ಪಾಕಿಸ್ತಾನದ ಐಎಸ್‌ಐ ಉಗ್ರ ಜಾಲಕ್ಕೆ ಭಾರಿ ಆಘಾತ: 14 ರಾಜ್ಯಗಳಲ್ಲಿ ಭರ್ಜರಿ ಬೇಟೆ, 253 ಮಂದಿ ವಶಕ್ಕೆ
ISI-Linked Network: ಪಾಕಿಸ್ತಾನ ಮೂಲದ ಐಎಸ್‌ಐ ಬೆಂಬಲಿತ ಶಹಜಾದ್ ಭಟ್ಟಿ ನೆಟ್‌ವರ್ಕ್ ವಿರುದ್ಧ 14 ರಾಜ್ಯಗಳಲ್ಲಿ ಜಂಟಿ ಕಾರ್ಯಾಚರಣೆ ನಡೆಸಲಾಗಿದ್ದು, 253 ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆಯಲ್ಲಿ ಗ್ರೆನೇಡ್‌ಗಳು, ಐಇಡಿಗಳು, ಪಿಸ್ತೂಲ್‌ಗಳು ಹಾಗೂ ಮದ್ದುಗುಂಡುಗಳು ಸೇರಿ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಾಂದರ್ಭಿಕ ಚಿತ್ರ -
ದೆಹಲಿ, ಆ. 17: ಪಾಕಿಸ್ತಾನ ಮೂಲದ ಹಾಗೂ ಐಎಸ್‌ಐ ಬೆಂಬಲಿತ ಶಹಜಾದ್ ಭಟ್ಟಿ ನೆಟ್‌ವರ್ಕ್ (Shahzad Bhatti Network) ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳು (Central investigative agencies) ಮತ್ತು ವಿವಿಧ ರಾಜ್ಯಗಳ ಪೊಲೀಸ್ ಪಡೆಗಳು ದೇಶಾದ್ಯಂತ ಬೃಹತ್ ಜಂಟಿ ಕಾರ್ಯಾಚರಣೆ ನಡೆಸಿವೆ. ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ (Counter-terrorism operation)ಯ ಭಾಗವಾಗಿ ದೇಶದ ಹದಿನಾಲ್ಕು ರಾಜ್ಯಗಳಲ್ಲಿ ಏಕಕಾಲದಲ್ಲಿ ಮಿಂಚಿನ ದಾಳಿ ನಡೆಸಿ ಒಟ್ಟು 253 ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ.
ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನವಾದ ಆಗಸ್ಟ್ 14ರಂದು ರಿಯಲ್-ಟೈಮ್ ಇಂಟೆಲಿಜೆನ್ಸ್ ಮಾಹಿತಿ ಆಧರಿಸಿ ಈ ಜಂಟಿ ಶೋಧ ಕಾರ್ಯ ಕೈಗೊಳ್ಳಲಾಗಿದ್ದು, 200ಕ್ಕೂ ಹೆಚ್ಚು ಸಕ್ರಿಯ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಭಾರತದಲ್ಲಿ ಗ್ರೆನೇಡ್ ದಾಳಿಗಳು, ಐಇಡಿ ಸ್ಫೋಟಗಳು, ಪೆಟ್ರೋಲ್ ಬಾಂಬ್ ಎಸೆತ ಹಾಗೂ ಪ್ರಮುಖ ವ್ಯಕ್ತಿಗಳ ಉದ್ದೇಶಿತ ಹತ್ಯೆಗಳಲ್ಲಿ ಈ ಜಾಲ ಸಕ್ರಿಯವಾಗಿ ತೊಡಗಿಸಿಕೊಂಡಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಶೋಧ ಕಾರ್ಯಾಚರಣೆಯ ವೇಳೆ ಭದ್ರತಾ ಪಡೆಗಳು ಪಾಕಿಸ್ತಾನ್ ಆರ್ಡ್ನೆನ್ಸ್ ಫ್ಯಾಕ್ಟರಿ (ಪಿಒಎಫ್) ಗುರುತಿನ ಗ್ರೆನೇಡ್‌ಗಳು, ಸುಧಾರಿತ ಸ್ಫೋಟಕ ಸಾಧನಗಳು (ಐಇಡಿ), ಪಿಸ್ತೂಲ್‌ಗಳು, ಜೀವಂತ ಮದ್ದುಗುಂಡುಗಳು ಹಾಗೂ ಸೂಕ್ಷ್ಮ ಪ್ರದೇಶಗಳ ಬೇಹುಗಾರಿಕೆಗೆ ಬಳಸುತ್ತಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ವಶಪಡಿಸಿಕೊಂಡಿವೆ. ದೇಶದ ಭದ್ರತೆಗೆ ಸವಾಲಾಗಿದ್ದ ಗಡಿಯಾಚೆಗಿನ ಭಯೋತ್ಪಾದಕ ಜಾಲವನ್ನು ಬೇರುಸಹಿತ ಕಿತ್ತೊಗೆಯಲು ಮತ್ತು ಅವರ ಅಂತರರಾಷ್ಟ್ರೀಯ ಸಂಪರ್ಕಗಳನ್ನು ಸಂಪೂರ್ಣವಾಗಿ ಬಯಲಿಗೆಳೆಯಲು ಈ ಮಹತ್ವದ ಸಾಕ್ಷ್ಯಗಳು ತನಿಖಾಧಿಕಾರಿಗಳಿಗೆ ನೆರವಾಗಲಿವೆ.
ಉಕ್ರೇನ್‌ನಲ್ಲಿರುವ ಭಾರತೀಯ ಉದ್ಯಮಿ ಲಕ್ಷ್ಮೀ ಮಿತ್ತಲ್‌ನ ಉಕ್ಕಿನ ಘಟಕದ ಮೇಲೆ ರಷ್ಯಾ ದಾಳಿ: ಇಬ್ಬರು ಸಾವು
ಈ ಕಾರ್ಯಾಚರಣೆಯಲ್ಲಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 62 ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ಹರಿಯಾಣದಲ್ಲಿ 52, ದೆಹಲಿಯಲ್ಲಿ 51, ಪಂಜಾಬ್‌ನಲ್ಲಿ 44, ರಾಜಸ್ಥಾನದಲ್ಲಿ 15, ಮಹಾರಾಷ್ಟ್ರದಲ್ಲಿ 8, ಉತ್ತರಾಖಂಡದಲ್ಲಿ 5 ಜನರನ್ನು ವಶಕ್ಕೆ ಪಡೆಯಲಾಗಿದೆ. ಕರ್ನಾಟಕ, ಗುಜರಾತ್, ಬಿಹಾರದಲ್ಲಿ ತಲಾ ಮೂವರು ಹಾಗೂ ತೆಲಂಗಾಣ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ ಮತ್ತು ಕೇರಳಂನಲ್ಲಿ ತಲಾ ಇಬ್ಬರನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆ.
ಪೊಲೀಸ್ ಠಾಣೆಗಳು, ರಕ್ಷಣಾ ನೆಲೆಗಳು ಹಾಗೂ ಪ್ರಮುಖ ಧಾರ್ಮಿಕ ಸ್ಥಳಗಳ ಮಾಹಿತಿ ಕಲೆಹಾಕಲು, ಕಣ್ಗಾವಲು ಉಪಕರಣಗಳನ್ನು ಅಳವಡಿಸಲು ಮತ್ತು ವಿಧ್ವಂಸಕ ಕೃತ್ಯಗಳಿಗೆ ನೆರವಾಗಲು ಈ ಸಿಂಡಿಕೇಟ್ ಸ್ಥಳೀಯರಿಗೆ ದೊಡ್ಡ ಮೊತ್ತದ ಹಣ ನೀಡುತ್ತಿತ್ತು. ಈಗಾಗಲೇ UAPA, BNS, ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆಯಡಿ 80ಕ್ಕೂ ಹೆಚ್ಚು ಎಫ್‌ಐಆರ್‌ಗಳು ದಾಖಲಾಗಿದ್ದು, ದೆಹಲಿ ಮತ್ತು ಕರ್ನಾಟಕದಲ್ಲೂ ಹೊಸ ಪ್ರಕರಣಗಳನ್ನು ದಾಖಲಿಸಿ ಈ ಜಾಲದ ಹಣಕಾಸು ಮೂಲಗಳ ಕುರಿತು ಸಮಗ್ರ ತನಿಖೆ ಮುಂದುವರಿಸಲಾಗಿದೆ. ಭಯೋತ್ಪಾದನೆ ವಿರುದ್ಧ ಸರ್ಕಾರದ 'ಶೂನ್ಯ ಸಹಿಷ್ಣುತೆ' ನೀತಿಗೆ ಈ ಕಾರ್ಯಾಚರಣೆ ಸಾಕ್ಷಿ.