ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ವಿದ್ಯಾರ್ಥಿಗಳ ಅಮೋಘ ಸಾಧನೆ; ಫಿಸಿಕ್ಸ್ ಒಲಿಂಪಿಯಾಡ್‌ನಲ್ಲಿ ಐವರಿಗೆ ಗೋಲ್ಡ್ ಮೆಡಲ್
56ನೇ ಅಂತಾರಾಷ್ಟ್ರೀಯ ಫಿಸಿಕ್ಸ್ ಒಲಿಂಪಿಯಾಡ್ (IPhO 2026) ಸ್ಪರ್ಧೆಯಲ್ಲಿ ಭಾರತದ ಐವರು ವಿದ್ಯಾರ್ಥಿಗಳು ಚಿನ್ನದ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಕೊಲಂಬಿಯಾದಲ್ಲಿ ನಡೆದ ಈ ಸ್ಪರ್ಧೆಯಲ್ಲಿ 80ಕ್ಕೂ ಹೆಚ್ಚು ದೇಶಗಳ 380ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಾಧನೆಯೊಂದಿಗೆ ಭಾರತ ಜಂಟಿಯಾಗಿ ವಿಶ್ವ ನಂ.1 ಸ್ಥಾನ ಪಡೆದಿದೆ. HBCSE ತರಬೇತಿ ನೀಡಿದ ಭಾರತೀಯ ತಂಡದ ಸಾಧನೆಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
ಫಿಸಿಕ್ಸ್ ಒಲಿಂಪಿಯಾಡ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ತಂಡದ ವಿದ್ಯಾರ್ಥಿಗಳು -
ನವದೆಹಲಿ, ಜು. 13: ಜಾಗತಿಕ ಶಿಕ್ಷಣ ಕ್ಷೇತ್ರದಲ್ಲಿ ಭಾರತ ಮತ್ತೊಮ್ಮೆ ತನ್ನ ಪ್ರತಿಭೆಯನ್ನು ಸಾಬೀತುಪಡಿಸಿದೆ. 56ನೇ ಅಂತಾರಾಷ್ಟ್ರೀಯ ಫಿಸಿಕ್ಸ್ ಒಲಿಂಪಿಯಾಡ್ (International Physics Olympiad - IPhO 2026) ಸ್ಪರ್ಧೆಯಲ್ಲಿ ಭಾರತದ ತಂಡದ ಎಲ್ಲ ಐವರು ವಿದ್ಯಾರ್ಥಿಗಳು ಚಿನ್ನದ ಪದಕ (Gold Medal) ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಈ ಸಾಧನೆಯೊಂದಿಗೆ ಭಾರತ ಇತರ ದೇಶಗಳೊಂದಿಗೆ ಜಂಟಿಯಾಗಿ ವಿಶ್ವ ನಂ.1 ಸ್ಥಾನ ಪಡೆದುಕೊಂಡಿದೆ.
ಜುಲೈ 4ರಿಂದ 12ರವರೆಗೆ ದಕ್ಷಿಣ ಅಮೆರಿಕದ ಕೊಲಂಬಿಯಾದ ಬುಕಾರಮಂಗಾ ನಗರದಲ್ಲಿ ನಡೆದ ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ 80ಕ್ಕೂ ಹೆಚ್ಚು ದೇಶಗಳ 380ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಶ್ವದ ಅತ್ಯಂತ ಕಠಿಣ ಮತ್ತು ಪ್ರತಿಷ್ಠಿತ ಭೌತಶಾಸ್ತ್ರ ಸ್ಪರ್ಧೆಗಳಲ್ಲಿ ಒಂದಾದ ಈ ಒಲಿಂಪಿಯಾಡ್‌ನಲ್ಲಿ ಭಾರತದ ತಂಡದ ಎಲ್ಲ ಐವರು ವಿದ್ಯಾರ್ಥಿಗಳು ಚಿನ್ನದ ಪದಕ ಗೆದ್ದಿರುವುದು ದೇಶದ ಇತಿಹಾಸದಲ್ಲೇ ಅತ್ಯುತ್ತಮ ಸಾಧನೆಗಳಲ್ಲಿ ಒಂದು ಎನಿಸಿಕೊಂಡಿದೆ.
ಫಿಸಿಕ್ಸ್ ಒಲಿಂಪಿಯಾಡ್ ಇತಿಹಾಸ ನಿರ್ಮಿಸಿದ ವಿದ್ಯಾರ್ಥಿಗಳು:
India’s Golden Sweep at the 56th International Physics Olympiad 2026 held at Bucaramanga, Colombia
— PIB India (@PIB_India) July 12, 2026
💠All five Indian students win Gold Medals at the 56th International Physics Olympiad (IPhO) 2026
💠India secures the World No. 1 rank jointly with other countries, Outstanding… pic.twitter.com/9aDkqVM8tC
ಈ ಸಾಧನೆಯನ್ನು ಪ್ರೆಸ್ ಇನ್ಫರ್ಮೇಶನ್ ಬ್ಯೂರೋ ಅಧಿಕೃತವಾಗಿ ಪ್ರಕಟಿಸಿದೆ. "ಭಾರತದ ಎಲ್ಲ ಐವರು ವಿದ್ಯಾರ್ಥಿಗಳು ಚಿನ್ನದ ಪದಕ ಗೆದ್ದಿದ್ದು, ಜಾಗತಿಕ ಮಟ್ಟದಲ್ಲಿ ದೇಶದ ವಿಜ್ಞಾನ ಶಿಕ್ಷಣದ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ" ಎಂದು PIB ತಿಳಿಸಿದೆ.
ಭಾರತದ ತಂಡಕ್ಕೆ ಹೋಮಿ ಭಾಭಾ ವಿಜ್ಞಾನ ಶಿಕ್ಷಣ ಕೇಂದ್ರ (HBCSE) ತರಬೇತಿ ಮತ್ತು ಮಾರ್ಗದರ್ಶನ ನೀಡಿತ್ತು. ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯ ರಾಷ್ಟ್ರೀಯ ಕೇಂದ್ರವಾಗಿರುವ HBCSE, ಅಣುಶಕ್ತಿ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಷ್ಟ್ರೀಯ ವಿಜ್ಞಾನ ಒಲಿಂಪಿಯಾಡ್ ಕಾರ್ಯಕ್ರಮದ ಮೂಲಕ ದೇಶದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಸಿದ್ಧಗೊಳಿಸುತ್ತದೆ.
PIB ತನ್ನ ಅಧಿಕೃತ X ಖಾತೆಯಲ್ಲಿ, "56ನೇ ಅಂತಾರಾಷ್ಟ್ರೀಯ ಭೌತಶಾಸ್ತ್ರ ಒಲಿಂಪಿಯಾಡ್‌ನಲ್ಲಿ ಭಾರತದ ಚಿನ್ನದ ಸಾಧನೆ. ಭಾರತದ ಐವರು ವಿದ್ಯಾರ್ಥಿಗಳೂ ಚಿನ್ನದ ಪದಕ ಗೆದ್ದಿದ್ದು, 80ಕ್ಕೂ ಹೆಚ್ಚು ದೇಶಗಳ 380ಕ್ಕೂ ಹೆಚ್ಚು ಸ್ಪರ್ಧಿಗಳ ನಡುವೆ ಭಾರತ ಜಂಟಿಯಾಗಿ ವಿಶ್ವ ನಂ.1 ಸ್ಥಾನ ಪಡೆದಿದೆ" ಎಂದು ಅಭಿನಂದನೆ ಸಲ್ಲಿಸಿದೆ.
ಮುಂದಿನ ವರ್ಷದಿಂದ ಭಾರತದಲ್ಲಿ ಓಡಲಿದೆ ಬುಲೆಟ್ ರೈಲು: ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದೇನು?
ಈ ಘೋಷಣೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. ಅನೇಕರು ವಿದ್ಯಾರ್ಥಿಗಳ ಸಾಧನೆಯನ್ನು ಕೊಂಡಾಡಿದ್ದು, HBCSE ಹಾಗೂ ಶಿಕ್ಷಕರ ಶ್ರಮವನ್ನು ಪ್ರಶಂಸಿಸಿದ್ದಾರೆ. ಕೆಲವರು ಪ್ರತಿ ವಿದ್ಯಾರ್ಥಿಗೂ ವಿಶೇಷ ನಗದು ಬಹುಮಾನ ಘೋಷಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಶಿಕ್ಷಣ ತಜ್ಞರ ಅಭಿಪ್ರಾಯದಂತೆ, ಈ ಸಾಧನೆ ಭಾರತದ ವಿಜ್ಞಾನ ಶಿಕ್ಷಣ ವ್ಯವಸ್ಥೆಯ ಗುಣಮಟ್ಟಕ್ಕೆ ಸಾಕ್ಷಿಯಾಗಿದ್ದು, ದೇಶದ ಯುವಜನರಲ್ಲಿ ಭೌತಶಾಸ್ತ್ರ ಸೇರಿ ವಿಜ್ಞಾನ ಕ್ಷೇತ್ರಗಳ ಬಗ್ಗೆ ಆಸಕ್ತಿ ಹೆಚ್ಚಿಸಲು ಪ್ರೇರಣೆಯಾಗಲಿದೆ. ಜತೆಗೆ, ಭವಿಷ್ಯದಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ವಿಜ್ಞಾನ ಒಲಿಂಪಿಯಾಡ್‌ಗಳಲ್ಲಿ ಭಾಗವಹಿಸಲು ಇದು ಸ್ಪೂರ್ತಿಯಾಗಲಿದೆ.