ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MNREGA Row: ಸಂಸತ್ತಿನಲ್ಲಿ ಮನರೇಗಾ ಗದ್ದಲ; ಹೊಸ ಯೋಜನೆಗಳಿಗೆ ಹಿಂದಿ ಹೆಸರು: ಉತ್ತರ-ದಕ್ಷಿಣ ಜಟಾಪಟಿ

ಮನರೇಗಾ ಹೆಸರನ್ನು ಬದಲಾಯಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಗ್ರಾಮೀಣ ರೋಜ್‌ಗಾರ್ ಯೋಜನೆಯಾಗಿ ಮರು ನಾಮಕರಣ ಮಾಡಿದೆ. ಆದರೆ ಈ ಬಗ್ಗೆ ದಕ್ಷಿಣ ರಾಜ್ಯದ ಸಂಸದರು ಅಸಮಾಧಾನಗೊಂಡಿದ್ದು, ಕೇಂದ್ರ ಸರಕಾರದ ಈ ವರ್ತನೆಯನ್ನು ದಕ್ಷಿಣ ರಾಜ್ಯಗಳ ಸಂಸದರು ಹಿಂದಿ ಹೇರಿಕೆ ಎಂದು ಖಂಡಿಸಿದ್ದಾರೆ.

ಮನರೇಗಾ ಹೆಸರು ಬದಲಿಗೆ ಜಟಾಪಟಿ

ಸಂಸತ್ ಕಲಾಪ -

Profile
Sushmitha Jain Dec 16, 2025 10:21 PM

ನವದೆಹಲಿ: ಮನರೇಗಾ ಯೋಜನೆಯ (MNREGA) ಹೆಸರು ಬದಲಾವಣೆ ವಿಚಾರದಲ್ಲಿ ಸಂಸತ್ತು ಗದ್ದಲದ ಗೂಡಾಗಿ ಮಾರ್ಪಟ್ಟಿದೆ. ಸರಕಾರಿ ಯೋಜನೆಗಳಿಗೆ ಹಿಂದಿ ಹೆಸರನ್ನು ಇಡುತ್ತಿರುವ ಕೇಂದ್ರ ಸರಕಾರದ (Central Government) ವರ್ತನೆ ದಕ್ಷಿಣ ರಾಜ್ಯದ ಸಂಸದರನ್ನು ಗರಂ ಆಗುವಂತೆ ಮಾಡಿದೆ. ಸರಕಾರಿ ಯೋಜನೆಗಳಿಗೆ ಇಂಗ್ಲಿಷ್ ಹೆಸರು ಇರಿಸುತ್ತಿದ್ದ ಪರಿಪಾಠವನ್ನು ಮುರಿದು ಹಿಂದಿಯಲ್ಲಿ ಹೆಸರಿಡುವ ಕೇಂದ್ರ ಸರಕಾರದ ನಿರ್ಧಾರ ಇದೀಗ ಕಣಜದ ಗೂಡಿಗೆ ಕಲ್ಲು ಹೊಡೆದಂತಾಗಿದೆ. ಕೇಂದ್ರ ಸರಕಾರದ ಈ ವರ್ತನೆಯನ್ನು ದಕ್ಷಿಣ ರಾಜ್ಯಗಳ ಸಂಸದರು ಹಿಂದಿ ಹೇರಿಕೆ ಎಂದು ಖಂಡಿಸಿದ್ದಾರೆ.

ಮನರೇಗಾ (ಮಹಾತ್ಮಾ ಗಾಂದಿ ಉದ್ಯೋಗ ಖಾತ್ರಿ ಯೋಜನೆ) ಇದರ ಹೆಸರು ಇದೀಗ ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ಎಂಪ್ಲಾಯ್‌ಮೆಂಟ್‌ ಆ್ಯಂಡ್‌ ಲಿವ್ಲಿ ಹುಡ್ ಮಿಷನ್ (ರೂರಲ್) ಎಂದಾಗಿದೆ. ಇದರೊಂದಿಗೆ ಉನ್ನತ ಶಿಕ್ಷಣದಲ್ಲಿ ಸುಧಾರಣೆ ತರಲಿರುವ ಮಸೂದೆಗೆ ವಿಕಸಿತ್ ಭಾರತ್ ಶಿಕ್ಷಾ ಅಧಿಷ್ಟಾನ್ ಬಿಲ್ ಎಂದು ಹೆಸರಿಡಲಾಗಿದೆ. ಇದರೊಂದಿಗೆ ವಿಮಾ ಕಾನೂನುಗಳನ್ನು ತಿದ್ದುಪಡಿಗೊಳಿಸಲಿರುವ ಮಸೂದೆಗೆ ಸಬ್ಕಾ ಬಿಮಾ, ಸಬ್ಕಿ ರಕ್ಷಾ ಬಿಲ್ ಎಂದು ಹೆಸರಿಡಲಾಗಿದೆ.

ಅಣು ಶಕ್ತಿ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಅವಕಾಶ ಮಾಡಿಕೊಡುವ ಮಸೂದೆಯ ಹೆಸರು ಇಂಗ್ಲಿಷ್‌ನಲ್ಲಿದ್ದು, ಅದರ ಶಾರ್ಟ್ ಕಟ್ ಹೆಸರು ಹಿಂದಿ ಪದವನ್ನು ಧ್ವನಿಸುವಂತಿದೆ. ‘ದಿ ಸಸ್ಟೈನೇಬಲ್ ಹಾರ್ನೆಸ್ಸಿಂಗ್ ಆ್ಯಂಡ್‌ ಅಡ್ವಾನ್ಸೆ ಮೆಂಟ್ ಆಫ್ ನ್ಯೂಕ್ಲಿಯರ್ ಎನರ್ಜಿ ಫಾರ್ ಟ್ರಾನ್ಸ್ ಫಾರ್ಮಿಂಗ್ ಇಂಡಿಯಾ’ ಇದನ್ನು ಶಾರ್ಟಾಗಿ ಶಾಂತಿ ಎಂದು ಕರೆಯಲಾಗಿದೆ.

ಕಲ್ಯಾಣ ಕರ್ನಾಟಕದಲ್ಲಿ 21,381 ಶಿಕ್ಷಕರ ಹುದ್ದೆ ಭರ್ತಿ ಮಾಡಿ; ಸಿಎಂಗೆ ತಜ್ಞರ ಸಮಿತಿ ಶಿಫಾರಸು

ಈ ಹಿಂದೆ, ಇಂಡಿಯನ್ ಪಿನಲ್ ಕೋಡ್, ದಿ ಕೋಡ್ ಆಫ್ ಕ್ರಿಮಿನಲ್ ಪ್ರೊಸೀಜರ್ ಆ್ಯಂಡ್‌ ದಿ ಇಂಡಿಯನ್ ಎವಿಡನ್ಸ್ ಆ್ಯಕ್ಟ್ ಇವುಗಳ ಹೆಸರನ್ನು ಕ್ರಮವಾಗಿ ಭಾರತೀಯ ನ್ಯಾಯ ಸಂಹಿತ, ಭಾರತೀಯ ನಾಗರಿಕ್ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷ್ಯ ಬಿಲ್ ಎಂದು ಪುನರ್ ನಾಮಕರಣ ಮಾಡಲಾಗಿತ್ತು. ಇನ್ನು 1934ರ ಏರ್ ಕ್ರಾಫ್ಟ್ ಆ್ಯಕ್ಟ್ ಇದೀಗ ಭಾರತೀಯ ವಾಯುಯಾನ ವಿಧೇಯಕ್ ಆಗಿದೆ.

ಇದೀಗ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರಿಗೆ ಗೌರವ ಸೂಚಕವಾಗಿ ಇರಿಸಲಾಗಿದ್ದ ಮನರೇಗಾ ಹೆಸರನ್ನು ರಾಮ ದೇವರ ಹೆಸರಿಗೆ ರೂಪಾಂತರಿಸಿರುವುದು ಈಗಾಗಲೆ ಕಾಂಗ್ರೆಸ್ ಕಣ್ಣು ಕೆಂಪಾಗಿಸಿದೆ. ಮಾತ್ರವಲ್ಲದೇ ಸರಕಾರಿ ಯೋಜನೆಗಳಿಗೆ ಮತ್ತು ಕಾಯ್ದೆಗಳಿಗೆ ಹಿಂದಿ ಹೆಸರುಗಳನ್ನಿಡುತ್ತ ಹೋಗುವುದರಿಂದ ಉತ್ತರ-ದಕ್ಷಿಣ ಭಾರತೀಯರ ನಡುವಿನ ಅಂತರವನ್ನು ಇನ್ನಷ್ಟು ಹೆಚ್ಚು ಮಾಡಿದಂತಾಗುತ್ತದೆ ಎಂಬ ವಾದವೂ ಇದೀಗ ಪ್ರಬಲವಾಗಿ ಕೇಳಿಬರುತ್ತಿದೆ.

ಯೋಜನೆಗಳಿಗೆ ಹಿಂದಿ ಹೆಸರುಗಳನ್ನಿಡುವುದರಿಂದ ಅವುಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವೆಂದು ಹಲವು ಸಂಸದರು ಮತ್ತು ರಾಜಕೀಯ ನಾಯಕರು ಹೇಳುತ್ತಿದ್ದಾರೆ. ಡಿ. 16ರಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಲೋಕಸಭೆಯಲ್ಲಿ ವಿಕಸಿತ್ ಭಾರತ್ ಶಿಕ್ಷಾ ಅಧಿಷ್ಟಾನ್ ಮಸೂದೆಯನ್ನು ಮಂಡಿಸಿದ್ದರು. ಈ ಸಂದರ್ಭದಲ್ಲಿ, ಆರ್.ಎಸ್.ಪಿ. (ಎ) ನಾಯಕ ಎನ್. ಕರ ಪ್ರೇಮಚಂದ್ರನ್, ತನಗೆ ಈ ಹೆಸರನ್ನು ಉಚ್ಚರಿಸಲು ಕಷ್ಟವಾಗುತ್ತದೆ ಎಂದು ಅಲವತ್ತುಗೊಂಡ ಘಟನೆಯೂ ನಡೆಯಿತು. ಮಾತ್ರವಲ್ಲದೇ, ಈ ರೀತಿಯಾಗಿ ಮಸೂದೆಗಳಿಗೆ ಹಿಂದಿ ಹೆಸರುಗಳನ್ನೇ ಇರಿಸುವುದು ಸಂವಿಧಾನದ ಆರ್ಟಿಕಲ್ 348(ಬಿ)ಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಈ ಆರ್ಟಿಕಲ್ ಪ್ರಕಾರ ಹೊಸ ಕಾನೂನುಗಳಿಗೆ ಇಂಗ್ಲಿಷ್‌ನಲ್ಲೇ ಹೆಸರಿಡಬೇಕೆಂದು ಹೇಳಲಾಗಿದೆ ಎಂದು ಅವರು ವಾದ ಮಂಡಿಸಿದ್ದಾರೆ.

ಕಾಂಗ್ರೆಸ್ ಸದಸ್ಯ ಜೋತಿಮನಿ ಮತ್ತು ಡಿಎಂಕೆ ನಾಯಕ ಟಿ ಎಂ. ಸೆಲ್ವಗಣಪತಿ ಸಹ ಕೇಂದ್ರ ಸರಕಾರದ ಈ ನಡೆಯನ್ನು ಖಂಡಿಸಿದ್ದು, ಇದು ಹಿಂದಿ ಹೇರಿಕೆಯ ಹುನ್ನಾರ. ಈಗಾಗಲೆ ತಮಿಳುನಾಡು ರಾಷ್ಟ್ರೀಯ ಶಿಕ್ಷಣ ನೀತಿ – 2020ರಲ್ಲಿ ತ್ರಿಭಾಷಾ ಸೂತ್ರಕ್ಕೆ ವಿರೋಧ ವ್ಯಕ್ತಪಡಿಸಿರುವುದರಿಂದ ನಮಗೆ ಎಸ್.ಎಸ್.ಎ. ನಿಧಿ ನೀಡಿಕೆಯನ್ನು ನಿರಾಕರಿಸಲಾಗಿದೆ ಎಂದು ಆರೋಪಿಸಿದ್ದಾರೆ. ಇಷ್ಟು ಮಾತ್ರವಲ್ಲದೇ ಡಿಎಂಕೆ ನಾಯಕ ಟಿ.ಆರ್. ಬಾಲು ಈ ಹಿಂದಿ ಹೇರಿಕೆ ನೀತಿಯನ್ನು ಖಂಡಿಸಿದ್ದಾರೆ.

ಸಂವಿಧಾನದ ಆರ್ಟಿಕಲ್ 348(1) (ಬಿ) ಹೇಳುವಂತೆ, ಸಂಸತ್ತಿನ ನಿರ್ಧಾರವನ್ನು ಹೊರತುಪಡಿಸಿ, ಉಳಿದೆಲ್ಲ ಸಂದರ್ಭಗಳಲ್ಲಿ ಕೇಂದ್ರ ಮತ್ತು ರಾಜ್ಯ ಮಟ್ಟಗಳಲ್ಲಿ ಎಲ್ಲ ಕಾನೂನುಗಳ ವಿಚಾರಗಳು, ಕಾಯ್ದೆಗಳು, ಸುಗ್ರೀವಾಜ್ಞೆಗಳು, ಆದೇಶಗಳು, ನಿಯಂತ್ರಕಗಳು ಮತ್ತು ಉಪ-ಕಾನೂನುಗಳು ಹಾಗೂ ಸುಪ್ರೀಂ ಕೋರ್ಟ್, ಹೈಕೋರಟ್‌ಗಳ ಎಲ್ಲ ಕಲಾಪಗಳು ಇಂಗ್ಲಿಷ್‌ನಲ್ಲೇ ಇರಬೇಕು ಎಂದು ಹೇಳುತ್ತದೆ.