ವಿಡಿಯೊದಲ್ಲಿ ಚಿನ್ನ ತೋರಿಸಿದ ಯುಟ್ಯೂಬರ್; ಮನೆಯಿಂದ ಲಕ್ಷಾಂತರ ರುಪಾಯಿ ಮೌಲ್ಯದ ಆಭರಣ ಕಳವು
ಸೋಷಿಯಲ್ ಮೀಡಿಯಾದಲ್ಲಿ ಚಿನ್ನಾಭರಣ, ನಗದು ಮತ್ತು ಐಷಾರಾಮಿ ಜೀವನಶೈಲಿಯನ್ನು ಪ್ರದರ್ಶಿಸಿದ್ದ ಯುಟ್ಯೂಬರ್ ರಚನಾ ಗುರ್ಜರ್ ಅವರ ಮನೆಗೆ ದುಷ್ಕರ್ಮಿಗಳು ನುಗ್ಗಿ ಸುಮಾರು 8ರಿಂದ 10 ಲಕ್ಷ ರುಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ನಗದು ಕಳವು ಮಾಡಿದ್ದಾರೆ. ಕಳ್ಳತನಕ್ಕೆ ಸಾಮಾಜಿಕ ಜಾಲತಾಣದ ವಿಡಿಯೊ ಸುಳಿವು ನೀಡಿದೆ ಎನ್ನಲಾಗಿದೆ.
ಯುಟ್ಯೂಬರ್ ರಚನಾ ಗುರ್ಜರ್ -
ಭೋಪಾಲ್, ಜೂ. 8: ಮಧ್ಯ ಪ್ರದೇಶದ (Madhya Pradesh) ಶಿವಪುರಿ ಜಿಲ್ಲೆಯ (Shivpuri District) ಗೃಹಿಣಿ ಹಾಗೂ ಯುಟ್ಯೂಬರ್ ಆಗಿರುವ ರಚನಾ ಗುರ್ಜರ್ (Rachna Gurjar) ಅವರ ಮನೆಯಲ್ಲಿ ನಡೆದ ಕಳ್ಳತನ ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಚರೆಗೆ ಗ್ರಾಸವಾಗಿದೆ. ವೈಯಕ್ತಿಕ ಜೀವನಕ್ಕೆ ಸಂಬಂಧಪಟ್ಟಂತೆ ನಾವು ತೋರಿಸುವ ವಿಡಿಯೊಗಳು ತರುವ ಅಪಾಯವನ್ನು ಮತ್ತೊಮ್ಮೆ ನೆನಪಿಸಿದೆ. ಯುಟ್ಯೂಬ್‌ನಲ್ಲಿ ಚಿನ್ನಾಭರಣ, ನಗದು ಹಾಗೂ ಐಷಾರಾಮಿ ಜೀವನಶೈಲಿಯನ್ನು ಪ್ರದರ್ಶಿಸಿದ್ದ ಅವರು ಇದೀಗ ಕಳ್ಳರ ಸುಲಭ ತುತ್ತಾಗಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗಿದೆ.
ಶನಿವಾರ (ಜೂನ್ 6) ಮುಂಜಾನೆ ಸುಮಾರು 2 ಗಂಟೆ ವೇಳೆಗೆ ಮೊಹಾನಿ ಗ್ರಾಮದ ರಚನಾ ಗುರ್ಜರ್ ಅವರ ಮನೆಗೆ ನುಗ್ಗಿದ ದುಷ್ಕರ್ಮಿಗಳು, ಕುಟುಂಬದ ಸದಸ್ಯರನ್ನು ಒಂದು ಕೊಠಡಿಯಲ್ಲಿ ಕೂಡಿ ಹಾಕಿ, ಚಿನ್ನ ಹಾಗೂ ಬೆಳ್ಳಿ ಆಭರಣಗಳು, ನಗದು ಮತ್ತು ಎನರ್ಜಿ ಡ್ರಿಂಕ್ ಪೆಟ್ಟಿಗೆಯನ್ನು ಕಳವು ಮಾಡಿ ಪರಾರಿಯಾಗಿದ್ದಾರೆ. ಕಳವಾದ ವಸ್ತುಗಳ ಒಟ್ಟು ಮೌಲ್ಯ ಸುಮಾರು 8ರಿಂದ 10 ಲಕ್ಷ ರುಪಾಯಿ ಎಂದು ಅಂದಾಜಿಸಲಾಗಿದೆ.
ರಚನಾ ಗುರ್ಜರ್ ಅವರ ವಿಡಿಯೊ:
इंस्टाग्राम पर रील बनाकर वायरल होने और डॉलर कमाने की सनक अब कुछ लोगों में इस कदर बढ़ गई है कि अपनी पूरी संपत्ति का प्रदर्शन करना भी फैशन बन गया है।
— Krishna Jadon (@krishna_jadon) June 8, 2026
कुछ दिन पहले एक इंस्टाग्राम अकाउंट ने अपनी सोने की ज्वेलरी, लग्जरी गाड़ियां और आलीशान लाइफस्टाइल दिखाते हुए रील बनाई थी। शायद… pic.twitter.com/IYGed1gDVa
ದೂರು ನೀಡಿದ ಬಳಿಕ ಮಾತನಾಡಿದ ರಚನಾ ಗುರ್ಜರ್, "ನಾವು ನಿದ್ರೆಯಲ್ಲಿದ್ದಾಗ ಕಳ್ಳರು ಮನೆಗೆ ನುಗ್ಗಿದ್ದರು. ನಮ್ಮನ್ನು ಕೊಠಡಿಯಲ್ಲಿ ಬೀಗ ಹಾಕಿ, ಚಿನ್ನ, ಬೆಳ್ಳಿ ಆಭರಣಗಳು, ನಗದು ಮತ್ತು ಇತರ ವಸ್ತುಗಳನ್ನು ಕೊಂಡೊಯ್ದಿದ್ದಾರೆ. ಸಿಸಿಟಿವಿ ಕ್ಯಾಮರಾಗಳ ಕೋನವನ್ನೂ ಲಾಠಿಯ ಮೂಲಕ ಬದಲಾಯಿಸಿದ್ದು, ಅವರ ಮುಖಗಳು ದಾಖಲಾಗಿಲ್ಲ" ಎಂದು ತಿಳಿಸಿದ್ದಾರೆ.
ಕುಟುಂಬದ ಸದಸ್ಯರು ಬೆಳಗಿನ ಜಾವ ಸುಮಾರು 4 ಗಂಟೆಗೆ ಎಚ್ಚರಗೊಂಡಾಗ ಕೊಠಡಿ ಹೊರಗಿನಿಂದ ಬೀಗ ಹಾಕಿರುವುದು ಗೊತ್ತಾಗಿದೆ. ಬಳಿಕ ಸಂಬಂಧಿಕರಿಗೆ ಕರೆ ಮಾಡಿ, ಅವರ ಸಹಾಯದಿಂದ ಬಾಗಿಲು ತೆರೆದು ಹೊರಬಂದಿದ್ದಾರೆ.
ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶಿವಪುರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂಜೀವ್ ಮುಲೆ ಕಳ್ಳತನ ನಡೆದಿರುವುದನ್ನು ದೃಢಪಡಿಸಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಒಂದು ದೃಶ್ಯದಲ್ಲಿ ಮುಖ ಮುಚ್ಚಿಕೊಂಡಿದ್ದ ವ್ಯಕ್ತಿಯೊಬ್ಬ ಲಾಠಿಯಿಂದ ಕ್ಯಾಮರಾದ ದಿಕ್ಕನ್ನು ಬದಲಾಯಿಸುತ್ತಿರುವುದು ಕಂಡುಬಂದಿದೆ. ಆರೋಪಿಗಳು ಸ್ಥಳೀಯರು ಅಥವಾ ಸಮೀಪದ ಗ್ರಾಮದವರಾಗಿರಬಹುದು ಹಾಗೂ ಮನೆಯ ಬಗ್ಗೆ ಪೂರ್ವ ಮಾಹಿತಿ ಹೊಂದಿದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಯಾದಗಿರಿಯಲ್ಲಿ ಕ್ವಾರಿಗೆ ಬಿದ್ದು ಇಬ್ಬರು ಬಾಲಕಿಯರು ಸೇರಿ ಮೂವರ ಸಾವು
ಈ ಪ್ರಕರಣದಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರವೂ ತನಿಖೆಯ ಕೇಂದ್ರಬಿಂದುವಾಗಿದೆ. ಒಂದು ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ರಚನಾ ಗುರ್ಜರ್ ಇತ್ತೀಚೆಗೆ ತಮ್ಮ ಮನೆ, ಚಿನ್ನಾಭರಣ, ನಗದು ಹಾಗೂ ಜೀವನಶೈಲಿಯನ್ನು ತೋರಿಸುವ ಹಲವು ವಿಡಿಯೊಗಳನ್ನು ಪೋಸ್ಟ್ ಮಾಡಿದ್ದರು. ಮನೆಯ ಪ್ರವೇಶದ್ವಾರದಿಂದ ಹಿಡಿದು ಒಳಗಿನ ಕೊಠಡಿಗಳವರೆಗೆ ಚಿತ್ರೀಕರಿಸಿದ್ದ ವಿಡಿಯೊಗಳ ಜತೆಗೆ, ಆಭರಣಗಳು ಮತ್ತು ನಗದು ಹಣವನ್ನು ಮೇಜಿನ ಮೇಲೆ ಇಟ್ಟು ಪ್ರದರ್ಶಿಸಿದ್ದ ದೃಶ್ಯಗಳನ್ನೂ ಹಂಚಿಕೊಂಡಿದ್ದರು.
ಈ ವಿಡಿಯೊ ವೀಕ್ಷಿಸಿದ ದುಷ್ಕರ್ಮಿಗಳು ಮನೆಯ ವಿನ್ಯಾಸ, ಬೆಲೆಬಾಳುವ ವಸ್ತುಗಳ ಸ್ಥಳ ಹಾಗೂ ಭದ್ರತಾ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದು ಕಳ್ಳತನಕ್ಕೆ ಸಂಚು ರೂಪಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಐಷಾರಾಮಿ ಜೀವನದ ಒಂದು ನೋಟವೆಂದು ಹಂಚಿಕೊಂಡ ವಿಡಿಯೊಗಳು, ಅಂತಿಮವಾಗಿ ಅಪರಾಧಿಗಳಿಗೆ ಮಾರ್ಗಸೂಚಿಯಾಗಿರುವ ಸಾಧ್ಯತೆ ಇದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಆಸ್ತಿ, ಮನೆ ಒಳಾಂಗಣ ಹಾಗೂ ಬೆಲೆಬಾಳುವ ವಸ್ತುಗಳನ್ನು ಪ್ರದರ್ಶಿಸುವಾಗ ಎಚ್ಚರಿಕೆ ಅಗತ್ಯ ಎಂಬ ಗಂಭೀರ ಸಂದೇಶವನ್ನು ನೀಡಿದೆ.