ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Plane Hijack: 1972ರ ವಿಮಾನ ಹೈಜಾಕ್‌; ಭಾರತ ಕೊಟ್ಟ ಎಚ್ಚರಿಕೆಗೆ ಬೆದರಿ ಅಪಹರಣಕಾರರಿಗೇ ವಿಷವುಣಿಸಿತ್ತು ಪಾಕಿಸ್ತಾನ

ದೆಹಲಿಯಿಂದ ಮುಂಬೈಗೆ ಹೊರಟ್ಟಿತ್ತು ಇಂಡಿಯನ್ ಏರ್ ಲೈನ್ಸ್ (Indian Airlines) ವಿಮಾನ. ಆದರೆ ಆಗಸಕ್ಕೆ ಹಾರಾಟವಾದ ಕೆಲವೇ ಕ್ಷಣಗಳಲ್ಲಿ ಆತಂಕಿತರಿಂದ ಹೈಜಾಕ್ ಆಯಿತು. ಭಯೋತ್ಪಾದಕರು ವಿಮಾನವನ್ನು ಲಿಬಿಯಾಕ್ಕೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿದರು. ಆದರೆ ಇಂಧನದ ಕೊರತೆಯಿಂದ ವಿಮಾನ ಕರಾಚಿಯಲ್ಲಿ ಇಳಿಯಿತು. ಬಳಿಕ ನಡೆದದ್ದು ಎಲ್ಲವೂ ನಾಟಕೀಯ ಬೆಳವಣಿಗೆ.

ವಿಮಾನ ಅಪಹರಣಕಾರರಿಗೇ ವಿಷವುಣಿಸಿತ್ತಾ ಪಾಕಿಸ್ತಾನ?

ನವದೆಹಲಿ: ಸುಮಾರು 83 ಪ್ರಯಾಣಿಕರನ್ನು ಹೊತ್ತುಕೊಂಡು 1976ರ ಸೆಪ್ಟೆಂಬರ್ 10ರಂದು ದೆಹಲಿಯಿಂದ (Delhi) ಮುಂಬೈಗೆ (Mumbai) ಹೊರಟಿತ್ತು ದಿನನಿತ್ಯದ ದೇಶೀಯ ಇಂಡಿಯನ್ ಏರ್ ಲೈನ್ಸ್ (Indian Airlines) ವಿಮಾನ. ಆಕಾಶಕ್ಕೆ ಹಾರಿದ ಕೆಲವೇ ಗಂಟೆಗಳಲ್ಲಿ ವಿಮಾನ ಹೈಜಾಕ್(Plane hijack) ಆಗಿತ್ತು. ಇದು ಅಂತಾರಾಷ್ಟ್ರೀಯ ಬಿಕ್ಕಟ್ಟಿಗೆ ಕಾರಣವಾಯಿತು. ಇದರಿಂದ ಪಾಕಿಸ್ತಾನಕ್ಕೆ (Pakistan) ಬಹುದೊಡ್ಡ ಅಗ್ನಿ ಪರೀಕ್ಷೆಯೇ ಎದುರಾಗಿತ್ತು. ಭಾರತೀಯ ಏರ್ ಲೈನ್ಸ್ ನ ಇತಿಹಾಸದಲ್ಲೇ ಇದೊಂದು ನಾಟಕೀಯ ಅಪಹರಣ ಪ್ರಸಂಗಗಳಲ್ಲಿ ಒಂದಾಯಿತು. ಕೆಲವೇ ಗಂಟೆಗಳಲ್ಲಿ ವಿಮಾನ ಅಪಹರಣ ಪ್ರಸಂಗ ಕೊನೆಗೊಂಡಿತ್ತು.

1976ರ ಸೆಪ್ಟೆಂಬರ್ 10ರಂದು ದೆಹಲಿಯಿಂದ ಮುಂಬೈಗೆ ಪ್ರತಿನಿತ್ಯ ಹಾರುವ ವಿಮಾನವನ್ನು ಆರು ಮಂದಿ ಭಯೋತ್ಪಾದಕರು ಹೈಜಾಕ್ ಮಾಡಿದ್ದರು. ವಿಮಾನ ಆಗಸಕ್ಕೆ ಹಾರಿದ ಕೆಲವೇ ಕ್ಷಣಗಳಲ್ಲಿ ಈ ಘಟನೆ ನಡೆದಿತ್ತು. ಇದು ಒಂದು ದೊಡ್ಡ ಅಂತಾರಾಷ್ಟ್ರೀಯ ಬಿಕ್ಕಟ್ಟಿಗೆ ಕಾರಣವಾಯಿತು. ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಿಂದ ಮುಂಬೈಗೆ ಹೊರಟಿದ್ದ ಭಾರತೀಯ ಏರ್ ಲೈನ್ಸ್ ವಿಮಾನದಲ್ಲಿದ್ದ ಆರು ಮಂದಿ ವ್ಯಕ್ತಿಗಳು ಸನ್ನೆಗಳ ಮೂಲಕ ಮಾತನಾಡಲು ಪ್ರಾರಂಭಿಸಿದರು. ಬಳಿಕ ಕೆಲವೇ ಕ್ಷಣಗಳಲ್ಲಿ ವಿಮಾನ ಹೈಜಾಕ್ ಆಯಿತು. ಇಬ್ಬರು ವ್ಯಕ್ತಿಗಳು ಪಿಸ್ತೂಲುಗಳನ್ನು ಹಿಡಿದು ಕ್ಯಾಪ್ಟನ್ ಬಿ.ಎನ್. ರೆಡ್ಡಿ ಮತ್ತು ಸಹ-ಪೈಲಟ್ ಆರ್‌.ಎಸ್. ಯಾದವ್ ಅವರನ್ನು ಬಂಧನದಲ್ಲಿ ಇರಿಸಿದರು. ಉಳಿದವರು ಶಸ್ತ್ರಾಸ್ತ್ರಗಳನ್ನು ಝಳಪಿಸಿ ಪ್ರಯಾಣಿಕರಲ್ಲಿ ಆತಂಕ ಹೆಚ್ಚುವಂತೆ ಮಾಡಿದರು.

ಪೈಲಟ್‌ಗಳಿಗೆ ವಿಮಾನವನ್ನು ಲಿಬಿಯಾಕ್ಕೆ ತಿರುಗಿಸಲು ಭಯೋತ್ಪಾದಕರ ಒತ್ತಾಯ ಹೇರಿದರು. ಇಂಧನದ ಕೊರತೆಯಿಂದ ವಿಮಾನ ದೆಹಲಿ ಅಥವಾ ಜೈಪುರಕ್ಕೆ ಮಾತ್ರ ಹೋಗಬಹುದು. ಲಿಬಿಯಾ ಬಹುದೂರವಿರುವುದರಿಂದ ಅಲ್ಲಿಗೆ ಪ್ರಯಾಣ ಅಸಾಧ್ಯ ಎಂದು ಕ್ಯಾಪ್ಟನ್ ರೆಡ್ಡಿ ವಿನಮ್ರವಾಗಿ ಅಪಹರಣಕಾರರಿಗೆ ತಿಳಿಸಿದರು.

ವಿಮಾನವನ್ನು ಭಾರತದಲ್ಲಿ ಇಳಿಸದೇ ಇರಲು ನಿರ್ಧರಿಸಿದ ಅಪಹರಣಕಾರರು ಈ ಕುರಿತು ತಮ್ಮ ತಂಡದೊಂದಿಗೆ ಚರ್ಚಿಸಲು ಪ್ರಾರಂಭಿಸಿದರು. ಈ ಅವಕಾಶವನ್ನು ಬಳಸಿಕೊಂಡ ಕ್ಯಾಪ್ಟನ್ ರೆಡ್ಡಿ ಸರಿಯಾದ ಸಂಚಾರಕ್ಕೆ ಮಾರ್ಗಗಳು , ಎಟಿಸಿ ಕ್ಲಿಯರೆನ್ಸ್ ಮತ್ತು ಹೆಚ್ಚಿನ ಇಂಧನವಿಲ್ಲದೆ ಉತ್ತರ ಆಫ್ರಿಕಾ ತಲುಪಲು ತಾಂತ್ರಿಕ ಕಾರಣಗಳ ಬಗ್ಗೆಯೂ ಅಪಹರಣಕಾರರಿಗೆ ವಿವರಿಸಿದರು.

ಕೊನೆಗೆ ಅಪಹರಣಕಾರರು ವಿಮಾನ ಮಾರ್ಗವನ್ನು ಬದಲಾಯಿಸಿ ಪೈಲಟ್‌ಗಳಿಗೆ ಪಾಕಿಸ್ತಾನದ ಕರಾಚಿಗೆ ತಿರುಗಿಸಲು ಸೂಚಿಸಿದರು. ಇದು ಪಾಕಿಸ್ತಾನಕ್ಕೆ ಬಹುದೊಡ್ಡ ಸಂಕಷ್ಟವನ್ನು ತರುತ್ತದೆ ಎಂಬುದು ಅವರು ಯೋಚಿಸಿರಲಿಕ್ಕಿಲ್ಲ. ಈ ನಡುವೆ ಪೈಲಟ್‌ಗಳು ದೆಹಲಿ ವಾಯು ಸಂಚಾರ ನಿಯಂತ್ರಣಕ್ಕೆ (ATC) ತುರ್ತು ಸಂಕೇತವನ್ನು ಕಳುಹಿಸುವಲ್ಲಿ ಯಶಸ್ವಿಯಾದರು. ಆಕಾಶದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಬಗ್ಗೆ ಭಾರತೀಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಭಾರತದ ವಿಮಾನವು ಕರಾಚಿಯಲ್ಲಿ ಇಳಿದ ಬಳಿಕ ಪಾಕಿಸ್ತಾನಿ ಅಧಿಕಾರಿಗಳ ಕಾವಲಿನಲ್ಲಿ ನಿಂತಿತ್ತು. ಅಪಹರಣಕಾರರಿಂದ ಯಾವುದೇ ಸಂವಹನವಿಲ್ಲದೆ ಕೆಲವು ಗಂಟೆಗಳು ಕಳೆದವು. ಈ ನಡುವೆ ಭಾರತ ಸರ್ಕಾರವು ಪಾಕಿಸ್ತಾನಕ್ಕೆ ಕಠಿಣ ಕಠಿಣ ಎಚ್ಚರಿಕೆಯನ್ನು ನೀಡಿತು: ಒತ್ತೆಯಾಳುಗಳಲ್ಲಿ ಯಾರಿಗಾದರೂ ಹಾನಿಯಾದರೆ ಪಾಕಿಸ್ತಾನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎನ್ನುವ ಸಂದೇಶವನ್ನು ಕಳುಹಿಸಿತ್ತು.

ಇದರಿಂದ ಒತ್ತಡಕ್ಕೆ ಒಳಗಾದ ಪಾಕಿಸ್ತಾನಿ ಸೇನೆ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಸನ್ನದ್ದವಾಯಿತು. ಪಾಕಿಸ್ತಾನಿ ನೆಲ ಭಯೋತ್ಪಾದಕರು ಸುರಕ್ಷಿತ ಎನ್ನುವ ಭಾವನೆ ಬರುವಂತೆ ಮಾಡಿದ ಪಾಕಿಸ್ತಾನಿ ಸೈನ್ಯ ಅವರಿಗೆ ಆಹಾರ ಮತ್ತು ಪಾನೀಯಗಳನ್ನು ನೀಡಿತು. ಇದು ಆತಿಥ್ಯದಂತೆ ಕಂಡರೂ ಇದರ ಹಿಂದೆ ದೊಡ್ಡ ತಂತ್ರವಿತ್ತು. ಭಯೋತ್ಪಾದಕರಿಗೆ ಊಟದಲ್ಲಿ ನಿದ್ರಾ ಮಾತ್ರೆಗಳನ್ನು ಬೆರೆಸಲಾಗಿತ್ತು. ಅಪಹರಣಕಾರರು ಒಬ್ಬೊಬ್ಬರಾಗಿ ಪ್ರಜ್ಞೆ ಕಳೆದುಕೊಂಡರು. ಬಳಿಕ ಪಾಕಿಸ್ತಾನಿ ಕಮಾಂಡೋಗಳು ವಿಮಾನದೊಳಗೆ ನುಗ್ಗಿ ವಿಮಾನವನ್ನು ವಶಕ್ಕೆ ಪಡೆದರು.

ಇದನ್ನೂ ಓದಿ: Jimmy Tata: ಶ್ರೀಮಂತಿಕೆ ಬಳುವಳಿಯಾಗಿ ಬಂದರೂ 2BHK ಮನೆಯಲ್ಲಿ ಬದುಕುತ್ತಿರುವ ಟಾಟಾ ಕುಟುಂಬದ ಈ ಕುಡಿ!

ಯಾವುದೇ ಗುಂಡು ಹಾರಿಸದೆ ಅಪಹರಣಕಾರರಾದ ಎಂ. ಅಹ್ಸಾನ್ ರಾಥೋಡ್, ಸೈಯದ್ ಅಬ್ದುಲ್ ಹಮೀದ್ ದೆವಾನಿ, ಅಬ್ದುಲ್ ರಶೀದ್ ಮಲಿಕ್, ಸೈಯದ್ ಎಂ. ರಫೀಕ್, ಖ್ವಾಜಾ ಗುಲಾಮ್ ಮತ್ತು ಗುಲಾಮ್ ರಸೂಲ್ ಎಂಬವರನ್ನು ಬಂಧಿಸಲಾಯಿತು. ಈ ಭಯೋತ್ಪಾದಕರನ್ನು ಕಾಶ್ಮೀರದ ಭಯೋತ್ಪಾದಕರು ಎಂದು ಕರೆಯಲಾಯಿತು. ಬಳಿಕ ಸುರಕ್ಷಿತವಾಗಿ ವಿಮಾನವನ್ನು ಭಾರತಕ್ಕೆ ಹಿಂತಿರುಗಲು ಅನುಮತಿ ನೀಡಲಾಯಿತು.

1976ರ ಸೆಪ್ಟೆಂಬರ್ 11ರಂದು ವಿಮಾನ ದೆಹಲಿಯಲ್ಲಿ ಸುರಕ್ಷಿತವಾಗಿ ಇಳಿಯಿತು. ಇದೊಂದು ಭಾರತೀಯ ಏರ್ ಲೈನ್ಸ್ ನ ಇತಿಹಾಸದಲ್ಲೇ ನಾಟಕೀಯ ಅಪಹರಣ ಪ್ರಸಂಗಗಳಲ್ಲಿ ಒಂದು ಎಂದು ಗುರುತಿಸಲಾಗಿದೆ. ವಿಮಾನ ಅಪಹರಣ ಪ್ರಸಂಗವು 24 ಗಂಟೆಗಳಲ್ಲಿ ಕೊನೆಗೊಂಡಿತ್ತು. ಈ ಘಟನೆಯ ಬಳಿಕ ವಾಯುಯಾನ ಭದ್ರತಾ ಶಿಷ್ಟಾಚಾರವನ್ನು ರೂಪಿಸಲಾಯಿತು. ಎರಡು ರಾಷ್ಟ್ರಗಳ ನಡುವೆ ಉದ್ವಿಗ್ನತೆಯ ನಡುವೆಯೂ ಈ ಘಟನೆಯಲ್ಲಿ ಪಾಕಿಸ್ತಾನ ಇಷ್ಟವಿಲ್ಲದಿದ್ದರೂ ಭಾರತಕ್ಕೆ ಸಹಕರಿಸುವಂತೆ ಮಾಡಿತ್ತು.