ʼʼಇದು ಟ್ರೈಲರ್ ಮಾತ್ರʼʼ; ಪಂಜಾಬ್ ಆಮ್ ಆದ್ಮಿ ಪಕ್ಷದ ಆರೋಪಕ್ಕೆ ವಿಡಿಯೊ ಮೂಲಕ ಸಂಸದ ರಾಘವ್ ಚಡ್ಡಾ ತಿರುಗೇಟು
MP Raghav Chadha: ರಾಜ್ಯಸಭಾ ಸಂಸದ ಮತ್ತು ಕಡೆಗಣಿಸಲ್ಪಟ್ಟ ಆಮ್ ಆದ್ಮಿ ಪಕ್ಷ (ಎಎಪಿ) ನಾಯಕ ರಾಘವ್ ಚಡ್ಡಾ ಪಂಜಾಬ್‌ನ ಸಮಸ್ಯೆಗಳನ್ನು ಪ್ರಸ್ತಾವಿಸಲಿಲ್ಲ ಎಂಬ ತಮ್ಮ ಸಹೋದ್ಯೋಗಿಗಳ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಟ್ರೈಲರ್ ಅಷ್ಟೇ ಹೊರ ಬಂದಿರುವುದು, ಪಿಕ್ಚರ್ ಇನ್ನೂ ಬಾಕಿಯಿದೆ ಎಂದು ಚಡ್ಡಾ ಗುಡುಗಿದ್ದಾರೆ.
ಅರವಿಂದ್ ಕೇಜ್ರಿವಾಲ್ ಜತೆ ರಾಘವ್ ಚಡ್ಡಾ (ಸಂಗ್ರಹ ಚಿತ್ರ) -
ನವದೆಹಲಿ, ಏ. 5: ರಾಜ್ಯಸಭಾ ಸಂಸದ ಮತ್ತು ಕಡೆಗಣಿಸಲ್ಪಟ್ಟ ಆಮ್ ಆದ್ಮಿ ಪಕ್ಷ (AAP) ನಾಯಕ ರಾಘವ್ ಚಡ್ಡಾ (Raghav Chadha) ಪಂಜಾಬ್‌ನ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಪ್ರಸ್ತಾವಿಸಲಿಲ್ಲ ಎಂಬ ತಮ್ಮ ಪಕ್ಷದ ಸಹೋದ್ಯೋಗಿಗಳ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಅವರು ಪಂಜಾಬ್‌ಗೆ ಸಂಬಂಧಿಸಿದ ವಿಷಯಗಳನ್ನು ಮೇಲ್ಮನೆಯಲ್ಲಿ ಪ್ರಸ್ತಾವಿಸುವ ವಿಡಿಯೊ ಬಿಡುಗಡೆ ಮಾಡಿದ್ದಾರೆ.
ಈ ವಿಡಿಯೊವು ಚಡ್ಡಾ ಅವರ ರಾಜ್ಯಸಭೆಯ ಭಾಷಣಗಳ ವಿವಿಧ ಕ್ಲಿಪ್‌ಗಳ ಸಂಗ್ರಹವಾಗಿದ್ದು, ಇದರಲ್ಲಿ ನಂಕಾನಾ ಸಾಹಿಬ್ ಕಾರಿಡಾರ್‌ಗಾಗಿ ಒತ್ತಾಯಿಸುವುದು, ರೈತರಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಆಗ್ರಹಿಸುವುದು, ಭಗತ್ ಸಿಂಗ್‌ಗೆ ಭಾರತ ರತ್ನವನ್ನು ಶಿಫಾರಸು ಮಾಡುವುದು ಹಾಗೂ ಮಹಾರಾಜ ರಂಜಿತ್ ಸಿಂಗ್ ಅವರ ರಾಜ ಸಿಂಹಾಸನವನ್ನು ಹಿಂದಿರುಗಿಸಲು ಆಗ್ರಹಿಸುವುದು ಸೇರಿ ಹಲವು ವಿಚಾರಗಳು ಸೇರಿವೆ.
ರಾಘವ್ ಚಡ್ಡಾ ಪಂಜಾಬ್‌ನ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಪ್ರಸ್ತಾವಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳುವ ವಿಡಿಯೊಗಳನ್ನು ಬಿಡುಗಡೆ ಮಾಡಿದ ಎಎಪಿಯ ನನ್ನ ಸಹೋದ್ಯೋಗಿಗಳಿಗೆ, ಇದುಟ್ರೈಲರ್ ಅಷ್ಟೇ. ಪಿಕ್ಚರ್ ಇನ್ನೂ ಬಾಕಿಯಿದೆ ಎಂದು ಚಡ್ಡಾ ಬರೆದುಕೊಂಡಿದ್ದಾರೆ.
ಇಲ್ಲಿದೆ ರಾಘವ್ ಚಡ್ಡಾ ಪೋಸ್ಟ್:
To my colleagues in AAP who were forced to issue videos saying that “Raghav Chadha failed to raise Punjab’s issues in Parliament”, here is a small trailer…Picture Abhi Baaki Hai.
— Raghav Chadha (@raghav_chadha) April 5, 2026
Punjab isn’t a talking point for me. It is my home, my duty, my soil, my soul❤️ pic.twitter.com/qdTMHK4sqU
ಪಂಜಾಬ್ ನನಗೆ ಮಾತನಾಡುವ ಸ್ಥಳವಲ್ಲ. ಅದು ನನ್ನ ಮನೆ, ನನ್ನ ಕರ್ತವ್ಯ, ನನ್ನ ಮಣ್ಣು, ನನ್ನ ಆತ್ಮ ಎಂದು ಅವರು ಹೇಳಿದ್ದಾರೆ. ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಸೇರಿ ಪಕ್ಷದ ನಾಯಕತ್ವದೊಂದಿಗೆ ಸಂಬಂಧ ಹಳಸಿದ ನಂತರ ಕಳೆದ ವಾರ ರಾಜ್ಯಸಭೆಯಲ್ಲಿ ಆಮ್ ಆದ್ಮಿ ಪಕ್ಷದ ಉಪ ನಾಯಕನ ಸ್ಥಾನದಿಂದ ಚಡ್ಡಾ ಅವರನ್ನು ತೆಗೆದುಹಾಕಲಾಯಿತು. ಅಂದಿನಿಂದ ಚಡ್ಡಾ ಮತ್ತು ಎಎಪಿ ಉನ್ನತ ನಾಯಕರೊಂದಿಗೆ ವಾಗ್ವಾದ ನಡೆಯುತ್ತಲೇ ಇದೆ.
ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ನಾನು ಮೌನವಾಗಿದ್ದೇನೆ, ಸೋತಿಲ್ಲ ಎಂದು ಹೇಳಿದ್ದಾರೆ. ತಮ್ಮ ವಿರುದ್ಧ ಸಂಘಟಿತ ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪಂಜಾಬ್‌ನ ಎಎಪಿ ನಾಯಕರು ರಾಜ್ಯಸಭೆಯಲ್ಲಿ ರಾಜ್ಯದ ಸಮಸ್ಯೆಗಳನ್ನು ಎತ್ತುತ್ತಿಲ್ಲ ಎಂದು ಪ್ರತಿದಾಳಿ ನಡೆಸಿದ್ದಾರೆ.
'ʼಗಾಯಗೊಂಡಿದ್ದೇನೆʼʼ: ʼಧುರಂಧರ್ʼ ಚಿತ್ರದ ಡೈಲಾಗ್ ಮೂಲಕ ಆಪ್ ವಿರುದ್ಧ ರಾಘವ್ ಚಡ್ಡಾ ಆಕ್ರೋಶ
ಆಪ್ ನಾಯಕ ಆರೋಪ
ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕಾಳಜಿಗಳನ್ನು ಬಲವಾಗಿ ಪ್ರತಿನಿಧಿಸುವ ನಿರೀಕ್ಷೆಯೊಂದಿಗೆ ರಾಘವ್ ಚಡ್ಡಾ ಅವರನ್ನು ಪಂಜಾಬ್ ಶಾಸಕರು ರಾಜ್ಯಸಭೆಗೆ ಆಯ್ಕೆ ಮಾಡಿದರು. ಆದರೆ ಪಂಜಾಬ್‌ಗೆ ಸಂಬಂಧಿಸಿದ ಒಂದೇ ಒಂದು ಸೂಕ್ಷ್ಮ ವಿಷಯವನ್ನು ಅವರು ಎತ್ತಲಿಲ್ಲ ಎಂದು ಸಚಿವ ಹರ್ಪಾಲ್ ಸಿಂಗ್ ಚೀಮಾ ಹೇಳಿದ್ದರು.
ಎಎಪಿ ಸಾಮಾನ್ಯ ಜನರಿಗೆ ಅವಕಾಶಗಳನ್ನು ನೀಡುತ್ತದೆ. ಆದರೆನಿರ್ಣಾಯಕ ವಿಚಾರಗಳ ಬಗ್ಗೆ ಮೌನವಾಗಿರುವುದು ಪಂಜಾಬ್ ಮತ್ತು ಅದರ ಜನರಿಗೆ ಮಾಡುವ ದ್ರೋಹವಾಗಿದೆ ಎಂದು ಚೀಮಾ ವಾಗ್ದಾಳಿ ನಡೆಸಿದ್ದರು.
ಆರಂಭದಿಂದಲೂ ಆಪ್ ಜತೆ ಗುರುತಿಸಿಕೊಂಡಿದ್ದ ಚಡ್ಡಾ
ಚಡ್ಡಾ ಎಎಪಿ ಸ್ಥಾಪನೆಯಾದಾಗಿನಿಂದಲೂ ಅದರ ಭಾಗವಾಗಿದ್ದಾರೆ. ದೆಹಲಿಯ ಮಾಡರ್ನ್ ಸ್ಕೂಲ್‌ನ ಹಳೆಯ ವಿದ್ಯಾರ್ಥಿಯಾಗಿರುವ ಅವರು ಚಾರ್ಟರ್ಡ್ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಭ್ರಷ್ಟಾಚಾರ ವಿರೋಧಿ ಭಾರತ ಚಳವಳಿಯ ಕೊನೆಯ ಹಂತದಲ್ಲಿ ಕೇಜ್ರಿವಾಲ್ ಮತ್ತು ಇತರರು ಪಕ್ಷವನ್ನು ಪ್ರಾರಂಭಿಸಬೇಕೆ ಅಥವಾ ಬೇಡವೇ ಎಂದು ಚರ್ಚಿಸುತ್ತಿದ್ದಾಗ ಚಡ್ಡಾ ಕೇಜ್ರಿವಾಲ್ ಅವರನ್ನು ಭೇಟಿಯಾದರು. ನಂತರ ಎಎಪಿ ರಚನೆಯಾದಾಗ 23ನೇ ವಯಸ್ಸಿನಲ್ಲಿ ಚಡ್ಡಾ ಅದಕ್ಕೆ ಬೆಂಬಲ ನೀಡಿದರು.
ಬಳಿಕ ಚಡ್ಡಾ ಎಎಪಿಯ ರಾಷ್ಟ್ರೀಯ ವಕ್ತಾರರಾದರು. ಟಿವಿ ಚರ್ಚೆಗಳಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುತ್ತಿದ್ದರು. ಅವರನ್ನು 26ನೇ ವಯಸ್ಸಿನಲ್ಲಿ ಎಎಪಿಯ ರಾಷ್ಟ್ರೀಯ ಖಜಾಂಚಿಯಾಗಿ ನೇಮಿಸಲಾಯಿತು. 2020ರ ದೆಹಲಿ ಚುನಾವಣೆಯಲ್ಲಿ, ಚಡ್ಡಾ ಅವರನ್ನು ರಾಜಿಂದರ್ ನಗರ ಸ್ಥಾನದಿಂದ ಆಯ್ಕೆ ಮಾಡಲಾಯಿತು. ದೆಹಲಿ ಜಲಮಂಡಳಿಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು. 2022ರಲ್ಲಿ ಚಡ್ಡಾ ಎಎಪಿಯ ರಾಜ್ಯಸಭಾ ಸಂಸದರಾಗಿ ಆಯ್ಕೆಯಾದರು.