ಸೋನಮ್ ವಾಂಗ್‌ಚುಕ್ ಭೇಟಿಗೆ ತೆರಳಿದ ವಿರೋಧ ಪಕ್ಷದ ನಾಯಕರನ್ನು ತಡೆದ ಪೊಲೀಸರು
ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಯನ್ನು ಆಗ್ರಹಿಸಿ ಜೂನ್ 28ರಿಂದ ಉಪವಾಸ ನಡೆಸುತ್ತಿರುವ ಸೋನಮ್ ವಾಂಗ್‌ಚುಕ್ ಅವರನ್ನು ಭೇಟಿಯಾಗಲು ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ತೆರಳಿದ ವಿರೋಧ ಪಕ್ಷದ ಸಂಸದರನ್ನು ಪೊಲೀಸರು ತಡೆದಿದ್ದಾರೆ. ನ್ಯಾಯಾಲಯದಿಂದ ಯಾವುದೇ ನಿರ್ಬಂಧ ಇಲ್ಲದೇ ಇದ್ದರೂ ನಮಗೆ ಅವರನ್ನು ಭೇಟಿಯಾಗಲು ಅವಕಾಶ ನೀಡಿಲ್ಲ ಎಂದು ಜೆಎಂಎಂ ಸಂಸದ ಮಹುವಾ ಮಾಝಿ ತಿಳಿಸಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ಗುರುಗ್ರಾಮದ (Gurugram) ಮೇದಾಂತ ಆಸ್ಪತ್ರೆಯಲ್ಲಿ ( Medanta Hospital) ಚಿಕಿತ್ಸೆ ಪಡೆಯುತ್ತಿರುವ ಸೋನಮ್ ವಾಂಗ್‌ಚುಕ್ (Sonam Wangchuk) ಅವರನ್ನು ಭೇಟಿ ಮಾಡಲು ಪೊಲೀಸರು ತಡೆದಿದ್ದಾರೆ ಎಂದು ಜೆಎಂಎಂ ಸಂಸದ ಮಹುವಾ ಮಾಝಿ (JMM MP Mahua Majhi) ತಿಳಿಸಿದ್ದಾರೆ. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗುರುವಾರ ಬೆಳಗ್ಗೆ ನಾವು ಸೋನಮ್ ವಾಂಗ್‌ಚುಕ್ ಅವರನ್ನು ಭೇಟಿ ಮಾಡಲು ಹೋಗಿದ್ದೆವು. ಆದರೆ ನಮ್ಮನ್ನು ಆಸ್ಪತ್ರೆಯ ಗೇಟ್ ನಲ್ಲಿ ತಡೆಯಲಾಯಿತು. ಯಾರನ್ನು ಕೂಡ ಒಳಗೆ ಬಿಡಲಿಲ್ಲ ಎಂದು ಹೇಳಿದರು.
ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ ಮತ್ತು ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಯನ್ನು ಆಗ್ರಹಿಸಿ ಜೂನ್ 28ರಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಮ್ ವಾಂಗ್‌ಚುಕ್ ಅವರನ್ನು ಜುಲೈ ೧೮ರಂದು ಬಲವಂತವಾಗಿ ಸಫ್ದರ್ಜಂಗ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ವಿಪಕ್ಷಗಳಿಗೆ ಸವಾಲ್; ನೀಟ್ ವಿವಾದದ ಕುರಿತು ಚರ್ಚೆಗೆ ಆಹ್ವಾನ ನೀಡಿದ ಕಿರಣ್ ರಿಜುಜು
ಇದರ ಬಳಿಕ ಅವರ ಪತ್ನಿ ಗೀತಾಂಜಲಿ ಜೆ ಆಂಗ್ಮೋ ಅವರು ಸೋನಮ್ ಅವರನ್ನು ಮೇದಾಂತ ಆಸ್ಪತ್ರೆಗೆ ವರ್ಗಾಯಿಸಲು ಅನುಮತಿ ಕೋರಿ ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದರು. ಹೈಕೋರ್ಟ್ ಇದಕ್ಕೆ ಅನುಮತಿ ನೀಡಿದ್ದರಿಂದ ಬಳಿಕ ಅವರನ್ನು ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಸ್ಪತ್ರೆಯಲ್ಲಿದ್ದರೂ ಸೋನಮ್ ಅವರು ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿದ್ದು, ಗುರುವಾರ ಅವರ ಉಪವಾಸ ಸತ್ಯಾಗ್ರಹ 2೬ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಸೋನಮ್ ವಾಂಗ್‌ಚುಕ್ ಅವರನ್ನು ಭೇಟಿಯಾಗಲು ವಿರೋಧ ಪಕ್ಷದ ಸಂಸದರ ನಿಯೋಗ ಗುರುವಾರ ಆಸ್ಪತ್ರೆಗೆ ತೆರಳಿದ್ದು, ಅವರನ್ನು ಪೊಲೀಸರು ತಡೆದಿದ್ದಾರೆ.
ಜೆಎಂಎಂ ಸಂಸದ ಮಹುವಾ ಮಾಝಿ ಅವರು ಈ ಕುರಿತು ಹೇಳಿಕೆ ನೀಡಿ, ಮಳೆಗಾಲದ ಅಧಿವೇಶನ ಪ್ರಾರಂಭವಾಗುವ 22 ದಿನಗಳಿಗಿಂತಲೂ ಮೊದಲಿನಿಂದ ಪ್ರತಿಭಟನೆ ನಡೆಸುತ್ತಿದೆ. ಆಗ ಕೇಂದ್ರ ಸರ್ಕಾರ ಏನು ಮಾಡುತ್ತಿತ್ತು. ಸೋನಮ್ ವಾಂಗ್‌ಚುಕ್ ಅವರನ್ನು ಭೇಟಿ ಮಾಡಲು ನ್ಯಾಯಾಲಯದಿಂದ ಯಾವುದೇ ನಿಷೇಧವಿಲ್ಲ ಎಂದು ಅವರ ಪತ್ನಿ ಗೀತಾಂಜಲಿ ತಿಳಿಸಿದ್ದಾರೆ. ಆದರೂ ನಮಗೆ ಏಕೆ ಅವಕಾಶ ನೀಡಲಿಲ್ಲ ಎಂದು ಅವರು ಪ್ರಶ್ನಿಸಿದರು.
ಆರ್‌ಜೆಡಿ ಸಂಸದ ಸಂಜಯ್ ಯಾದವ್ ಮಾತನಾಡಿ, ಕೇಂದ್ರ ಸರ್ಕಾರದ ನೀತಿಗಳಿಂದಾಗಿ ಯುವಕರು ತೊಂದರೆ ಅನುಭವಿಸುತ್ತಿದ್ದಾರೆ. ಇಷ್ಟು ದೊಡ್ಡ ಸಾರ್ವಜನಿಕ ಪ್ರತಿಭಟನೆ ನಡೆದರೂ ಸರ್ಕಾರ ಕ್ಯಾರೇ ಎನ್ನುತ್ತಿಲ್ಲ ಎಂದರು.
ದೇಶದ ಯುವಜನತೆಗೆ ಪ್ರಧಾನಿ ಸಂದೇಶ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಕುರಿತು ಮೋದಿ ಹೇಳಿದ್ದೇನು?
ವಿದ್ಯಾರ್ಥಿಗಳ ಸಮಸ್ಯೆಗಳನ್ನು ರಾಜಕೀಯಗೊಳಿಸಬಾರದು ಎಂದು ಒತ್ತಾಯಿಸುವುದು ಸರ್ಕಾರದ ದುರಹಂಕಾರದ ಪರಮಾವಧಿ.ಇದು ಯಾವುದೇ ರಾಜಕೀಯ ಪಕ್ಷ ಅಥವಾ ಯಾವುದೇ ಸಂಘಟನೆಯ ಕೆಲಸವಲ್ಲ. ನಿಮ್ಮ ನೀತಿಗಳಿಂದ ತೊಂದರೆಗೊಳಗಾದವರು ನ್ಯಾಯ ಕೇಳಿದರೆ ಅವರನ್ನು ಲಾಠಿ ಪ್ರಹಾರದ ಮೂಲಕ ತಡೆಯುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.