ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸೋನಿಯಾ ಗಾಂಧಿ ಆತ್ಮಕಥೆಯಲ್ಲಿ ನರೇಂದ್ರ ಮೋದಿ, ಆರ್‌ಎಸ್‌ಎಸ್, ಚೀನಾ ಭಾಗಕ್ಕೆ ಕತ್ತರಿ ಹಾಕಲು ನಕಾರ; ಪುಸ್ತಕ ಪ್ರಕಟಿಸದಿರಲು ಪೆಂಗ್ವಿನ್ ಇಂಡಿಯಾ ನಿರ್ಧಾರ

Sonia Gandhi: ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಕಥೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಪುಸ್ತಕವನ್ನು ಪ್ರಕಟಿಸದಿರಲು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ನಿರ್ಧರಿಸಿದೆ ಎಂದು ವರದಿಯಾಗಿದೆ. ಕೆಲವೊಂದು ಭಾಗಕ್ಕೆ ಕತ್ತರಿ ಹಾಕಲು ಸೋನಿಯಾ ಗಾಂಧಿ ನಿರಾಕಿಸಿದ್ದರಿಂದ ಈ ನಿರ್ಧಾರಕ್ಕೆ ವರಲಾಗಿದೆ ಎನ್ನಲಾಗಿದೆ.

ಸೋನಿಯಾ ಗಾಂಧಿ ಆತ್ಮಕಥೆ ಪ್ರಕಟಣೆಯಿಂದ ಹಿಂದೆ ಸರಿದ ಪೆಂಗ್ವಿನ್ ಸಂಸ್ಥೆ

ಸಾಂದರ್ಭಿಕ ಚಿತ್ರ -

Ramesh Ballamoole
Ramesh Ballamoole Aug 28, 2026 8:24 PM

ನವದೆಹಲಿ, ಆ. 28: ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ (Sonia Gandhi) ಅವರ ಬಹುನಿರೀಕ್ಷಿತ ಆತ್ಮಕಥೆ ‘ಬಿಲಾಂಗಿಂಗ್‌: ಎ ಜರ್ನಿ ಆಫ್ ಲವ್’ (Belonging: A Journey of Love) ಪುಸ್ತಕವನ್ನು ಪ್ರಕಟಿಸದಿರಲು ಪೆಂಗ್ವಿನ್ ಇಂಡಿಯಾ ಸಂಸ್ಥೆ ನಿರ್ಧರಿಸಿದೆ. ಕೆಲವೊಂದು ಬದಲಾವಣೆಗಳನ್ನು ಮಾಡಲು ಸೋನಿಯಾ ಗಾಂಧಿ ನಿರಾಕರಿಸಿದ್ದರಿಂದ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಭಾರತದಲ್ಲಿ ಆತ್ಮಕಥೆ ಪ್ರಕಟಿಸದಿರಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಈ ಆತ್ಮಕಥೆಯು ಪೆಂಗ್ವಿನ್ ರಾಂಡಮ್ ಹೌಸ್‌ನ ಭಾಗವಾಗಿರುವ ಆಲ್‌ಫ್ರೆಡ್ ಎ ನಾಫ್ ಸಂಸ್ಥೆಯ ಮೂಲಕ ನವಂಬರ್ 10ರಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ನಾಫ್ ಸಂಸ್ಥೆಯ ಆರಂಭದಲ್ಲಿ 1 ಲಕ್ಷ ಪ್ರತಿಗಳನ್ನು ಮುದ್ರಿಸುವುದಾಗಿ ಘೋಷಿಸಿತ್ತು. ಈಗ ಪೆಂಗ್ವಿನ್ ಇಂಡಿಯಾ ಈ ಯೋಜನೆಯಿಂದ ಹಿಂದೆ ಸರಿದಿದೆ.

ಪೆಂಗ್ವಿನ್ ಇಂಡಿಯಾ ಪ್ರಕಟಣೆಯಿಂದ ಹಿಂದೆ ಸರಿದಿರುವುದರಿಂದ ಹಾರ್ಪರ್ ಕಾಲಿನ್ಸ್ ಸಂಸ್ಥೆಯು ಭಾರತದಲ್ಲಿ ಈ ಪುಸ್ತಕವನ್ನು ಪ್ರಕಟಿಸುವ ಮತ್ತು ವಿತರಿಸುವ ಹಕ್ಕನ್ನು ಖರೀದಿಸಲಿದೆ ಎನ್ನಲಾಗಿದೆ.

ಸೋನಿಯಾ ಗಾಂಧಿ ಆತ್ಮಕಥೆ ಪ್ರಕಟಿಸದಿರಲಿ ನಿರ್ಧರಿಸಿದ ಪೆಂಗ್ವಿನ್‌ ಇಂಡಿಯಾ ಸಂಸ್ಥೆ:



ಯಾಕೆ ಈ ಗೊಂದಲ?

‘ಬಿಲಾಂಗಿಂಗ್‌: ಎ ಜರ್ನಿ ಆಫ್ ಲವ್’ ಪುಸ್ತಕವು ಎರಡನೇ ಮಹಾಯುದ್ಧದ ನಂತರ ಇಟಲಿಯಲ್ಲಿ ಜನಿಸಿದ ಸೋನಿಯಾ ಗಾಂಧಿ ಅವರ ಬಾಲ್ಯ, ಭಾರತಕ್ಕೆ ಬಂದ ಅವರ ಪಯಣ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರೊಂದಿಗಿನ ವಿವಾಹ ಜೀವನದ ನೆನಪುಗಳನ್ನು ಒಳಗೊಂಡಿದೆ ಎಂದು ನಿರೀಕ್ಷಿಸಲಾಗಿದೆ. ಸಂಜಯ ಗಾಂಧಿ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಅಗಲಿಕೆ ಸೇರಿ ಸೋನಿಯಾ ಜೀವನದಲ್ಲಿ ನಡೆದ ಪ್ರಮುಖ ಘಟನೆಗಳು ಹಾಗೂ ದುರಂತಗಳ ಕುರಿತಾದ ವಿವರಗಳನ್ನು ಈ ಪುಸ್ತಕ ಒಳಗೊಂಡಿದೆ. 2004ರ ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್‌ ನೇತೃತ್ವದ ಯುಪಿಎ ಆಡಳಿತಕ್ಕೆ ಬಂದಾಗ ಪ್ರಧಾನಿ ಹುದ್ದೆಯನ್ನು ವಹಿಸಿಕೊಳ್ಳದಿರಲು ತೆಗೆದುಕೊಂಡ ನಿರ್ಧಾರ ಬಗ್ಗೆಯೂ ಸೋನಿಯಾ ಗಾಂಧಿ ಪುಸ್ತಕದಲ್ಲಿ ವಿವರಿಸಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಅವರು ಸಾರ್ವಜನಿಕ ಜೀವನಕ್ಕೆ ಕಾಲಿಟ್ಟ ಸಂದರ್ಭ ಮತ್ತು ಭಾರತದ ಅತ್ಯಂತ ಪ್ರತಿಷ್ಠಿತ ರಾಜಕೀಯ ಕುಟುಂಬಗಳಲ್ಲಿ ಒಂದಾದ ನೆಹರೂ-ಗಾಂಧಿ ಕುಟುಂಬದ ಕೇಂದ್ರಬಿಂದುವಾಗಿದ್ದ ವರ್ಷಗಳ ಅನುಭವಗಳನ್ನೂ ಇದು ವಿವರಿಸಲಿದೆ.

ಸೋನಿಯಾ ಗಾಂಧಿ ಆತ್ಮಚರಿತ್ರೆ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ವಿವರ ಹಂಚಿಕೊಂಡ ರಾಹುಲ್ ಗಾಂಧಿ

ಪುಸ್ತಕದ ಕುರಿತು ಮಾತನಾಡಿದ್ದ ಸೋನಿಯಾ ಗಾಂಧಿ ‘ʼಈ ಪುಸ್ತಕದಲ್ಲಿ ನನ್ನ ಕುಟುಂಬದ ಕುರಿತ ಸಾಕಷ್ಟು ವಿಷಯಗಳನ್ನು ಬರೆಯಲಾಗಿದೆ. ಆದರೆ ನಮ್ಮ ಕುಟುಂಬ ತೆಗೆದುಕೊಂಡ ನಿರ್ಧಾರಗಳ ಹಿಂದಿನ ಸತ್ಯವನ್ನು ಕೆಲವೇ ಬರಹಗಳ ಮೂಲಕ ಕಟ್ಟಿಕೊಡಲು ಸಾಧ್ಯವಿಲ್ಲ. ನನ್ನ ಈ ಕಥೆಯು ಆರು ದಶಕಗಳಿಂದ ನಾನು ಕಂಡ ಸಾಮಾಜಿಕ, ರಾಜಕೀಯ ಬದಲಾವಣೆಗಳ ಮತ್ತು ಸವಾಲುಗಳ ಕುರಿತು ಓದುಗರಿಗೆ ಒಂದು ದೃಷ್ಟಿಕೋನವನ್ನು ನೀಡಲಿದೆʼ’ ಎಂದು ಹೇಳಿದ್ದರು.

ರಾಹುಲ್ ಗಾಂಧಿ ಪೋಸ್ಟ್

ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ತಮ್ಮ ತಂದೆ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜಯಂತಿಯ ಸಂದರ್ಭದಲ್ಲಿ, ಸೋನಿಯಾ ಗಾಂಧಿ ಅವರ ಆತ್ಮಕಥನ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಪುಸ್ತಕದ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಅದರಲ್ಲಿ ಅವರು, ‘ʼಅಮ್ಮ, ನಾನು ನಿಮ್ಮನ್ನು ಮತ್ತು ಪಾಪಾ ಅವರನ್ನು ಕೊನೆಯದಾಗಿ ಒಟ್ಟಿಗೆ ನೋಡಿ ಬರೋಬ್ಬರಿ 35 ವರ್ಷಗಳೇ ಕಳೆದಿವೆ. ತಂದೆಯನ್ನು ಕಳೆದುಕೊಂಡ ಆ ಕಠಿಣ ದಿನದಿಂದ ಹಿಡಿದು ಇಂದಿನವರೆಗೂ ಜೀವನದಲ್ಲಿ ಎದುರಾದ ಪ್ರತಿಯೊಂದು ಕಷ್ಟವನ್ನೂ ನೀವು ಧೈರ್ಯ ಮತ್ತು ಘನತೆಯಿಂದ ಎದುರಿಸಿದ್ದೀರಿ. ಆ ದುರಂತದ ನಂತರ ನಿಮ್ಮ ಜೀವನ ಎಷ್ಟು ಕಷ್ಟದಿಂದ ಕೂಡಿತ್ತು ಮತ್ತು ನೀವು ಎಂತಹ ಸವಾಲುಗಳನ್ನು ಎದುರಿಸಿದ್ದೀರಿ ಎಂಬುದು ನನಗೂ ಹಾಗೂ ಪ್ರಿಯಾಂಕಾಗೆ ಮಾತ್ರ ತಿಳಿದಿದೆ. ಸ್ವಭಾವತಃ ಗೌಪ್ಯತೆಯನ್ನು ಬಯಸುವ ನಿಮ್ಮಂತಹ ವ್ಯಕ್ತಿಗೆ ನಿಮ್ಮ ಸುಂದರ ಕಥೆಯನ್ನು ಜಗತ್ತಿನ ಮುಂದೆ ತೆರೆದಿಡುವುದು ಎಷ್ಟು ಕಷ್ಟದ ಕೆಲಸವಾಗಿತ್ತು ಎಂಬುದು ನನಗೆ ಗೊತ್ತು. ಆದರೆ ನಿಮ್ಮ ಜೀವನದ ಈ ಅದ್ಭುತ ಪಯಣವನ್ನು ಇಂದು ನಿಮ್ಮನ್ನು ಪ್ರೀತಿಸುವ ಕೋಟ್ಯಂತರ ಜನರು ಓದಲು ಸಾಧ್ಯವಾಗುತ್ತಿರುವುದಕ್ಕೆ ನನಗೆ ಅತ್ಯಂತ ಸಂತೋಷ ಮತ್ತು ಹೆಮ್ಮೆಯಾಗುತ್ತಿದೆ. ಅವರು ಮೇಲಿಂದ ನಿಮ್ಮನ್ನು ನೋಡಿ ಹೆಮ್ಮೆಯಿಂದ ನಗುತ್ತಿರುವುದು ನನಗೆ ಸ್ಪಷ್ಟವಾಗಿ ಕಾಣಿಸುತ್ತಿದೆ" ಎಂದು ರಾಹುಲ್ ಗಾಂಧಿ ಭಾವುಕರಾಗಿ ಬರೆದುಕೊಂಡಿದ್ದರು.

ಆಲ್‌ಫ್ರೆಡ್ ಎ ನಾಫ್ ಪ್ರಕಾಶನ ಸಂಸ್ಥೆಯಿಂದ ಪುಸ್ತಕ ಬಿಡುಗಡೆ

ಸೋನಿಯಾ ಗಾಂಧಿ ಅವರ ಆತ್ಮಕಥೆಯನ್ನು ಅಮೆರಿಕದ ಪ್ರಕಾಶನ ಸಂಸ್ಥೆಯಾದ ಆಲ್‌ಫ್ರೆಡ್ ಎ ನಾಫ್ ನವೆಂಬರ್ 10ರಂದು ಬಿಡುಗಡೆ ಮಾಡುವುದಾಗಿ ಹೇಳಿದೆ. ಹಲವು ರೀತಿಯಲ್ಲಿ ಈ ಪುಸ್ತಕವು, ಅವರ ಜೀವನಕ್ಕೆ ಸಲ್ಲಿಸುವ ಒಂದು ಗೌರವವಾಗಿದೆ. ಅವರ ಈ ಕಥೆಯು ಓದುಗರಿಗೆ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗಳ ಕುರಿತ ವಿಶಿಷ್ಟ ದೃಷ್ಟಿಕೋನವನ್ನು ನೀಡಲಿದೆ ಎಂದು ಪ್ರಕಾಶನ ಸಂಸ್ಥೆ ಹೇಳಿದೆ.

ಇಟಲಿಯಿಂದ ಭಾರತದ ರಾಜಕೀಯದವರೆಗೆ: ಸೋನಿಯಾ ಗಾಂಧಿ ಆತ್ಮಕಥೆ ಬಿಡುಗಡೆಗೆ ಸಿದ್ಧ

ಮೋದಿ, ಆರ್‌ಎಸ್‌ಎಸ್, ಚೀನಾ ಭಾಗ ತೆಗೆದು ಹಾಕಲು ಸೂಚಿಸಿದ್‌ ಪೆಂಗ್ವಿನ್‌ ಸಂಸ್ಥೆ

ಸೋನಿಯಾ ಗಾಂಧಿ ಅವರಿಗೆ 2004ರ ಚುನಾವಣಾ ರ‍್ಯಾಲಿಯಲ್ಲಿ ನರೇಂದ್ರ ಮೋದಿ ತಮ್ಮನ್ನು ‘ಜರ್ಸಿ ಹಸು' ಎಂದು ಕಾಗದದಲ್ಲಿ ಬರೆದಿದ್ದ ಘಟನೆ ಮತ್ತು ಅವರ ಕುರಿತಾದ ವೈಯಕ್ತಿಕ ಅನುಭವಗಳು, ಆರ್‌ಎಸ್‌ಎಸ್ ಹಾಗೂ ಬಿಜೆಪಿ ಸಿದ್ಧಾಂತಗಳ ಕುರಿತಾದ ಕಠಿಣ ವಿಮರ್ಶಾತ್ಮಕ ಸಾಲುಗಳು, ಭಾರತ-ಚೀನಾ ಗಡಿ ಅತಿಕ್ರಮಣಕ್ಕೆ ಸಂಬಂಧಿಸಿದ ಸೂಕ್ಷ್ಮ ವಿಚಾರಗಳನ್ನು ತೆಗೆದುಹಾಕಲು ಪೆಂಗ್ವಿನ್ ಸಂಸ್ಥೆ ಕೋರಿತ್ತು. ಆದರೆ ʼ‘ಇದು ನನ್ನ ಜೀವನದ ನೈಜ ಕಥೆ. ಇದರಲ್ಲಿ ಯಾವುದೇ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ’ʼ ಎಂದು ಹೇಳಿ ಸೋನಿಯಾ ಗಾಂಧಿ ಈ ಬದಲಾವಣೆಗಳನ್ನು ಸಂಪೂರ್ಣವಾಗಿ ನಿರಾಕರಿಸಿದರು. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಪೆಂಗ್ವಿನ್ ಸಂಸ್ಥೆ ಪ್ರಕಟಣೆಯಿಂದ ಹಿಂದೆ ಸರಿದಿದ್ದು, ಜಾಗತಿಕವಾಗಿ ನವೆಂಬರ್ 10ರಂದು ನಿಗದಿಯಂತೆ ಪುಸ್ತಕ ಬಿಡುಗಡೆಯಾಗಲಿದೆ.

ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.