Narendra Modi: ಚೀನಾದಲ್ಲಿ ಪ್ರಧಾನಿ ಮೋದಿಯ ಹತ್ಯೆಗೆ ನಡೆದಿತ್ತಾ ಭಾರೀ ಸಂಚು? ಅಮೆರಿಕದ ಕುಕೃತ್ಯ ಬಟಾಬಯಲು
ಪ್ರಧಾನಿ ಮೋದಿ ಹತ್ಯೆ ಸಂಚು ನಡೆದಿತ್ತಾ? ಹೀಗೊಂದು ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಕಳೆದ ತಿಂಗಳು ಚೀನಾದಲ್ಲಿ (China) ನಡೆದ ಶಾಂಫೈ ಸಹಕಾರ ಸಂಘದ ಸಭೆಯಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಹತ್ಯೆಗೆ ಸಂಚು ನಡೆಸಲಾಗಿತ್ತು ಎಂಬ ಸ್ಪೋಟಕ ಮಾಹಿತಿಯೊಂದು ಬಹಿರಂಗವಾಗಿದೆ.
-
Vishakha Bhat
Oct 26, 2025 2:50 PM
ನವದೆಹಲಿ: ಪ್ರಧಾನಿ ಮೋದಿ ಹತ್ಯೆ ಸಂಚು ನಡೆದಿತ್ತಾ? ಹೀಗೊಂದು ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಕಳೆದ ತಿಂಗಳು ಚೀನಾದಲ್ಲಿ (China) ನಡೆದ ಶಾಂಫೈ ಸಹಕಾರ ಸಂಘದ ಸಭೆಯಲ್ಲಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಹತ್ಯೆಗೆ ಸಂಚು ನಡೆಸಲಾಗಿತ್ತು ಎಂಬ ಸ್ಪೋಟಕ ಮಾಹಿತಿಯೊಂದು ಬಹಿರಂಗವಾಗಿದ್ದು, ವರದಿಯಲ್ಲಿರುವ ಸತ್ಯ ಬೆಚ್ಚಿ ಬೀಳಿಸುವಂತಿದೆ. ಅಮೆರಿಕದ ಗುಪ್ತಚರ ಸಂಸ್ಥೆ, ಸಿಐಎ, ಮೋದಿ ಹತ್ಯೆಗೆ ಸಂಚು ರೂಪಿಸಿತ್ತು ಎಂಬುದು ಬಯಲಾಗಿದೆ. ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರತಿಭಟನೆಗಳ ಹಿಂದೆ ಇರುವ ಕಾಣದ ಕೈ ಸಿಐಎ ಭಾರತದಲ್ಲಿಯೂ ಇದೇ ರೀತಿಯ ಷಡ್ಯಂತ್ರ ರೂಪಿಸಿತ್ತು ಎಂದು ತಿಳಿದು ಬಂದಿದೆ.
ಭಾರತ ಹಾಗೂ ಅಮೆರಿಕದ ನಡುವಿನ ಸುಂಕ ಸಮರದ ನಡುವೆಯೇ ಈ ಮಾಹಿತಿ ಹೊರ ಬಿದ್ದಿದೆ. ಢಾಕಾದಲ್ಲಿ ನಿಯೋಜಿಸಲಾಗಿದ್ದ ಅಮೆರಿಕದ ವಿಶೇಷ ಪಡೆಗಳ ಅಧಿಕಾರಿ ಟೆರೆನ್ಸ್ ಅರ್ವೆಲ್ಲೆ ಜಾಕ್ಸನ್ ಆಗಸ್ಟ್ 31ರಂದು ಶವವಾಗಿ ಪತ್ತೆಯಾಗಿರುವುದಾಗಿದೆ. ಈ ವ್ಯಕ್ತಿಯನ್ನು ಅಮೆರಿಕ ಮ್ಯಾನ್ಮಾರ್‌ನಲ್ಲಿ ಅರಾಕನ್ ಆರ್ಮಿಗೆ ಬಾಂಗ್ಲಾ ನೆರವು ನೀಡಲು ನಿಯೋಜಿಸುವ ನೆಪದಲ್ಲಿ ಸಕ್ರಿಯವಾಗಿರಿಸಿತ್ತು. ಈ ನಿಗೂಢ ಸಾವು ಸಿಐಎ ಹೆಜ್ಜೆ ಗುರುತು ಹಾಗೂ ಚೀನದಲ್ಲಿ ಮೋದಿ ಹತ್ಯೆಯ ಸಂಚಿನ ಯೋಜನೆಯನ್ನು ಬಿಚ್ಚಿಡುತ್ತಿದೆ ಎಂದು ವರದಿಗಳು ಹೇಳುತ್ತಿವೆ.
ಅಮೆರಿಕದ ಸುಂಕ ಬೆದರಿಕೆಗಳ ಬೆನ್ನಲ್ಲೇ ಭಾರತ-ಚೀನಾ ಸಂಬಂಧದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿತ್ತು. ಚೀನಾ ನೆಲದಲ್ಲಿಯೇ ಮೋದಿ ಹತ್ಯೆ ಮಾಡಿದರೆ ಉಭಯ ದೇಶಗಳ ಸಂಬಂಧವನ್ನು ಶಾಶ್ವತವಾಗಿ ಅಳಿಸಿ ಹಾಕಬಹುದು ಎಂದು ಸಿಐಎ ಯೋಜನೆ ರೂಪಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡಲು ಬಂದಿದ್ದ ಏಜೆಂಟ್ ಅತ್ಯಂತ ನಿಗೂಢವಾಗಿ ಬಾಂಗ್ಲಾದೇಶದ ಹೊಟೆಲ್‌ನಲ್ಲಿ ಸಾವಿಗೀಡಾಗಿದ್ದಾನೆ. ಈ ಮೂಲಕ ಸಿಐಎ ಲೆಕ್ಕಾಚಾರ ಸಂಪೂರ್ಣವಾಗಿ ತಲೆಕೆಳಗಾಗಿದೆ.
ಅಮೆರಿಕದ ಅಧಿಕಾರಿ ಟೆರೆನ್ಸ್ ಅರ್ವೆಲ್ ಮೃತರಾಗಿ ಪತ್ತೆಯಾದ ದಿನ, ಪ್ರಧಾನಿ ಮೋದಿ ಚೀನಾದ ಟಿಯಾಂಜಿನ್‌ನಲ್ಲಿ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಅದೇ ವೇಳೆ ಮೋದಿ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್ ಖಾಸಗಿಯಾಗಿ ಗಂಟೆಗಳ ಕಾಲ ಸಭೆ ನಡೆಸಿದ್ದರು. ಇದಕ್ಕೆ ಮತ್ತಷ್ಟು ಪುಷ್ಟಿ ಎನ್ನುವಂತೆ ಅಂದು ಪುಟಿನ್ ಹಾಗೂ ಮೋದಿ ಹೈ ಸೆಕ್ಯುರಿಟಿಯಲ್ಲಿ ಒಂದೇ ಕಾರಿನಲ್ಲಿ ಸಂಚರಿಸಿದ್ದರು.
ಹತ್ಯೆ ಸಂಚು ಕುರಿತು ಮೋದಿಯೇ ಸುಳಿವು ನೀಡಿದ್ದರು!
ಸೆಪ್ಟೆಂಬರ್ 2 ರಂದು, ಚೀನಾದ ಟಿಯಾಂಜಿನ್‌ನಿಂದ ಹಿಂದಿರುಗಿದ ಮರುದಿನ, ಪ್ರಧಾನಿ ಮೋದಿ ನವದೆಹಲಿಯಲ್ಲಿ ನಡೆದ SEMICON ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು. ನಾನು ಚೀನಾಕ್ಕೆ ಹೋಗಿದ್ದಕ್ಕಾಗಿ ಅಥವಾ ನಾನು ಹಿಂತಿರುಗಿದ್ದಕ್ಕಾಗಿ ನೀವು ಚಪ್ಪಾಳೆ ತಟ್ಟುತ್ತಿದ್ದೀರಾ? ಎಂದು ಗೂಡಾರ್ಥವಾಗಿ ಮಾತನಾಡಿದ್ದರು. ಇದೀಗ ಹತ್ಯೆಯ ಸಂಚು ಬಯಲಾಗಿದೆ.