ʼʼಆಪರೇಷನ್ ಸಿಂದೂರ್ 2.0ಗೆ ಭಾರತ ಸಿದ್ಧʼʼ: ಉಗ್ರರ ವಿರುದ್ಧ ಮತ್ತೊಂದು ಹೋರಾಟದ ಸೂಚನೆ ನೀಡಿದ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ
ಪಾಕಿಸ್ತಾನದ ಭಯೋತ್ಪಾದಕತೆಯ ವಿರುದ್ಧ ಸೆಟೆದು ನಿಂತಿರುವ ಭಾರತ ಇದೀಗ ಆಪರೇಷನ್ ಸಿಂದೂರ್ 2.0ಗೆ ಸಿದ್ಧವಾಗಿದೆ. ಈ ಮೂಲಕ ಭವಿಷ್ಯದ ಯಾವುದೇ ಯುದ್ಧಕ್ಕೂ ಭಾರತದ ಮೂರು ಸೇನೆಯನ್ನು ಸಂಪೂರ್ಣ ಸಜ್ಜುಗೊಳಿಸಿರುವುದಾಗಿ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ತಿಳಿಸಿದ್ದು, ಆಪರೇಷನ್ ಸಿಂದೂರ್ ಅನ್ನು ಮುಂದುವರಿಸಲಾಗುವುದು ಎಂದು ಹೇಳಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ಭವಿಷ್ಯದ ಯಾವುದೇ ಯುದ್ಧವಾಗಿರಲಿ ಭಾರತ ತ್ರಿ ಸೇನೆಗಳು (Indian army) ಸದಾ ಸಿದ್ಧವಾಗಿರುತ್ತವೆ. ಕಳೆದ ವರ್ಷ ಮೇ ತಿಂಗಳಲ್ಲಿ ನಡೆದಿದ್ದ ಆಪರೇಷನ್ ಸಿಂದೂರ್ (Operation Sindoor) ಒಂದು ತಾತ್ಕಾಲಿಕ ಬ್ರೇಕ್ ತೆಗೆದುಕೊಂಡಿತ್ತು. ಆದರೆ ಇದನ್ನು ಮುಂದುವರಿಸಲಾಗುವುದು. ಮುಂದೆ ನಡೆಯಬಹುದಾದ ಅಪಾಯಗಳನ್ನು ಮನಗಂಡು 'ಆಪರೇಷನ್ ಸಿಂದೂರ್ 2.0' ಗೆ (Operation Sindoor 2.0) ಭಾರತೀಯ ಸೇನಾ ಪಡೆಗಳು ಸಿದ್ಧವಾಗಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ (Army Chief General Upendra Dwivedi) ಶನಿವಾರ ತಿಳಿಸಿದ್ದಾರೆ.
ಮಹಾರಾಷ್ಟ್ರದ ಪುಣೆಯಿಂದ ಸುಮಾರು ೨೦ ಕಿ.ಮೀ. ದೂರದಲ್ಲಿರುವ ಖಡಕ್ವಾಸ್ಲಾದ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಆಯೋಜಿಸಿದ್ದ 150 ನೇ ಕೋರ್ಸ್‌ನ ಪಾಸಿಂಗ್ ಔಟ್ ಪೆರೇಡ್ ಅನ್ನು ಪರಿಶೀಲಿಸಿದ ಅವರು, ಅಗತ್ಯವಿದ್ದರೆ ವಾಯುಪಡೆ ಮತ್ತು ನೌಕಾಪಡೆಯೊಂದಿಗೆ ಭಾರತೀಯ ಸೇನೆಯು "ಆಪರೇಷನ್ ಸಿಂದೂರ್ 2.0" ಅನ್ನು ಒಳಗೊಂಡಂತೆ ಭವಿಷ್ಯದ ಸಂಭಾವ್ಯ ಅಪಾಯಗಳನ್ನು ಎದುರಿಸಲು ಸಿದ್ಧತೆ ನಡೆಸುತ್ತಿದೆ ಎಂದರು.
ಪ್ರಸ್ತುತ ತ್ರಿ ಸೇನಾ ಸಿನರ್ಜಿಯನ್ನು ಬಲಪಡಿಸುವ, ಯುದ್ಧ ಸನ್ನದ್ಧತೆಯನ್ನು ಸುಧಾರಿಸುವ ಮತ್ತು ಭವಿಷ್ಯದ ಯುದ್ಧದ ಬೇಡಿಕೆಗಳಿಗೆ ಹೊಂದಿಕೊಳ್ಳುವುದರ ಮೇಲೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ ಎಂದ ಅವರು ಆಪರೇಷನ್ ಸಿಂದೂರ್ ಅನ್ನು ಮುಂದುವರಿಸಲಾಗುವುದು ಎಂದರು.
ಸಶಸ್ತ್ರ ಪಡೆಗಳು ಜಾಗರೂಕರಾಗಿದ್ದು, ಭವಿಷ್ಯದ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿರುತ್ತವೆ. ಆಪರೇಷನ್ ಸಿಂದೂರ್ ಅನ್ನು ಪ್ರಸ್ತುತ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಅವರು ಹೇಳಿದರು.
ಆಧುನಿಕ ಯುದ್ಧಭೂಮಿಗಳ ಹೆಚ್ಚುತ್ತಿರುವ ಪಾರದರ್ಶಕತೆಯ ಬಗ್ಗೆ ಮಾತನಾಡಿದ ಅವರು ಇವತ್ತು ಯುದ್ಧಭೂಮಿ ಎಷ್ಟು ಪಾರದರ್ಶಕವಾಗಿದೆಯೆಂದರೆ ಪ್ರತಿಯೊಂದು ಚಲನೆಯೂ ಶತ್ರು ಪಡೆಗೆ ಗೊತ್ತಾಗುತ್ತದೆ. ಹೀಗಾಗಿ ಗಡಿ ಪ್ರದೇಶಗಳಲ್ಲಿ ಹೆಚ್ಚಿನ ರಕ್ಷಣೆ ಮತ್ತು ಎಚ್ಚರಿಕೆಯ ಅಗತ್ಯವಿದೆ ಎಂದರು.
ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುವನ್ನು ಮತ್ತೆ ಮತ್ತೆ ಒತ್ತಿ ಹೇಳುತ್ತಿರುವ ಭಾರತ ಇತ್ತೀಚೆಗೆ ಚೀನಾವು ಪಾಕಿಸ್ತಾನಕ್ಕೆ ತಾಂತ್ರಿಕ ನೆರವು ನೀಡಿದ್ದನ್ನು ಬಹಿರಂಗವಾಗಿಯೇ ಖಂಡಿಸಿತ್ತು. ಕಳೆದ ವರ್ಷ ನಡೆದ 'ಆಪರೇಷನ್ ಸಿಂದೂರ್' ಸಮಯದಲ್ಲಿ ಪಾಕಿಸ್ತಾನಕ್ಕೆ ಚೀನಾ ತಾಂತ್ರಿಕ ನೆರವು ನೀಡಿದ್ದನ್ನು ಬಹಿರಂಗವಾಗಿ ಒಪ್ಪಿಕೊಂಡಿತ್ತು. ಇದರ ಬೆನ್ನಲ್ಲೇ ಭಾರತವು ಚೀನಾಕ್ಕೆ ಭಯೋತ್ಪಾದನೆಯನ್ನು ಪೋಷಿಸುವ ರಾಷ್ಟ್ರಗಳಿಗೆ ಬೆಂಬಲ ನೀಡುವ ಮೊದಲು ಜವಾಬ್ದಾರಿಯುತ ರಾಷ್ಟ್ರಗಳು ತಮ್ಮ ನಡೆಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿತ್ತು.
ಆಪರೇಷನ್ ಸಿಂದೂರ್: ಸಾಂಕೇತಿಕತೆಯಿಂದ ಕಾರ್ಯತಂತ್ರದ ಬದಲಾವಣೆಯತ್ತ ಭಾರತದ ಹೊಸ ಹೆಜ್ಜೆ
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಅವರು ಭಯೋತ್ಪಾದಕ ಮೂಲಸೌಕರ್ಯಗಳನ್ನು ರಕ್ಷಿಸಲು ಪ್ರಯತ್ನಿಸುವ ರಾಷ್ಟ್ರಗಳಿಗೆ ಬೆಂಬಲ ನೀಡುವುದು ಜಾಗತಿಕ ವೇದಿಕೆಯಲ್ಲಿ ಅವರ ಘನತೆ ಮತ್ತು ನಿಲುವಿನ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎಂಬುದನ್ನು ಆ ರಾಷ್ಟ್ರಗಳೇ ಯೋಚಿಸಬೇಕು. ಇಂತಹ ನಡೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆ ದೇಶಗಳ ವಿಶ್ವಾಸಾರ್ಹತೆಯನ್ನು ಕುಸಿಯುವಂತೆ ಮಾಡುತ್ತದೆ ಎಂದು ಅವರು ಎಚ್ಚರಿಸಿದ್ದರು.