ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಹಕಾರದಿಂದ ಜಲ ವಿವಾದ ಬಗೆಹರಿಸಿ: ಮೇಕೆದಾಟು ಯೋಜನೆ ವಿಚಾರದಲ್ಲಿ ಮೌನ ಮುರಿದ ಪ್ರಧಾನಿ ನರೇಂದ್ರ ಮೋದಿ

Mekedatu Issue: ಮೇಕೆದಾಟು ಯೋಜನೆ ತಡೆಯುವಂತೆ ತಮಿಳುನಾಡು ಮುಖ್ಯಮಂತ್ರಿ ವಿಜಯ್‌ ಪತ್ರ ಬರೆದಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ರಾಜ್ಯಗಳಿಗೆ ಅಂತಾರಾಜ್ಯ ಜಲ ವಿವಾದಗಳನ್ನು ಸಹಕಾರ ಮತ್ತು ತಂತ್ರಜ್ಞಾನ ಆಧಾರಿತ ಮೇಲ್ವಿಚಾರಣೆಯ ಮೂಲಕ ಬಗೆ ಹರಿಸಿಕೊಳ್ಳುವಂತೆ ಕರೆ ನೀಡಿದ್ದಾರೆ.

ಮೇಕೆದಾಟು ವಿವಾದದ ನಡುವೆ ಜಲ ಸಮಸ್ಯೆ ಪರಿಹಾರಕ್ಕೆ ಮೋದಿ ಸಲಹೆ

ನರೇಂದ್ರ ಮೋದಿ (ಸಂಗ್ರಹ ಚಿತ್ರ) -

Profile
Sushmitha Jain May 28, 2026 10:59 PM

ಹೊಸ ದೆಹಲಿ, ಮೇ 28: ಮೇಕೆದಾಟು ಯೋಜನೆಯ (Mekedatu Project) ಕುರಿತು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಧ್ವನಿ ಎತ್ತಿದ ಮರುದಿನವೇ ಪ್ರಧಾನಿ ನರೇಂದ್ರ ಮೋದಿ (Narendra Modi) ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅಂತಾರಾಜ್ಯ ಜಲ ವಿವಾದಗಳನ್ನು ಪರಸ್ಪರ ಸಹಕಾರ, ಸಕಾಲಿಕ ಅನುಮತಿ ಹಾಗೂ ತಂತ್ರಜ್ಞಾನ ಆಧಾರಿತ ಮೇಲ್ವಿಚಾರಣೆಯ ಮೂಲಕ ಬಗೆಹರಿಸಿಕೊಳ್ಳುವಂತೆ ತಮಿಳುನಾಡು ಮತ್ತು ಕರ್ನಾಟಕಕ್ಕೆ ಕರೆ ನೀಡಿದ್ದಾರೆ. ಕೇನ್-ಬೆಟ್ವಾ ನದಿ ಜೋಡಣೆ ಯೋಜನೆಯು ಇಂತಹ ಉಪಕ್ರಮಗಳಿಗೆ ಮಾದರಿಯಾಗಬೇಕು ಎಂದು ಅವರು ಆಶಿಸಿದ್ದಾರೆ.

ಬುಧವಾರ ನಡೆದ 51ನೇ 'ಪ್ರಗತಿ' ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಧಾನಿ ಮೋದಿ, 9 ರಾಜ್ಯಗಳಲ್ಲಿ ಹರಡಿಕೊಂಡಿರುವ ರೈಲ್ವೆ, ವಿದ್ಯುತ್ ಮತ್ತು ರಸ್ತೆ ವಲಯಗಳಿಗೆ ಸಂಬಂಧಿಸಿದ ಸುಮಾರು 30,000 ಕೋಟಿ ರುಪಾಯಿ ವೆಚ್ಚದ 7 ಪ್ರಮುಖ ಮೂಲಸೌಕರ್ಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಸಾರ್ವಜನಿಕ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬವಾದರೆ ವೆಚ್ಚ ಹೆಚ್ಚಾಗುವುದಲ್ಲದೆ, ನಾಗರಿಕರು ಸಕಾಲದಲ್ಲಿ ಅಗತ್ಯ ಸೇವೆಗಳು ಮತ್ತು ಮೂಲ ಸೌಕರ್ಯಗಳನ್ನು ಪಡೆಯುವುದರಿಂದ ವಂಚಿತರಾಗುತ್ತಾರೆ ಎಂದು ಇದೇ ವೇಳೆ ಅವರು ಕಳವಳ ವ್ಯಕ್ತಪಡಿಸಿದರು.

ಪ್ರಗತಿ ಸಭೆಯ ಪ್ರಮುಖ ನಿರ್ಧಾರಗಳು

ಜಲ ಭದ್ರತೆ ಮತ್ತು ನದಿ ಜೋಡಣೆ: ದೀರ್ಘಾವಧಿಯ ಜಲ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನದಿ ಜೋಡಣೆ, ಜಲ ಸಂರಕ್ಷಣೆ, ಅಂತರ್ಜಲ ಮರುಪೂರಣ ಮತ್ತು ದಕ್ಷ ನೀರಾವರಿಯನ್ನು ಸಂಯೋಜಿತ ರೀತಿಯಲ್ಲಿ ಕೈಗೊಳ್ಳಬಹುದಾದ ಅವಕಾಶಗಳನ್ನು ಗುರುತಿಸಲು ರಾಜ್ಯಗಳಿಗೆ ಉತ್ತೇಜನ ನೀಡಲಾಯಿತು.

ರೂಫ್‌ಟಾಪ್ ಸೋಲಾರ್ ಮಿಷನ್: ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಶುದ್ಧ ಇಂಧನವನ್ನು ಉತ್ತೇಜಿಸಲು ನಗರ ಪ್ರದೇಶಗಳು, ವಸತಿ ಸಮುಚ್ಚಯಗಳು ಹಾಗೂ ಸಾರ್ವಜನಿಕ ಸಂಸ್ಥೆಗಳಲ್ಲಿ ರೂಫ್‌ಟಾಪ್ ಸೋಲಾರ್ ಅಳವಡಿಕೆಯನ್ನು ಅಭಿಯಾನದ ಮಾದರಿಯಲ್ಲಿ ಕೈಗೊಳ್ಳಲು ಪ್ರಧಾನಿ ಸೂಚಿಸಿದರು.

ಅಧಿಕಾರಕ್ಕೆ ಬರುತ್ತಿದ್ದಂತೆ ಕರ್ನಾಟಕ ವಿರುದ್ಧ ಸಮರ ಸಾರಿದ ದಳಪತಿ ವಿಜಯ್‌; ಮೇಕೆದಾಟು ಯೋಜನೆ ಸ್ಥಗಿತಗೊಳಿಸುವಂತೆ ಪ್ರಧಾನಿ ಮೋದಿಗೆ ಪತ್ರ

ಕೇನ್-ಬೆಟ್ವಾ ಮಾದರಿ: ಅಂತಾರಾಜ್ಯ ಜಲ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಈ ಯೋಜನೆ ಮಾದರಿಯಾಗಬೇಕು ಎಂದರು.

ವಧವನ್ ಬಂದರು ಮತ್ತು ಸ್ವಚ್ಛ ಭಾರತ 2.0: ರಸ್ತೆ ಮತ್ತು ಬಂದರು ಸಂಪರ್ಕ ಯೋಜನೆಗಳನ್ನು ಪರಿಶೀಲಿಸುವಾಗ, ಮಹಾರಾಷ್ಟ್ರದ ವಧವನ್ ಬಂದರನ್ನು ಕೇವಲ ಒಂದು ಬಂದರನ್ನಾಗಿ ನೋಡದೆ, ಅದನ್ನು ಭವಿಷ್ಯದ ಲಾಜಿಸ್ಟಿಕ್ಸ್ ಪರಿಸರ ವ್ಯವಸ್ಥೆಯನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ಒತ್ತಿ ಹೇಳಲಾಯಿತು. ಇದು ಕರಾವಳಿ ಸಾಗಣೆ, ಒಳನಾಡು ಜಲಮಾರ್ಗಗಳು, ಹೈ-ಸ್ಪೀಡ್ ರೈಲು ಮತ್ತು ಹೆದ್ದಾರಿಗಳೊಂದಿಗೆ ಸಂಪರ್ಕ ಹೊಂದಿದ ರಾಷ್ಟ್ರೀಯ ಹೆಬ್ಬಾಗಿಲಾಗಲಿದೆ.

ಸ್ವಚ್ಛ ಭಾರತ ಮಿಷನ್-ಅರ್ಬನ್ 2.0: ಕೇವಲ ಮೂಲ ಸೌಕರ್ಯ ಸೃಷ್ಟಿಗೆ ಸೀಮಿತವಾಗದೆ, ನಿಯಮಿತ ಮೇಲ್ವಿಚಾರಣೆ ಮತ್ತು ನಾಗರಿಕರ ಭಾಗವಹಿಸುವಿಕೆ ಖಚಿತಪಡಿಸಿಕೊಳ್ಳಬೇಕು. ತ್ಯಾಜ್ಯ ಸಂಸ್ಕರಣಾ ಘಟಕಗಳು ಮತ್ತು ಗೋಬರ್ಧನ್ ಘಟಕಗಳ ಸ್ಥಾಪನೆಯನ್ನು ವೇಗಗೊಳಿಸಲು ಪ್ರಧಾನಿ ರಾಜ್ಯಗಳಿಗೆ ಸೂಚಿಸಿದರು.

ಅಲ್ಲದೆ, ಕಾಲುವೆಗಳ ಜಾಲವನ್ನು ಹೊಸ ರೀತಿಯಲ್ಲಿ ಬಳಸಿಕೊಳ್ಳಲು, ಕಾಲುವೆಗಳ ಮೇಲೆ ಸೋಲಾರ್ ಪ್ಯಾನಲ್‌ಗಳನ್ನು ಅಳವಡಿಸುವ ಮೂಲಕ ಜಮೀನಿನ ಸದ್ಬಳಕೆ ಮತ್ತು ನೀರಿನ ಆವಿಯಾಗುವಿಕೆಯನ್ನು ತಡೆಯಬಹುದು ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು.