"ಭಾರತ ಯಾವುದನ್ನೂ ಕ್ಷಮಿಸದು": ಆಪರೇಷನ್ ಸಿಂದೂರ್ ವಿಜಯೋತ್ಸವದ ವಿಡಿಯೋ ಹಂಚಿಕೊಂಡ ವಾಯುಪಡೆ
ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ‘ಆಪರೇಷನ್ ಸಿಂದೂರ್’ಗೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆ ಭಾರತೀಯ ವಾಯುಪಡೆ ವಿಶೇಷ ವಿಡಿಯೋ ಬಿಡುಗಡೆ ಮಾಡಿದೆ. “ಭಾರತ ಯಾವುದನ್ನೂ ಮರೆಯುವುದಿಲ್ಲ, ಕ್ಷಮಿಸುವುದಿಲ್ಲ” ಎಂಬ ಸಂದೇಶದೊಂದಿಗೆ ಉಗ್ರರ ನೆಲೆಗಳ ಮೇಲಿನ ದಾಳಿಯ ದೃಶ್ಯಗಳನ್ನು ಹಂಚಿಕೊಳ್ಳಲಾಗಿದೆ.
ಭಾರತೀಯ ಸೇನೆ -
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪಹಲ್ಗಾಮ್ (Pahalgam)ನಲ್ಲಿ ಪಾಕಿಸ್ತಾನ (Pakistan) ಪ್ರೇರಿತ ಭಯೋತ್ಪಾದಕರು 26 ಅಮಾಯಕ ಪ್ರವಾಸಿಗರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆಗೆ ಪ್ರತಿಯಾಗಿ, ಭಾರತೀಯ ಸೇನೆ (Indian Army)ಯು ನಡೆಸಿದ ಐತಿಹಾಸಿಕ 'ಆಪರೇಷನ್ ಸಿಂದೂರ್ (Operation Sindoor )' ಕಾರ್ಯಾಚರಣೆಗೆ ಇಂದು ಒಂದು ವರ್ಷ ತುಂಬಿದೆ. ಈ ಸಂಭ್ರಮದ ಸಂದರ್ಭದಲ್ಲಿ ಭಾರತೀಯ ವಾಯುಪಡೆಯು (Indian Air Force) ತನ್ನ ಅಧಿಕೃತ ಎಕ್ಸ್ (X) ಖಾತೆಯಲ್ಲಿ ವಿಶೇಷ ವಿಡಿಯೋವೊಂದನ್ನು ಹಂಚಿಕೊಂಡಿದೆ. ಈ ವಿಡಿಯೋದಲ್ಲಿ "ಭಾರತ ಯಾವುದನ್ನೂ ಮರೆಯುವುದಿಲ್ಲ ಮತ್ತು ಯಾವುದನ್ನೂ ಕ್ಷಮಿಸುವುದಿಲ್ಲ" ಎಂಬ ಕಠಿಣ ಸಂದೇಶವನ್ನು ಶತ್ರು ರಾಷ್ಟ್ರಗಳಿಗೆ ರವಾನಿಸಲಾಗಿದೆ.
ಕಳೆದ ವರ್ಷ ಮೇ 7ರಂದು ಮುಂಜಾನೆ 1.05ಕ್ಕೆ ಭಾರತವು ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಭಯೋತ್ಪಾದಕ ನೆಲೆಗಳ ಮೇಲೆ ಮೊದಲ ಕ್ಷಿಪಣಿ ದಾಳಿಯನ್ನು ನಡೆಸಿತ್ತು. ಇಂದು ಅದೇ ಮುಹೂರ್ತದಲ್ಲಿ ಬಿಡುಗಡೆಯಾದ ವಿಡಿಯೋದಲ್ಲಿ, ಭಾರತದ ಬ್ರಹ್ಮೋಸ್ ಕ್ಷಿಪಣಿಗಳು ಶತ್ರುಗಳ ವಾಯು ರಕ್ಷಣಾ ವ್ಯವಸ್ಥೆ, ಕಾಂಕ್ರೀಟ್ ಹ್ಯಾಂಗರ್‌ಗಳು ಮತ್ತು ಸೇನಾ ಮೂಲಸೌಕರ್ಯಗಳನ್ನು ನಾಶಪಡಿಸುವ ದೃಶ್ಯಗಳು ಮನಮೋಹಕವಾಗಿವೆ. ಪಾಕಿಸ್ತಾನದ ಅತ್ಯಾಧುನಿಕ ರೇಡಾರ್ ವ್ಯವಸ್ಥೆಗಳು ಭಾರತೀಯ ಕ್ಷಿಪಣಿಗಳ ಹೊಡೆತಕ್ಕೆ ಸಿಕ್ಕು ಕಬ್ಬಿಣದ ಚೂರುಗಳಾಗಿ ಮಾರ್ಪಟ್ಟಿದ್ದವು.
ಆಪರೇಷನ್ ಸಿಂದೂರ್: ಭಾರತದ ಯುದ್ಧ ತಂತ್ರವನ್ನು ಮರು ವ್ಯಾಖ್ಯಾನಿಸಿದ ಆ 88 ಗಂಟೆಗಳು...
ಬಹವಲ್‌ಪುರದ ಜೈಶ್-ಎ-ಮೊಹಮ್ಮದ್ ಪ್ರಧಾನ ಕಚೇರಿ, ಮುರಿದ್ಕೆಯ ಲಷ್ಕರ್-ಎ-ತೊಯ್ಬಾ ನೆಲೆಗಳು ಹಾಗೂ ಸಿಯಾಲ್ಕೋಟ್, ಮುಜಾಫರಾಬಾದ್ ಮತ್ತು ಭಿಂಬರ್ ಜಿಲ್ಲೆಗಳಲ್ಲಿರುವ ಭಯೋತ್ಪಾದಕ ತರಬೇತಿ ಕೇಂದ್ರಗಳ ಮೇಲೆ ಭಾರತೀಯ ವಾಯುಪಡೆ ನಿಖರ ದಾಳಿ ನಡೆಸಿತ್ತು. "ಭಾರತವು ಪ್ರತಿ ಉಗ್ರಗಾಮಿಯನ್ನು ಮತ್ತು ಅವರಿಗೆ ಆಶ್ರಯ ನೀಡುವ ಬೆಂಬಲಿಗರನ್ನು ಹುಡುಕಿ ಶಿಕ್ಷಿಸುತ್ತದೆ" ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋದಲ್ಲಿ ಎಚ್ಚರಿಸಿದ್ದಾರೆ. ಭಾರತದ ಈ ಪ್ರಚಂಡ ದಾಳಿಗೆ ಬೆದರಿದ ಪಾಕಿಸ್ತಾನವು, ಕೇವಲ ಎರಡು ದಿನಗಳಲ್ಲೇ ಕದನ ವಿರಾಮಕ್ಕೆ ಮೊರೆ ಇಟ್ಟಿತ್ತು.
Operation Sindoor
— Indian Air Force (@IAF_MCC) May 6, 2026
Justice served.
Precise in action, eternal in memory—Operation Sindoor continues.
India forgets nothing-India forgives nothing.#operation #Sindoor #operationsindoor #IAF @PMOIndia@rajnathsingh@DefenceMinIndia@SpokespersonMoD@HQ_IDS_India@adgpi… pic.twitter.com/GWvnY9Udjl
ಪಾಕಿಸ್ತಾನ ಪದೇ ಪದೇ ನೀಡುವ ಪರಮಾಣು ಬೆದರಿಕೆಗಳಿಗೆ ಭಾರತ ಈ ಬಾರಿ ಕಿಂಚಿತ್ತೂ ತಲೆಕೆಡಿಸಿಕೊಳ್ಳಲಿಲ್ಲ. ಬದಲಿಗೆ ತನ್ನ ಸಾಂಪ್ರದಾಯಿಕ ಸೇನಾ ಶಕ್ತಿಯ ಮೂಲಕವೇ ಪಾಕಿಸ್ತಾನದ ಮಿಲಿಟರಿ ಸೊಕ್ಕನ್ನು ಅಡಗಿಸಿತು. ಆಪರೇಷನ್ ಸಿಂದೂರ್ ಭಾರತೀಯ ಮಿಲಿಟರಿ ಇತಿಹಾಸದಲ್ಲಿ ಅರ್ಧ ಶತಮಾನದಲ್ಲೇ ಅತ್ಯಂತ ವಿಸ್ತಾರವಾದ ಬಹು-ಡೊಮೇನ್ ಯುದ್ಧ ಕಾರ್ಯಾಚರಣೆಯಾಗಿ ದಾಖಲಾಗಿದೆ. "ನ್ಯಾಯ ಒದಗಿಸಲಾಗಿದೆ; ಇದು ನಿಖರ ಕಾರ್ಯಾಚರಣೆ ಮತ್ತು ಶಾಶ್ವತ ನೆನಪು" ಎಂದು ವಾಯುಪಡೆ ಹೆಮ್ಮೆಯಿಂದ ಬರೆದುಕೊಂಡಿದೆ. ಉಗ್ರರಿಗೆ ಅಡಗಿಕೊಳ್ಳಲು ಜಗತ್ತಿನ ಯಾವುದೇ ಮೂಲೆ ಸುರಕ್ಷಿತವಲ್ಲ ಎಂಬ ಎಚ್ಚರಿಕೆಯನ್ನು ಭಾರತ ಈ ಮೂಲಕ ಜಗತ್ತಿಗೆ ಸ್ಪಷ್ಟವಾಗಿ ಸಾರಿದೆ. ಈ ಕಾರ್ಯಾಚರಣೆಯು ಭಾರತದ ರಾಷ್ಟ್ರೀಯ ಭದ್ರತೆ ಮತ್ತು ಕಾರ್ಯತಂತ್ರದ ನೀತಿಯನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಶತ್ರು ರಾಷ್ಟ್ರದ ನೆಲದಲ್ಲಿಯೇ ನುಗ್ಗಿ ಹೊಡೆಯುವ ಭಾರತದ ಹೊಸ ಶೌರ್ಯಕ್ಕೆ ಆಪರೇಷನ್ ಸಿಂದೂರ್ ಸಾಕ್ಷಿಯಾಗಿದೆ.