ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

10 ವರ್ಷ ಜೈಲು, 10 ಕೋಟಿ ರುಪಾಯಿ ದಂಡ; ಕೇಂದ್ರ ಮಂಡಿಸಿದ ಪ್ರಶ್ನೆಪತ್ರಿಕೆ ಸೋರಿಕೆ ತಡೆ ಮಸೂದೆಯಲ್ಲಿ ಏನಿದೆ? ಮೋದಿ ಸರ್ಕಾರದ ಈ ಬ್ರಹ್ಮಾಸ್ತ್ರದ ಕಂಪ್ಲೀಟ್‌ ಡೀಟೈಲ್ಸ್‌ ಇಲ್ಲಿದೆ

Anti-Paper Leak Law: ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಸಾರ್ವಜನಿಕ ಪರೀಕ್ಷೆಗಳ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಹೊಸ ಪ್ರಸ್ತಾವನೆಯ ಪ್ರಕಾರ ಗರಿಷ್ಠ 10 ವರ್ಷ ಜೈಲು, 10 ಕೋಟಿ ರೂ. ದಂಡ, ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ, 2 ತಿಂಗಳಲ್ಲಿ ತನಿಖೆ ಹಾಗೂ 3 ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸುವ ವ್ಯವಸ್ಥೆ ಜಾರಿಯಾಗಲಿದೆ.

ಪ್ರಶ್ನೆಪತ್ರಿಕೆ ಸೋರಿಕೆಗೆ ಬ್ರೇಕ್ ಹಾಕಲು ಕೇಂದ್ರದ ಮಹತ್ವದ ಹೆಜ್ಜೆ

ಸಾಂದರ್ಭಿಕ ಚಿತ್ರ -

Profile
Sushmitha Jain Jul 29, 2026 1:20 PM

ನವದೆಹಲಿ, ಜುಲೈ 29: ದೇಶಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳು ಮತ್ತು ನೇಮಕಾತಿ ಪರೀಕ್ಷೆಗಳು (Recruitment Examinations)ಗಳಲ್ಲಿ ಪದೇ ಪದೇ ನಡೆಯುತ್ತಿರುವ ಪ್ರಶ್ನೆಪತ್ರಿಕೆ ಸೋರಿಕೆ ಅಕ್ರಮಗಳು (Malpractices) ಹಾಗೂ ಸಂಘಟಿತ ವಂಚನೆಗೆ ಶಾಶ್ವತ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರ (Central Government) ಮಹತ್ವದ ಕಾನೂನು ತಿದ್ದುಪಡಿ (Legal Amendment) ಗೆ ಮುಂದಾಗಿದೆ.

ಸಾರ್ವಜನಿಕ ಪರೀಕ್ಷೆಗಳು (ಅನ್ಯಾಯ ಮಾರ್ಗಗಳ ತಡೆ) ಕಾಯ್ದೆ, 2024ಕ್ಕೆ (Public Examinations (Prevention of Unfair Means) Act, 2024) ಹಲವು ಮಹತ್ವದ ತಿದ್ದುಪಡಿಗಳನ್ನು ತರಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಶೀಘ್ರದಲ್ಲೇ ಸಂಸತ್ತಿನಲ್ಲಿ ಮಸೂದೆ ಮಂಡನೆಯಾಗುವ ಸಾಧ್ಯತೆ ಇದೆ.

ಈ ತಿದ್ದುಪಡಿಗಳ ಮೂಲಕ ಶಿಕ್ಷೆ, ದಂಡ, ತನಿಖೆ ಹಾಗೂ ನ್ಯಾಯಾಂಗ ಪ್ರಕ್ರಿಯೆಯನ್ನು ಇನ್ನಷ್ಟು ಕಠಿಣ ಹಾಗೂ ವೇಗಗೊಳಿಸುವ ಉದ್ದೇಶ ಹೊಂದಲಾಗಿದೆ. ಸರ್ಕಾರದ ಪ್ರಕಾರ, ಪರೀಕ್ಷಾ ಅಕ್ರಮಗಳಲ್ಲಿ ತೊಡಗುವ ಸಂಘಟಿತ ಜಾಲಗಳಿಗೆ ತೀವ್ರ ಎಚ್ಚರಿಕೆ ನೀಡುವುದರ ಜೊತೆಗೆ ಲಕ್ಷಾಂತರ ಅಭ್ಯರ್ಥಿಗಳ ವಿಶ್ವಾಸವನ್ನು ಮರುಸ್ಥಾಪಿಸುವುದು ಈ ಕ್ರಮದ ಪ್ರಮುಖ ಗುರಿಯಾಗಿದೆ.

ಪ್ರಸ್ತುತ ಕಾನೂನು ಏನು ಹೇಳುತ್ತದೆ?

2024ರಲ್ಲಿ ಕೇಂದ್ರ ಸರ್ಕಾರ ಮೊದಲ ಬಾರಿಗೆ ದೇಶದಲ್ಲಿ ಸಾರ್ವಜನಿಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ, ನಕಲು, ಸಂಘಟಿತ ವಂಚನೆ ಹಾಗೂ ತಾಂತ್ರಿಕ ದುರುಪಯೋಗವನ್ನು ತಡೆಯಲು ವಿಶೇಷ ಕಾನೂನನ್ನು ಜಾರಿಗೆ ತಂದಿತ್ತು. ಆದರೆ ಕಳೆದ ಎರಡು ವರ್ಷಗಳಲ್ಲಿ ವಿವಿಧ ರಾಜ್ಯಗಳಲ್ಲಿ ಹಲವು ನೇಮಕಾತಿ ಹಾಗೂ ಪ್ರವೇಶ ಪರೀಕ್ಷೆಗಳಲ್ಲಿ ಅಕ್ರಮಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕಾನೂನನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಸರ್ಕಾರ ನಿರ್ಧರಿಸಿದೆ.

ತಿದ್ದುಪಡಿಯಲ್ಲಿ ಏನೆಲ್ಲ ಬದಲಾವಣೆ?

ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದ ಕಾನೂನನ್ನು ಕೇಂದ್ರ ಸರ್ಕಾರ ಮತ್ತಷ್ಟು ಕಠಿಣಗೊಳಿಸಲು ಮುಂದಾಗಿದೆ. ಪ್ರಸ್ತುತ ಜಾರಿಯಲ್ಲಿರುವ ಕಾನೂನಿನ ಪ್ರಕಾರ ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಪರೀಕ್ಷಾ ಅಕ್ರಮದಲ್ಲಿ ತಪ್ಪಿತಸ್ಥರಾದವರಿಗೆ ಕನಿಷ್ಠ 3 ವರ್ಷ ಹಾಗೂ ಗರಿಷ್ಠ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಆದರೆ ಹೊಸ ತಿದ್ದುಪಡಿಯ ಪ್ರಕಾರ ಕನಿಷ್ಠ ಜೈಲು ಶಿಕ್ಷೆಯನ್ನು 5 ವರ್ಷಕ್ಕೆ ಮತ್ತು ಗರಿಷ್ಠ ಶಿಕ್ಷೆಯನ್ನು 10 ವರ್ಷಕ್ಕೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಈ ಮೂಲಕ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳನ್ನು ಗಂಭೀರ ಅಪರಾಧವೆಂದು ಪರಿಗಣಿಸಿ, ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಇನ್ನಷ್ಟು ಕಠಿಣ ಕಾನೂನು ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.

NEET Paper leak: ನೀಟ್‌ ಅಕ್ರಮ ಹಿನ್ನೆಲೆ NTAಗೆ ಮೇಜರ್‌ ಸರ್ಜರಿ; 47 ಅಧಿಕಾರಿಗಳ ವಜಾ

ದಂಡ 50 ಲಕ್ಷಕ್ಕೆ ಏರಿಕೆ

ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಪರೀಕ್ಷಾ ಅಕ್ರಮಗಳಲ್ಲಿ ವೈಯಕ್ತಿಕವಾಗಿ ಭಾಗಿಯಾಗುವವರ ವಿರುದ್ಧವೂ ಕೇಂದ್ರ ಸರ್ಕಾರ ದಂಡದ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲು ನಿರ್ಧರಿಸಿದೆ. ಪ್ರಸ್ತುತ ಜಾರಿಯಲ್ಲಿರುವ ಕಾನೂನಿನ ಪ್ರಕಾರ ಇಂತಹ ಪ್ರಕರಣಗಳಲ್ಲಿ ಗರಿಷ್ಠ 10 ಲಕ್ಷ ರೂ. ದಂಡ ವಿಧಿಸಲು ಅವಕಾಶವಿದೆ. ಆದರೆ ಹೊಸ ತಿದ್ದುಪಡಿಯ ಪ್ರಕಾರ ಈ ಗರಿಷ್ಠ ದಂಡವನ್ನು 50 ರೂ. ಲಕ್ಷಕ್ಕೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಪರೀಕ್ಷಾ ಅಕ್ರಮಗಳಲ್ಲಿ ತೊಡಗುವವರ ವಿರುದ್ಧ ಕಠಿಣ ಆರ್ಥಿಕ ಶಿಕ್ಷೆ ವಿಧಿಸುವ ಮೂಲಕ ಇಂತಹ ಅಪರಾಧಗಳನ್ನು ಪರಿಣಾಮಕಾರಿಯಾಗಿ ತಡೆಯುವುದು ಸರ್ಕಾರದ ಉದ್ದೇಶವಾಗಿದೆ.

ಪರೀಕ್ಷೆ ನಡೆಸುವ ಸಂಸ್ಥೆಗಳಿಗೂ ಭಾರೀ ಹೊಣೆಗಾರಿಕೆ

ಪರೀಕ್ಷಾ ಕೇಂದ್ರಗಳ ನಿರ್ವಹಣೆ, ತಂತ್ರಜ್ಞಾನ ಸೇವೆ, ಪ್ರಶ್ನೆಪತ್ರಿಕೆ ಸಾಗಣೆ, ಲಾಜಿಸ್ಟಿಕ್ಸ್ ಹಾಗೂ ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಂಸ್ಥೆಗಳ ವಿರುದ್ಧವೂ ಕೇಂದ್ರ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಪ್ರಸ್ತುತ ಕಾನೂನಿನ ಪ್ರಕಾರ ಇಂತಹ ಸಂಸ್ಥೆಗಳಿಗೆ ಗರಿಷ್ಠ 1 ಕೋಟಿ ರೂ. ದಂಡ ವಿಧಿಸುವುದರ ಜೊತೆಗೆ, ನಾಲ್ಕು ವರ್ಷಗಳ ಕಾಲ ಪರೀಕ್ಷೆ ನಡೆಸಲು ನಿಷೇಧ ಹೇರಬಹುದಾಗಿದೆ. ಆದರೆ ಹೊಸ ತಿದ್ದುಪಡಿಯ ಪ್ರಕಾರ ಗರಿಷ್ಠ ದಂಡವನ್ನು 5 ಕೋಟಿ ರೂ. ಗೆ ಹೆಚ್ಚಿಸಲಾಗುತ್ತಿದ್ದು, ಪರೀಕ್ಷೆ ನಡೆಸುವ ನಿಷೇಧದ ಅವಧಿಯನ್ನು 4 ವರ್ಷಗಳಿಂದ 8 ವರ್ಷಗಳಿಗೆ ವಿಸ್ತರಿಸಲಾಗುತ್ತದೆ. ಅಲ್ಲದೆ, ಪರೀಕ್ಷಾ ಅಕ್ರಮದಿಂದ ಸರ್ಕಾರಕ್ಕೆ ಉಂಟಾಗುವ ಪರೀಕ್ಷಾ ವೆಚ್ಚವನ್ನು ಸಂಬಂಧಿತ ಸಂಸ್ಥೆಗಳಿಂದಲೇ ವಸೂಲಿ ಮಾಡುವ ಅಧಿಕಾರವೂ ಮುಂದುವರಿಯಲಿದೆ. ಈ ಮೂಲಕ ಪರೀಕ್ಷಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸಂಸ್ಥೆಗಳ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.

ಸಂಘಟಿತ ಅಕ್ರಮ ಜಾಲಗಳಿಗೆ 10 ಕೋಟಿ ದಂಡ

ದೇಶಾದ್ಯಂತ ಕಾರ್ಯನಿರ್ವಹಿಸುವ ಪೇಪರ್ ಲೀಕ್ ಮಾಫಿಯಾ ಹಾಗೂ ಸಂಘಟಿತ ಪರೀಕ್ಷಾ ಅಕ್ರಮ ಜಾಲಗಳ ವಿರುದ್ಧ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಹೊಸ ತಿದ್ದುಪಡಿಯ ಪ್ರಕಾರ, ಇಂತಹ ಸಂಘಟಿತ ಅಕ್ರಮಗಳಲ್ಲಿ ಭಾಗಿಯಾಗಿರುವುದು ಸಾಬೀತಾದರೆ ಕನಿಷ್ಠ 7 ವರ್ಷಗಳ ಜೈಲು ಶಿಕ್ಷೆ ಹಾಗೂ ಕನಿಷ್ಠ 10 ಕೋಟಿ ರೂ. ದಂಡ ವಿಧಿಸಲಾಗುತ್ತದೆ. ಗರಿಷ್ಠ ಜೈಲು ಶಿಕ್ಷೆ 10 ವರ್ಷಗಳವರೆಗೆ ಇರಲಿದ್ದು, ಸಂಘಟಿತವಾಗಿ ಪ್ರಶ್ನೆಪತ್ರಿಕೆ ಸೋರಿಕೆ ನಡೆಸುವ ಜಾಲಗಳನ್ನು ಸಂಪೂರ್ಣವಾಗಿ ನಿಯಂತ್ರಿಸಿ ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಕಾಪಾಡುವುದು ಈ ತಿದ್ದುಪಡಿಯ ಪ್ರಮುಖ ಉದ್ದೇಶವಾಗಿದೆ.

ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ

ಪರೀಕ್ಷಾ ಅಕ್ರಮ ಪ್ರಕರಣಗಳು ಹಲವು ವರ್ಷಗಳವರೆಗೆ ನ್ಯಾಯಾಲಯಗಳಲ್ಲಿ ಬಾಕಿ ಉಳಿಯುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು, ಕೇಂದ್ರ ಸರ್ಕಾರ ಪ್ರತಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಲು ಪ್ರಸ್ತಾಪಿಸಿದೆ. ಈ ನ್ಯಾಯಾಲಯಗಳಲ್ಲಿ ಪ್ರಕರಣಗಳ ದಿನನಿತ್ಯ ವಿಚಾರಣೆ ನಡೆಯಲಿದ್ದು, ಅನಗತ್ಯ ಮುಂದೂಡಿಕೆಗಳಿಗೆ ಅವಕಾಶ ನೀಡುವುದಿಲ್ಲ. ಆರೋಪಪಟ್ಟಿ ಸಲ್ಲಿಕೆಯಾದ ನಂತರ ಸಾಧ್ಯವಾದಷ್ಟು ಮೂರು ತಿಂಗಳೊಳಗೆ ವಿಚಾರಣೆ ಪೂರ್ಣಗೊಳಿಸುವ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ. ಇದರಿಂದ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮ ಪ್ರಕರಣಗಳ ತ್ವರಿತ ವಿಚಾರಣೆ ಹಾಗೂ ಶೀಘ್ರ ನ್ಯಾಯ ದೊರಕುವ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶ ಹೊಂದಲಾಗಿದೆ.

NEET Protests: ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ವಿಶೇಷ ಸಂದೇಶ ರವಾನಿಸಿದ ಶುಭಮನ್‌ ಗಿಲ್!

ವಿಶೇಷ ಸರ್ಕಾರಿ ಅಭಿಯೋಜಕರ ನೇಮಕ

ಪರೀಕ್ಷಾ ಅಕ್ರಮ ಪ್ರಕರಣಗಳ ಪರಿಣಾಮಕಾರಿ ವಿಚಾರಣೆ ಮತ್ತು ತ್ವರಿತ ನ್ಯಾಯಕ್ಕಾಗಿ ಪ್ರತಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಕ ಮಾಡುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಮಾಡಿದೆ. ಈ ಪ್ರಕರಣಗಳಿಗೆ ಸಂಬಂಧಿಸಿದ ಮೇಲ್ಮನವಿಗಳನ್ನು ನೇರವಾಗಿ ಹೈಕೋರ್ಟ್‌ನ ಇಬ್ಬರು ನ್ಯಾಯಾಧೀಶರ ಪೀಠ ವಿಚಾರಣೆ ನಡೆಸಲಿದ್ದು, ಸಾಧ್ಯವಾದಷ್ಟು ಮೂರು ತಿಂಗಳೊಳಗೆ ಮೇಲ್ಮನವಿಗಳ ವಿಲೇವಾರಿ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಕ್ರಮದಿಂದ ನ್ಯಾಯಾಂಗ ಪ್ರಕ್ರಿಯೆಯನ್ನು ವೇಗಗೊಳಿಸಿ, ಪರೀಕ್ಷಾ ಅಕ್ರಮ ಪ್ರಕರಣಗಳಲ್ಲಿ ಶೀಘ್ರ ನ್ಯಾಯ ಒದಗಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.

ಕೇಂದ್ರ ಸರ್ಕಾರದ ಉದ್ದೇಶವೇನು?

ಕೇಂದ್ರ ಸರ್ಕಾರದ ಪ್ರಕಾರ, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಅಕ್ರಮಗಳಿಂದ ಪರೀಕ್ಷೆಗಳು ರದ್ದಾಗುವುದು, ಮರುಪರೀಕ್ಷೆ ನಡೆಸಬೇಕಾಗುವುದು, ಅಭ್ಯರ್ಥಿಗಳ ಸಮಯ, ಹಣ ಮತ್ತು ಶ್ರಮ ವ್ಯರ್ಥವಾಗುವುದರ ಜೊತೆಗೆ, ಸಾರ್ವಜನಿಕ ಪರೀಕ್ಷೆಗಳ ಮೇಲಿನ ವಿಶ್ವಾಸಕ್ಕೂ ಧಕ್ಕೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಘಟಿತ ಪೇಪರ್ ಲೀಕ್ ಜಾಲಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು, ಪರೀಕ್ಷಾ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ನಂಬಿಕೆಯನ್ನು ಮರುಸ್ಥಾಪಿಸುವುದು, ತನಿಖೆ ಹಾಗೂ ನ್ಯಾಯಾಂಗ ಪ್ರಕ್ರಿಯೆಯನ್ನು ವೇಗಗೊಳಿಸುವುದು ಮತ್ತು ತಪ್ಪಿತಸ್ಥರಿಗೆ ತ್ವರಿತ ಹಾಗೂ ಕಠಿಣ ಶಿಕ್ಷೆ ವಿಧಿಸುವುದೇ ಈ ತಿದ್ದುಪಡಿಗಳ ಪ್ರಮುಖ ಉದ್ದೇಶವಾಗಿದೆ.

ಒಟ್ಟಾರೆ ಈ ತಿದ್ದುಪಡಿಗಳು ಜಾರಿಗೆ ಬಂದರೆ, ದೇಶದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳ ವಿರುದ್ಧ ಇದುವರೆಗಿನ ಅತ್ಯಂತ ಕಠಿಣ ಕಾನೂನು ವ್ಯವಸ್ಥೆ ಜಾರಿಗೆ ಬರಲಿದೆ. ಕಠಿಣ ಶಿಕ್ಷೆ, ಭಾರೀ ದಂಡ, ಸಮಯಬದ್ಧ ತನಿಖೆ, ವಿಶೇಷ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳು ಮತ್ತು ವೇಗದ ಮೇಲ್ಮನವಿ ಪ್ರಕ್ರಿಯೆಯ ಮೂಲಕ ಸಾರ್ವಜನಿಕ ಪರೀಕ್ಷೆಗಳ ಪಾರದರ್ಶಕತೆ, ವಿಶ್ವಾಸಾರ್ಹತೆ ಹಾಗೂ ನ್ಯಾಯಸಮ್ಮತತೆಯನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಯಾಗಿ ಈ ತಿದ್ದುಪಡಿಗಳನ್ನು ಪರಿಗಣಿಸಲಾಗಿದೆ.