ನೀಟ್ ಮರು ಪರೀಕ್ಷೆ: ನಿರ್ಬಂಧ ಮುಕ್ತಾಯದ ಬಳಿಕ ಮತ್ತೆ ಟೆಲಿಗ್ರಾಮ್ ಆ್ಯಪ್ ಆ್ಯಕ್ಟೀವ್
ನೀಟ್ ಮರು ಪರೀಕ್ಷೆ ಹಿನ್ನೆಲೆಯಲ್ಲಿ ದೇಶಾದ್ಯಂತ ಜೂನ್ 16ರಂದು ಕೇಂದ್ರ ಸರ್ಕಾರವು ಟೆಲಿಗ್ರಾಮ್ ಮತ್ತು ಅದರ ಸಂಬಂಧಿತ ಯುಆರ್ ಎಲ್ ಗಳನ್ನು ಜೂನ್ 22ರವರೆಗೆ ನಿರ್ಬಂಧಿಸಲು ನಿರ್ದೇಶಿಸಿತ್ತು. ಇದೀಗ ಈ ನಿರ್ಬಂಧದ ಅವಧಿ ಕೊನೆಯಾಗಿದ್ದರಿಂದ ಟೆಲಿಗ್ರಾಮ್ ಅಪ್ಲಿಕೇಶನ್ ಮತ್ತೆ ಕಾರ್ಯಾರಂಭ ಮಾಡತೊಡಗಿದೆ. ಆದರೂ ಕೆಲವೆಡೆ ಈ ನಿರ್ಬಂಧ ಮುಂದುವರಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.
ಸಂಗ್ರಹ ಚಿತ್ರ -
ನವದೆಹಲಿ: ವೈದ್ಯಕೀಯ ಶಿಕ್ಷಣ ಸೀಟಿಗಾಗಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಮರು ಪರೀಕ್ಷೆ (NEET-UG re-exam) 2026ರ ಹಿನ್ನೆಲೆಯಲ್ಲಿ ದೇಶಾದ್ಯಂತ ಜೂನ್ 16ರಂದು ಕೇಂದ್ರ ಸರ್ಕಾರವು ಟೆಲಿಗ್ರಾಮ್ (Telegram) ಮತ್ತು ಅದರ ಸಂಬಂಧಿತ ಯುಆರ್ ಎಲ್ (URL) ಗಳನ್ನು ಜೂನ್ 22ರವರೆಗೆ ನಿರ್ಬಂಧಿಸಲು ನಿರ್ದೇಶಿಸಿತ್ತು. ಇದೀಗ ಈ ನಿಷೇಧ ಅವಧಿ ಮುಕ್ತಾಯವಾಗಿದ್ದರೂ ಕೆಲವರು ಟೆಲಿಗ್ರಾಮ್ ಅಪ್ಲಿಕೇಶನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವ ಆರೋಪವನ್ನು ಮಾಡಿದ್ದಾರೆ. ನಿರ್ಬಂಧದ ಬಳಿಕ ಗೂಗಲ್ ಪ್ಲೇ ಸ್ಟೋರ್ (Google Playstore)ನಲ್ಲಿ ಟೆಲಿಗ್ರಾಮ್ ಅಪ್ಲಿಕೇಶನ್ ಕಾಣಿಕೊಂಡರೂ ಆಪಲ್‌ನ ಆಪ್‌ಸ್ಟೋರ್‌ನಲ್ಲಿ (Apple's Appstore) ಕಾಣಿಸಿಕೊಂಡಿಲ್ಲ. ಈ ಬಗ್ಗೆ ಹಲವಾರು ಮಂದಿ ದೂರಿದ್ದಾರೆ.
ಕೇಂದ್ರ ಸರ್ಕಾರವು ಜೂನ್ 16ರಂದು ದೇಶಾದ್ಯಂತ ಜೂನ್ 21 ರಂದು ನಡೆಯಲಿರುವ ನೀಟ್ ಯುಜಿ ಮರು ಪರೀಕ್ಷೆಗೆ ಮುಂಚಿತವಾಗಿ ಟೆಲಿಗ್ರಾಮ್ ಮತ್ತು ಅದರ ಸಂಬಂಧಿತ ಯುಆರ್ ಎಲ್ ಗಳನ್ನು ನಿರ್ಬಂಧಿಸಲು ಆದೇಶಿಸಿತ್ತು. ಜೂನ್ 22 ರಂದು ನಿರ್ಬಂಧದ ಅವಧಿ ಮುಕ್ತಾಯವಾಗಿದ್ದರೂ ಕೆಲವು ಬಳಕೆದಾರರಿಗೆ ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ಕೆಲವು ಬಳಕೆದಾರರಿಗೆ ಮಂಗಳವಾರ ಬೆಳಗ್ಗೆಯಿಂದ ಟೆಲಿಗ್ರಾಮ್ ಅಪ್ಲಿಕೇಶನ್ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. ಗೂಗಲ್ ಮತ್ತು ಆಪಲ್‌ನ ಅಪ್ಲಿಕೇಶನ್ ಸ್ಟೋರ್‌ಗಳಲ್ಲಿ ಪಟ್ಟಿಯಿಂದ ತೆಗೆದುಹಾಕಲ್ಪಟ್ಟಿದ್ದ ಈ ಆಪ್ ಬಳಿಕ ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಾದರೂ ಆಪಲ್‌ನ ಆಪ್‌ಸ್ಟೋರ್‌ನಲ್ಲಿ ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿಲ್ಲ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69ಎ ಅಡಿಯಲ್ಲಿ ಜೂನ್ 16 ರಂದು ಹೊರಡಿಸಲಾದ ಮಧ್ಯಂತರ ಆದೇಶದಲ್ಲಿ ಕೇಂದ್ರ ಸರ್ಕಾರವು ಟೆಲಿಗ್ರಾಮ್ ಮತ್ತು ಅದರ ಸಂಬಂಧಿತ ಯುಆರ್ ಎಲ್ ಗಳನ್ನು ಜೂನ್ 22 ರವರೆಗೆ ಭಾರತದಾದ್ಯಂತ ನಿರ್ಬಂಧಿಸಲು ನಿರ್ದೇಶಿಸಿತು ಮತ್ತು ಜೂನ್ 30ರವರೆಗೆ ಅದರ ಸಂದೇಶ ಸಂಪಾದನೆ ವೈಶಿಷ್ಟ್ಯವನ್ನು ನಿಷ್ಕ್ರಿಯಗೊಳಿಸಲು ಸೂಚಿಸಿತ್ತು.
ನಿರ್ಬಂಧ ವಿಸ್ತರಣೆ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ನಿರ್ದೇಶನವನ್ನು ನೀಡಿಲ್ಲ. ಕೆಲವು ಬಳಕೆದಾರರಿಗೆ ತೊಂದರೆಯಾಗಿದೆ. ಆಪ್ ಸ್ಟೋರ್ ಗಳಲ್ಲಿ ಸೇವೆಗಳ ಪುನಃಸ್ಥಾಪನೆ ಹಂತ ಹಂತವಾಗಿ ಜಾರಿಗೆ ತರಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಕಾಕ್ರೋಚ್ ಜನತಾ ಪಾರ್ಟಿ ದೇಶ ವಿಭಜನೆ ಶಕ್ತಿಗಳ 'ಬಿ ಟೀಮ್'ʼ: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಾಗ್ದಾಳಿ
ನೀಟ್ ಮರು ಪರೀಕ್ಷೆಯಲ್ಲಿ ಸಂಭವನೀಯ ಅಕ್ರಮಗಳನ್ನು ತಡೆಗಟ್ಟುವ ಸಲುವಾಗಿ ಮುಂಚಿತವಾಗಿಯೇ ಟೆಲಿಗ್ರಾಮ್ ಅನ್ನು ನಿರ್ಬಂಧಿಸಲಾಗಿತ್ತು. ಕಳೆದ ತಿಂಗಳು ನಡೆದ ನೀಟ್ ಪ್ರಶ್ನೆ ಪತ್ರಿಕೆಯು ಟೆಲಿಗ್ರಾಮ್ ಮೂಲಕ ಸೋರಿಕೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಮುಂಚಿತವಾಗಿ ಈ ಕ್ರಮ ಕೈಗೊಂಡಿತ್ತು. ಮೇ 12ರಂದು ರದ್ದುಗೊಂಡ ಪರೀಕ್ಷೆ ಅಕ್ರಮಕ್ಕೆ ಕಾರಣರಾದ 13 ಮಂದಿಯನ್ನು ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿದೆ.