ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಲೋಕಭವನದಲ್ಲಿ ಇನ್ನು ಮುಂದೆ ಕೇವಲ ಸಸ್ಯಾಹಾರ; ವಿವಾದ ಎಬ್ಬಿಸಿದ ಕೇರಳಂ ರಾಜ್ಯಪಾಲರ ಹೊಸ ಆದೇಶ

ಕೇರಳಂನ ನೂತನ ರಾಜ್ಯಪಾಲರಾಗಿ ಅಧಿಕಾರ ವಹಿಸಿಕೊಂಡ ಓಂ ಪ್ರಕಾಶ್ ಮಾಥುರ್ ಅವರು ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಲೋಕಭವನದ ಅಡುಗೆ ಮನೆಯಲ್ಲಿ ಇನ್ನು ಮುಂದೆ ಕೇವಲ ಸಸ್ಯಾಹಾರ ತಯಾರಿಸಬೇಕು ಎಂದು ಆದೇಶ ಹೊರಡಿಸಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ. ರಾಜ್ಯಪಾಲರ ಹೊಸ ಆದೇಶವನ್ನು ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಸಿಪಿಐ(ಎಂ) ತೀವ್ರವಾಗಿ ಟೀಕಿಸಿವೆ.

ವಿವಾದಕ್ಕೆ ಎಬ್ಬಿಸಿದ ಕೇರಳಂ ರಾಜ್ಯಪಾಲರ ಹೊಸ ಆದೇಶ

ಸಂಗ್ರಹ ಚಿತ್ರ -

ತಿರುವನಂತಪುರಂ: ಲೋಕಭವನದಲ್ಲಿ (Lok Bhavan) ಇನ್ನು ಮುಂದೆ ಕೇವಲ ಸಸ್ಯಾಹಾರ (Vegetarian food) ತಯಾರಿಸಬೇಕು ಎಂದು ಕೇರಳಂ ರಾಜ್ಯದ ನೂತನ ರಾಜ್ಯಪಾಲರಾದ (Keralam Governor) ಓಂ ಪ್ರಕಾಶ್ ಮಾಥುರ್ (Governor Om Prakash Mathur) ಅವರು ಆದೇಶಿಸಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ಅಧಿಕಾರ ಸ್ವೀಕಾರ ಮಾಡಿದ ಮೊದಲ ದಿನವಾದ ಶುಕ್ರವಾರವೇ ಓಂ ಪ್ರಕಾಶ್ ಮಾಥುರ್ ಅವರು ರಾಜ್ಯಪಾಲರ ಅಧಿಕೃತ ನಿವಾಸವಾದ ಲೋಕ ಭವನದ ಅಡುಗೆಮನೆಯಲ್ಲಿ ಕೇವಲ ಸಸ್ಯಾಹಾರವನ್ನು ಮಾತ್ರ ತಯಾರಿಸಬೇಕು ಎಂದು ಆದೇಶಿಸಿದರು. ಇದನ್ನು ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಸಿಪಿಐ(ಎಂ) ತೀವ್ರವಾಗಿ ಟೀಕಿಸಿವೆ.

ಕೇರಳಂ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಸೌಮೆನ್ ಸೇನ್ ಅವರು ನೂತನ ರಾಜ್ಯಪಾಲರ ಓಂ ಪ್ರಕಾಶ್ ಮಾಥುರ್ ಪ್ರಮಾಣ ವಚನ ಬೋಧಿಸಿದರು. ಹಿಂದಿನ ರಾಜ್ಯಪಾಲರಾಗಿದ್ದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ತಮಿಳುನಾಡಿನ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ.



ನವೆಂಬರ್‌ನಲ್ಲಿ ಬಾಂಗ್ಲಾ ಪ್ರಧಾನಿ ತಾರಿಕ್ ರೆಹಮಾನ್ ಭಾರತಕ್ಕೆ ಭೇಟಿ?

ಓಂ ಪ್ರಕಾಶ್ ಮಾಥುರ್ ಅವರು ಕೇರಳದ 29ನೇ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಕ್ಷಣಗಳಲ್ಲಿ ಲೋಕಭವನದ ಅಡುಗೆಮನೆಯಲ್ಲಿ ಮಾಂಸಾಹಾರವನ್ನು ತಯಾರಿಸಬಾರದು ಅಥವಾ ಬಡಿಸಬಾರದು ಎಂದು ನಿರ್ದೇಶನ ನೀಡಿದ್ದಾರೆ ಎನ್ನುವ ಮಾಧ್ಯಮಗಳ ವರದಿ ಹಿನ್ನೆಲೆಯಲ್ಲಿಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಅವರು, ರಾಜ್ಯಪಾಲರು ಸಂಘ ಪರಿವಾರದ ಅಜೆಂಡಾವನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಅವರ ಈ ನಿರ್ಧಾರ ಮಿತಿಮೀರಿದ ಕ್ರಮವಾಗಿದೆ ಎಂದು ಹೇಳಿದರು.

ಓಂ ಪ್ರಕಾಶ್ ಮಾಥುರ್ ಅವರು ಕಟ್ಟುನಿಟ್ಟಾದ ಸಸ್ಯಾಹಾರಿ ಆಗಿರುವುದರಿಂದಲೇ ಈ ಬದಲಾವಣೆಗೆ ಆದೇಶಿಸಿದ್ದಾರೆ. ಲೋಕಭವನದ ಸಿಬ್ಬಂದಿಯ ಆಹಾರ ಆಯ್ಕೆಗಳ ಮೇಲೆ ಯಾವುದೇ ನಿರ್ಬಂಧವಿಲ್ಲ ಎಂದು ರಾಜ್ಯಪಾಲರ ಕಚೇರಿ ಮೂಲಗಳು ಸ್ಪಷ್ಟಪಡಿಸಿವೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಮಾತನಾಡಿ, ಲೋಕಭವನ ಅಡುಗೆಮನೆಯಲ್ಲಿ ಕೇವಲ ಸಸ್ಯಾಹಾರವನ್ನೇ ತಯಾರಿಸಬೇಕೆಂದು ನಿರ್ದೇಶಿಸುವ ಮೂಲಕ ರಾಜ್ಯಪಾಲರು ತಮ್ಮ ಅಧಿಕಾರದ ಮಿತಿ ಮೀರಿದ್ದಾರೆ. ಕೇರಳಂ ವೈವಿಧ್ಯಮಯ ಆಹಾರ ಸಂಸ್ಕೃತಿಯನ್ನು ಹೊಂದಿದೆ. ಕರಾವಳಿ ರಾಜ್ಯವಾಗಿರುವ ಇಲ್ಲಿ ಮೀನು ಸಂಪನ್ಮೂಲ ಹೇರಳವಾಗಿದೆ. ರಾಜ್ಯದ ಜನರು ಸಸ್ಯಾಹಾರ ಅಥವಾ ಮಾಂಸಾಹಾರ ತಮಗೆ ಇಷ್ಟವಾದ ಆಹಾರ ಪದ್ಧತಿಯನ್ನು ಅನುಸರಿಸಲು ಸ್ವತಂತ್ರರಾಗಿದ್ದಾರೆ ಎಂದು ತಿಳಿಸಿದರು.

ಇಲ್ಲಿನ ಜನ ರೂಢಿಸಿಕೊಂಡಿರುವ ಆಹಾರ ಪದ್ಧತಿಗಳ ಮೇಲೆ ನಿರ್ಬಂಧ ಹೇರಲು ಅಥವಾ ಇನ್ನು ಮುಂದೆ ಅವರು ಏನು ತಿನ್ನಬೇಕು ಎಂದು ನಿರ್ದೇಶಿಸಲು ಮಾಡುವ ಯಾವುದೇ ಪ್ರಯತ್ನವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಜನರ ಆಹಾರ ಆಯ್ಕೆಗಳಲ್ಲಿ ಹಸ್ತಕ್ಷೇಪ ಮಾಡುವ ಮತ್ತು ಕೇರಳೀಯರ ಸಾಂಪ್ರದಾಯಿಕ ಜೀವನಶೈಲಿಯನ್ನು ಅಳಿಸಿ ಹಾಕಲು ಪ್ರಯತ್ನಿಸುವ ಇಂತಹ ನಿರ್ಬಂಧಗಳು ಸಂವಿಧಾನವು ಖಾತರಿಪಡಿಸಿದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿದರು.

ನೂತನ ರಾಜ್ಯಪಾಲರು ತಮ್ಮ ಅಧಿಕಾರವನ್ನು ಬಳಸಿಕೊಂಡು ವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿದ್ದಾರೆ. ಇದು ಕೇರಳಂನಲ್ಲಿ ಸಂಘ ಪರಿವಾರದ ಕೇಸರಿ ಅಜೆಂಡಾವನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದೆ.ಅವರು ಸಸ್ಯಾಹಾರವನ್ನು ಅನುಸರಿಸುವ ಸ್ವಾತಂತ್ರ್ಯವನ್ನು ಹೊಂದಿದ್ದಾರೆ. ಆದರೆ ಇದನ್ನು ಲೋಕ ಭವನದ ಅಡುಗೆಮನೆಯ ಮೇಲೆ ಹೇರುವುದು ಸ್ವೀಕಾರಾರ್ಹವಲ್ಲ ಎಂದು ತಿಳಿಸಿದರು.

ಗೃಹ ಸಚಿವ ರಮೇಶ್ ಚೆನ್ನಿತಾಲ ಅವರು ಪ್ರತಿಕ್ರಿಯಿಸಿ ಇತರರು ಏನು ತಿನ್ನಬೇಕು ಎಂದು ನಿರ್ಧರಿಸುವುದು ತಪ್ಪು. ಆಹಾರದ ಆಯ್ಕೆಯು ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಷಯ. ಒಬ್ಬ ವ್ಯಕ್ತಿ ಏನು ಧರಿಸಬೇಕು, ಯಾವ ಭಾಷೆಯನ್ನು ಮಾತನಾಡಬೇಕು ಮತ್ತು ಏನು ತಿನ್ನಬೇಕು ಎಂಬುದೆಲ್ಲವೂ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸೇರಿದ ವಿಷಯಗಳಾಗಿವೆ ಎಂದು ಹೇಳಿದರು.

ಸಿಪಿಐ(ಎಂ)ನ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಅವರು ಮಾತನಾಡಿ, ಜನರು ಸಸ್ಯಾಹಾರ ಅಥವಾ ಮಾಂಸಾಹಾರವನ್ನು ಆಯ್ಕೆ ಮಾಡಿಕೊಳ್ಳುವ ಪ್ರಜಾಸತ್ತಾತ್ಮಕ ಹಕ್ಕನ್ನು ಹೊಂದಿದ್ದಾರೆ. ಈ ಹಕ್ಕನ್ನು ಕಸಿದುಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ. ಆಹಾರವನ್ನು ಇವರು ಒಂದು ಕೋಮು ಅಸ್ತ್ರವನ್ನಾಗಿ ಪರಿವರ್ತಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದರು.

ಬಿಹಾರದಲ್ಲಿ ಪಟಾಕಿ ತಯಾರಿಕಾ ಮನೆಯಲ್ಲಿ ಭೀಕರ ಸ್ಫೋಟ: ನಾಲ್ವರ ದುರ್ಮರಣ

ಲೋಕಭವನದ ಅಡುಗೆಮನೆಯಲ್ಲಿ ತಯಾರಾದ ಆಹಾರವನ್ನು ರಾಜ್ಯಪಾಲರಿಗೆ ಮತ್ತು ಅವರ ವೈಯಕ್ತಿಕ ಸಿಬ್ಬಂದಿಯ ಕೆಲವೇ ಕೆಲವು ಸದಸ್ಯರಿಗೆ ಮಾತ್ರ ಬಡಿಸಲಾಗುತ್ತದೆ. ಇತರ ಉದ್ಯೋಗಿಗಳು ಮನೆಯಿಂದ ಆಹಾರವನ್ನು ತರುತ್ತಾರೆ ಅಥವಾ ಹೊರಗಡೆ ಊಟ ಮಾಡುತ್ತಾರೆ. ಅವರ ಆಹಾರದ ಆಯ್ಕೆಗಳ ಮೇಲೆ ಯಾವುದೇ ನಿರ್ಬಂಧಗಳನ್ನು ಹೇರಲಾಗಿಲ್ಲ ಎಂದು ಲೋಕಭವನದ ಮೂಲಗಳು ಸೇರಿಸಿದವು.