ಪೆಟ್ರೋಲ್-ಡೀಸೆಲ್ ಬೆಲೆ ಮತ್ತೆ ಹೆಚ್ಚಳ; 10 ದಿನಗಳಲ್ಲಿ 3ನೇ ಬಾರಿ ತೈಲ ದರ ಏರಿಕೆ
ಪ್ರಸ್ತುತ ಜಾಗತಿಕ ಮಟ್ಟದಲ್ಲಿ ತಲೆದೋರಿರುವ ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ತೀವ್ರವಾಗಿ ಏರುತ್ತಿವೆ. ಇದರ ಪರಿಣಾಮವಾಗಿ ಉಂಟಾಗಿರುವ ತೈಲ ಬೆಲೆ ಏರಿಕೆಯ ಹೊರೆಯನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಹಂತಹಂತವಾಗಿ ಗ್ರಾಹಕರಿಗೆ ವರ್ಗಾಯಿಸಲು ಆರಂಭಿಸಿವೆ.
-
ನವದೆಹಲಿ, ಮೇ 23: ದೇಶದಲ್ಲಿ ವಾಹನ ಸವಾರರಿಗೆ ಮತ್ತೊಮ್ಮೆ ಇಂಧನ ದರ ಏರಿಕೆಯ ಬಿಸಿ ತಟ್ಟಿದೆ. ಕಳೆದ ಹತ್ತು ದಿನಗಳ ಅವಧಿಯಲ್ಲಿಯೇ ಇಂಧನ ಕಂಪನಿಗಳು ಮೂರನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಹೆಚ್ಚಳ ಮಾಡಿದ್ದು, ಶನಿವಾರದಂದು ಪ್ರತಿ ಲೀಟರ್ ಡೀಸೆಲ್ ಬೆಲೆಯಲ್ಲಿ 81, ಪೆಟ್ರೋಲ್ ಬೆಲೆಯಲ್ಲಿ 91 ಪೈಸೆವರೆಗೆ ಏರಿಕೆಯಾಗಿದೆ.
ಬೆಂಗಳೂರಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹107.14ಕ್ಕೆ ಏರಿಕೆಯಾಗಿದ್ದರೆ, ಡೀಸೆಲ್ ದರ ₹95.04ರಷ್ಟಿದೆ. ಮುಂಬೈಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ ₹108.49ರಷ್ಟಿದ್ದರೆ, ಡೀಸೆಲ್ ದರ ₹95.02ಕ್ಕೆ ಏರಿಕೆಯಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 87 ಪೈಸೆ ಹೆಚ್ಚಳವಾಗುವುದರೊಂದಿಗೆ 98.64 ರೂಪಾಯಿಯಿಂದ 99.51 ರೂಪಾಯಿಗೆ ತಲುಪಿದೆ. ಅದೇ ರೀತಿ, ಡೀಸೆಲ್ ಬೆಲೆಯು ಲೀಟರ್‌ಗೆ 91 ಪೈಸೆ ಏರಿಕೆಯಾಗಿದ್ದು, 91.58 ರೂಪಾಯಿಯಿಂದ 92.49 ರೂಪಾಯಿಗೆ ಜಿಗಿದಿದೆ.
ಮೇ 15 ರಿಂದ ಇತ್ತೀಚೆಗೆ ತೈಲ ದರ ಪರಿಷ್ಕರಣೆ ಆರಂಭವಾದ ಬಳಿಕ ಇದು ಅತ್ಯಲ್ಪ ದಿನಗಳಲ್ಲಿ ನಡೆದಿರುವ ಮೂರನೇ ಸರಣಿ ಹೆಚ್ಚಳವಾಗಿದೆ. ಪ್ರಸ್ತುತ ಜಾಗತಿಕ ಮಟ್ಟದಲ್ಲಿ ತಲೆದೋರಿರುವ ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ತೀವ್ರವಾಗಿ ಏರುತ್ತಿವೆ. ಇದರ ಪರಿಣಾಮವಾಗಿ ಉಂಟಾಗಿರುವ ತೈಲ ಬೆಲೆ ಏರಿಕೆಯ ಹೊರೆಯನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಹಂತಹಂತವಾಗಿ ಗ್ರಾಹಕರಿಗೆ ವರ್ಗಾಯಿಸಲು ಆರಂಭಿಸಿವೆ.