ಪ್ರಧಾನಿ ನರೇಂದ್ರ ಮೋದಿಯನ್ನು ಭಯೋತ್ಪಾದಕ ಎಂದು ಕರೆದ ಮಲ್ಲಿಕಾರ್ಜುನ ಖರ್ಗೆ; ಬಿಜೆಪಿ ಜತೆ ಮೈತ್ರಿ ಮಾಡಿಕೊಂಡ ಎಐಎಡಿಎಂಕೆ ವಿರುದ್ಧ ವಾಗ್ದಾಳಿ
Kharge statement on PM Modi: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಯೋತ್ಪಾದಕ ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಕರೆದಿದ್ದಾರೆ. ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷವು ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದಕ್ಕಾಗಿ ಟೀಕಿಸುವ ಭರದಲ್ಲಿ ಮೋದಿಯನ್ನು ಭಯೋತ್ಪಾದಕ ಎಂದು ಕರೆದು ಎಡವಟ್ಟು ಮಾಡಿಕೊಂಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ (ಸಂಗ್ರಹ ಚಿತ್ರ) -
ಚೆನ್ನೈ, ಏ. 21: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಭಯೋತ್ಪಾದಕ ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕರೆದಿದ್ದಾರೆ. ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಪಕ್ಷವು ಬಿಜೆಪಿ ಜತೆ ಮೈತ್ರಿ (AIADMK-BJP alliance) ಮಾಡಿಕೊಂಡಿದ್ದನ್ನು ಟೀಕಿಸುವ ಭರದಲ್ಲಿ ಖರ್ಗೆ ವಿವಾದಕ್ಕೆ ಸಿಲುಕಿದ್ದಾರೆ. ಚೆನ್ನೈನಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಪ್ರಧಾನಿ ಜತೆ ಕೈಜೋಡಿಸುವ ಎಐಎಡಿಎಂಕೆ ನಿರ್ಧಾರವನ್ನು ಪ್ರಶ್ನಿಸಿದರು.
ಅಣ್ಣಾದೊರೈ ಅವರ ಫೋಟೊ ಹಾಕಿಕೊಂಡಿರುವ ಈ ಎಐಎಡಿಎಂಕೆಯವರು ಮೋದಿ ಜತೆ ಹೇಗೆ ಸೇರುತ್ತಾರೆ? ಅವರೊಬ್ಬ ಭಯೋತ್ಪಾದಕ. ಮೋದಿ ಪಕ್ಷ ಸಮಾನತೆ ಮತ್ತು ನ್ಯಾಯದಲ್ಲಿ ನಂಬಿಕೆ ಇಡುವುದಿಲ್ಲ. ಈ ಜನರು ಅವರೊಂದಿಗೆ ಸೇರುತ್ತಿದ್ದಾರೆ ಅಂದರೆ ಅವರು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದರ್ಥ ಎಂದು ಖರ್ಗೆ ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಹೇಳಿಕೆ:
Chennai, Tamil Nadu: Congress President Mallikarjun Kharge says, "How can they (AIADMK) join with Modi? He is a terrorist. And he who won't believe in equality. His party won't believe in equality and justice. And these people are joining with them, it means that they are… pic.twitter.com/qymq7H54Z7
— IANS (@ians_india) April 21, 2026
“ಬಿಜೆಪಿ ಮುಂದೆ ತಲೆಬಾಗದ ಮತ್ತು ಎದ್ದು ನಿಂತು ಹೋರಾಡುವ ನಾಯಕರು ನಿಮಗೆ ಬೇಕು. ಅದು ಡಿಎಂಕೆ ನಾಯಕ ಸ್ಟಾಲಿನ್ ಅವರಿಂದ ಮಾತ್ರ ಸಾಧ್ಯ. ಇಂದು ಎಐಎಡಿಎಂಕೆ ನಾಯಕರು ಗುರುತನ್ನು ಕಳೆದುಕೊಂಡಿದ್ದಾರೆ. ಅವರು ಬಿಜೆಪಿಯ ಗುಲಾಮರಾಗಿ ಬದಲಾಗಿದ್ದಾರೆ. ಅವರಿಂದ ತಮಿಳುನಾಡಿನ ಹಿತಾಸಕ್ತಿಯನ್ನು ರಕ್ಷಿಸಲು ಸಾಧ್ಯವಿಲ್ಲ. ಏಕೆಂದರೆ ಅವರು ಪ್ರಧಾನಿ ಮೋದಿ ಅವರ ಗುಲಾಮರಾಗಿ ಬದಲಾಗಿದ್ದಾರೆ” ಎಂದು ಅವರು ಹೇಳಿದರು.
ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲು; ದೇಶದ ಕ್ಷಮೆ ಕೋರಿದ ಪ್ರಧಾನಿ ನರೇಂದ್ರ ಮೋದಿ
ಸ್ಪಷ್ಟನೆ ನೀಡಿದ ಖರ್ಗೆ
ನಂತರ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಪ್ರಧಾನಿಯನ್ನು ಭಯೋತ್ಪಾದಕ ಎಂದು ಕರೆಯುವ ಉದ್ದೇಶ ನನಗಿಲ್ಲ. ಅವರು ಜನರು ಮತ್ತು ರಾಜಕೀಯ ಪಕ್ಷಗಳನ್ನು ಯಾವಾಗಲೂ ಭಯಭೀತಗೊಳಿಸುತ್ತಾರೆ ಎಂದು ಹೇಳಿದರು.
“ಪ್ರಧಾನಿ ಮೋದಿಯು ಜನರನ್ನು ಮತ್ತು ರಾಜಕೀಯ ಪಕ್ಷಗಳನ್ನು ಭಯಭೀತಗೊಳಿಸುತ್ತಿದ್ದಾರೆ. ನಾನು ಅವರನ್ನು ಭಯೋತ್ಪಾದಕ ಎಂದು ಎಂದಿಗೂ ಹೇಳಿಲ್ಲ. ಈ ಬಗ್ಗೆ ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಮೋದಿ ಯಾವಾಗಲೂ ಬೆದರಿಕೆ ಹಾಕುತ್ತಾರೆ. ಇಡಿ, ಐಟಿ ಮತ್ತು ಸಿಬಿಐನಂತಹ ಸಂಸ್ಥೆಗಳು ಅವರ ಕೈಯಲ್ಲಿವೆ. ಅವರು ಗಡಿ ನಿರ್ಣಯವನ್ನೂ ತಮ್ಮ ಕೈಗೆ ತೆಗೆದುಕೊಳ್ಳಲು ಬಯಸುತ್ತಾರೆ” ಎಂದು ಅವರು ಆರೋಪಿಸಿದರು.
ಪ್ರಧಾನಮಂತ್ರಿ ಮೋದಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಖರ್ಗೆ ಆರೋಪಿಸಿದ್ದಾರೆ. ಸಂವಿಧಾನ (131ನೇ ತಿದ್ದುಪಡಿ) ಮಸೂದೆ 2026 ಸಂಸತ್ತಿನಲ್ಲಿ ಅಂಗೀಕಾರವಾಗದ ನಂತರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವ ಮೂಲಕ ಮೋದಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಜತೆಗೆ ಚುನಾವಣಾ ಆಯೋಗವು ಬಿಜೆಪಿಯ ವಿಸ್ತೃತ ಅಂಗದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಕೂಡ ಅವರು ಆರೋಪಿಸಿದ್ದಾರೆ. ಮೊದಲಿಗೆ ಮತದಾರರ ಪಟ್ಟಿಯಲ್ಲಿ ಅಕ್ರಮಗಳ ಆರೋಪಗಳು, ನಂತರ ಎಸ್ಐಆರ್ ಸಮಸ್ಯೆ, ಈಗ ಡಿಲಿಮಿಟೇಶನ್ ನಿಯಂತ್ರಣಕ್ಕೆ ಪ್ರಯತ್ನಗಳು ನಡೆದಿವೆ. ಇದಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಇನ್ನು ಖರ್ಗೆ ಅವರ ಹೇಳಿಕೆಯನ್ನು ಬಿಜೆಪಿಯ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನಾವಾಲಾ ಖಂಡಿಸಿದ್ದಾರೆ. ಪೂನಾವಾಲಾ ತಮ್ಮ ಪೋಸ್ಟ್‌ನಲ್ಲಿ, ಕಾಂಗ್ರೆಸ್ ಈವರೆಗೆ ಪ್ರಧಾನಮಂತ್ರಿಗೆ 175 ಬಾರಿ ಅವಮಾನಕಾರಿ ಪದಗಳನ್ನು ಬಳಸಿದೆ ಎಂದು ಹೇಳಿದ್ದಾರೆ.