ದೆಹಲಿ ಗ್ಯಾಂಗ್ ರೇಪ್ ಬಳಿಕ ಸ್ಲೀಪರ್ ಬಸ್‌ಗಳಲ್ಲಿ ಕರ್ಟನ್, ಟಿಂಟೆಡ್ ಗ್ಲಾಸ್ ಬಳಕೆ ನಿಷೇಧ; ಮಹಿಳೆಯರ ಸುರಕ್ಷತೆಗಾಗಿ ಸರ್ಕಾರದಿಂದ ಮಹತ್ವದ ಆದೇಶ
ನೋಯ್ಡಾದಲ್ಲಿ ಇತ್ತೀಚೆಗೆ ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ 16 ವರ್ಷದ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಬೆನ್ನಲೇ ದೆಹಲಿ ಸರ್ಕಾರ ಹಾಗೂ ಸಾರಿಗೆ ಇಲಾಖೆ, ಸಾರ್ವಜನಿಕ ಬಸ್‌ಗಳಲ್ಲಿ ಪ್ರಯಾಣಿಕರ ಹಾಗೂ ಮಹಿಳೆಯರ ಭದ್ರತೆಯನ್ನು ಹೆಚ್ಚಿಸಲು ಕಠಿಣ ಕ್ರಮಗಳನ್ನು ಜಾರಿ ಮಾಡಲು ಕ್ರಮ ಕೈಗೊಂಡಿದೆ.
ಸಂಗ್ರಹ ಚಿತ್ರ -
ನವದೆಹಲಿ: ಗ್ರೇಟರ್ ನೋಯ್ಡಾದಿಂದ ದೆಹಲಿಗೆ ಸಂಚರಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವನ್ನು (Physical Assault) ಎಸಗಲಾಗಿತ್ತು. ಈ ಪ್ರಕರಣವು ದೇಶಾದ್ಯಂತ ಮತ್ತೆ ನಿರ್ಭಯ ಪ್ರಕರಣದ ಭೀಕರ ನೆನಪುಗಳನ್ನು ತಂದಿಟ್ಟಿದೆ. ಈ ಘಟನೆಯ ಬೆನ್ನಲೇ ಎಚ್ಚೆತ್ತುಕೊಂಡಿರುವ ದೆಹಲಿ ಸರ್ಕಾರ ಹಾಗೂ ಸಾರಿಗೆ ಇಲಾಖೆ, ಸಾರ್ವಜನಿಕ ಮತ್ತು ಖಾಸಗಿ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಕರ ವಿಶೇಷವಾಗಿ ಮಹಿಳೆಯರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲು ನಿರ್ಧರಿಸಿದೆ. ಈ ಕುರಿತು ಮಾತನಾಡಿದ ದೆಹಲಿ ಸಾರಿಗೆ ಸಚಿವ ಪಂಕಜ್ ಸಿಂಗ್ ‘ಪ್ರಯಾಣಿಕರ ಭದ್ರತೆಯ ವಿಷಯದಲ್ಲಿ ಯಾವುದೇ ರಾಜಿ ಇಲ್ಲ’ ಎಂದು ಸ್ಪಷ್ಟಪಡಿಸಿದ್ದು, ಹೊಸ ಸುರಕ್ಷತಾ ನಿಯಮಗಳನ್ನು ತಕ್ಷಣದಿಂದಲೇ ಜಾರಿಗೆ ತರಲು ಆದೇಶಿಸಿದ್ದಾರೆ.ಪ್ರಯಾಣಿಕರ ಸುರಕ್ಷತೆಗೆ ಸರ್ಕಾರ ಕೆಲ ಕ್ರಮಗಳನ್ನು ಕೈಗೊಂಡಿದೆ.
ಬಸ್‌ಗಳಲ್ಲಿ ಕರ್ಟನ್ ಮತ್ತು ಟಿಂಟೆಡ್ ಗ್ಲಾಸ್‌ಗಳ ಮೇಲೆ ಪೂರ್ಣ ನಿಷೇಧ
ಬಸ್‌ಗಳ ಕಿಟಕಿಗಳಿಗೆ ಕರ್ಟನ್ ಹಾಕುವುದು ಮತ್ತು ಕಪ್ಪು ಗ್ಲಾಸ್ ಅಂಟಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಬಸ್‌ನ ಒಳಗಿನ ಚಟುವಟಿಕೆಗಳು ಹೊರಗಿನಿಂದ ಸ್ಪಷ್ಟವಾಗಿ ಕಾಣಿಸುವಂತಿರಬೇಕು. ಈಗಾಗಲೇ ಇಂತಹ ಪರದೆಗಳನ್ನು ಹೊಂದಿರುವ ಖಾಸಗಿ ಹಾಗೂ ಕ್ಲಸ್ಟರ್ ಬಸ್‌ಗಳು ತಕ್ಷಣ ಅವುಗಳನ್ನು ತೆರವುಗೊಳಿಸುವುಂತೆ ಆದೇಶಿಸಲಾಗಿದೆ.
ಬಸ್‌ಗಳಲ್ಲಿ ಪ್ಯಾನಿಕ್ ಬಟನ್ ಮತ್ತು ವಿಎಲ್‌ಟಿಡಿ ಕಡ್ಡಾಯ
ದೆಹಲಿಯಲ್ಲಿ ಸಂಚರಿಸುವ ಎಲ್ಲಾ ಬಸ್‌ಗಳಲ್ಲಿ ‘ವಹಿಕಲ್ ಲೋಕೆಶನ್ ಟ್ರಾಕಿಂಗ್ ಡಿವೈಸ್’ ಮತ್ತು ‘ಪ್ಯಾನಿಕ್ ಬಟನ್’ಗಳು ೨೪ ಗಂಟೆಯೂ ಸಕ್ರಿಯವಾಗಿ ಕೆಲಸ ಮಾಡುತ್ತಿರಬೇಕು. ತುರ್ತು ಸಂದರ್ಭದಲ್ಲಿ ಮಹಿಳೆಯರು ಪ್ಯಾನಿಕ್ ಬಟನ್ ಒತ್ತಿದ ಕೂಡಲೆ ತಕ್ಷಣ ಕಂಟ್ರೋಲ್ ರೂಂ ಹಾಗೂ ಹತ್ತಿರದ ಪೊಲೀಸ್ ರೊಂಗೆ ಅಲರ್ಟ್ ಸಂದೇಶ ತಲುಪಲಿದೆ ಎಂದು ದೆಹಲಿ ಸಾರಿಗೆ ಇಲಾಖೆ ಹೇಳಿದೆ.
ಸಿಬ್ಬಂದಿಯ ಪೊಲೀಸ್ ಪರಿಶೀಲನೆ ಕಡ್ಡಾಯ
ಬಸ್ ಚಾಲಕರು, ನಿರ್ವಾಹಕರು ಮತ್ತು ಅಟೆಂಡೆಂಟ್‌ಗಳು ಮತ್ತು ಹೆಲ್ಪ್ಡೆಸ್ಕ್ ಸಿಬ್ಬಂದಿಯನ್ನು ಕೆಲಸಕ್ಕೆ ತೆಗೆದುಕೊಳ್ಳುವ ಮೊದಲು ಅವರ ಹಿನ್ನಲೆಯನ್ನು ಪರೀಶಿಸಿವುದು ಕಡ್ಡಾಯ. ಯಾವುದೇ ಅಪರಾಧ ಹಿನ್ನಲೆ ಹೊಂದಿದ್ದರೆ ಮತ್ತು ಸೂಕ್ತ ಚಾಲನಾ ಪರವಾನಿಗೆ ಇಲ್ಲದಿದ್ದರೆ ಅಂತಹವರನ್ನು ವಾಹನದ ಚಾಲಕನಾಗಿ, ನಿರ್ವಾಹಕರಾಗಿ ಯಾವುದೇ ಕೆಲಸಕ್ಕೆ ನೇಮಕ ಮಾಡಿಕೊಳ್ಳುವಂತಿಲ್ಲ. ಬಸ್‌ನಲ್ಲಿ ಪ್ರಯಾಣಿಕರೊಂದಿಗೆ ಸಿಬ್ಬಂದಿ ಸೌಜನ್ಯದಿಂದ ವರ್ತಿಸಬೇಕು. ಮದ್ಯಪಾನ ಅಥವಾ ಯಾವುದೇ ರೀತಿಯ ಅಮಲು ಪದಾರ್ಥ ಸೇವಿಸಿ ಚಾಲನೆ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಬಸ್‌ನಲ್ಲಿ ಮಹಿಳೆಯರ ವಿರುದ್ಧ ಕಿರುಕುಳ, ಚೇಷ್ಟೆ ಅಥವಾ ಅಪರಾಧ ಘಟನೆಗಳು ಕಂಡುಬಂದರೆ, ಬಸ್ ಸಿಬ್ಬಂದಿಯು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿ ಬಸ್ ಅನ್ನು ಹತ್ತಿರದ ಪೊಲೀಸ್ ಠಾಣೆ ಅಥವಾ ಪಿಸಿಆರ್ ವ್ಯಾನ್ ಬಳಿಗೆ ಕೊಂಡೊಯ್ಯಬೇಕು.
ಅನಧಿಕೃತ ಸ್ಥಳಗಳಲ್ಲಿ ಬಸ್ ನಿಲ್ಲಿಸುವಂತಿಲ್ಲ
ಅಸುರಕ್ಷಿತ ಅಥವಾ ಅನಧಿಕೃತ ಸ್ಥಳಗಳಲ್ಲಿ, ಮಖ್ಯವಾಗಿ ಮಧ್ಯದಲ್ಲಿ ಅಥವಾ ಜಂಕ್ಷನ್‌ಗಳಲ್ಲಿ ಬಸ್ ನಿಲ್ಲಿಸುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ರಾತ್ರಿ ವೇಳೆ ಅಥವಾ ಬಸ್ ಕಾಯಾಚರಣೆ ಇಲ್ಲದ ಸಮಯದಲ್ಲಿ ಬಸ್‌ಗಳನ್ನು ಪಾರ್ಕ್ ಮಾಡಲು ಸುರಕ್ಷಿತ, ಸೂಕ್ತ ಬೆಳಕಿನ ವ್ಯವಸ್ಥೆ ಇರುವ ನಿಗದಿತ ಸ್ಥಳಗಳನ್ನು ಮಾತ್ರ ಬಳಸಬೇಕು.
ಶಾಲಾ ಬಸ್‌ಗಳಿಗೊ ಹೊಸ ನಿಯಮಗಳು ಜಾರಿ
ಈ ಆದೇಶದ ಪ್ರಕಾರ ಶಾಲಾ ಬಸ್‌ಗಳಿಗೂ ಹೊಸ ನಿಯಮಗಳನ್ನು ಜಾರಿ ಮಾಡಿದ್ದು, ಶಾಲಾ ಬಸ್‌ಗಳಲ್ಲಿ ಕಡ್ಡಾಯವಾಗಿ ಅಧಿಕೃತ ಅಟೆಂಡೆಂಟ್‌ಗಳು ಇರಬೇಕು ಹಾಗೂ ಬಸ್ ಚಲಿಸುತ್ತಿರುವಾಗ ಅದರ ಬಾಗಿಲುಗಳು ಸುರಕ್ಷಿತವಾಗಿ ಮುಚ್ಚಿರಬೇಕು, ಎಂದು ಸಾರಿಗೆ ಇಲಾಖೆ ಸೂಚಿಸಿದೆ.
ಏನಿದು ಘಟನೆ?
ಆಗಸ್ಟ್ 4ರಂದು ಉತ್ತರ ಪ್ರದೇಶದ ಮೈನ್‌ಪುರಿಯ 16 ವರ್ಷದ ಅಪ್ರಾಪ್ತ ಬಾಲಕಿಯು ಗ್ರೇಟರ್ ನೋಯ್ಡಾದ ಪರಿ ಚೌಕ್‌ನಲ್ಲಿ ಬಸ್‌ಗಾಗಿ ಕಾಯುತ್ತಿದ್ದಾಗ, ಸ್ಲೀಪರ್ ಬಸ್ ಒಂದರ ಚಾಲಕ ಮತ್ತು ಕಂಡಕ್ಟರ್ ಆಕೆಯನ್ನು ಬಸ್‌ಗೆ ಏರಿಸಿಕೊಂಡಿದ್ದರು. ಸುಮಾರು 47 ಕಿಲೋಮೀಟರ್‌ಗಳಿಗೂ ಹೆಚ್ಚು ದೂರ ಚಲಿಸುತ್ತಿದ್ದ ಬಸ್‌ನಲ್ಲೇ ಆಕೆಯ ಮೇಲೆ ಸಮೂಹ ಅತ್ಯಾಚಾರ ಎಸಗಿ, ಬಳಿಕ ದೆಹಲಿಯ ಕಾಶ್ಮೀರಿ ಗೇಟ್ ಬಳಿ ಆಕೆಯನ್ನು ಬಿಟ್ಟು ಪರಾರಿಯಾಗಿದ್ದರು. ಪೊಲೀಸರು ತನಿಖೆ ನಡೆಸಿ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದು, ಕೃತ್ಯ ನಡೆದ ಬಸ್‌ನಲ್ಲಿದ್ದ ಕರ್ಟನ್‌ಗಳು ಹಾಗೂ ನಿಯಮ ಉಲ್ಲಂಘನೆಗಳೇ ಇಂತಹ ಕ್ರೌರ್ಯಕ್ಕೆ ಆಸ್ಪದ ಮಾಡಿಕೊಟ್ಟಿದ್ದವು ಎಂಬುದು ತಿಳಿದುಬಂದಿತ್ತು. ಈ ಕಾರಣದಿಂದಾಗಿಯೇ ದೆಹಲಿ ಸರ್ಕಾರ ಬಸ್‌ಗಳ ಸುರಕ್ಷತಾ ಮಾನದಂಡಗಳನ್ನು ತಕ್ಷಣವೇ ಪರಿಷ್ಕರಿಸಿ ಈ ಹೊಸ ಆದೇಶ ಹೊರಡಿಸಿದೆ.