ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲೂ ಬಿಜೆಪಿಗೆ ಮುನ್ನಡೆ; ಮಹಾಯುತಿಗೆ ಒಲಿದ ವಿಜಯಲಕ್ಷ್ಮೀ
Maharashtra Urban Local Bodies Election Results 2025: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ, ಈಗ ಸ್ಥಳೀಯ ನಗರ ಸಂಸ್ಥೆಗಳ ಚುನಾವಣೆಯಲ್ಲಿಯೂ ತನ್ನ ಪ್ರಾಬಲ್ಯವನ್ನು ಮೆರೆದಿದೆ. ಒಟ್ಟು 288 ಸ್ಥಳೀಯ ಸಂಸ್ಥೆಗಳ ಪೈಕಿ 214 ಕಡೆ ಮಹಾ ಯುತಿ ಸ್ಪಷ್ಟ ಮುನ್ನಡೆ ಸಾಧಿಸಿದೆ.
ಮಹಾರಾಷ್ಟ್ರದಲ್ಲಿ ಜಯ ಗಳಿಸಿದ ಬಿಜೆಪಿ -
ಮುಂಬೈ, ಡಿ. 21: ಮಹಾರಾಷ್ಟ್ರದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ (Maharashtra Urban Local Bodies Elections) ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ (Mahayuti) ಭರ್ಜರಿ ಜಯಭೇರಿ ಸಾಧಿಸಿದ್ದು, ಬಹುತೇಕ ನಗರ ಸಂಸ್ಥೆಗಳಲ್ಲಿ ಸ್ಪಷ್ಟ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಒಟ್ಟು 246 ನಗರ ಪಾಲಿಕೆಗಳು ಹಾಗೂ 42 ನಗರ ಪಂಚಾಯಿಯತ್‌ಗಳಿಗೆ ನಡೆದ ಚುನಾವಣೆಯಲ್ಲಿ ಮಹಾಯುತಿ 214 ಸ್ಥಳೀಯ ಸಂಸ್ಥೆಗಳಲ್ಲಿ ಮುನ್ನಡೆ ಸಾಧಿಸಿದರೆ, ವಿಪಕ್ಷಗಳ ಮಹಾ ವಿಕಾಸ್ ಆಘಾಡಿಗೆ ಕೇವಲ 52 ಸಂಸ್ಥೆಗಳಲ್ಲಷ್ಟೇ ಮುನ್ನಡೆ ಸಿಕ್ಕಿದೆ.
ಮಹಾರಾಷ್ಟ್ರ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ಡಿಸೆಂಬರ್ 2 ಮತ್ತು 20ರಂದು ಎರಡು ಹಂತಗಳಲ್ಲಿ ಮತದಾನ ನಡೆದಿದ್ದು, ಡಿಸೆಂಬರ್ 21 ಮತ ಎಣಿಕೆ ಪ್ರಕ್ರಿಯೆ ನಡೆಯಿತು. ಆರಂಭಿಕ ಹಂತದಿಂದಲೇ ಬಿಜೆಪಿ ನೇತೃತ್ವದ ಮೈತ್ರಿಕೂಟ ಮುಂಚೂಣಿಯಲ್ಲಿದ್ದು, ಒಟ್ಟು 6,859 ಸ್ಥಾನಗಳ ಪೈಕಿ ಬಿಜೆಪಿಯೊಂದೇ 3,120 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಅದರ ಮೈತ್ರಿ ಪಕ್ಷಗಳಾದ ಶಿವಸೇನೆ ಸುಮಾರು 600 ಹಾಗೂ ಎನ್‌ಸಿಪಿ 200ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲವು ಸಾಧಿಸಿದ್ದು, ಇದರೊಂದಿಗೆ ಅರ್ಧಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಮಹಾಯುತಿ ತನ್ನ ಪ್ರಾಬಲ್ಯವನ್ನು ತೋರಿಸಿದೆ.
ಇದಕ್ಕೆ ವಿರುದ್ಧವಾಗಿ ವಿಪಕ್ಷಗಳಾದ ಶಿವಸೇನೆ (ಉದ್ಭವ್ ಠಾಕ್ರೆ ಬಣ), ಕಾಂಗ್ರೆಸ್ ಹಾಗೂ ಎನ್‌ಸಿಪಿ (ಶರದ್ ಪವಾರ್ ಬಣ) ಕ್ರಮವಾಗಿ 145, 105 ಮತ್ತು 122 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ನಿರೀಕ್ಷಿತ ಮಟ್ಟದ ಸಾಧನೆ ಮಾಡಲು ಮಹಾ ವಿಕಾಸ್ ಆಘಾಡಿಗೆ ಸಾಧ್ಯವಾಗಿಲ್ಲ ಎಂಬುದು ಸ್ಪಷ್ಟವಾಗಿದೆ.
58 ಲಕ್ಷಕ್ಕೂ ಅಧಿಕ ಹೆಸರು ಡಿಲೀಟ್ ಬೆನ್ನಲ್ಲೇ ಕರಡು ಮತದಾರರ ಪಟ್ಟಿ ಪ್ರಕಟ
2024ರ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದ ಮಹಾಯುತಿ ಸರ್ಕಾರವು, ಈ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ತನ್ನ ಜನಬೆಂಬಲ ಮುಂದುವರಿದಿದೆ ಎಂಬುದನ್ನು ಈ ಫಲಿತಾಂಶ ಸೂಚಿಸುತ್ತದೆ ಎಂದು ಬಿಜೆಪಿ ನಾಯಕರು ಅಬಿಪ್ರಾಯಪಟ್ಟಿದ್ದಾರೆ. ಕೃಷಿ ಕ್ಷೇತ್ರದ ಬಿಕ್ಕಟ್ಟು, ಮಹಿಳೆಯರು ಮತ್ತು ರೈತರ ಕಲ್ಯಾಣ ಯೋಜನೆಗಳಿಗೆ ಅನುದಾನ ಬಿಡುಗಡೆ ವಿಳಂಬವಾಗುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸರ್ಕಾರದ ಜನಪ್ರಿಯತೆ ಕುಸಿಯಬಹುದು ಎಂಬ ಅಂದಾಜುಗಳಿದ್ದವು. ಇದೇ ವಿಚಾರಗಳನ್ನು ಮುಂದಿಟ್ಟು ವಿಪಕ್ಷಗಳು ಚುನಾವಣಾ ಪ್ರಚಾರ ನಡೆಸಿದ್ದವು. ಆದರೆ ಮತದಾರರು ಈ ಬಾರಿ ಕೂಡ ಮಹಾಯುತಿ ಮೈತ್ರಿಕೂಟದ ಮೇಲೆ ವಿಶ್ವಾಸ ವ್ಯಕ್ತಪಡಿಸಿರುವಂತೆ ಫಲಿತಾಂಶದ ಟ್ರೆಂಡ್ ಸೂಚಿಸುತ್ತಿದ್ದು, ಮಹಾರಾಷ್ಟ್ರ ರಾಜಕೀಯದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟದ ಪ್ರಾಬಲ್ಯ ಮತ್ತೊಮ್ಮೆ ದೃಢಪಟ್ಟಿದೆ.
ಇನ್ನು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಈ ಚುನಾವಣೆಯಲ್ಲಿ ಉತ್ತಮ ಸ್ಪರ್ಧೆ ನೀಡಿದ್ದು, ಹಲವು ಸ್ಥಾನಗಳನ್ನು ಉಳಿಸಿಕೊಂಡಿದೆ. ಮಹಾ ವಿಕಾಸ್ ಅಘಾಡಿಯ ಒಟ್ಟಾರೆ ಮತಗಳಿಗೆ ಹೋಲಿಸಿದರೆ ಎನ್‌ಸಿಪಿಯ ಸಾಧನೆ ಗಮನಾರ್ಹವಾಗಿದೆ. ಚಂದ್ರಾಪುರ ಮತ್ತು ಸಾಂಗ್ಲಿ ಜಿಲ್ಲೆಗಳಲ್ಲಿ ಎನ್‌ಸಿಪಿ ಭರ್ಜರಿ ಗೆಲುವು ಸಿಕ್ಕಿದೆ. ಇತ್ತ ಬ್ರಹ್ಮಪುರಿ ಮುನ್ಸಿಪಲ್ ಕೌನ್ಸಿಲ್‌ನಲ್ಲಿ ಕಾಂಗ್ರೆಸ್ 23 ಸ್ಥಾನಗಳ ಪೈಕಿ 21 ಸ್ಥಾನಗಳನ್ನು ಗೆದ್ದು ಮೇಲುಗೈ ಸಾಧಿಸಿದೆ.