಾಡಿರುವ ಈ ಮಸೂದೆ ಅನುಷ್ಠಾನಕ್ಕೆ ವಿರೋಧ ವ್ಯಕ್ತ ಆಗುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದ್ದು, ಇದೇ ಪರಿಸ್ಥಿತಿ ಮುಂದುವರಿದ್ದರೆ ನಮ್ಮ ಸಂವಿದಾಯವನ್ನು ಇಂತಹವರು ಅಪಾಯಕ್ಕೆ ತಳ್ಳಿ ಬಿಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ವಿರೋಧಿ ಬಣದವರು ನೀಡುತ್ತಿರುವ ಹೇಳಿಕೆಗಳು ಅವರಿಗೆ ಸಂವಿಧಾನದ ಬಗ್ಗೆ ಗೌರವವಿಲ್ಲ ಎಂಬುದನ್ನು ಸಾಬೀತು ಮಾಡಿದ್ದು, ಅವರ ಹೇಳಿಕೆಗಳು ಸಂವಿಧಾನದ ಮುಖ್ಯ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನ ಎಂದೂ ಹೇಳಿದ್ದಾರೆ.
ಈ ಸುದ್ದಿಯನ್ನು ಓದಿ: Waqf Amendment Bill: "ಮುಸ್ಲಿಂ ಯುವಕರು ಪಂಕ್ಚರ್ ಹಾಕುತ್ತಾರೆ" ಮೋದಿ ಹೇಳಿಕೆಯನ್ನು ಟೀಕಿಸಿದ ವಿಪಕ್ಷಗಳು
ಸಂವಿಧಾನದ 73 ಮತ್ತು 74ನೇ ತಿದ್ದುಪಡಿಯ ಪ್ರಕಾರ, ಕೇಂದ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟದ ಸರ್ಕಾರಗಳ ಅಧಿಕಾರಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದ್ದು, ರಾಜ್ಯ ವಿಧಾನಸಭೆ ಅಂಗೀಕರಿಸಿದ ಕಾನೂನನ್ನು ಯಾವುದೇ ಜಿಲ್ಲಾ ಪಂಚಾಯತ್ ಮೀರಲು ಸಾಧ್ಯವಿಲ್ಲ ಮತ್ತು ಕೇಂದ್ರ (ಸಂಸತ್ತು) ಅಂಗೀಕರಿಸಿದ ಕಾನೂನನ್ನು ಯಾವುದೇ ರಾಜ್ಯವು ಬೈಪಾಸ್ ಮಡುವಂತಿಲ್ಲ ಎಂದು ಬಿಜೆಪಿ ರಾಜ್ಯಸಭಾ ಸಂಸದ ಹೇಳಿದ್ದಾರೆ.
ಇನ್ನು 254ನೇ ವಿಧಿಯ ಪ್ರಕಾರ, ಕೇಂದ್ರ ಕಾನೂನುಗಳು ರಾಜ್ಯ ಕಾನೂನುಗಳಿಗಿಂತ ಆದ್ಯತೆಯನ್ನು ಹೊಂದಿರುವುದರಿಂದ ಕಾನೂನನ್ನು ಪಾಲಿಸುವುದು ರಾಜ್ಯಗಳ ಜವಾಬ್ದಾರಿಯಾಗಿದ್ದು, 256ನೇ ವಿಧಿಯ ಪ್ರಕಾರ, ಕೇಂದ್ರ ಸರ್ಕಾರ ಮಾಡಿದ ಕಾನೂನುಗಳು ಮತ್ತು ಅದರ ಸೂಚನೆಗಳನ್ನು ಪಾಲಿಸಲು ರಾಜ್ಯ ಸರ್ಕಾರಗಳು ನಿರಾಕರಿಸುವಂತಿಲ್ಲ. ಕೇಂದ್ರದ ಸೂಚನೆಗಳನ್ನು ಪಾಲಿಸುವುದು ರಾಜ್ಯಗಳ ಜವಾಬ್ದಾರಿ ಎಂದು ತಜ್ಞರು ಹೇಳುತ್ತಾರೆ. ಕೇಂದ್ರದ ಯಾವುದೇ ಕಾನೂನನ್ನು ಪಾಲಿಸದಿರುವುದು ಸಂವಿಧಾನದ ವೈಫಲ್ಯವೆಂದು ಪರಿಗಣಿಸಲಾಗುತ್ತದೆ. ಇದು ಸಂಭವಿಸಿದಲ್ಲಿ ಯಾವ ಕ್ರಮ ಕೈಗೊಳ್ಳಬಹುದು ಎಂಬುದನ್ನು ಸಂವಿಧಾನದಲ್ಲಿ ಸ್ಪಷ್ಟವಾಗಿ ನೀಡಲಾಗಿದೆ.