ಲೆನ್ಸ್‌ಕಾರ್ಟ್ ವಿವಾದ; ಕಚೇರಿಗೆ ನುಗ್ಗಿ ಉದ್ಯೋಗಿಗಳಿಗೆ ತಿಲಕ ಇಟ್ಟ ಬಿಜೆಪಿ ಮುಸ್ಲಿಂ ನಾಯಕಿ
Lenskart Row: ಲೆನ್ಸ್‌ಕಾರ್ಟ್ ತನ್ನ ಕಚೇರಿ ಡ್ರೆಸ್‌ಕೋಡ್ ಮಾರ್ಗಸೂಚಿಯಲ್ಲಿ ಹಿಂದೂ ಸಂಪ್ರದಾಯದ ಕುರುಹುಗಳಾದ ಬಿಂದಿ, ತಿಲಕ ಮತ್ತು ಕೈಗೆ ಕಟ್ಟುವ ದಾರಗಳನ್ನು ನಿಷೇಧಿಸಿ, ಹಿಜಾಬ್‌ಗೆ ಅನುಮತಿ ನೀಡಿದೆ ಎಂಬ ಆರೋಪ ಇತ್ತೀಚೆಗೆ ಕೇಳಿ ಬಂದಿತ್ತು. ಇದೀಗ ಬಿಜೆಪಿ ಮುಸ್ಲಿಂ ನಾಯಕಿಯೊಬ್ಬರು ಲೆನ್ಸ್‌ಕಾರ್ಟ್ ಮುಂಬೈನ ಶೋ ರೂಂಗೆ ನುಗ್ಗಿ, ಉದ್ಯೋಗಿಗಳಿಗೆ ತಿಲಕ ಹಚ್ಚಿದ್ದಾರೆ.
ಸಂಗ್ರಹ ಚಿತ್ರ -
ಮುಂಬೈ: ಲೆನ್ಸ್‌ಕಾರ್ಟ್ ತನ್ನ ಕಚೇರಿ ಡ್ರೆಸ್‌ಕೋಡ್ ಮಾರ್ಗಸೂಚಿಯಲ್ಲಿ ಹಿಂದೂ ಸಂಪ್ರದಾಯದ ಕುರುಹುಗಳಾದ ಬಿಂದಿ, ತಿಲಕ ಮತ್ತು ಕೈಗೆ (Lenskart Row) ಕಟ್ಟುವ ದಾರಗಳನ್ನು ನಿಷೇಧಿಸಿ, ಹಿಜಾಬ್‌ಗೆ (Hijab) ಅನುಮತಿ ನೀಡಿದೆ ಎಂಬ ಆರೋಪ ಇತ್ತೀಚೆಗೆ ಕೇಳಿ ಬಂದಿತ್ತು. ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಪಿಯೂಷ್ ಬನ್ಸಾಲ್ ಅವರು ಈ ಕುರಿತು ಸ್ಪಷ್ಟನೆಯನ್ನೂ ನೀಡಿದ್ದರು. ಇದೀಗ ಬಿಜೆಪಿ ಮುಸ್ಲಿಂ ನಾಯಕಿಯೊಬ್ಬರು ಲೆನ್ಸ್‌ಕಾರ್ಟ್ ಮುಂಬೈನ ಶೋ ರೂಂಗೆ ನುಗ್ಗಿ, ಉದ್ಯೋಗಿಗಳಿಗೆ ತಿಲಕ ಹಚ್ಚಿ, ಅವರ ಮಣಿಕಟ್ಟಿಗೆ ಪವಿತ್ರ ದಾರಗಳನ್ನು (ಕಲಾವ) ಕಟ್ಟಿಕೊಂಡು ಘೋಷಣೆಗಳನ್ನು ಕೂಗಿದ್ದಾರೆ. ಅವರ ಜೊತೆಗೆ ಹಿಂದೂ ಸಂಘಟನೆಗಳು ಬೆಂಬಲ ನೀಡಿವೆ.
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ನಾಯಕಿ ನಾಜಿಯಾ ಇಲಾಹಿ ಮತ್ತು ಇತರರು ಲೆನ್ಸ್‌ಕಾರ್ಟ್ ಅಂಗಡಿಯ ಸಿಬ್ಬಂದಿಯನ್ನು ಎದುರಿಸಿ ಆವರಣದೊಳಗೆ ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದ್ದಾರೆ. ಕೆಲ ಕಾಲ ಲೆನ್ಸ್‌ಕಾರ್ಟ್ ಕಚೇರಿಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಆಡಳಿತ ಮಂಡಳಿಯು ಒಂದು ಧರ್ಮವನ್ನು ಇನ್ನೊಂದು ಧರ್ಮಕ್ಕಿಂತ ಹೆಚ್ಚಾಗಿ ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದರು. "ಇದು ಹಿಂದೂ ರಾಷ್ಟ್ರ. ಲೆನ್ಸ್‌ಕಾರ್ಟ್ ಅನ್ನು ಬಹಿಷ್ಕರಿಸಲಾಗುವುದು ಅಥವಾ ಮಾಲೀಕರು ಕ್ಷಮೆಯಾಚಿಸದ ಹೊರತು ಅದರ ಎಲ್ಲಾ ಮಳಿಗೆಗಳನ್ನು ಮುಚ್ಚಲಾಗುವುದು ಎಂದು ನಾಜಿಯಾ ಇಲಾಹಿ ಹೇಳಿದ್ದಾರೆ. ಹಿಂದೂ ಉದ್ಯೋಗಿಗಳನ್ನು ಮುಂದೆ ಕರೆದು ಅವರ ಹಣೆಯ ಮೇಲೆ ತಿಲಕ ಇಡುತ್ತಾ, ಧಾರ್ಮಿಕ ಗುರುತನ್ನು ವ್ಯಕ್ತಪಡಿಸುವಲ್ಲಿ "ಯಾವುದೇ ನಾಚಿಕೆ" ಇರಬಾರದು ಎಂದು ಇಲಾಹಿ ಹೇಳಿದರು.
ವಿಡಿಯೋ ನೋಡಿ
She @ElahiNazia1 claiming to be a BJP Minority leader is seen abusing and harassing a Muslim working in Lenskart. What does he have to do with The Lenskart controversy? If you have a problem, go confront the owner. Why harras the employees? @narendramodi pic.twitter.com/02VTnSOTG8
— Mohammed Zubair (@zoo_bear) April 20, 2026
ಏತನ್ಮಧ್ಯೆ, ಕಂಪನಿಯ ತರಬೇತಿಯ ಸಮಯದಲ್ಲಿ, ತಿಲಕ ಮತ್ತು ಪವಿತ್ರ ದಾರ (ಕಲಾವ) ಧರಿಸುವುದನ್ನು ನಿಷೇಧಿಸಲಾಗಿದೆ ಎಂದು ಸಿಬ್ಬಂದಿಗೆ ತಿಳಿಸಲಾಗಿತ್ತು ಎಂದು ಶೋ ರೂಂ ಉದ್ಯೋಗಿಯೊಬ್ಬರು ಹೇಳಿದ್ದಾರೆ. ವಿವಾಹಿತರಾಗಿದ್ದರೂ ಸಹ ಮಹಿಳಾ ಉದ್ಯೋಗಿಗಳಿಗೆ ಮಂಗಳಸೂತ್ರ ಧರಿಸಲು ಅವಕಾಶವಿಲ್ಲ ಎಂದು ಅವರು ಆರೋಪಿಸಿದ್ದಾರೆ. ಲೆನ್ಸ್‌ಕಾರ್ಟ್ ತನ್ನ ಆಂತರಿಕ ದಾಖಲೆಯು ಉದ್ಯೋಗಿಗಳಿಗೆ ಹಿಜಾಬ್ ಧರಿಸಲು ಅವಕಾಶ ನೀಡಿ, ಬಿಂದಿ ಮತ್ತು ತಿಲಕಗಳಂತಹ ಗೋಚರ ಧಾರ್ಮಿಕ ಚಿಹ್ನೆಗಳನ್ನು ನಿರ್ಬಂಧಿಸಿದೆ ಎಂಬ ಆರೋಪಗಳು ಕೇಳಿಬಂದ ನಂತರ ವಿವಾದ ಹುಟ್ಟಿಕೊಂಡಿದೆ.
ಲೆನ್ಸ್‌ಕಾರ್ಟ್‌ನ ಆಂತರಿಕ ದಾಖಲೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಉದ್ಯೋಗಿಗಳಿಗೆ ಪ್ರಮುಖ ಸೂಚನೆ ನೀಡಲಾಗಿತ್ತು. ವಿವಾಹಿತ ಮಹಿಳೆಯರು ಧರಿಸುವ ಸಿಂಧೂರವು ಹಣೆಯ ಮೇಲೆ ಬೀಳದಂತೆ ಅತಿ ಕಡಿಮೆಯಿರಬೇಕು. ಬಿಂದಿ ಧರಿಸಲು ಅನುಮತಿಯಿಲ್ಲ. ಕೈಗೆ ಕಟ್ಟುವ ಧಾರ್ಮಿಕ ದಾರಗಳು ಅಥವಾ ರಿಸ್ಟ್‌ಬ್ಯಾಂಡ್‌ಗಳನ್ನು ತೆಗೆಯಬೇಕು. ಮುಸ್ಲಿಂ ಮಹಿಳೆಯರಿಗೆ ಕಪ್ಪು ಬಣ್ಣದ ಹಿಜಾಬ್ ಧರಿಸಲು ಅನುಮತಿಯಿದೆ ಎಂದು ಹೇಳಲಾಗಿತ್ತು.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಪಿಯೂಷ್ ಬನ್ಸಾಲ್, "ಈ ದಾಖಲೆಯು ನಮ್ಮ ಪ್ರಸ್ತುತ ಮಾರ್ಗಸೂಚಿಯನ್ನು ಪ್ರತಿನಿಧಿಸುವುದಿಲ್ಲ. ನಮ್ಮ ಗ್ರೂಮಿಂಗ್ ಪಾಲಿಸಿಯು ಕಾಲಕಾಲಕ್ಕೆ ಬದಲಾಗುತ್ತಾ ಬಂದಿದೆ. ಹಳೆಯ ಆವೃತ್ತಿಗಳು ನಾವು ಇಂದು ಏನಾಗಿದ್ದೇವೆ ಎಂಬುದನ್ನು ಬಿಂಬಿಸುವುದಿಲ್ಲ. ಇದರಿಂದ ಉಂಟಾದ ಗೊಂದಲಕ್ಕೆ ನಾವು ಕ್ಷಮೆಯಾಚಿಸುತ್ತೇವೆ," ಎಂದು ತಿಳಿಸಿದರು.
ಅಲ್ಲದೆ, "ಬಿಂದಿ ಮತ್ತು ತಿಲಕ ಸೇರಿದಂತೆ ಯಾವುದೇ ರೀತಿಯ ಧಾರ್ಮಿಕ ನಂಬಿಕೆಗಳ ಅಭಿವ್ಯಕ್ತಿಗೆ ಲೆನ್ಸ್‌ಕಾರ್ಟ್‌ನಲ್ಲಿ ಯಾವುದೇ ನಿರ್ಬಂಧಗಳಿಲ್ಲ. ಭಾರತದಾದ್ಯಂತ ಇರುವ ನಮ್ಮ ಸಾವಿರಾರು ಉದ್ಯೋಗಿಗಳು ಪ್ರತಿದಿನ ತಮ್ಮ ಸಂಸ್ಕೃತಿ ಮತ್ತು ನಂಬಿಕೆಯನ್ನು ಹೆಮ್ಮೆಯಿಂದ ಧರಿಸುತ್ತಿದ್ದಾರೆ," ಎಂದು ಹೇಳಿದ್ದರು.