ಇವಿಎಂ ಬಗ್ಗೆ ಆಕ್ಷೇಪ; ಬ್ಯಾಲಟ್ ಪೇಪರ್‌ಗೆ ಮರಳಲು ʼಇಂಡಿಯಾʼ ಒಕ್ಕೂಟ ಆಗ್ರಹ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿ ಆರೋಪಗಳು ಕೇಳಿ ಬಂದ ಬಳಿಕ ನಡೆದ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನಾವು ಮತ್ತೆ ಮತ ಪತ್ರದ ಮೂಲಕ ಮತದಾನ ಮಾಡುವ ಬ್ಯಾಲೆಟ್ ಪದ್ಧತಿಗೆ ಮರಳಬೇಕು ಎಂದು ಆಗ್ರಹಿಸಿದರು.
ಸಂಗ್ರಹ ಚಿತ್ರ -
ನವದೆಹಲಿ: ಮತದಾರರ ಪಟ್ಟಿ ಪರಿಷ್ಕರಣೆಗೆ (SIR) ಸಂಬಂಧಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Chief Election Commissioner Gyanesh Kumar) ಅವರ ನೇತೃತ್ವದಲ್ಲಿ ಕೈಗೊಂಡಿರುವ ನಿರ್ಧಾರಗಳ ಬಗ್ಗೆ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಆಕ್ಷೇಪ ವ್ಯಕ್ತಪಡಿಸಿದ ಬಳಿಕ ವಿರೋಧ ಪಕ್ಷಗಳು ಎಲೆಕ್ಟ್ರಾನಿಕ್ ಮತಯಂತ್ರಗಳ ಬಳಕೆ ಬಗ್ಗೆ ಮತ್ತೆ ಆಕ್ಷೇಪ ವ್ಯಕ್ತಪಡಿಸಿದೆ.ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ತಿರಸ್ಕರಿಸಿ, ಮತ್ತೆ ಮತಪತ್ರದ ಪದ್ಧತಿಗೆ (ballot paper system) ಮರಳುವಂತೆ ಇಂಡಿಯಾ ಮೈತ್ರಿಕೂಟ (India bloc) ಆಗ್ರಹಿಸಿದೆ.
ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ 1982ರಲ್ಲಿ ಮೊದಲ ಬಾರಿಗೆ ಕೇರಳದ ಪರವೂರ್ ವಿಧಾನಸಭಾ ಕ್ಷೇತ್ರದಲ್ಲಿ ಇವಿಎಂ ಅನ್ನು ಬಳಸಲಾಗಿತ್ತು. ಒಂದರ ಬಳಿಕ 2003ರ ವೇಳೆಗೆ ಎಲ್ಲಾ ರಾಜ್ಯಗಳ ಚುನಾವಣೆಗಳು ಹಾಗೂ ಉಪಚುನಾವಣೆಗಳಲ್ಲಿ ಇವಿಎಂ ಬಳಸಲು ಪ್ರಾರಂಭಿಸಲಾಯಿತು ಎಂದು ತಿಳಿಸಿದರು.
CISF ಯೋಧನಿಂದ ನಾಲ್ವರು ಸಹೋದ್ಯೋಗಿಗಳ ಹತ್ಯೆ ; ಕೊಲೆ ಮಾಡಲು ಮಗು ಕಾರಣವಾಯ್ತಾ? ತನಿಖೆ ವೇಳೆ ಹೇಳಿದ್ದೇನು?
ಸಭೆಯಲ್ಲಿ ಐದು ಬೇಡಿಕೆಗಳನ್ನು ಮಂಡಿಸಿದ ಅವರು, ಮುಂದಿನ ಚುನಾವಣೆಗಳಲ್ಲಿ ಎಸ್‌ಐಆರ್ ನಡೆಸುವ ಮೊದಲು ಇದ್ದ ಮತದಾರರ ಪಟ್ಟಿಗಳನ್ನೇ ಬಳಸಬೇಕು, ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ಮೊದಲು ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಬೇಕು, ಅರ್ಹ ಮತದಾರರ ಹೆಸರು ಪಟ್ಟಿಯಿಂದ ಕೈಬಿಡಲ್ಪಡದಂತೆ ರಕ್ಷಣೆ ಒದಗಿಸಬೇಕು, ಮತಪತ್ರದ ಮೂಲಕ ಮತದಾನ ನಡೆಸುವುದು, ಮೊದಲ ಬಾರಿಗೆ ಮತದಾನ ಮಾಡುವವರಿಗೆ ಸರಳ ಮತ್ತು ಸುಲಭವಾಗಿ ಲಭ್ಯವಿರುವ ಮತದಾರರ ನೋಂದಣಿ ಪ್ರಕ್ರಿಯೆಯನ್ನು ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು 10 ತಿಂಗಳ ಅವಧಿಯಲ್ಲಿ 14 ಬಾರಿ ಅಧಿಕೃತವಾಗಿ ಆಕ್ಷೇಪ ವ್ಯಕ್ತಪಡಿಸಿದ ಕುರಿತು ಮಾಧ್ಯಮಗಳು ವರದಿ ಪ್ರಕಟಿಸಿದ ಬಳಿಕ ನಡೆದ ಮೊದಲ ಇಂಡಿಯಾ ಒಕ್ಕೂಟದ ಸಭೆಯಲ್ಲಿ ಖರ್ಗೆ ಅವರು, ದೇಶದ ಸರ್ಕಾರವನ್ನು ಆಯ್ಕೆ ಮಾಡುವಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಧ್ವನಿ ಇರಬೇಕು ಎಂದು ಪ್ರತಿಪಾದಿಸಿದರು.
ದೇಶಾದ್ಯಂತ ನಾಗರಿಕರು ಮತ್ತು ರಾಜಕೀಯ ಪಕ್ಷಗಳು ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿವೆ ಎಂದ ಅವರು, ನಾವು ಹಲವು ವರ್ಷಗಳಿಂದ ಇವಿಎಂಗಳ ಬಗ್ಗೆ ಪ್ರಶ್ನಿಸುತ್ತಿದ್ದೇವೆ. ಆದರೆ ಚುನಾವಣಾ ಆಯೋಗವು ಈ ಬಗ್ಗೆ ನಿರ್ಲಕ್ಷ್ಯ ವಹಿಸಿತ್ತು ಎಂದು ಆರೋಪಿಸಿದರು.
ಇವಿಎಂ ವಿಷಯದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿರಬೇಕು. ಬಿಜೆಪಿ ತನ್ನ ಅಗತ್ಯಗಳಿಗೆ ಅನುಗುಣವಾಗಿ ಇದನ್ನು ಬಳಸುತ್ತಿದೆ. ಆದ್ದರಿಂದಇನ್ನು ಮುಂದೆ ಈ ಯಂತ್ರಗಳನ್ನು ಚುನಾವಣೆಯಲ್ಲಿ ಬಳಸಲು ಬಿಡಬಾರದು. ಭಾರತದ ಚುನಾವಣಾ ವ್ಯವಸ್ಥೆಯ ಮೇಲಿನ ನಂಬಿಕೆ ಮತ್ತು ವಿಶ್ವಾಸವನ್ನು ಮರುಸ್ಥಾಪಿಸಲು ನಾವು ಮತ್ತೆ ಮತಪತ್ರ ಪದ್ಧತಿಗೆ ಮರಳಬೇಕು ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಸಂಸ್ಥೆಗಳು ಪಾರದರ್ಶಕತೆಯ ಮೂಲಕ ಸಾರ್ವಜನಿಕರ ವಿಶ್ವಾಸವನ್ನು ಗಳಿಸಬೇಕು ಎಂದ ಅವರು, ಎಸ್‌ಐಆರ್ ಪ್ರಕ್ರಿಯೆಯು ಅಪಾರ ಸಂಖ್ಯೆಯ ಮತದಾರರನ್ನು ಪಟ್ಟಿಯಿಂದ ಹೊರಗಿಟ್ಟಿದೆ. ಯಾವುದೇ ನಿಜವಾದ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ವ್ಯವಸ್ಥೆಯ ಮೇಲಿದೆ ಎಂದರು.
ಎಸ್‌ಐಆರ್ ಮೂಲಕ ಬರೋಬ್ಬರಿ 13.3 ಕೋಟಿ ಮತದಾರರನ್ನು ಮತದಾರರ ಪಟ್ಟಿಯಿಂದ ಮನಬಂದಂತೆ ತೆಗೆದುಹಾಕಿರುವುದು ಆಘಾತಕಾರಿ ಎಂದ ಅವರು, ಪ್ರಜಾಪ್ರಭುತ್ವದಲ್ಲಿ ಭಾಗವಹಿಸುವ ಅವರ ಅಧಿಕಾರವನ್ನು ಕಸಿದುಕೊಳ್ಳಲಾಗಿದೆ. ಅಧಿಕಾರದಲ್ಲಿರುವವರು ಯಾರಾಗಬೇಕು ಎಂಬುದನ್ನು ನಿರ್ಧರಿಸಬೇಕಾದವರು ಸಾಮಾನ್ಯ ಮತದಾರರೇ ಹೊರತು ಅಧಿಕಾರದಲ್ಲಿರುವವರಲ್ಲ ಎಂದು ಹೇಳಿದರು.
ರೈಲು ನಿಲ್ದಾಣದಲ್ಲಿ ಮಹಿಳೆಯರಿಗೆ ಕಿರುಕುಳ: ಸಹ ಪ್ರಯಾಣಿಕರಿಂದ ಆರೋಪಿಗೆ ಬಿತ್ತು ಗೂಸಾ
ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟರೆ ಅದು ಯಾರು, ಯಾಕೆ ಎನ್ನುವ ಸ್ಪಷ್ಟ ವಿವರ ನೀಡಬೇಕು ಎಂದು ಹೇಳಿರುವ ಖರ್ಗೆ, ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಿಸಿಯೂ ಆಕ್ಷೇಪಗಳನ್ನು ವ್ಯಕ್ತಪಡಿಸಿ ಚುನಾವಣಾ ಆಯೋಗವು ಸ್ವತಂತ್ರವಾಗಿರುವುದು ಮಾತ್ರವಲ್ಲ ಅದು ಸ್ವತಂತ್ರವಾಗಿರುವಂತೆ ಕಾಣಿಸಿಕೊಳ್ಳುವುದು ಕೂಡ ಮುಖ್ಯ ಎಂದು ಹೇಳಿದರು.