ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಲಖನೌ ಅಗ್ನಿ ದುರಂತ: ಮತ್ತೆ ಮುನ್ನಲೆಗೆ ಬಂದ ಕಟ್ಟಡ ಮಾಲಕರ ಹಳೆಯ ವಂಚನೆ ಪ್ರಕರಣ

Lucknow Fire: ಲಖನೌ ಅಗ್ನಿ ದುರಂತದ ತನಿಖೆ ನಡೆಯುತ್ತಿದ್ದು, ಕಟ್ಟಡದ ಸಹ-ಮಾಲಕ ಸುರೇಂದ್ರ ಶುಕ್ಲಾ ಅವರ ಹೆಸರು 2015ರ CPMT ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದೊಂದಿಗೆ ಮತ್ತೆ ಚರ್ಚೆಗೆ ಬಂದಿದೆ. STF ತನಿಖೆಯಲ್ಲಿ ಅವರ ವಿರುದ್ಧ ಸಾಕಷ್ಟು ಪುರಾವೆಗಳು ಸಿಗದಿದ್ದರೂ, ದುರಂತದ ಬಳಿಕ ಅವರ ಹಿಂದಿನ ವಿವಾದಾತ್ಮಕ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸುದ್ದಿಯಾಗಿದೆ.

ಲಖನೌ ಅಗ್ನಿ ದುರಂತದ ಬಳಿಕ ಮಾಲಕ ಸುರೇಂದ್ರ ಶುಕ್ಲಾ ಹೆಸರು ಮುನ್ನೆಲೆಗೆ

ವಿರೇಂದ್ರ ಪ್ರಸಾದ್‌ ಶುಕ್ಲಾ ಮತ್ತು ತುಷಾರ್‌ ಕೃಷ್ಣ ಜೈಸ್ವಾಲ್ -

Profile
Sushmitha Jain Jun 23, 2026 3:40 PM

ಲಖನೌ, ಜೂ. 23: ಉತ್ತರ ಪ್ರದೇಶದ ಲಖನೌ (Lucknow) ನಗರದ ಅಲಿಗಂಜ್ ಪ್ರದೇಶದಲ್ಲಿ 15 ಮಂದಿಯ ಜೀವ ಬಲಿ ಪಡೆದ ಭೀಕರ ಅಗ್ನಿ ದುರಂತ (Fire Tragedy)ದ ತನಿಖೆ ಮುಂದುವರಿದಿರುವ ನಡುವೆ ಕಟ್ಟಡದ ಸಹ-ಮಾಲಕರಲ್ಲಿ ಒಬ್ಬರಾಗಿರುವ ಸುರೇಂದ್ರ ಶುಕ್ಲಾ (Surendra Shukla) ಅವರ ಹಳೆಯ ವಿವಾದಾತ್ಮಕ ಹಿನ್ನೆಲೆ ಮತ್ತೆ ಸುದ್ದಿಯಲ್ಲಿದೆ.

ಮೂಲಗಳ ಪ್ರಕಾರ, ಸುರೇಂದ್ರ ಶುಕ್ಲಾ ಹೆಸರು 2015ರ ಉತ್ತರ ಪ್ರದೇಶ ಕಂಬೈನ್ಡ್ ಪ್ರೀ-ಮೆಡಿಕಲ್ ಟೆಸ್ಟ್ (CPMT) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಳಿಬಂದಿತ್ತು. ಅವರ ಪುತ್ರಿಗೆ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪ್ರಶ್ನೆಪತ್ರಿಕೆ ಸೋರಿಕೆ ಸಂಚು ರೂಪಿಸಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು.

ಪರೀಕ್ಷಾ ಕೇಂದ್ರದಲ್ಲಿ ಅವರ ಪುತ್ರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗಿದೆ ಎಂಬ ಆರೋಪಗಳನ್ನೂ ತನಿಖಾಧಿಕಾರಿಗಳು ಪರಿಶೀಲಿಸಿದ್ದರು. ಈ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ಪ್ರಕರಣ ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ಆದರೆ ಬಳಿಕ ತನಿಖೆ ನಡೆಸಿದ ವಿಶೇಷ ಕಾರ್ಯಪಡೆ (STF) ಸುರೇಂದ್ರ ಶುಕ್ಲಾ ವಿರುದ್ಧ ಸಾಕಷ್ಟು ಪುರಾವೆಗಳು ಲಭ್ಯವಾಗಿಲ್ಲ ಎಂದು ತಿಳಿಸಿದ್ದರಿಂದ ಕಾನೂನು ಕುಣಿಕೆಯಿಂದ ಪಾರಾಗಿದ್ದರು.

ರಿಯಲ್ ಎಸ್ಟೇಟ್ ವ್ಯವಹಾರಗಳ ಆರೋಪ

ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹೊರತಾಗಿಯೂ ಸುರೇಂದ್ರ ಶುಕ್ಲಾ ಮತ್ತು ಅವರ ಸಹೋದರ ವಿರೇಂದ್ರ ಶುಕ್ಲಾ ವಿರುದ್ಧ ಹಿಂದೆ ಭೂ ವ್ಯವಹಾರಗಳಿಗೆ ಸಂಬಂಧಿಸಿದ ಆರೋಪಗಳೂ ಕೇಳಿ ಬಂದಿದ್ದವು. ರೈತರಿಂದ ಕಡಿಮೆ ಬೆಲೆಗೆ ಭೂಮಿ ಖರೀದಿಸಿ ಪ್ಲಾಟಿಂಗ್ ವ್ಯವಹಾರ ನಡೆಸಿದ್ದಾರೆ ಎಂಬ ಆರೋಪಗಳು ಅವರ ವಿರುದ್ಧ ದಾಖಲಾಗಿದ್ದವು. ವಿರೇಂದ್ರ ಶುಕ್ಲಾ ಕೂಡ ಸೋಮವಾರ ಅಗ್ನಿ ದುರಂತ ಸಂಭವಿಸಿದ ಕಟ್ಟಡದ ಸಹ-ಮಾಲಕರಲ್ಲಿ ಒಬ್ಬರು.

15 ಮಂದಿಯನ್ನು ಬಲಿ ಪಡೆದ ಭೀಕರ ಅಗ್ನಿ ಅವಘಡ

ಸೋಮವಾರ ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಲಖನೌ ಉಷಾ ಮೆಹ್ತಾ ಮಾರ್ಗದಲ್ಲಿರುವ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತು. ಕೆಲವೇ ನಿಮಿಷಗಳಲ್ಲಿ ಬೆಂಕಿ ಮತ್ತು ದಟ್ಟ ಹೊಗೆ ಕಟ್ಟಡವನ್ನೆಲ್ಲ ಆವರಿಸಿತು. ಕಟ್ಟಡದ ನೆಲ ಮಹಡಿಯಲ್ಲಿ ಪೆಟ್ ಶಾಪ್ ಹಾಗೂ ಪಶು ಚಿಕಿತ್ಸಾ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದರೆ, ಮೇಲಿನ ಮಹಡಿಗಳಲ್ಲಿ ಅನಿಮೇಷನ್, ಗೇಮಿಂಗ್ ಮತ್ತು ಸಾಫ್ಟ್‌ವೇರ್ ಅಭಿವೃದ್ಧಿ ತರಬೇತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದವು.

ಹೊಗೆ ವೇಗವಾಗಿ ವ್ಯಾಪಿಸಿದ್ದರಿಂದ ಮೇಲಿನ ಮಹಡಿಗಳಲ್ಲಿದ್ದ ಹಲವು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದರು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಕೆಲ ವಿದ್ಯಾರ್ಥಿಗಳು ಕಿಟಕಿಗಳಿಂದ ಜಿಗಿದು ತಪ್ಪಿಸಿಕೊಳ್ಳಲು ಯತ್ನಿಸಿದರೆ, ಇನ್ನೂ ಕೆಲವರು ಶೌಚಾಲಯಗಳಲ್ಲಿ ಆಶ್ರಯ ಪಡೆದಿದ್ದರು.

ರಕ್ಷಣಾ ಸಿಬ್ಬಂದಿ ಪಕ್ಕದ ಕಟ್ಟಡಗಳ ಗೋಡೆಗಳನ್ನು ಕೊರೆದು ಒಳನುಗ್ಗಿ ಹಲವರನ್ನು ರಕ್ಷಿಸಲು ಪ್ರಯತ್ನಿಸಿದರು. ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಹಾಗೂ ನಾಗರಿಕ ರಕ್ಷಣಾ ತಂಡಗಳು ಹಲವು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದವು.

ಮೃತರಲ್ಲಿ ಹೆಚ್ಚಿನವರು 20ರಿಂದ 24 ವರ್ಷ ವಯಸ್ಸಿನ ಯುವ ವಿದ್ಯಾರ್ಥಿಗಳಾಗಿದ್ದು, ಹಲವರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

2016ರಲ್ಲಿ ಧ್ವಂಸ ಆದೇಶ ಪಡೆದಿದ್ದ ಕಟ್ಟಡದಲ್ಲೇ ಭೀಕರ ಅವಘಡ

SIT ತನಿಖೆಗೆ ಆದೇಶ

ಕಟ್ಟಡದ ಸುರಕ್ಷತೆ, ಅನುಮೋದಿತ ನಕ್ಷೆ ಹಾಗೂ ನಿಯಮ ಪಾಲನೆ ಕುರಿತ ಪ್ರಶ್ನೆಗಳು ಎದ್ದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಶೇಷ ತನಿಖಾ ತಂಡ (SIT) ರಚಿಸಿದ್ದಾರೆ.

ಎರಡು ಸದಸ್ಯರ ಈ SITನಲ್ಲಿ ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಮೃತ್ ಅಭಿಜಾತ್ ಹಾಗೂ ಲಖ್ನೋ ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ADG) ಪ್ರವೀಣ್ ಕುಮಾರ್ ಸೇರಿದ್ದಾರೆ. ಏಳು ದಿನಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

ಈ ತನಿಖೆಯಲ್ಲಿ ಕಟ್ಟಡದ ಅನುಮೋದಿತ ನಕ್ಷೆ, ನಿರ್ಮಾಣ ಇತಿಹಾಸ, ವಿದ್ಯುತ್ ಲೋಡ್ ಸಾಮರ್ಥ್ಯ, ಅಗ್ನಿ ಸುರಕ್ಷತಾ ವ್ಯವಸ್ಥೆಗಳು ಹಾಗೂ ತಾಂತ್ರಿಕ ಲೋಪಗಳ ಕುರಿತು ಪರಿಶೀಲನೆ ನಡೆಯಲಿದೆ. ವಸತಿ ಕಟ್ಟಡವಾಗಿ ಅನುಮೋದನೆ ಪಡೆದಿದ್ದ ಕಟ್ಟಡವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಲಾಗುತ್ತಿತ್ತೇ ಎಂಬ ಅಂಶವನ್ನೂ ತನಿಖೆ ಮಾಡಲಾಗುತ್ತಿದೆ.

ನಾಲ್ವರು ಬಂಧನ, ಅಧಿಕಾರಿಗಳ ಅಮಾನತು

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ನಾಲ್ವರನ್ನು ಬಂಧಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಉತ್ತರ ಪ್ರದೇಶ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಕಾಯ್ದೆಯ ವಿವಿಧ ವಿಧಿಗಳ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇದರ ಜತೆಗೆ ನಾಲ್ವರು ಸರ್ಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

ಕಟ್ಟಡದ ಮಾಲೀಕತ್ವದ ಇತಿಹಾಸ, ನಿರ್ಮಾಣ ನಿಯಮಗಳ ಪಾಲನೆ ಹಾಗೂ ಸುರಕ್ಷತಾ ವೈಫಲ್ಯಗಳ ಕುರಿತು ತನಿಖೆ ಮುಂದುವರಿದಿದ್ದು, SIT ವರದಿ ದುರಂತಕ್ಕೆ ಯಾರು ಹೊಣೆ ಎಂಬುದನ್ನು ಸ್ಪಷ್ಟಪಡಿಸುವ ನಿರೀಕ್ಷೆಯಿದೆ.