ಕಚೇರಿಯಲ್ಲಿ 8,931 ದಿನಗಳು: ನರೇಂದ್ರ ಮೋದಿ ಮತ್ತೊಂದು ದಾಖಲೆ; ಸರ್ಕಾರದ ಮುಖ್ಯಸ್ಥರಾಗಿ ಸುದೀರ್ಘ ಸೇವೆ ಸಲ್ಲಿಸಿದ ರಾಜಕಾರಣಿ
Narendra Modi: ಭಾರತದಲ್ಲಿ ಸರ್ಕಾರದ ಮುಖ್ಯಸ್ಥರಾಗಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ರಾಜಕಾರಣಿ ಎನ್ನುವ ಹೆಗ್ಗಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಪಾತ್ರರಾಗಿದ್ದಾರೆ. ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ಬರೋಬ್ಬರಿ 8,931 ದಿನಗಳನ್ನು ಮುಗಿಸಿರುವ ಅವರು ಅಭೂತಪೂರ್ವ ಇತಿಹಾಸ ಬರೆದಿದ್ದಾರೆ.
ನರೇಂದ್ರ ಮೋದಿ (ಸಂಗ್ರಹ ಚಿತ್ರ) -
ದೆಹಲಿ, ಮಾ. 22: ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ 10 ಕೋಟಿ ಫಾಲೋವರ್ಸ್, ಯೂಟ್ಯೂಬ್ ಚಾನಲ್‌ನಲ್ಲಿ 3 ಕೋಟಿ ಸಬ್ಸ್ಕ್ರೈಬರ್ ಹೊಂದುವ ಮೂಲಕ ದಾಖಲೆ ಬರೆದ ಪ್ರಧಾನಿ ನರೇಂದ್ರ ಮೋದಿ (Narendra Modi) ಇದೀಗ ಮತ್ತೊಂದು ಇತಿಹಾಸದ ಬರೆದಿದ್ದಾರೆ. ಭಾರತದಲ್ಲಿ ಸರ್ಕಾರದ ಮುಖ್ಯಸ್ಥರಾಗಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ರಾಜಕಾರಣಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ಬರೋಬ್ಬರಿ 8,931 ದಿನಗಳನ್ನು ಮುಗಿಸಿರುವ ಅವರು ಅಭೂತಪೂರ್ವ ಇತಿಹಾಸ ಬರೆದಿದ್ದಾರೆ. ಆ ಮೂಲಕ ಸಿಕ್ಕಿಂನ ಮಾಜಿ ಮುಖ್ಯಮಂತ್ರಿ ಪವನ್ ಕುಮಾರ್ ಚಾಂಬ್ಲಿಂಗ್ (Pawan Kumar Chamling) ಅವರ 8,930 ದಿನಗಳ ದಾಖಲೆ ಮುರಿದ್ದಾರೆ.
ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ 25 ವರ್ಷ ಪೂರೈಸುತ್ತಿರುವ ಮಧ್ಯೆಯೇ ಈ ವಿಶಿಷ್ಟ ದಾಖಲೆಗೆ ಪಾತ್ರರಾಗಿದ್ದಾರೆ. ವಿಶಿಷ್ಟ ಸಾಧನೆ, ನಾಯಕತ್ವದ ಮೂಲಕ ಮೋದಿ ಈ ಮೈಲಿಗಲ್ಲು ದಾಟಿದ್ದಾರೆ. ಈ ಹಾದಿಯಲ್ಲಿ ಅವರು ಹಲವು ದಾಖಲೆಗಳನ್ನೂ ಬರೆದಿದ್ದಾರೆ. ಇದರಲ್ಲಿ ಅತೀ ಹೆಚ್ಚು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಗುಜರಾತ್ ಮುಖ್ಯಮಂತ್ರಿ ಎನ್ನುವ ಸಾಧನೆಯೂ ಸೇರಿದೆ.
ಸ್ವಾತಂತ್ರ್ಯದ ನಂತರ ಜನಿಸಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ. 2014, 2019 ಮತ್ತು 2024ರಲ್ಲಿ ಸತತ 3 ಲೋಕಸಭಾ ಚುನಾವಣೆಗಳಲ್ಲಿ ಜಯಗಳಿಸಿದ್ದಾರೆ. ಇದು ರಾಜಕೀಯ ದೀರ್ಘಾಯುಷ್ಯ ಮತ್ತು ನಿರಂತರ ಸಾರ್ವಜನಿಕ ಆದೇಶವನ್ನು ಸಾರಿ ಹೇಳಿದೆ.
ಯೂಟ್ಯೂಬ್‌ನಲ್ಲೂ ದಾಖಲೆ ಬರೆದ ಪ್ರಧಾನಿ ಮೋದಿ; ಬರೋಬ್ಬರಿ 3 ಕೋಟಿ ಸಬ್ಸ್ಕ್ರೈಬರ್ಸ್
ಮೊದಲ ಬಾರಿ 2001ರಲ್ಲಿ ಅಧಿಕಾರ ಸ್ವೀಕಾರ
ನರೇಂದ್ರ ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾಗಿ ಮೊದಲ ಬಾರಿ 2001ರ ಅಕ್ಟೋಬರ್ 7ರಂದು ಅಧಿಕಾರ ಸ್ವೀಕರಿಸಿದರು. ಬಳಿಕ 2014ರ ಮೇ 21 ತನಕ ಮುಂದುವರಿದರು. ರಾಷ್ಟೀಯ ರಾಜಕಾರಣಕ್ಕೆ ಬದಲಾಗುವ ಮುನ್ನ 13 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು.
ಇನ್ನು ನರೇಂದ್ರ ಮೋದಿ 2014ರ ಮೇ 26ರಂದು 14ನೇ ಪ್ರಧಾನ ಮಂತ್ರಿಯಾಗಿ ಮೊದಲ ಬಾರಿ ಪ್ರಮಾಣ ವಚನ ಸ್ವೀಕರಿಸಿದರು. ಲೋಕಸಭೆಯಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಮೊದಲ ಕಾಂಗ್ರಸೇತರ ನಾಯಕ ಎನಿಸಿಕೊಂಡರು. ಬಳಿಕ ಸತತ 2 ಬಾರಿ ಪ್ರಧಾನಿ ಮಂತ್ರಿಯಾಗಿ ಅಧಿಕಾರ ಪೂರೈಸಿದ ಮೊದಲ ಕಾಂಗ್ರಸೇತರ ಮುಖಂಡ ಆಗಿಯೂ ಹೊರ ಹೊಮ್ಮಿದ್ದಾರೆ. ಜತೆಗೆ ಸತತ 3ನೇ ಬಾರಿ ಪ್ರಧಾನಿಯಾಗಿ ಅಧಿಕಾರಕ್ಕೇರಿದರು.
ಡಿಜಿಟಲ್ ಫ್ಲ್ಯಾಟ್‌ಫಾರ್ಮ್‌ನಲ್ಲೂ ಮಿಂಚು
ಈ ಎಲ್ಲ ಸಾಧನೆಗಳ ಜತೆಗೆ ಡಿಜಿಟಲ್ ಫ್ಲ್ಯಾಟ್‌ಫಾರ್ಮ್‌ನಲ್ಲೂ ಮೋದಿ ಗಮನ ಸೆಳೆದಿದ್ದಾರೆ. ಡೊನಾಲ್ಡ್ ಟ್ರಂಪ್ ಅವರಂತಹ ನಾಯಕರೂ ಸಾಧಿಸಲಾಗದ ಮೈಲಿಗಲ್ಲು ನೆಟ್ಟಿದ್ದಾರೆ. ಕೆಲ ದಿನಗಳ ಹಿಂದೆಯಷ್ಟಯೇ ಇನ್‌ಸ್ಟಾಗ್ರಾಮ್‌ನಲ್ಲಿ 100 ಮಿಲಿಯನ್ ಫಾಲೋವರ್ಸ್ ಹೊಂದುವ ಮೂಲಕ ದಾಖಲೆ ನಿರ್ಮಿಸಿದರು. 2014ರಲ್ಲಿ ಈ ಇನ್‌ಸ್ಟಾಗ್ರಾಮ್ ಪೇಜ್ ತೆರೆದ ಅವರು, ಜಾಗತಿಕ ರಾಜಕೀಯ ನಾಯಕರಲ್ಲಿ ಅತ್ಯಧಿಕ ಅನುಯಾಯಿಗಳನ್ನು ಹೊಂದಿರುವ ವ್ಯಕ್ತಿಯಾಗಿ ಹೊರ ಹೊಮ್ಮಿದರು. ಪ್ರಧಾನಿ ಮೋದಿ ಅವರ ಅಧಿಕೃತ ಯೂಟ್ಯೂಬ್ ಚಾನೆಲ್ 30 ಮಿಲಿಯನ್ ಸಬ್ಸ್ಕ್ರೈಬರ್ ಗಡಿಯನ್ನು ದಾಟಿದೆ.