ಬಾಂಗ್ಲಾದೇಶದ ನಾಯಕ ಷರೀಫ್ ಉಸ್ಮಾನ್ ಹಾದಿ ಹಂತಕರು ಮೇಘಾಲಯಕ್ಕೆ ಬಂದಿಲ್ಲ; ಭಾರತದಿಂದ ಸ್ಪಷ್ಟನೆ
ಬಾಂಗ್ಲಾದೇಶದ ವಿವಾದಿತ ನಾಯಕ ಷರೀಫ್ ಉಸ್ಮಾನ್ ಹಾದಿಯನ್ನು ಹತ್ಯೆಗೈದ ಮುಸುಕುಧಾರಿ ಹಂತಕರು ಮೇಘಾಲಯಕ್ಕೆ ಆಗಮಿಸಿದ್ದಾರೆ ಎನ್ನುವ ಅಲ್ಲಿನ ಅಧಿಕಾರಿಗಳ ವಾದವನ್ನು ಭಾರತ ಸ್ಪಷ್ಟವಾಗಿ ನಿರಾಕರಿಸಿದೆ. ಜತೆಗೆ ಶಂಕಿತರಿಗೆ ನೆರವಾದ ಇಬ್ಬರನ್ನು ಮೇಘಾಲಯದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಬಾಂಗ್ಲಾದೇಶ ಸುಳ್ಳು ಸುದ್ದಿ ಹರಡಿದ್ದಾಗಿ ಹೇಳಿದ್ದಾರೆ.
ಬಿಎಸ್‌ಎಫ್ (ಸಾಂದರ್ಭಿಕ ಚಿತ್ರ). -
ದೆಹಲಿ, ಡಿ. 28: ಇತ್ತೀಚೆಗೆ ಬಾಂಗ್ಲಾದೇಶದ ವಿವಾದಿತ ನಾಯಕ ಷರೀಫ್ ಉಸ್ಮಾನ್ ಹಾದಿ (Sharif Osman Hadi)ಗೆ ಗುಂಡು ಹಾರಿಸಿದ ಮುಸುಕುಧಾರಿ ಹಂತಕರು ಮೇಘಾಲಯಕ್ಕೆ ಆಗಮಿಸಿದ್ದಾರೆ ಎನ್ನುವ ಅಲ್ಲಿನ ಅಧಿಕಾರಿಗಳ ವಾದವನ್ನು ಭಾರತ ಸ್ಪಷ್ಟವಾಗಿ ನಿರಾಕರಿಸಿದೆ. ಬಾಂಗ್ಲಾದೇಶದ ಅಧಿಕಾರಿಗಳು ಸುಳ್ಳು ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಅತ್ಯಂತ ಸೂಕ್ಷ್ಮ ಗಡಿ ಪ್ರದೇಶವಾದ ಮೇಘಾಲಯದಲ್ಲಿ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಭಾರತ ವಿರೋಧಿಯಾಗಿದ್ದ ಹಾದಿಯ ಮೇಲೆ ಡಿಸೆಂಬರ್ 12ರಂದು ಗುಂಡಿನ ದಾಳಿ ನಡೆದಿತ್ತು. ಚಿಕಿತ್ಸೆ ಫಲಕಾರಿಯಾಗದರೆ ಆತ 6 ದಿನಗಳ ಬಳಿಕ ಸಿಂಗಾಪುರ ಆಸ್ಪತ್ರೆಯಲ್ಲಿ ಅಸುನೀಗಿದ್ದ.
ಹಾದಿಯ ಮೇಲೆ ಗುಂಡಿನ ಮಳೆಗೆರೆದ ಇಬ್ಬರು ಶಂಕಿತ ಮುಸುಕುಧಾರಿಗಳಾದ ಫೈಸಲ್ ಕರೀಂ ಮಸೂದ್ ಮತ್ತು ಆಲಂಗೀರ್ ಶೇಕ್ ಮೇಘಾಲಯ ಗಡಿ ಮೂಲಕ ಭಾರತಕ್ಕೆ ಪಲಾಯನ ಮಾಡಿದ್ದಾರೆ ಎಂದು ಬಾಂಗ್ಲಾದೇಶದ ಅಧಿಕಾರಿಗಳು ಹೇಳಿದ್ದಾಗಿ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ನೆರೆ ರಾಷ್ಟ್ರದ ಈ ಹೇಳಿಕೆಯನ್ನು ಮೇಘಾಲಯದ ಪೊಲೀಸ್ ಅಧಿಕಾರಿಗಳು ಅಲ್ಲಗೆಳೆದಿದ್ದಾರೆ. ಜತೆಗೆ ಶಂಕಿತರಿಗೆ ನೆರವಾದ ಇಬ್ಬರನ್ನು ಮೇಘಾಲಯದಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಬಾಂಗ್ಲಾದೇಶ ಸುಳ್ಳು ಸುದ್ದಿ ಹರಡಿದ್ದಾಗಿ ಹೇಳಿದ್ದಾರೆ. ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಹಿಂದೂಸ್ಥಾನ್ ಟೈಮ್ಸ್ ಸುದ್ದಿಸಂಸ್ಥೆ ಜತೆ ಮಾತನಾಡಿ, ʼʼಬಾಂಗ್ಲಾದೇಶದ ಅಧಿಕಾರಿಗಳ ಜತೆ ಈ ಬಗ್ಗೆ ಯಾವುದೇ ಅಧಿಕೃತ/ಅನಧಿಕೃತ ಮಾತುಕತೆ ನಡೆದಿಲ್ಲ. ಅವರು ಹೇಳಿದಂತೆ ಗಾರೋ ಬೆಟ್ಟದಲ್ಲಿ ಯಾವುದೇ ಶಂಕಿತರನ್ನು ಗುರುತಿಸಲಾಗಿಲ್ಲ. ಅಲ್ಲದೆ ಅವರು ಹೇಳಿದಂತೆ ಪ್ರಕರಣಕ್ಕೆ ಸಂಬಂಧಿಸಿ ಯಾರನ್ನೂ ವಶಕ್ಕೆ ಪಡೆದಿಲ್ಲʼʼ ಎಂದು ಸ್ಪಷ್ಟಪಡಿಸಿದ್ದಾರೆ.
ಬಾಂಗ್ಲಾದೇಶದ ವಿವಾದಿತ ನಾಯಕ ಷರೀಫ್ ಉಸ್ಮಾನ್ ಹಾದಿ ಹತ್ಯೆಗೈದ ಇಬ್ಬರು ಭಾರತಕ್ಕೆ ಪಲಾಯನ?
ʼʼಹಾದಿ ಹತ್ಯೆಯ ಶಂಕಿತರು ಎನಿಸಿಕೊಂಡಿರುವವರಿಗೆ ಮೇಘಾಲಯದಲ್ಲಿ ನೆರವಾದ ಪೂರ್ತಿ ಮತ್ತು ಸಾಮಿ ಎಂಬಿಬ್ಬರನ್ನು ಪೊಲೀಸರು ವದಕ್ಕೆ ಪಡೆದಿದ್ದಾರೆ ಎಂದು ಬಾಂಗ್ಲಾ ಹೇಳಿದೆ. ಇದು ಸತ್ಯಕ್ಕೆ ದೂರವಾದುದು. ಭಾರತೀಯ ಅಧಿಕಾರಿಗಳನ್ನು ಸಂಪರ್ಕಿಸದೆ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆʼʼ ಎಂದು ಹೇಳಿದ್ದಾರೆ.
ಬಿಎಸ್‌ಎಫ್ ಇನ್ಸ್‌ಪೆಕ್ಟರ್ ಜನರಲ್ ಒ.ಪಿ. ಉಪಾಧ್ಯಾಯ ಈ ಬಗ್ಗೆ ಮಾತನಾಡಿ, ʼʼಮೇಘಾಲಯದಲ್ಲಿರುವ ಅಂತಾರಾಷ್ಟ್ರೀಯ ಗಡಿಯಾದ ಹಲುವಾಘಾಟ್ ಮೂಲಕ ಇಬ್ಬರು ಹಂತಕರು ಭಾರತಕ್ಕೆ ಪ್ರವೇಶಿಸಿದ್ದಾರೆ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ. ಬಿಎಸ್‌ಎಫ್ ಕಣ್ಣಿಗೆ ಇವರ್ಯಾರೂ ಬಿದ್ದಿಲ್ಲ. ಬಾಂಗ್ಲಾದೇಶದ ಈ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ. ಬಿಎಸ್‌ಎಫ್ ಗಡಿಯಲ್ಲಿ ಕಟ್ಟುನಿಟ್ಟಿನ ಕಣ್ಗಾವಲು ಇರಿಸಿದೆʼʼ ಎಂದು ವಿವರಿಸಿದ್ದಾರೆ.
ಬಾಂಗ್ಲಾದೇಶ ಹಾದಿ ತಪ್ಪಿಸುವ ಹೇಳಿಕೆ ನೀಡುತ್ತಿರುವುದು ಇದು ಮೊದಲ ಸಲವೇನಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಸುಮಾರು 2 ವಾರಗಳ ಹಿಂದೆ ಬಿಎಸ್‌ಎಫ್ ತನ್ನ ಇಬ್ಬರು ನಾಗರಿಕರನ್ನು ಹತ್ಯೆ ಮಾಡಿದೆ ಎಂದು ಬಾಂಗ್ಲಾದೇಶದ ಮಾಧ್ಯಮಗಳು ಸುಳ್ಳು ಸುದ್ದಿ ಹಬ್ಬಿಸಿದ್ದವು. ಅದಾದ ಬಳಿಕ ಈ ಸುದ್ದಿಯನ್ನು ಸುಳ್ಳೆಂದು ಸಾಬೀತಾಗಿತ್ತು.
ಸದ್ಯ ಕೇಳಿ ಬಂದಿರುವ ಆರೋಪಗಳನ್ನು ತಿರಸ್ಕರಿಸಿದರೂ, ಮುನ್ನೆಚ್ಚರಿಕೆ ಕ್ರಮವಾಗಿ ಗಡಿಯಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ ಎಂದು ಮೇಘಾಲಯ ಪೊಲೀಸರು ತಿಳಿಸಿದ್ದಾರೆ. ಗುಪ್ತಚರ ಮೂಲಗಳು ಸಕ್ರಿಯಗೊಂಡಿವೆ ಮತ್ತು ಅಪರಾಧಿಗಳು ಗಡಿ ಮಾರ್ಗಗಳನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ಬಿಎಸ್‌ಎಫ್ ಜತೆ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿರುವುದಾಗಿ ಹೇಳಿದ್ದಾರೆ.