ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮುಂದಿನ ವಾರ ಇರಾನ್‌ನಲ್ಲಿ ಆಯತೊಲ್ಲ ಅಲಿ ಖಮೇನಿ ಅಂತ್ಯಕ್ರಿಯೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಆಹ್ವಾನ

Ayatollah Ali Khamenei's Funeral: ಇರಾನ್‌ನ ದಿವಂಗತ ಸರ್ವೋಚ್ಚ ನಾಯಕ ಆಯತೊಲ್ಲ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇರಾನ್ ಸರ್ಕಾರ ಅಧಿಕೃತ ಆಹ್ವಾನ ನೀಡಿದೆ.

ಖಮೇನಿ ಅಂತ್ಯಕ್ರಿಯೆಗೆ ನಿತಿನ್ ನಬಿನ್, ಮಲ್ಲಿಕಾರ್ಜುನ ಖರ್ಗೆಗೆ ಆಹ್ವಾನ

ನಿತಿನ್ ನಬಿನ್, ಮಲ್ಲಿಕಾರ್ಜುನ ಖರ್ಗೆ (ಸಂಗ್ರಹ ಚಿತ್ರ) -

Priyanka P
Priyanka P Jul 1, 2026 8:40 PM

ನವದೆಹಲಿ, ಜು. 1: ಇರಾನ್‌ನ ದಿವಂಗತ ಸರ್ವೋಚ್ಚ ನಾಯಕ (Supreme Leader) ಆಯತೊಲ್ಲ ಅಲಿ ಖಮೇನಿ (Ayatollah Ali Khamenei) ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇರಾನ್ ಸರ್ಕಾರ ಅಧಿಕೃತ ಆಹ್ವಾನ ನೀಡಿದೆ. ಫೆಬ್ರವರಿ 28ರಂದು ಅಮೆರಿಕ-ಇಸ್ರೇಲ್ (US-Isreal) ನಡೆಸಿದ ಜಂಟಿ ವಾಯುದಾಳಿಯಲ್ಲಿ ಖಮೇನಿ ಮೃತಪಟ್ಟಿದ್ದರು. ಯುದ್ಧದ ಕಾರಣದಿಂದ ಮುಂದೂಡಲ್ಪಟ್ಟಿದ್ದ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ಜುಲೈ ಮೊದಲ ವಾರದಿಂದ ಆರಂಭವಾಗಲಿವೆ.

ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಪಬಿತ್ರ ಮಾರ್ಗರಿಟಾ ಮತ್ತು ಬಿಹಾರ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ ಕೂಡ ಖಮೇನಿ ಅವರ ಅಂತ್ಯಕ್ರಿಯೆಯ ಕಾರ್ಯಕ್ರಮದಲ್ಲಿ ಭಾರತವನ್ನು ಪ್ರತಿನಿಧಿಸುವ ನಿರೀಕ್ಷೆಯಿದೆ.

ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಪಬಿತ್ರಾ ಮಾರ್ಗರಿಟಾ ಮತ್ತು ಪ್ರಸ್ತುತ ಭಾರತದಲ್ಲಿ ಸಾಂವಿಧಾನಿಕ ಹುದ್ದೆ ಹೊಂದಿರುವ ಶಿಯಾ ಸಮುದಾಯದ ಪ್ರಮುಖ ನಾಯಕ ಬಿಹಾರ ಗವರ್ನರ್ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್, ಭಾರತ ಸರ್ಕಾರದ ಪರವಾಗಿ ಜುಲೈ 4ರಂದು ಟೆಹರಾನ್‌ನಲ್ಲಿ ನಡೆಯಲಿರುವ ಅಧಿಕೃತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆಯತೊಲ್ಲ ಅಲಿ ಖಮೇನಿ ಅಂತ್ಯಕ್ರಿಯೆಯಲ್ಲಿ ಭಾರತದಿಂದ ಪಬಿತ್ರಾ ಮಾರ್ಗರಿಟಾ, ಸೈಯದ್ ಅತಾ ಹಸ್ನೈನ್ ಭಾಗಿ

ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅಂತ್ಯಕ್ರಿಯೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರು. ನರೇಂದ್ರ ಮೋದಿ ಭಾಗವಹಿಸಲಿದ್ದಾರ ಎಂಬ ಬಗ್ಗೆ ಭಾರತದಿಂದ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಅದಾಗ್ಯೂ ಪ್ರಧಾನಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ ಕಡಿಮೆ ಎಂದು ಪರಿಗಣಿಸಲಾಗಿದೆ.

ಅಂತ್ಯಕ್ರಿಯೆಗೆ ಚೀನಾ, ರಷ್ಯಾ, ಪಾಕಿಸ್ತಾನ ಮತ್ತು ಕತಾರ್ ನಾಯಕರನ್ನು ಸಹ ಇರಾನ್ ಆಹ್ವಾನಿಸಿದೆ. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಅವರ ಅಧಿಕೃತ ನಿಯೋಗವು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದೆ ಎಂದು ಹೇಳಿದ್ದಾರೆ.

ಖಮೇನಿ ಅಂತ್ಯಕ್ರಿಯೆ

ಖಮೇನಿ ಅವರ ಮರಣದ ನಂತರ ಅಂತ್ಯಕ್ರಿಯೆಯ ದಿನಾಂಕವನ್ನು ಹಲವು ಬಾರಿ ಬದಲಾಯಿಸಲಾಯಿತು. ಜೂನ್‌ನಲ್ಲಿ ಇರಾನಿನ ಅಧಿಕಾರಿಗಳು ಖಮೇನಿ ಅವರ ಅಂತ್ಯಕ್ರಿಯೆ ಸಮಾರಂಭದ ವಿವರಗಳನ್ನು ಘೋಷಿಸಿದರು. ಜುಲೈ 6, 7 ಮತ್ತು 9ರಂದು ಟೆಹರಾನ್, ಕೋಮ್ ಮತ್ತು ಮಶಾದ್‌ನಲ್ಲಿ ಅಂತ್ಯಕ್ರಿಯೆ ಸಮಾರಂಭಗಳ ನಂತರ ಜುಲೈ 9ರಂದು ಇಮಾಮ್ ರೆಜಾ ದೇಗುಲದಲ್ಲಿ ಅವರನ್ನು ಸಮಾಧಿ ಮಾಡಲಾಗುವುದು ಎಂದು ಇರಾನ್ ರಾಜ್ಯ ಮಾಧ್ಯಮ ವರದಿ ಮಾಡಿದೆ.

1989ರಿಂದ 2026ರವರೆಗೆ ದೇಶವನ್ನು ಮುನ್ನಡೆಸಿದ ಇರಾನ್ ನಾಯಕನ ಅಂತ್ಯಕ್ರಿಯೆಯನ್ನು ಶಿಯಾ ಮುಸ್ಲಿಂ ಕ್ಯಾಲೆಂಡರ್‌ನಲ್ಲಿ ಸಾಂಪ್ರದಾಯಿಕ ಶೋಕಾಚರಣೆಯ ಅವಧಿಯಾದ ಮೊಹರಂ ಸಮಯದಲ್ಲಿ ನಡೆಸಲು ಯೋಜಿಸಲಾಗಿದೆ. ಅವರ ಅಂತ್ಯಕ್ರಿಯೆಯನ್ನು ಆರಂಭದಲ್ಲಿ ಮಾರ್ಚ್ 4ರಂದು ನಿಗದಿಪಡಿಸಲಾಗಿತ್ತು. ಆದರೆ, ಫೆಬ್ರವರಿ 28 ರಂದು ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿಯೊಂದಿಗೆ ಪ್ರಾರಂಭವಾದ ಇರಾನ್-ಯುಎಸ್ ಯುದ್ಧದಿಂದಾಗಿ ಮುಂದೂಡಲಾಯಿತು.