ಅಪಾಯದ ಎಚ್ಚರಿಕೆ ನೀಡಿದರೂ ಬುದ್ಧಿ ಕಲಿಯುತ್ತಿಲ್ಲ; ರೈಲಿನಲ್ಲಿ ಎಲೆಕ್ಟ್ರಿಕ್ ಕೆಟಲ್ ಬಳಸಿ ಚಹಾ ತಯಾರಿಸಿದ ಮಹಿಳೆ
ರೈಲಿನಲ್ಲಿ ಮಹಿಳೆಯೊಬ್ಬರು ಎಲೆಕ್ಟ್ರಿಕ್ ಕೆಟಲ್ ಬಳಸಿ ಚಹಾ ತಯಾರಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಕೆಂಗಣ್ಣಿಗೆ ಕಾರಣವಾಗಿದೆ. ಹೆಚ್ಚಿನ ವಿದ್ಯುತ್ ಉಪಕರಣಗಳನ್ನು ರೈಲಿನ ಸಾಕೆಟ್‌ಗೆ ಜೋಡಿಸುವುದು ಅಪಾಯಕಾರಿ ಎಂದು ನೆಟ್ಟಿಗರು ಎಚ್ಚರಿಸಿದ್ದಾರೆ. ಘಟನೆಗೆ ಸ್ಪಂದಿಸಿದ ರೈಲ್ವೆ ಇಲಾಖೆ ವಿವರಗಳನ್ನು ಕೇಳಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
ರೈಲಿನಲ್ಲಿ ಚಹಾ ತಯಾರಿಸಿದ ಮಹಿಳೆ. -
ನವದೆಹಲಿ, ಫೆ. 27: ರೈಲು ಪ್ರಯಾಣದ ಸಮಯದಲ್ಲಿ ಮಹಿಳೆಯೊಬ್ಬರು ಎಲೆಕ್ಟ್ರಿಕ್ ಕೆಟಲ್ (Electric Kettle) ಬಳಸಿ ಚಹಾ ತಯಾರಿಸುತ್ತಿರುವ ವಿಡಿyoವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ಮತ್ತು ಆತಂಕಕ್ಕೆ ಕಾರಣವಾಗಿದೆ. ರೈಲಿನ ಕೋಚ್ ಒಳಗೆ ಇಂತಹ ಅಧಿಕ ವ್ಯಾಟೇಜ್‌ನ ವಿದ್ಯುತ್ ಉಪಕರಣಗಳನ್ನು ಬಳಸುವುದು ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಹ ಪ್ರಯಾಣಿಕರೊಬ್ಬರು ಮೊಬೈಲ್‌ನಲ್ಲಿ ರೆಕಾರ್ಡ್ ಈ ವಿಡಿಯೊದಲ್ಲಿ ಮಹಿಳೆಯು ಲೋವರ್ ಬರ್ತ್‌ನಲ್ಲಿ ಕುಳಿತು ಪಕ್ಕದ ಸಾಕೆಟ್‌ಗೆ ಎಲೆಕ್ಟ್ರಿಕ್ ಕೆಟಲ್ ಅನ್ನು ಪ್ಲಗ್ ಮಾಡಿರುವುದನ್ನು ಕಾಣಬಹುದು. ರೈಲಿನಲ್ಲಿರುವ ಮೊಬೈಲ್ ಚಾರ್ಜಿಂಗ್ ಸಾಕೆಟ್‌ಗಳು ಕೇವಲ ಸಣ್ಣ ಎಲೆಕ್ಟ್ರಾನಿಕ್ ಸಾಧನಗಳಿಗಾಗಿ ವಿನ್ಯಾಸಗೊಳಿಸಲಾಗಿರುತ್ತದೆ. ಇಂತಹ ಕಡೆಗಳಲ್ಲಿ ಕೆಟಲ್‌ನಂತಹ ಹೆಚ್ಚಿನ ವಿದ್ಯುತ್ ಬಳಸುವ ಉಪಕರಣಗಳನ್ನು ಬಳಸುವುದರಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ವೈರಲ್ ವಿಡಿಯೊ ಇಲ್ಲಿದೆ:
Dear @RailMinIndia @RailwaySeva
— Woke Eminent (@WokePandemic) February 26, 2026
People are not aware that using electric kettle inside train can cause short circuit and can lead to an fire incident.
Please run an awareness campaign about it. pic.twitter.com/fA2CiBsmRy
ನೆಟ್ಟಿಗರ ತೀವ್ರ ಪ್ರತಿಕ್ರಿಯೆ
ಈ ವಿಡಿಯೋ ಎಕ್ಸ್ (ಟ್ವಿಟರ್)ನಲ್ಲಿ ಹಂಚಿಕೆಯಾದ ಬೆನ್ನಲ್ಲೇ ರೈಲ್ವೆ ಇಲಾಖೆಯನ್ನು ಟ್ಯಾಗ್ ಮಾಡಿ ಅನೇಕರು ದೂರು ನೀಡಿದ್ದಾರೆ. "ಭಾರತದಲ್ಲಿ ಜಾಗೃತಿ ಅಭಿಯಾನಗಳು ಕೆಲಸ ಮಾಡುವುದಿಲ್ಲ, ಇಂತಹವರಿಗೆ ಶಿಕ್ಷೆಯೇ ಮದ್ದು. ಇದು ಜೀವಕ್ಕೆ ಅಪಾಯ ತರುವ ಕೆಲಸ, ಇವರನ್ನು ನೇರವಾಗಿ ಜೈಲಿಗೆ ಹಾಕಬೇಕು" ಎಂದು ಒಬ್ಬರು ಕಿಡಿಕಾರಿದ್ದಾರೆ. ಮತ್ತೊಬ್ಬರು, "ಇವರು ರೈಲನ್ನೇ ತಮ್ಮ ಮನೆ ಎಂದುಕೊಂಡಿದ್ದಾರೆ, ನಾಳೆ ಸ್ನಾನ ಮಾಡಿದರೂ ಆಶ್ಚರ್ಯವಿಲ್ಲ" ಎಂದು ವ್ಯಂಗ್ಯವಾಡಿದ್ದಾರೆ.
ಉಜ್ಜಯಿನಿ ಆಶ್ರಮದಲ್ಲಿ 14 ತಿಂಗಳಲ್ಲಿ 17 ವಿಶೇಷ ಚೇತನ ಮಕ್ಕಳ ಸಾವು, ಹೈಕೋರ್ಟ್ ಮಧ್ಯ ಪ್ರವೇಶ
ರೈಲ್ವೆ ಇಲಾಖೆ ಕ್ರಮ
ವೈರಲ್ ವಿಡಿಯೊವನ್ನು ಗಮನಿಸಿದ ರೈಲ್ವೆ ಸೇವಾ (Railway Seva) ವಿಭಾಗವು ತಕ್ಷಣವೇ ಸ್ಪಂದಿಸಿದೆ. ಘಟನೆ ನಡೆದ ರೈಲಿನ ವಿವರ, ಪ್ರಯಾಣಿಕರ ಪಿಎನ್ಆರ್ (PNR) ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳುವಂತೆ ವಿಡಿಯೊ ಪೋಸ್ಟ್ ಮಾಡಿದವರಿಗೆ ಸೂಚಿಸಿದೆ. ಈ ಮೂಲಕ ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ. ಅಲ್ಲದೆ, ಇಂತಹ ಅಪಾಯಕಾರಿ ಕೃತ್ಯಗಳ ಬಗ್ಗೆ ರೈಲ್ವೆ ಸಹಾಯವಾಣಿ 139ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ವಿನಂತಿಸಿದೆ.
ರೈಲ್ವೆ ನಿಯಮಗಳ ಪ್ರಕಾರ, ರೈಲಿನೊಳಗೆ ಬೆಂಕಿ ಹೊತ್ತಿಕೊಳ್ಳುವ ಸಾಮಗ್ರಿಗಳನ್ನು ಒಯ್ಯುವುದು ಅಥವಾ ಇಂತಹ ವಿದ್ಯುತ್ ಉಪಕರಣಗಳನ್ನು ಬಳಸುವುದು ಕಾನೂನುಬಾಹಿರವಾಗಿದ್ದು, ದಂಡ ಮತ್ತು ಜೈಲು ಶಿಕ್ಷೆಗೆ ಅರ್ಹವಾದ ಅಪರಾಧ.