Indigo Airlines: ಪ್ರಯಾಣಿಕರಿಗೆ ಕೊಳಕಾದ ಸೀಟು ನೀಡಿದ ಆರೋಪ- ಇಂಡಿಗೋಗೆ 1.5 ಲಕ್ಷ ರೂ. ದಂಡ
ಇಂಡಿಗೋ ಮೇಲೆ ಕೊಳಕು ಮತ್ತು ಕಲೆಯಾದ ಸೀಟನ್ನು ನೀಡಿರುವ ಎಂಬ ಆರೋಪ ಕೇಳಿ ಬಂದಿದ್ದು, ಪಿಂಕಿ ಎಂಬುವವರು ದೂರು ಸಲ್ಲಿಸಿದ್ದಾರೆ. ಈ ದೂರಿನ ವಿಚಾರಣೆ ನಡೆಸಿದ ಅಧ್ಯಕ್ಷೆ ಪೂನಂ ಚೌಧರಿ ಮತ್ತು ಸದಸ್ಯರಾದ ಬರಿಕ್ ಅಹ್ಮದ್ ಮತ್ತು ಶೇಖರ್ ಚಂದ್ರ ಅವರನ್ನೊಳಗೊಂಡ ನವದೆಹಲಿ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗ ಈ ತೀರ್ಪು ನೀಡಿದೆ.


ನವದೆಹಲಿ: ಮಹಿಳೆಯೊಬ್ಬರಿಗೆ ನೈರ್ಮಲ್ಯವಿಲ್ಲದ (Unhygienic) ಮತ್ತು ಕಲೆಯಾದ ಸೀಟನ್ನು ನೀಡಿದ್ದಕ್ಕಾಗಿ ದೆಹಲಿಯ ಗ್ರಾಹಕ ವಿವಾದಗಳ ಪರಿಹಾರ ಆಯೋಗವು (Delhi Consumer Forum) ಇಂಡಿಗೋ ಏರ್‌ಲೈನ್ಸ್ (Indigo Airlines) ಸೇವೆಯಲ್ಲಿ ಕೊರತೆ ಎಸಗಿದೆ ಎಂದು ತೀರ್ಪು ನೀಡಿದೆ. ಆ ಮಹಿಳೆಗೆ ಉಂಟಾದ ಅನಾನುಕೂಲತೆ ಮತ್ತು ಮಾನಸಿಕ ಕಿರುಕುಳ 1.5 ಲಕ್ಷ ರೂಪಾಯಿಗಳ ಪರಿಹಾರ ನೀಡುವಂತೆ ಆದೇಶಿಸಿದೆ.
ಏನಿದು ಘಟನೆ?
ಪಿಂಕಿ ಎಂಬ ಮಹಿಳೆ ಜನವರಿ 2, 2025 ರಂದು ಬಾಕುವಿನಿಂದ ನವದೆಹಲಿಗೆ ಪ್ರಯಾಣಿಸುತ್ತಿದ್ದಾಗ ಇಂಡಿಗೋ ಏರ್‌ಲೈನ್ಸ್‌ನಿಂದ ನೈರ್ಮಲ್ಯವಿಲ್ಲದ ಸೀಟನ್ನು ನೀಡಲಾಗಿದೆ ಎಂದು ಆರೋಪಿಸಿದ್ದರು. ಈ ಬಗ್ಗೆ ಅವರು ದೂರು ಸಲ್ಲಿಸಿದ್ದರು. ಈ ದೂರನ್ನು ನವದೆಹಲಿ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗದ ಅಧ್ಯಕ್ಷೆ ಪೂನಮ್ ಚೌಧರಿ, ಸದಸ್ಯರಾದ ಬಾರಿಕ್ ಅಹ್ಮದ್ ಮತ್ತು ಶೇಖರ್ ಚಂದ್ರ ಅವರು ವಿಚಾರಣೆ ನಡೆಸಿದರು.
ಪಿಂಕಿಯವರು ಕೊಳಕಾದ ಸೀಟಿನ ಸಮಸ್ಯೆಯನ್ನು ತಿಳಿಸಿದಾಗ, ಏರ್‌ಲೈನ್ಸ್ ಸಿಬ್ಬಂದಿ ಸರಿಯಾದ ರೀತಿಯಲ್ಲಿ ವರ್ತಿಸಿರಲಿಲ್ಲ. ಅಲ್ಲದೇ ಆಕೆಯ ಜೊತೆ ಸಿಬ್ಬಂದಿ ವಾಗ್ವಾದ ನಡೆಸಿದ್ದರು ಎಂದು ಆರೋಪಿಸಿದ್ದಾರೆ. ಆದರೆ ಇಂಡಿಗೋ ಏರ್‌ಲೈನ್ಸ್ ಪಿಂಕಿಯ ಆರೋಪವನ್ನು ತಿರಸ್ಕರಿಸಿದ್ದು, ಆಕೆಯ ಸಮಸ್ಯೆಗೆ ಸ್ಪಂದಿಸಿ, ಅವರಿಗೆ ಬೇರೆ ಸೀಟನ್ನು ಒದಗಿಸಲಾಗಿತ್ತು ಎಂದು ವಾದಿಸಿತು. ಆದರೆ ಈ ವಿಚಾರವನ್ನು ವಿಚಾರಣೆ ನಡೆಸಿದ ಆಯೋಗ ಜುಲೈ 9, 2025ರ ಆದೇಶ ನೀಡಿತ್ತು. ಇಂಡಿಗೋ ತನ್ನ ಸೇವೆಯಲ್ಲಿ ಲೋಪ ಎಸಗಿದೆ ಎಂದು ತೀರ್ಪು ನೀಡಿದೆ.
ಈ ಸುದ್ದಿಯನ್ನೂ ಓದಿ: Viral Video: ರೈಲು ಹಾದು ಹೋಗುತ್ತಿದ್ದರೆ ಸೇತುವೆಯ ಕೆಳಗೆ ಕಾಯುತ್ತ ನಿಂತ ಜನ; ಕಾರಣ ಕೇಳಿದ್ರೆ ನೀವೂ ದಂಗಾಗ್ತೀರಿ
ಇಂಡಿಗೋ 1.5 ಲಕ್ಷ ರೂ. ಪರಿಹಾರವಾಗಿ ಮತ್ತು 25,000 ರೂ. ವ್ಯಾಜ್ಯ ವೆಚ್ಚವಾಗಿ ಪಾವತಿಸಲಿ ಎಂದು ಆಯೋಗ ಆದೇಶಿಸಿತು. ಇಂಡಿಗೋ ತನ್ನ ಆಂತರಿಕ ಕಾರ್ಯಾಚರಣೆಯ ದಾಖಲೆಯಾದ ಸಿಚುಯೇಷನ್ ಡೇಟಾ ಡಿಸ್‌ಪ್ಲೇ (ಎಸ್‌ಡಿಡಿ) ವರದಿಯನ್ನು ಸಲ್ಲಿಸಲು ವಿಫಲವಾಯಿತು. ಈ ವರದಿಯು ವಿಮಾನ ಕಾರ್ಯಾಚರಣೆಯ ಮೇಲ್ವಿಚಾರಣೆ ಮತ್ತು ಪ್ರಯಾಣಿಕರ ಸಂಬಂಧಿತ ಘಟನೆಗಳ ದಾಖಲೆಗೆ ಪ್ರಮುಖವಾಗಿದೆ.