ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ಸ್ಥಳ ಶುದ್ಧೀಕರಣ ವಿವಾದ: ರಾಷ್ಟ್ರಪತಿಗೆ ಮನವಿ ಸಲ್ಲಿಸಲಿರುವ ಕಾಂಗ್ರೆಸ್‌ನ 32 ಸಂಸದರು

‘Purification' Row: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆಯ ಬಳಿಕ ನಡೆದಿದೆ ಎನ್ನಲಾದ ‘ಶುದ್ಧೀಕರಣ’ ಘಟನೆಯ ಕುರಿತು ಕಾಂಗ್ರೆಸ್‌ನ 32 ಎಸ್‌ಸಿ/ಎಸ್‌ಟಿ ಸಂಸದರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ. ಘಟನೆ ಕುರಿತು ಸರ್ಕಾರದ ಮಧ್ಯ ಪ್ರವೇಶ ಹಾಗೂ ಕಾನೂನು ಕ್ರಮಕ್ಕೆ ಒತ್ತಾಯಿಸುವುದರ ಜತೆಗೆ, ಪ್ರತಿಭಟನೆ ನಡೆಸಲೂ ಕಾಂಗ್ರೆಸ್ ತೀರ್ಮಾನಿಸಿದೆ.

‘ಶುದ್ಧೀಕರಣ’ ಖಂಡಿಸಿ ರಾಷ್ಟ್ರಪತಿ ಮೊರೆ ಹೋದ ಕಾಂಗ್ರೆಸ್‌ನ ಸಂಸದರು

ಸಾಂದರ್ಭಿಕ ಚಿತ್ರ -

Profile
Sushmitha Jain Sep 8, 2026 8:54 PM

ನವದೆಹಲಿ, ಸೆ. 8: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಸಾರ್ವಜನಿಕ ಸಭೆಯ ಬಳಿಕ ನಡೆದಿದೆ ಎನ್ನಲಾದ ‘ಶುದ್ಧೀಕರಣ’ ಕಾರ್ಯಕ್ರಮ ಇದೀಗ ರಾಜಕೀಯ ವಿವಾದವಾಗಿ ಬದಲಾಗಿದೆ. ಈ ಘಟನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ನ SC/ST ಸಮುದಾಯಕ್ಕೆ ಸೇರಿದ 32 ಸಂಸದರು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಆಗಸ್ಟ್ 8ರಂದು ಖರ್ಗೆ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದರು. ಮೂರು ದಿನಗಳ ಬಳಿಕ ಆಗಸ್ಟ್ 11ರಂದು ಅದೇ ಸ್ಥಳದಲ್ಲಿ ಕೆಲವರು ‘ಶುದ್ಧೀಕರಣ ಯಜ್ಞ’ ನಡೆಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಕ್ರಮವನ್ನು ಕಾಂಗ್ರೆಸ್ ನಾಯಕರು ಅಸ್ಪೃಶ್ಯತೆ ಮತ್ತು ದಲಿತರ ಗೌರವಕ್ಕೆ ಧಕ್ಕೆ ಎಂದು ಟೀಕಿಸಿದ್ದಾರೆ.

ಈ ವಿಚಾರವಾಗಿ ದೆಹಲಿಯ ಇಂದಿರಾ ಭವನದಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ 32 SC/ST ಸಂಸದರು ಸಭೆ ನಡೆಸಿದರು. ಸಭೆಯಲ್ಲಿ ಘಟನೆಯ ಕುರಿತು ರಾಷ್ಟ್ರಪತಿಗೆ ಮನವಿ ಸಲ್ಲಿಸುವುದರ ಜತೆಗೆ, SC/ST ಸಮುದಾಯಗಳ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲು ಪ್ರತ್ಯೇಕ ಸಂಸದೀಯ ವೇದಿಕೆ ರಚಿಸುವ ನಿರ್ಧಾರವನ್ನೂ ಕೈಗೊಳ್ಳಲಾಗಿದೆ.

ತೆಲಂಗಾಣದ ನಾಗರ್‌ಕುರ್ನೂಲ್ ಸಂಸದ ಮಲ್ಲು ರವಿ ಮಾತನಾಡಿ, ʼʼಖರ್ಗೆ ಅವರ ಸಭೆಯ ನಂತರ ನಡೆದ ಘಟನೆ ಆಘಾತಕಾರಿʼʼ ಎಂದು ಹೇಳಿದರು. ʼʼರಾಷ್ಟ್ರಪತಿ ಅವರ ಮಧ್ಯ ಪ್ರವೇಶ ಕೋರಿ ಮನವಿ ಸಲ್ಲಿಸಲಾಗುವುದು ಮತ್ತು ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗುವುದುʼʼ ಎಂದರು.

ಇದಕ್ಕೂ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ಶುದ್ಧೀಕರಣ’ ಕಾರ್ಯಕ್ರಮ ನಡೆಸಿದವರ ವಿರುದ್ಧ SC/ST (ದೌರ್ಜನ್ಯ ತಡೆ) ಕಾಯ್ದೆಯಡಿ FIR ದಾಖಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದರು. ಆದರೆ ಬಳಿಕ ರಾಹುಲ್ ಗಾಂಧಿ ವಿರುದ್ಧವೂ ಹಲ್ದ್ವಾನಿಯಲ್ಲಿ FIR ದಾಖಲಾಗಿದ್ದು, ಈ ವಿಚಾರಕ್ಕೆ ರಾಜಕೀಯ ಸಂಘರ್ಷ ಮತ್ತಷ್ಟು ತೀವ್ರವಾಗಿದೆ.

ಉತ್ತರಾಖಂಡ ಕಾಂಗ್ರೆಸ್ ಕೂಡ ಈ ವಿಚಾರವಾಗಿ ಪ್ರತಿಭಟನೆ ನಡೆಸಿದ್ದು, ಘಟನೆಯನ್ನು ಸಂವಿಧಾನದ ಸಮಾನತೆ, ಘನತೆ ಮತ್ತು ಅಸ್ಪೃಶ್ಯತೆ ನಿರ್ಮೂಲನೆಯ ತತ್ವಗಳಿಗೆ ವಿರುದ್ಧ ಎಂದು ಆರೋಪಿಸಿದೆ. ಕೆಲವು ದಿನಗಳ ಹಿಂದೆ ಮಲ್ಲಿಕಾರ್ಜುನ ಖರ್ಗೆ ಈ ವಿಚಾರವಾಗಿ ತಮ್ಮದೇ ಪಕ್ಷದ ಹಿರಿಯ ನಾಯಕರು ಧ್ವನಿ ಎತ್ತುತ್ತಿಲ್ಲ ಎಂದು ಭೇಸರ ವ್ಯಕ್ತಪಡಿಸಿದ್ದರು.