ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹೆಸರಿನಲ್ಲಿ ಟೆಲಿಗ್ರಾಂನಲ್ಲಿ ಕೋಟಿ ಕೋಟಿ ವಂಚನೆ! ಡಾರ್ಕ್ ವೆಬ್ ಜಾಲದ ಬೆಚ್ಚಿಬೀಳಿಸುವ ವರದಿ ಇಲ್ಲಿದೆ

ನೀಟ್ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಹೆಸರಿನಲ್ಲಿ ಟೆಲಿಗ್ರಾಂ ಹಾಗೂ ಡಾರ್ಕ್ ವೆಬ್ ಮೂಲಕ ವಿದ್ಯಾರ್ಥಿಗಳನ್ನು ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಜಾಲದ ಕಾರ್ಯವೈಖರಿಯನ್ನು 'ಅಥೇನಿಯನ್ ಟೆಕ್' ವರದಿ ಬಹಿರಂಗಪಡಿಸಿದೆ. ಅನುಮಾನಾಸ್ಪದ ಚಾನೆಲ್‌ಗಳಿಗೆ ಹಣ ಪಾವತಿಸಬಾರದು ಎಂದು ವರದಿ ಎಚ್ಚರಿಕೆ ನೀಡಿದೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹೆಸರಿನಲ್ಲಿ ಟೆಲಿಗ್ರಾಂ ವಂಚನೆ ಜಾಲ ಬಯಲು..!

ಟೆಲಿಗ್ರಾಂ -

Profile
Sushmitha Jain Jul 7, 2026 2:53 PM

ನವದೆಹಲಿ, ಜುಲೈ 7: ದೇಶದಾದ್ಯಂತ ಸಂಚಲನ ಮೂಡಿಸಿದ್ದ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟೆಲಿಗ್ರಾಂ (Telegram) ಮತ್ತು ಡಾರ್ಕ್ ವೆಬ್ ಮೂಲಕ ನಡೆಯುತ್ತಿದ್ದ ವಂಚನೆ ಜಾಲದ ಕುರಿತು ಹೊಸ ಮಾಹಿತಿ ಬಹಿರಂಗವಾಗಿದೆ. 'ಅಥೇನಿಯನ್ ಟೆಕ್' (Athenian Tech) ಬಿಡುಗಡೆ ಮಾಡಿರುವ 'ಥ್ರೆಟ್ ಇಂಟೆಲಿಜೆನ್ಸ್ ರಿಪೋರ್ಟ್'ನಲ್ಲಿ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ವಂಚಿಸುತ್ತಿದ್ದ ಜಾಲದ ಕಾರ್ಯವೈಖರಿ ವಿವರಿಸಲಾಗಿದೆ.

ನೀಟ್ ಪರೀಕ್ಷೆಗೆ ಮುನ್ನ ಟೆಲಿಗ್ರಾಂನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಜೂನ್ 16ರಿಂದ 22ರವರೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಟೆಲಿಗ್ರಾಂಗೆ ತಾತ್ಕಾಲಿಕ ನಿಷೇಧ ಹೇರಿತ್ತು. ನಿರ್ದಿಷ್ಟ ಚಾನೆಲ್‌ಗಳನ್ನು ಮಾತ್ರ ಬಂದ್ ಮಾಡಿದರೆ ವಂಚಕರು ಹೊಸ ಗುಂಪುಗಳು ಮತ್ತು ಬಾಟ್‌ಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಸರ್ಕಾರ ತನ್ನ ವಾದದಲ್ಲಿ ತಿಳಿಸಿತ್ತು. ಬಳಿಕ ಟೆಲಿಗ್ರಾಂ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿದ ದೆಹಲಿ ಹೈಕೋರ್ಟ್ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿತ್ತು.

ವರದಿ ಪ್ರಕಾರ, ವಂಚಕರು ಮೊದಲು ಪರೀಕ್ಷೆಯ ಹೆಸರಿನಲ್ಲಿ ಸಾರ್ವಜನಿಕ ಟೆಲಿಗ್ರಾಂ ಚಾನೆಲ್‌ಗಳನ್ನು ಆರಂಭಿಸಿ ವಿದ್ಯಾರ್ಥಿಗಳನ್ನು ಸೆಳೆಯುತ್ತಿದ್ದರು. ಬಳಿಕ ಮಾದರಿ ಪ್ರಶ್ನೆಪತ್ರಿಕೆ, ನೋಟ್ಸ್ ಹಾಗೂ ಅಧ್ಯಯನ ಸಾಮಗ್ರಿ ಹಂಚಿ ಅವರ ವಿಶ್ವಾಸ ಗಳಿಸುತ್ತಿದ್ದರು. ಪರೀಕ್ಷೆಗೆ ಕೆಲವೇ ಗಂಟೆಗಳ ಮೊದಲು "ನಮ್ಮ ಬಳಿ ನಿಜವಾದ ಪ್ರಶ್ನೆಪತ್ರಿಕೆ ಇದೆ" ಎಂದು ನಂಬಿಸಿ ₹50 ಸಾವಿರದಿಂದ ₹1 ಲಕ್ಷದವರೆಗೆ ಹಣಕ್ಕೆ ಬೇಡಿಕೆ ಇಡಲಾಗುತ್ತಿತ್ತು.

ಬೋರ್ಡ್ ಪರೀಕ್ಷೆಗಳ ಹೆಸರಲ್ಲಿಯೂ ಇದೇ ರೀತಿಯ ವಂಚನೆ ನಡೆಯುತ್ತಿದ್ದು, ಎಸ್‌ಎಸ್‌ಎಲ್‌ಸಿ ಸೇರಿದಂತೆ ವಿವಿಧ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಹೆಸರಿನಲ್ಲಿ ₹500ರಿಂದ ₹15 ಸಾವಿರದವರೆಗೆ ಹಣ ಪಡೆದು ಖಾಸಗಿ ಗುಂಪುಗಳಿಗೆ ಸೇರಿಸಲಾಗುತ್ತಿತ್ತು. ನಂತರ ನಕಲಿ ಪ್ರಶ್ನೆಪತ್ರಿಕೆಗಳನ್ನು ಹಂಚಿ ವಿದ್ಯಾರ್ಥಿಗಳನ್ನು ವಂಚಿಸಲಾಗುತ್ತಿತ್ತು ಎಂದು ವರದಿ ತಿಳಿಸಿದೆ.

ನೀಟ್ ಮರು ಪರೀಕ್ಷೆ: ನಿರ್ಬಂಧ ಮುಕ್ತಾಯದ ಬಳಿಕ ಮತ್ತೆ ಟೆಲಿಗ್ರಾಮ್ ಆ್ಯಪ್ ಆ್ಯಕ್ಟೀವ್‌

ನೀಟ್ ಮಾತ್ರವಲ್ಲದೆ UPSC ಸಿವಿಲ್ ಸರ್ವೀಸ್, SSC CGL, NDA, IBPS PO ಹಾಗೂ ವಿವಿಧ ರಾಜ್ಯಗಳ ಬೋರ್ಡ್ ಪರೀಕ್ಷೆಗಳ ಅಭ್ಯರ್ಥಿಗಳನ್ನೂ ಈ ಜಾಲ ಗುರಿಯಾಗಿಸಿಕೊಂಡಿತ್ತು. ಮತ್ತೊಂದೆಡೆ, ಡಾರ್ಕ್ ವೆಬ್‌ನಲ್ಲಿರುವ "India Exam Papers Hub" ಎಂಬ ಮಾರುಕಟ್ಟೆಯಲ್ಲಿ ಪ್ರಮುಖ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು 60ರಿಂದ 500 ಅಮೆರಿಕನ್ ಡಾಲರ್‌ಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಇಲ್ಲಿ ಬಿಟ್‌ಕಾಯಿನ್ ಮೂಲಕ ಮಾತ್ರ ಪಾವತಿ ಸ್ವೀಕರಿಸಲಾಗುತ್ತಿತ್ತು ಎಂದು ವರದಿ ಹೇಳಿದೆ.

ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಯಾವುದೇ ಪ್ರಶ್ನೆಪತ್ರಿಕೆ ಸೋರಿಕೆ ಸಂದೇಶಗಳನ್ನು ನಂಬಬಾರದು ಎಂದು ವರದಿ ಎಚ್ಚರಿಕೆ ನೀಡಿದೆ. ಅನುಮಾನಾಸ್ಪದ ಟೆಲಿಗ್ರಾಂ ಚಾನೆಲ್ ಅಥವಾ ಡಾರ್ಕ್ ವೆಬ್ ಲಿಂಕ್ ಕಂಡರೆ ತಕ್ಷಣ ಸ್ಕ್ರೀನ್‌ಶಾಟ್ ತೆಗೆದು ಪೊಲೀಸ್ ಹಾಗೂ ಸಂಬಂಧಿತ ಪರೀಕ್ಷಾ ಸಂಸ್ಥೆಗಳಿಗೆ ಮಾಹಿತಿ ನೀಡಬೇಕು. ಪ್ರಶ್ನೆಪತ್ರಿಕೆ ಹೆಸರಿನಲ್ಲಿ ಯಾವುದೇ ಹಣ ಪಾವತಿಸಬಾರದು. ಜೊತೆಗೆ ಪರೀಕ್ಷಾ ಅವಧಿಯಲ್ಲಿ ಸಾಮಾಜಿಕ ಜಾಲತಾಣಗಳು ಮತ್ತು ಡಾರ್ಕ್ ವೆಬ್ ಮೇಲೆ ನಿರಂತರ ನಿಗಾ ವಹಿಸುವಂತೆ ವರದಿ ಶಿಫಾರಸು ಮಾಡಿದೆ.