ಪ್ರತಿ 2 ತಿಂಗಳಿಗೊಮ್ಮೆ ಸಭೆ, ಎಸ್ಐಆರ್ ಕುರಿತು ಸುಪ್ರೀಂ ಮುಖ್ಯ ನ್ಯಾಯಮೂರ್ತಿಗೆ ಪತ್ರ: ಇಂಡಿ ಒಕ್ಕೂಟ ಸಭೆಯ ಪ್ರಮುಖ ಅಂಶಗಳಿವು
INDIA Bloc: ದೆಹಲಿಯಲ್ಲಿ ನಡೆದ ಇಂಡಿ ಒಕ್ಕೂಟದ ಸಭೆಯಲ್ಲಿ ಐದು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ. ಎಸ್‍ಐಆರ್‌ನಲ್ಲಿ ಚುನಾವಣಾ ಅಕ್ರಮಗಳು ನಡೆದಿವೆ ಎಂದು ಒಕ್ಕೊರಳಿನಿಂದ ಆರೋಪಿಸಲಾಗಿದೆ. ಈ ಕುರಿತು ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆಯಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ನವದೆಹಲಿಯಲ್ಲಿ ಇಂಡಿ ಒಕ್ಕೂಟ ಸಭೆ ಬಳಿಕ ನಡೆದ ಪತ್ರಿಕಾಗೋಷ್ಠಿ -
ನವದೆಹಲಿ, ಜೂ. 8: ಸೋಮವಾರ (ಜೂ. 8) ನವದೆಹಲಿಯಲ್ಲಿ ನಡೆದ ವಿಪಕ್ಷಗಳ ಇಂಡಿ ಒಕ್ಕೂಟದ (INDIA Bloc) ಪ್ರಮುಖ ಸಭೆಯಲ್ಲಿ ಇಪ್ಪತ್ತೈದು ಪಕ್ಷಗಳು ಭಾಗವಹಿಸಿದವು. ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿಕೂಟ (INDIA) ಬಣ ಸಭೆಯು, ಮೈತ್ರಿಕೂಟದ ಅಂಗಪಕ್ಷಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಸರಿಪಡಿಸುವುದು ಹಾಗೂ ಪಶ್ಚಿಮ ಬಂಗಾಳ (West Bengal) ಮತ್ತು ತಮಿಳುನಾಡಿನಲ್ಲಿ ತೃಣಮೂಲ ಕಾಂಗ್ರೆಸ್ (TMC) ಮತ್ತು ದ್ರಾವಿಡ ಮುನ್ನೇತ್ರ ಕಳಗಂ (DMK) ಅನುಭವಿಸಿದ ಇತ್ತೀಚಿನ ಚುನಾವಣಾ ಸೋಲಿನ ಹಿನ್ನೆಲೆಯಲ್ಲಿ ಸಂಬಂಧಗಳನ್ನು ಸರಿಪಡಿಸುವ ಉದ್ದೇಶ ಹೊಂದಿತ್ತು.
ಈ ಸಭೆಗೆ, ಡಿಎಂಕೆ ಮತ್ತು ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (ಎಎಪಿ) ಗೈರಾಗಿದ್ದವು. ತಮಿಳುನಾಡಿನಲ್ಲಿ ಟಿವಿಕೆ ಜತೆ ಕಾಂಗ್ರೆಸ್ ಚುನಾವಣೋತ್ತರ ಮೈತ್ರಿ ಮಾಡಿಕೊಂಡಿರುವುದನ್ನು ಉಲ್ಲೇಖಿಸಿ, ಡಿಎಂಕೆ ಕಳೆದ ವಾರ ಸಭೆಗೆ ಗೈರು ಹಾಜರಾಗುವ ನಿರ್ಧಾರವನ್ನು ಪ್ರಕಟಿಸಿತ್ತು.
ಮಲ್ಲಿಕಾರ್ಜುನ ಖರ್ಗೆ ಅವರ ಸುದ್ದಿಗೋಷ್ಠಿ:
The Union government should immediately call an all-party meeting to discuss the precarious current economic situation, unemployment, price rise and farmers' issue and other people-centric issues. It was agreed that all of the parties would meet every two months.
— Rahul Kajal INC 🇮🇳 (@RahulKajalRG) June 8, 2026
The Parliament… pic.twitter.com/YGuqziSdM6
ಸಭೆ ಮುಕ್ತಾಯವಾದ ಬಳಿಕ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೈತ್ರಿಕೂಟವು ಐದು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ ಎಂದು ತಿಳಿಸಿದರು. ಮತಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಮತ ದರೋಡೆ ಹಾಗೂ ಚುನಾವಣಾ ಅಕ್ರಮಗಳು ನಡೆದಿವೆ. ಈ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆಯಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ಸಂಸದ ಸುಖೇಂದು ಶೇಖರ್ ರೇ ರಾಜೀನಾಮೆ
ನೀಟ್ ಮತ್ತು ಸಿಬಿಎಸ್‌ಇ ಪರೀಕ್ಷೆಗಳಲ್ಲಿ ಲೋಪಗಳು ಕಂಡುಬಂದಿದ್ದು, ಇದು ಹಲವು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆ ಎಂಬ ಆರೋಪದ ಮೇಲೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಕೋರಲು ವಿರೋಧ ಪಕ್ಷಗಳು ಸರ್ವಾನುಮತದಿಂದ ನಿರ್ಧರಿಸಿವೆ ಎಂದು ಖರ್ಗೆ ತಿಳಿಸಿದರು.
ರಾಷ್ಟ್ರೀಯ ರಾಜಕೀಯ ಬೆಳವಣಿಗೆಗಳನ್ನು ಪರಿಶೀಲಿಸಲು ಹಾಗೂ ಮುಂದಿನ ಕಾರ್ಯತಂತ್ರಗಳನ್ನು ಸಮನ್ವಯಗೊಳಿಸಲು ಇಂಡಿ ಮೈತ್ರಿಕೂಟದ ಪಕ್ಷಗಳು ಇನ್ನು ಮುಂದೆ ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ನಡೆಸಲಿವೆ ಎಂದು ಖರ್ಗೆ ವಿವರಿಸಿದರು. ಮುಂದಿನ ಅಧಿಕೃತ ಇಂಡಿ ಮೈತ್ರಿಕೂಟದ ಸಭೆಯನ್ನು ಆಗಸ್ಟ್ 8ರಂದು ಹೈದರಾಬಾದ್‌ನಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದರು.
ಇಂಡಿ ಬಣದ ನಾಯಕರು ಮೈತ್ರಿಕೂಟದ ಗುಂಪಿನೊಳಗಿನ ಏಕತೆಯನ್ನು ಒತ್ತಿ ಹೇಳಿದರು. ಪ್ರಜಾಪ್ರಭುತ್ವ ಮೌಲ್ಯಗಳನ್ನು ಕಾಪಾಡುವ ಮತ್ತು ಜನರ ಜೀವನೋಪಾಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವ ಅಗತ್ಯವನ್ನು ಪ್ರತಿಪಾದಿಸಿದರು.
ಇಂಡಿ ಬ್ಲಾಕ್ ಸಭೆಯಲ್ಲಿ ಹಾಜರಿರದ ಪಕ್ಷಗಳು ಯಾವುವು?
ಕಾಂಗ್ರೆಸ್‌ನ ಟಿವಿಕೆ ಮೈತ್ರಿಯಿಂದ ಅಸಮಾಧಾನಗೊಂಡ ಡಿಎಂಕೆ ಮತ್ತು ಎಎಪಿ ದೆಹಲಿಯಲ್ಲಿ ನಡೆದ ಪ್ರಮುಖ ಸಭೆಯಲ್ಲಿ ಭಾಗವಹಿಸಲಿಲ್ಲ. ಇನ್ನೊಂದೆಡೆ ಶಿವಸೇನೆಯ (ಯುಬಿಟಿ) ಉದ್ಧವ್ ಠಾಕ್ರೆ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ)ದ ಹೇಮಂತ್ ಸೊರೆನ್ ದೆಹಲಿಯಲ್ಲಿ ಹಾಜರಿರದಿದ್ದರೂ ವರ್ಚುವಲ್ ಮೂಲಕ ಸಭೆಯಲ್ಲಿ ಪಾಲ್ಗೊಂಡರು.