ಬ್ಲಿಂಕ್ಇಟ್ನಿಂದ ಖರೀದಿಸಿದ ಚಾಕುವಿನಿಂದ 2 ಕೊಲೆ; ಇ-ಕಾಮರ್ಸ್ ಕಂಪನಿ ವಿರುದ್ಧ ಪ್ರಕರಣ ದಾಖಲು
Police raid BlinkIt stores: ಕೊಲೆಗಳಲ್ಲಿ ಹೆಚ್ಚಾಗಿ ಬಳಸುವ ಬಟನ್ ಚಾಕುಗಳು ಅಥವಾ ಬಟನ್ ಲಾಕ್ ಚಾಕುಗಳನ್ನು ಮಾರಾಟ ಮಾಡಿದ್ದಕ್ಕಾಗಿ ಆನ್‌ಲೈನ್ ವಿತರಣಾ ಕಂಪನಿ ಬ್ಲಿಂಕ್‌ಇಟ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪಶ್ಚಿಮ ದೆಹಲಿಯಲ್ಲಿ ನಡೆದ ಎರಡು ಪ್ರತ್ಯೇಕ ಕೊಲೆಗಳ ತನಿಖೆಯ ಸಮಯದಲ್ಲಿ, ಎರಡೂ ಅಪರಾಧಗಳಲ್ಲಿ ಬಳಸಲಾದ ಚಾಕುಗಳನ್ನು ಬ್ಲಿಂಕ್‌ಇಟ್ ಮೂಲಕ ಖರೀದಿಸಲಾಗಿದೆ ಎಂದು ತಿಳಿದುಬಂದಿದೆ.
ಸಾಂದರ್ಭಿಕ ಚಿತ್ರ. -
ನವದೆಹಲಿ, ಫೆ. 18: ಕೊಲೆಗಳಲ್ಲಿ ಹೆಚ್ಚಾಗಿ ಬಳಸುವ ಬಟನ್ ಚಾಕು ಅಥವಾ ಬಟನ್ ಲಾಕ್ ಚಾಕು ಮಾರಾಟ ಮಾಡಿದ್ದಕ್ಕಾಗಿ ಆನ್‌ಲೈನ್ ವಿತರಣಾ ಕಂಪನಿ ಬ್ಲಿಂಕ್‌ಇಟ್ (BlinkIt) ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎರಡು ಪ್ರತ್ಯೇಕ ಕೊಲೆ ಪ್ರಕರಣಗಳ ಆರೋಪಿಗಳು ಈ ಆ್ಯಪ್ ಮೂಲಕ ಚಾಕುಗಳನ್ನು ಖರೀದಿಸಿದ್ದಾಗಿ ಹೇಳಿದ ನಂತರ ದೆಹಲಿ (Delhi) ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಪಶ್ಚಿಮ ದೆಹಲಿಯಲ್ಲಿ ನಡೆದ ಎರಡು ಪ್ರತ್ಯೇಕ ಕೊಲೆಗಳ ತನಿಖೆಯ ಸಮಯದಲ್ಲಿ, ಎರಡೂ ಅಪರಾಧಗಳಲ್ಲಿ ಬಳಸಲಾದ ಚಾಕುಗಳನ್ನು ಬ್ಲಿಂಕ್‌ಇಟ್ ಮೂಲಕ ಖರೀದಿಸಲಾಗಿದೆ ಎಂದು ತಿಳಿದುಬಂದಿದೆ. ನಂತರ ಪೊಲೀಸರು ಗ್ರಾಹಕರಂತೆ ನಟಿಸಿ ಅದೇ ಚಾಕುವನ್ನು ಬ್ಲಿಂಕ್‌ಇಟ್‍ನಿಂದ ಖರೀದಿಸಿದರು.
ಸರ್ಕಾರಿ ನಿಯಮಗಳ ಪ್ರಕಾರ, 7.62 ಸೆಂ.ಮೀ. ಉದ್ದ ಮತ್ತು 1.72 ಸೆಂ.ಮೀ. ಅಗಲದ ಬ್ಲೇಡ್‌ಗಳನ್ನು ಹೊಂದಿರುವ ಚಾಕುಗಳನ್ನು ಮಾತ್ರ ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದು. ಅದಕ್ಕಿಂತ ದೊಡ್ಡದಾದ ಯಾವುದೇ ಚಾಕು ಮಾರಾಟ ಶಸ್ತ್ರಾಸ್ತ್ರ ಕಾಯ್ದೆಯನ್ನು ಉಲ್ಲಂಘಿಸುತ್ತದೆ ಮತ್ತು ಅದು ಕ್ರಿಮಿನಲ್ ಅಪರಾಧ ಎನಿಸಿಕೊಳ್ಳುತ್ತದೆ. ಪೊಲೀಸರಿಗೆ ತಲುಪಿಸಿದ ಚಾಕು 8 ಸೆಂ.ಮೀ. ಉದ್ದ ಮತ್ತು 2.5 ಸೆಂ.ಮೀ. ಅಗಲವಿದ್ದು, ಇದು ಕಾನೂನು ಮಿತಿಗಳನ್ನು ಮೀರಿದೆ.
ಹತ್ತು ನಿಮಿಷದ ಡೆಲಿವರಿಗಾಗಿ ಪ್ರಾಣದ ಹಂಗು ತೊರೆದು ಸ್ಕೇಟಿಂಗ್ ಮಾಡಿದ ಬ್ಲಿಂಕಿಟ್ ಡೆಲಿವರಿ ಬಾಯ್!
ನಂತರ ಪೊಲೀಸರು ದೆಹಲಿಯಾದ್ಯಂತ ಹಲವು ಬ್ಲಿಂಕ್‌ಇಟ್ ಶಾಖೆ ಮೇಲೆ ದಾಳಿ ನಡೆಸಿ 55ಕ್ಕೂ ಹೆಚ್ಚು ಅಂತಹ ಚಾಕುಗಳನ್ನು ವಶಪಡಿಸಿಕೊಂಡರು. ಅಂತಹ ಚಾಕುಗಳನ್ನು ಮಾರಾಟ ಮಾಡಿದ್ದಕ್ಕಾಗಿ ಕ್ವಿಕ್-ಕಾಮರ್ಸ್ ಪ್ಲಾಟ್‌ಫಾರ್ಮ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದರ ಬೆಲೆ 699 ರುಪಾಯಿ ಎಂದು ವರದಿಯಾಗಿದೆ.
ಚರ್ಚೆಗೆ ಕಾರಣವಾಯ್ತು ಕಾರ್ಯ ವೈಖರಿ
ಬ್ಲಿಂಕ್‌ಇಟ್ 10 ನಿಮಿಷಗಳಲ್ಲಿ ವಸ್ತುಗಳನ್ನು ವಿತರಣೆ ಮಾಡುವಾಗ ಬಗ್ಗೆ ಇತ್ತೀಚೆಗೆ ತೀವ್ರ ಟೀಕೆಗೆ ಗುರಿಯಾಗಿತ್ತು. ಇದು ಡೆಲಿವರಿ ಬಾಯ್‌ಗಳ ಜೀವಕ್ಕೆ ಅಪಾಯವನ್ನುಂಟು ಮಾಡುತ್ತದೆ ಎಂದು ಹಲವರು ವಾದಿಸಿದ್ದರು.
ಉತ್ತಮ ವೇತನ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳಿಗಾಗಿ ಒತ್ತಾಯಿಸಿ ಡಿಸೆಂಬರ್ 25 ಮತ್ತು ಡಿಸೆಂಬರ್ 31ರಂದು, ಭಾರತೀಯ ಅಪ್ಲಿಕೇಶನ್ ಆಧಾರಿತ ಸಾರಿಗೆ ಕಾರ್ಮಿಕರ ಒಕ್ಕೂಟ (IFAT) ಮತ್ತು ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರ ಒಕ್ಕೂಟ (TGPWU) ಪ್ರತಿಭಟನೆ ನಡೆಸಿತ್ತು. 10 ನಿಮಿಷಗಳಲ್ಲಿ ಡೆಲಿವರಿ ಮಾಡುವ ನಿಯಮವನ್ನು ತೆಗೆದುಹಾಕುವಂತೆ ಒತ್ತಾಯಿಸಲಾಗಿತ್ತು.
ಬ್ಲಿಂಕಿಟ್ ಡೆಲಿವರಿ ರೈಡರ್ ಆಗಿ ಕೆಲಸ ಮಾಡಿದ ಸಂಸದ ರಾಘವ ಚಡ್ಡಾ
ಪ್ರತಿಭಟನೆ ಬಳಿಕ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್ ಮಾಂಡವಿಯಾ ಈ ಕಂಪನಿಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ ಡೆಲಿವರಿ ಬಾಯ್‌ಗಳ ಸುರಕ್ಷತೆಗೆ ಆದ್ಯತೆ ನೀಡುವಂತೆ ತಿಳಿಸಿದರು. ಬಳಿಕ ಸರ್ಕಾರವು ಜನವರಿಯಲ್ಲಿ ಬ್ಲಿಂಕ್‌ಇಟ್‌ನಂತಹ ಇ-ಕಾಮರ್ಸ್ ವೇದಿಕೆಗಳಿಗೆ 10 ನಿಮಿಷಗಳಲ್ಲಿ ಡೆಲಿವರಿ ಮಾಡುವುದನ್ನು ತೆಗೆದುಹಾಕುವಂತೆ ಸೂಚಿಸಿತು.
ಸರ್ಕಾರಿ ಮೂಲಗಳ ಪ್ರಕಾರ, ಸಚಿವರು ಜೊಮಾಟೊ, ಸ್ವಿಗ್ಗಿ, ಬ್ಲಿಂಕ್‌ಇಟ್ ಮತ್ತು ಜೆಪ್ಟೊ ಸೇರಿದಂತೆ ಹಲವಾರು ಸಂಗ್ರಾಹಕರ ಕಾರ್ಯನಿರ್ವಾಹಕರನ್ನು ಭೇಟಿ ಮಾಡಿ ವಿತರಣಾ ಸಮಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಬ್ಲಿಂಕ್‌ಇಟ್ ತನ್ನ ಟ್ಯಾಗ್‌ಲೈನ್ ಅನ್ನು "10 ನಿಮಿಷಗಳಲ್ಲಿ 10,000 ಕ್ಕೂ ಹೆಚ್ಚು ಉತ್ಪನ್ನಗಳನ್ನು ತಲುಪಿಸಲಾಗಿದೆ"ನಿಂದ "30,000ಕ್ಕೂ ಹೆಚ್ಚು ಉತ್ಪನ್ನಗಳನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸಲಾಗಿದೆ" ಎಂದು ಪರಿಷ್ಕರಿಸಿದೆ ಎಂದು ಮೂಲಗಳು ತಿಳಿಸಿವೆ.